ಬೆಂಗಳೂರು; ಆಡಳಿತದ ಎಲ್ಲಾ ಹಂತದಲ್ಲಿ ಪರಿಪೂರ್ಣವಾಗಿ ಕನ್ನಡ ಭಾಷೆಯನ್ನು ಬಳಸದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ 4ನೇ ಬಾರಿಗೆ ಶಿಫಾರಸ್ಸು ಮಾಡಿದೆ. ಶಿಸ್ತು ಕ್ರಮ ಜರುಗಿಸುವ ಸಂಬಂಧ ಪ್ರಾಧಿಕಾರ ಕಳೆದ 3 ತಿಂಗಳಲ್ಲಿ 3 ಬಾರಿ ಶಿಫಾರಸ್ಸು ಮಾಡಿದ್ದರೂ ಜಾವೇದ್ ಅಖ್ತರ್ ಅವರು 2020ರ ಆಗಸ್ಟ್ 10ರಂದು ಆಂಗ್ಲ ಭಾಷೆಯಲ್ಲಿ ಪತ್ರವನ್ನು ಹೊರಡಿಸುವ ಮೂಲಕ ಕನ್ನಡ ವಿರೋಧ ನಿಲುವು ತಳೆದಿರುವುದು ಬಹಿರಂಗವಾಗಿದೆ.
ಆಡಳಿತದಲ್ಲಿ ಕನ್ನಡ ಅನುಷ್ಠಾನ ಲೋಪ ಎಸಗುತ್ತಿದೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿರುವ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಅವರು ಮೂರು ಬಾರಿ ಮಾಡಿದ್ದ ಶಿಫಾರಸ್ಸನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಅನುಷ್ಠಾನಗೊಳಿಸಿಲ್ಲ. ಹೀಗಾಗಿ ಪ್ರಾಧಿಕಾರ ಶಿಸ್ತು ಕ್ರಮ ಜರುಗಿಸುವ ಸಂಬಂಧ 4ನೇ ಬಾರಿಗೆ ಶಿಫಾರಸ್ಸು ಮಾಡಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್ ಅವರಿಗೆ 2020ರ ಆಗಸ್ಟ್ 13ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಮೇಲೆ ಈ ಹಿಂದೆ 2020ರ ಮಾರ್ಚ್ 19, ಮೇ 4 ಮತ್ತು ಜುಲೈ 28ರಂದು ಆಡಳಿತದಲ್ಲಿ ಕನ್ನಡ ಅನುಷ್ಠಾನ ಲೋಪದ ವಿಷಯಕ್ಕೆ 3 ಬಾರಿ ಸಕ್ಷಮ ಪ್ರಾಧಿಕಾರಕ್ಕೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ. ಆದಾಗ್ಯೂ ಕೂಡ ಸದರಿಯವರು ಆಡಳಿತದಲ್ಲಿ ಯಾವುದೇ ಬದಲಾವಣೆಗಳು ಕಂಡುಕೊಳ್ಳುತ್ತಿಲ್ಲ. ಆದ್ದರಿಂದ ಸದರಿಯವರ ವಿರುದ್ಧ 2002ರ ಜೂನ್ 13ರ ಸುತ್ತೋಲೆ ಅನ್ವಯ ಶಿಸ್ತು ಕ್ರಮ ಜಾರಿಗೊಳಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ 4ನೇ ಬಾರಿಗೆ ಶಿಫಾರಸ್ಸು ಮಾಡಿದೆ,’ ಎಂದು ನಾಗಾಭರಣ ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಹಾಸ್ಯಾಸ್ಪದವಾಯಿತೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ?
ಆಡಳಿತದಲ್ಲಿ ಕನ್ನಡ ಅನುಷ್ಠಾನ ಮಾಡುವಲ್ಲಿ ಯಾವ ಬದಲಾವಣೆಯೂ ಕಂಡುಕೊಳ್ಳದ ಕಾರಣ ಸಾರ್ವಜನಿಕರಿಂದ ಲಿಖಿತ ಹಾಗೂ ಮೌಖಿಕ ದೂರುಗಳು ನಿರಂತರವಾಗಿ ಸಲ್ಲಿಕೆಯಾಗುತ್ತಿವೆ. ಅಲ್ಲದೆ ಸಾಮಾಜಿಕ ಜಾಲತಾಣ, ಸುದ್ದಿ ಮಾಧ್ಯಮಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಸ್ಯಾಸ್ಪದವಾಗಿ ಪ್ರಸ್ತುತಗೊಳ್ಳುತ್ತಿದೆ ಎಂದೂ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
‘ಸಕ್ಷಮ ಪ್ರಾಧಿಕಾರಗಳು ಆಡಳಿತದಲ್ಲಿ ಕನ್ಡನ ಅನುಷ್ಠಾನ ವಿಷಯಕ್ಕೆ ಸಹಕರಿಸದೇ ಹೋದಲ್ಲಿ ಈ ರೀತಿಯ ಅಧಿಕಾರಿಗಳ ಕನ್ನಡ ವಿರೋಧಿ ಧೋರಣೆಯನ್ನು ಮಟ್ಟ ಹಾಕುವಲ್ಲಿ ಪ್ರಾಧಿಕಾರ ಸಫಲತೆ ಕಾಣುವುದಿಲ್ಲ ಎಂದೂ ಪತ್ರದಲ್ಲಿ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದಿದ್ದಾರೆ.
ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಲವು ಬಾರಿ ಸೂಚಿಸಿದ್ದರೂ ಹಿರಿಯ ಐಎಎಸ್ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಕನ್ನಡ ಬಳಸದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡಿರುವ ಶಿಫಾರಸ್ಸು ಪತ್ರಗಳು ಕಸದ ಬುಟ್ಟಿಗೆ ಸೇರಿವೆ.
ಕರ್ನಾಟಕ ರಾಜ್ಯಭಾಷಾ ಅಧಿನಿಯಮ 1963ರ ಅನ್ವಯ ಕನ್ನಡವು ಕರ್ನಾಟಕ ರಾಜ್ಯದ ರಾಜ್ಯಭಾಷೆ(ಆಡಳಿತ)ಯಾಗಿದೆ. 1990ರ ಜುಲೈ 27ರ ಅನ್ವಯ ಕಚೇರಿಗಳಲ್ಲಿ ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವಂತೆ ಆದೇಶಿಸಲಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಬಳಸಬೇಕು ಎಂದು 2000ರ ಏಪ್ರಿಲ್ 11ರಂದು ಸುತ್ತೋಲೆ ಹೊರಡಿಸಿದೆ. ಹಾಗೆಯೇ 1983ರ ಫೆ.10ರ ಅನ್ವಯ ಕನ್ನಡವನ್ನು ರಾಜ್ಯಾದ್ಯಂತ ಆಡಳಿತ ಭಾಷೆಯಾಗಿ ಕಡ್ಡಾಯವಾಗಿ ಎಲ್ಲ ಹಂತದಲ್ಲಿ ಜಾರಿಗೆ ತರಲಾಗಿದೆ.
ಅದೇ ರೀತಿ 1984ರ ಜುಲೈ 16 ರಂದು ಹೊರಡಿಸಿದ್ದ ಸರ್ಕಾರದ ಆದೇಶದ ಪ್ರಕಾರ ಸರ್ಕಾರಿ ಇಲಾಖೆ ಹಾಗೂ ಕಚೇರಿಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಾಗುವ ಅಡೆತಡೆಗಳಿಗೆ ಆಯಾ ಇಲಾಖೆಗಳ ಮುಖ್ಯಸ್ಥರನ್ನು ಜವಾಬ್ದಾರರನ್ನಾಗಿ ಮಾಡಬೇಕು. 2018ರ ಮಾರ್ಚ್ 24ರ ಸುತ್ತೋಲೆ ಅನ್ವಯ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸುವಂತೆ 20 ಅಂಶಗಳ ಆದೇಶವನ್ನೂ ಹೊರಡಿಸಲಾಗಿದೆ. ಆದರೆ ಈ ಯಾವ ಆದೇಶ, ಸುತ್ತೋಲೆಗಳನ್ನು ಬಹುತೇಕ ಹಿರಿಯ ಐಎಎಸ್ ಅಧಿಕಾರಿಗಳು ಪಾಲಿಸುತ್ತಿಲ್ಲ.
ಆಡಳಿತದ ಎಲ್ಲಾ ಹಂತದಲ್ಲಿ ಪರಿಪೂರ್ಣವಾಗಿ ಕನ್ನಡ ಬಳಕೆಯಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದರೂ ಆಡಳಿತದ ಕೇಂದ್ರ ಸ್ಥಾನವಾದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಆಂಗ್ಲ ಭಾಷೆಯಲ್ಲಿ ಸುತ್ತೋಲೆ, ಆದೇಶಗಳನ್ನು ಹೊರಡಿಸುತ್ತಲೇ ಇದ್ದಾರೆ.
ಅಲ್ಲದೆ ಬಿಬಿಎಂಪಿ, ಪೊಲೀಸ್ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಸಾರಿಗೆ ಇಲಾಖೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಸರ್ಕಾರದ ಕನ್ನಡ ಅನುಷ್ಠಾನದ ಆದೇಶವನ್ನು ಗಾಳಿಗೆ ತೂರಿದ್ದಾರೆ. ಸರ್ಕಾರಿ ಕಡತಗಳನ್ನು ಮತ್ತು ಜಾಲತಾಣಗಳನ್ನು ಕನ್ನಡದಲ್ಲಿಯೇ ನಿರ್ವಹಣೆ ಮಾಡಬೇಕು ಎಂಬ ನಿಯಮಗಳನ್ನು ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.
ಜಾಲತಾಣಗಳನ್ನು ಕನ್ನಡದಲ್ಲಿ ನಿರ್ವಹಿಸದ 62 ಸರ್ಕಾರಿ ಕಚೇರಿ ಹಾಗೂ ಇಲಾಖೆಗಳ ಮುಖ್ಯಸ್ಥರ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಿದ್ದರು.
ಆಡಳಿತ ವ್ಯವಸ್ಥೆಯಲ್ಲಿ ಕನ್ನಡ ಅನುಷ್ಠಾನ ಮಾಡಲು ವಿಫಲರಾದ ಅಧಿಕಾರಿಗಳಿಗೆ ವಾಗ್ದಂಡನೆ ವಿಧಿಸುವ ಅವಕಾಶವನ್ನು ಸರ್ಕಾರದ ನಿಯಮಗಳು ಕಲ್ಪಿಸಿವೆ. ಇಂತಹ ಅಧಿಕಾರಿಗಳ ಕಾರ್ಯನಿರ್ವಹಣಾ ವರದಿಗಳಲ್ಲಿಯೂ ಸಹ ಕರ್ತವ್ಯ ಚ್ಯುತಿ ಬಗ್ಗೆ ದಾಖಲು ಮಾಡುವ ಕುರಿತಂತೆ ನಿಯಮಗಳು ಇರುತ್ತವೆ. ಇಷ್ಟೆಲ್ಲಾ ನಿಯಮಗಳಿದ್ದರೂ ಹಿರಿಯ ಐಎಎಸ್ ಅಧಿಕಾರಿಗಳು ಆಡಳಿತದಲ್ಲಿ ಕನ್ನಡ ಅನುಷ್ಠಾನ ಮಾಡುವಲ್ಲಿ ಭಂಡ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದಾರೆ. ಕನ್ನಡ ಅನುಷ್ಠಾನ ಮಾಡುವಲ್ಲಿ ವಿಫಲರಾದ ಹಿರಿಯ ಐಎಎಸ್ ಅಧಿಕಾರಿಗಳ ವಿರುದ್ಧ ಸರ್ಕಾರ ಈವರೆವಿಗೂ ಕಠಿಣ ಕ್ರಮ ಕೈಗೊಂಡಿಲ್ಲ ಮತ್ತು ವಾಗ್ದಂಡನೆಯನ್ನೂ ವಿಧಿಸಿಲ್ಲ.