ವಿಶೇಷ ಲೆಕ್ಕ ಪರಿಶೋಧನೆ; ಹಿಂದಿನ ಪಿಎಸಿ ಸೂಚನೆ ಪಾಲಿಸಿದ್ದ ಸಿಎಜಿ, ಈಗ ತಗಾದೆ ಎತ್ತಿರುವುದೇಕೆ?

ಬೆಂಗಳೂರು; ಲೋಕೋಪಯೋಗಿ ಇಲಾಖೆಯ ಮಾಗಡಿ ಉಪ ವಿಭಾಗ ಮತ್ತು ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದ್ದ ಕೋಟ್ಯಂತರ ರುಪಾಯಿ ಅಕ್ರಮದ ಕುರಿತು ವಿಶೇಷ ಲೆಕ್ಕ ಪರಿಶೋಧನೆ ನಡೆಸಿದ್ದ ಭಾರತದ ಪ್ರಧಾನ ಮಹಾಲೇಖಪಾಲರು (ಸಿಎಜಿ) ಕೋವಿಡ್‌-19ರ ನಿರ್ವಹಣೆಗಾಗಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಎತ್ತಿರುವ ತಗಾದೆ ತೀವ್ರ ಚರ್ಚೆಗೊಳಗಾಗಿದೆ.

ಕಳೆದ 5 ವರ್ಷದ ಹಿಂದೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕೋರಿಕೆ ಮೇರೆಗೆ ಬಿಡಿಎನಲ್ಲಿ ನಡೆದಿದ್ದ ಮ್ಯೂಚುವಲ್‌ ಫಂಡ್‌ ಹಗರಣದ ಕುರಿತು ವಿಶೇಷ ಲೆಕ್ಕ ಪರಿಶೋಧನೆ ನಡೆಸಿದ್ದ ಸಿಎಜಿ, ಈಗ ಕೋವಿಡ್‌-19 ಭ್ರಷ್ಟಾಚಾರದ ಕುರಿತು ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ನಿರ್ದೇಶನವನ್ನು ಪಾಲಿಸಲು ಮುಂದಾಗದಿರುವುದು ವಿರೋಧಾಭಾಸಕ್ಕೆ ಕಾರಣವಾಗಿದೆ.

ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಗಳನ್ನೂ ವಾರ್ಷಿಕ ಕಾರ್ಯನಿರ್ವಹಣೆ ಲೆಕ್ಕ ಪರಿಶೋಧನೆಯೊಳಗೆ ತರಲು ನಿರ್ಧರಿಸಿರುವ ಸಿಎಜಿಯು ವಿಶೇಷ ಲೆಕ್ಕ ಪರಿಶೋಧನೆ ನಡೆಸುವುದಿಲ್ಲ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ರವಾನಿಸಿರುವ ಪರೋಕ್ಷ ಸಂದೇಶ ಇದೀಗ ತೀವ್ರ ಆಕ್ಷೇಪಕ್ಕೊಳಗಾಗಿದೆ.

ಲೋಕೋಪಯೋಗಿ ಇಲಾಖೆಯ ಮಾಗಡಿ ಉಪ ವಿಭಾಗದಲ್ಲಿ 600 ಕೋಟಿ ಗೂ ಹೆಚ್ಚು ಮೊತ್ತದ ಕಾಮಗಾರಿಗಳಲ್ಲಿ ನಡೆದಿದ್ದ ಭಾರೀ ಅಕ್ರಮಗಳು ಮತ್ತು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದ್ದ ಬಹುಕೋಟಿ ಹಗರಣದ ಕುರಿತು ಸಿಎಜಿ ಕಳೆದ ವರ್ಷಗಳಲ್ಲಿ ವಿಶೇಷ ಲೆಕ್ಕ ಪರಿಶೋಧನೆ ನಡೆಸಿತ್ತು. ಆ ವೇಳೆಯಲ್ಲಿ ವಾರ್ಷಿಕ ಕಾರ್ಯನಿರ್ವಹಣೆ ಲೆಕ್ಕ ಪರಿಶೋಧನೆ ನಡೆಸದೆ ವಿಶೇಷ ಲೆಕ್ಕ ಪರಿಶೋಧನೆ ನಡೆಸಿದ್ದ ಸಿಎಜಿ, ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಗಳ ಕುರಿತು ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಎತ್ತಿರುವ ತಕರಾರು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ವಿಶೇ‍ಷ ಲೆಕ್ಕ ಪರಿಶೋಧನೆ ನಡೆಸುವ ಸಂಬಂಧ ನಡೆದಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಭಾಗವಹಿಸಿದ್ದರು. ಅದೇ ಸಂದರ್ಭದಲ್ಲೇ ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಸಿಎಜಿಗೆ ಸೂಚಿಸಿ ಪತ್ರ ಬರೆಯಲು ಸಮಿತಿ ಸೂಚಿಸಿತ್ತು. ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರವನ್ನು ಬರೆಯಲಿಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯೇ ನೇರವಾಗಿ ಸಿಎಜಿಗೆ 2020ರ ಆಗಸ್ಟ್‌ 5ರಂದು ಪತ್ರ ಬರೆದಿತ್ತು.

ಈ ಪತ್ರಕ್ಕೆ 2020ರ ಆಗಸ್ಟ್‌ 18ರಂದು ಉತ್ತರಿಸಿರುವ ಪ್ರಧಾನ ಲೇಖಪಾಲರಾದ ಇ ಪಿ ನಿವೇದಿತ ಅವರು ‘ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಔಷಧ ಮತ್ತು ವೈದ್ಯಕೀಯ ಸಲಕರಣೆಗಳ ಖರೀದಿ ಕುರಿತು 2020-21ನೇ ಸಾಲಿನ ವಾರ್ಷಿಕ ಲೆಕ್ಕ ಪರಿಶೋಧನೆ ನಡೆಸಲಿದೆ. 2019-20ನೇ ಸಾಲಿಗೆ ಸಂಬಂಧಿಸಿದಂತೆ ನಡೆಸುವ ವಾರ್ಷಿಕ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆಯೊಳಗೆ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಗಳ ಲೆಕ್ಕ ಪರಿಶೋಧನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಒಂದು ತಿಂಗಳ ಕಾಲಮಿತಿಯೊಳಗೆ ಲೆಕ್ಕ ಪರಿಶೋಧನೆ ನಡೆಸುವುದು ಸಾಧ್ಯವಿಲ್ಲ,’ ಎಂದೂ ಹೇಳಿದ್ದಾರೆ.

ಕೋವಿಡ್‌-19 ನಿರ್ವಹಣೆಗಾಗಿ ಮಾಸ್ಕ್‌, ಸ್ಯಾನಿಟೈಸರ್‌, ಪಿಪಿಇ ಕಿಟ್‌, ವೆಂಟಿಲೇಟರ್‌, ಆರ್‌ಟಿಪಿಸಿಆರ್‌, ರ್ಯಾಪಿಡ್‌ ಆಂಟಿಜೆನ್‌ ಟೆಸ್ಟ್‌ ಕಿಟ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳು ಮತ್ತು ಔಷಧ ಸಾಮಗ್ರಿಗಳನ್ನು ಕೆಎಸ್‌ಡಿಡಬ್ಲ್ಯೂಎಸ್‌ ಮೂಲಕ ನೈಜ ದರಕ್ಕಿಂತಲೂ ದುಬಾರಿ ದರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖರೀದಿಸಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಲೆಕ್ಕಕೊಡಿ ಅಭಿಯಾನವನ್ನೂ ಆರಂಭಿಸಿದ್ದನ್ನು ಸ್ಮರಿಸಬಹುದು.

ಮಾಗಡಿ ಉಪ ವಿಭಾಗದಲ್ಲಿನ 600 ಕೋಟಿ ರೂ. ಮೊತ್ತದ ಕಾಮಗಾರಿಗಳಲ್ಲಿ ನಿಯಮ ಉಲ್ಲಂಘನೆ, ಒಂದೇ ಕಾಮಗಾರಿಗೆ ಹತ್ತಾರು ಬಾರಿ ಬಿಲ್ ಮಾಡಿರುವುದು, ಕಾಮಗಾರಿ ನಡೆಯದೆ ಬಿಲ್ ಪಾವತಿ, ಹೆಚ್ಚುವರಿ ಹಣ ಪಾವತಿ ಸೇರಿ ಸುಮಾರು 340 ಕೋಟಿ ರೂ.ಗೂ ಹೆಚ್ಚಿನ ಅವ್ಯವಹಾರ ನಡೆದಿದೆ ಎಂಬ ದೂರು ಕೇಳಿಬಂದಿತ್ತು. ಈ ಸಂಬಂಧ ಬಿಜೆಪಿ ಶಾಸಕ ಅಪ್ಪುಪಟ್ಟಣ ಶೆಟ್ಟಿ ಅಧ್ಯಕ್ಷತೆಯ ಸದನ ಸಮಿತಿ ಸಲ್ಲಿಸಿದ್ದ ವರದಿ ಮೇರೆಗೆ ಲೋಕಾಯುಕ್ತ ತನಿಖೆಯೂ ನಡೆದಿತ್ತು.

ಅವ್ಯವಹಾರದ ಗೊಂದಲ ಗೋಜಲುಗಳು ಇದ್ದ ಕಾರಣ ಸಿಎಜಿಗೆ ಪತ್ರ ಬರೆದಿದ್ದ ಲೋಕಾಯುಕ್ತ ಅಧಿಕಾರಿಗಳು, ವಿಶೇಷ ಲೆಕ್ಕ ಪರಿಶೋಧನೆ ನಡೆಸುವಂತೆ ಕೋರಿದ್ದರು. ಹೀಗಾಗಿ ಮಾಗಡಿ ಉಪ ವಿಭಾಗ ಹಾಗೂ ರಾಮನಗರ ವಿಭಾಗ ಕಚೇರಿಯಲ್ಲಿ ಸಿಎಜಿ ವಿಶೇಷ ಲೆಕ್ಕ ಪರಿಶೋಧನೆ ಮಾಡಿತ್ತು.

ರಾಮನಗರ ಜಿಲ್ಲಾ ಖಜಾನೆಯಲ್ಲಿ ಲೆಕ್ಕ ಪರಿಶೋಧನೆ ನಡೆಸಿದ್ದ ಸಂದರ್ಭದಲ್ಲಿ ಬೋಗಸ್ ಬಿಲ್‌ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೀಡಿದ್ದ ಚೆಕ್‌ಗಳನ್ನು ಪರಿಶೀಲಿಸದೆ ಟೋಕನ್ ನೀಡಿರುವುದನ್ನು ಸಿಎಜಿ ಪತ್ತೆ ಹಚ್ಚಿತ್ತು. ಅಲ್ಲದೆ ಇದರಲ್ಲಿ ಖಜಾನೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸಿಎಜಿ ಅಧಿಕಾರಿಗಳೂ ಶಂಕೆ ವ್ಯಕ್ತಪಡಿಸಿದ್ದರು.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕೋರಿಕೆ ಮೇರೆಗೆ ಬಿಡಿಎ ಹಗರಣದ ಬಗ್ಗೆ ತನಿಖೆ ನಡೆಸಿದ್ದ ಸಿಎಜಿ, ಬಿಡಿಎಗೆ ಸೇರಿದ್ದ 3 ಸಾವಿರ ಕೋಟಿ ರೂ.ಗಳನ್ನು ದಿವಾಳಿ ಎದ್ದುಹೋಗಿದ್ದ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದರಿಂದಾಗಿ ಬಿಡಿಎಯ ಮೂಲಧನ ಹಾಗೂ ಬಡ್ಡಿರೂಪದಲ್ಲಿ ಸಂದಾಯವಾಗಬೇಕಾಗಿದ್ದ 200 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿರುವುದನ್ನು ತನಿಖೆ ಮೂಲಕ ಬಹಿರಂಗಗೊಳಿಸಿತ್ತು.

‘ತಮ್ಮ ಪಕ್ಷದ ಹೆಸರಿಗೆ ಕಳಂಕ ಬರಬಾರದೆಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೂ ಕೋವಿಡ್‌ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಉತ್ಸುಕವಾಗಿರುತ್ತದೆ. ಪ್ರಜಾಪ್ರಭುತ್ವವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸುವ ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ಇಡೀ ದೇಶದಲ್ಲಿ ದುರ್ಬಲಗೊಳಿಸುತ್ತ ಬರಲಾಗುತ್ತಿದೆ. ಅದೇ ಕಾರಣಕ್ಕಾಗಿ ಸಿಎಜಿ ಸಂಸ್ಥೆಯೂ ಸಹ ಇಂತಹ ಗಂಭೀರ ಪ್ರಕರಣಗಳನ್ನು ಸಾಮಾನ್ಯ ಪ್ರಕರಣಗಳಂತೆಯೇ ಪರಿಗಣಿಸಿರುವುದು ತೀರಾ ನಿರಾಶದಾಯಕ ಮತ್ತು ಖಂಡನೀಯ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಷ್ಟ್ರಸಮಿತಿಯೂ ಸಿಎಜಿಗೆ ಪತ್ರ ಬರೆಯಲು ಆಲೋಚಿಸುತ್ತಿದೆ,’ ಎಂದು ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದ್ದಾರೆ.

ಬಿಡಿಎದ 3 ಕೋಟಿ ರೂ. ಮೆಟ್ರೊ ನಿಗಮಕ್ಕೆ ವರ್ಗಾವಣೆಯಾಗಿದ್ದ ಪ್ರಕರಣದಲ್ಲೂ ಸಿಎಜಿಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೆರವು ನೀಡಿತ್ತು. ಅಲ್ಲದೆ ಇದೇ ಪ್ರಕರಣವನ್ನು ತನಿಖೆ ನಡೆಸಿದ್ದ ಸಿಐಡಿಗೂ ಸಿಎಜಿ ಸಹಕರಿಸಿತ್ತು. ಈ ಮೂಲಕ ಹಗರಣದ ಬೇರು-ನಾರು ಪತ್ತೆ ಹಚ್ಚಿತ್ತಲ್ಲದೆ ಸಿಎಜಿ ವರದಿಯನ್ನೂ ಸಲ್ಲಿಸಿತ್ತು.
ಇನ್ನು, ವರದಿಯನ್ನು ವಿಧಾನಮಂಡಲ ಅಥವಾ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ನೀಡಬೇಕಿತ್ತು. ಅದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳಿಸಲು ಮುಂದಾಗಿತ್ತು. ಸಿಎಜಿಯ ಆ ನಡೆ ಹಲವಾರು ಸಂಶಯಗಳಿಗೆ ಕಾರಣವಾಗಿತ್ತು.

ಕೋವಿಡ್‌-19ರ ನಿರ್ವಹಣೆಗಾಗಿ ವೈದ್ಯಕೀಯ ಸಲಕರಣೆಗಳನ್ನು ದುಬಾರಿ ದರದಲ್ಲಿ ಖರೀದಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟ ಸಂಭವಿಸಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ಕರ್ನಾಟಕ ರಾಷ್ಟ್ರಸಮಿತಿಯು ಹಲವು ದಾಖಲೆಗಳ ಸಮೇತ ಖಾಸಗಿ ದೂರನ್ನು ಸಲ್ಲಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts