ಬೆಂಗಳೂರು; ಅಧಿಕಾರಿಗಳ ವರ್ಗಾವಣೆಗೆ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ನೀಡುವ ಶಿಫಾರಸ್ಸು ಪತ್ರವೇ ಕಾನೂನುಬಾಹಿರ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ ಅರಣ್ಯ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳಲ್ಲಿ ಈಗಲೂ ಅಧಿಕಾರಿ, ನೌಕರರುಗಳಿಗೆ ಶಿಫಾರಸ್ಸು ಪತ್ರ ನೀಡುತ್ತಿರುವುದು ಇದೀಗ ಬಹಿರಂಗವಾಗಿದೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೊಳಿ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುಭಾಷ್ ಆರ್ ಗುತ್ತೇದಾರ್, ರಾಮಪ್ಪ ಎಸ್ ಲಮಾಣಿ, ಮುರುಗೇಶ್ ನಿರಾಣಿ, ಆರಗ ಜ್ಞಾನೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಸೇರಿದಂತೆ ಹಲವರು ಉಪ ವಲಯ ಅರಣ್ಯಾಧಿಕಾರಿಗಳ ವರ್ಗಾವಣೆಗೆ ಶಿಫಾರಸ್ಸು ಪತ್ರ ನೀಡಿದ್ದಾರೆ.
ವಿಶೇಷವೆಂದರೆ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪ ವಲಯ ಅರಣ್ಯಾಧಿಕಾರಿಗಳ ವರ್ಗಾವಣೆಗೆ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ 10 ಅಧಿಕಾರಿಗಳಿಗೆ ಶಿಫಾರಸ್ಸು ಪತ್ರ ನೀಡಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರು 2020ರ ಆಗಸ್ಟ್ 17ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ)ಗೆ ಶಿಫಾರಸ್ಸು ಪತ್ರಗಳನ್ನು ಉಲ್ಲೇಖಿಸಿ ಪತ್ರ ಬರೆದಿದ್ದಾರೆ.
‘ಸಭಾಧ್ಯಕ್ಷರು, ಸಚಿವರು, ಸಚಿವರು ಹಾಗೂ ಇತರೆ ಗಣ್ಯ ವ್ಯಕ್ತಿಗಳಿಂದ ಸರ್ಕಾರದ ಹಂತದಲ್ಲಿ ಸ್ವೀಕೃತವಾದ ಉಪ ವಲಯ ಅರಣ್ಯಾಧಿಕಾರಿಗಳ ವರ್ಗಾವಣೆ ಪ್ರಸ್ತಾವನೆಗಳ ಪಟ್ಟಿ ಮಾಡಲಾಗಿದೆ. ಈ ಮನವಿಗಳನ್ನು ಪರಿಶೀಲಿಸಿ ಅವಶ್ಯವಿದ್ದಲ್ಲಿ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ’ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಪಿ ವಿ ಶ್ರೀನಿವಾಸನ್ ಅವರು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಸ್ಪೀಕರ್ ಮಾಡಿರುವ ಶಿಫಾರಸ್ಸುಗಳಿವು
ಶಿರಸಿ ವಲಯದ ಉಂಚಳ್ಳಿ ಶಾಖೆಯ ಅನಿಲ್ ಎ ಡಿಸೋಜಾ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಜಾನ್ಮನೆ ವಲಯದ ಹೆರೂರು ಶಾಖೆಗೆ, ಸಿದ್ದಾಪುರ ವಲಯದ ಮಂಜುನಾಥ್ ಸ್ವಾಮಿ ಎಲ್ ಎನ್ ಅವರನ್ನು ಜಾನ್ಮನೆ ಶಾಖೆಗೆ, ಶಿರಸಿ ತಾಲೂಕಿನ ಹುಲೇಕಲ್ ವಲಯದ ರಾಘವೇಂದ್ರ ಹೆಗಡೆ ಅವರನ್ನು ಮೆಣಸಿ ಶಾಖೆ, ಶಿರಸಿ ವಲಯದ ಜಾನ್ಮನೆಯ ರಾಮಚಂದ್ರ ಪಟಗಾರ ಅವರನ್ನು ದೇವಿಮನೆ ಶಾಖೆಗೆ, ಹುಲೇಕಲ್ ಶಾಖೆಯ ಮಂಜುನಾಥ್ ಚಿಕ್ಕಣ್ಣನವರ್ ಅವರನ್ನು ಸಿದ್ದಾಪುರ ಶಾಖೆಗೆ, ಹುಲೇಕಲ್ ವಲಯದ ಮೆಣಸಿ ಶಾಖೆಯ ಎಂ ಆರ್ ನಾಯ್ಕ್ ಅವರನ್ನು ಶಿರಸಿ ವಲಯದ ಕೊಪ್ಪ ವಲಯಕ್ಕೆ, ಜಾನ್ಮನೆ ವಲಯದ ನೂರ್ ಅಹಮದ್ ಅವರನ್ನು ಉಂಚಳ್ಳಿ ಶಾಖೆಗೆ, ಕೊಪ್ಪ ಶಾಖೆಯ ಸುರೇಶ್ ಸಿ ರಾಥೋಡ ಅವರನ್ನು ಹುಲೇಕಲ್ ವಲಯಕ್ಕೆ, ಹೆರೂರು ಶಾಖೆಯ ಮೊಹಮದ್ ಅಸ್ಪಾಕ್ ಸುಗಂಧಿಕರ್ ಅವರನ್ನು ಜಾನ್ಮನೆ ವಲಯಕ್ಕೆ ವರ್ಗಾವಣೆ ಮಾಡಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿಫಾರಸ್ಸು ಪತ್ರ ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಶಿಫಾರಸ್ಸು ಮಾಡಿದ ಸಚಿವರ ಪಟ್ಟಿ
ಅದೇ ರೀತಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಣಕುಂಬಿ ಶಾಖೆಯ ಮಹೇಶ ವಿ ಜಾಂಬೋಡ್ಕರ್ ಅವರನ್ನು ಭೇಟನಾ ಶಾಖೆಗೆ ಕೋಟ ಶ್ರೀನಿವಾಸ ಪೂಜಾರಿ ಅವರು ಪಡುಬಿದ್ರಿ ಘಟಕದಲ್ಲಿರುವ ನಾಗೇಶ ಬಿಲ್ಲವ ಅವರನ್ನು ಮೂಡಬಿದರೆ ವಲಯದ ಕಿನ್ನಿಗೋಳಿ ಘಟಕಕ್ಕೆ, ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಹಳಿಯಾಳ ವಿಭಾಗದಲ್ಲಿರುವ ಶಿವಲಿಂಗಪ್ಪ ಎಂ ಹಡಿನವರ ಅವರನ್ನು ತಿನ್ಯೆಘಾಟ ಶಾಖೆಗೆ, ಸಚಿವ ಗೋಪಾಲಯ್ಯ ಅವರು ಎ ಎಲ್ ರಾಜು ಅವರನ್ನು ಅರಣ್ಯ ಸಂರಕ್ಷಣಾ ಘಟಕಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರು ದೊಡ್ಡಬಳ್ಳಾಪುರದ ಜಲಾನಯನ ಅಭಿವೃದ್ಧಿ ಇಲಾಖೆಯ ವಿ ಆರ್ ಶ್ರೀಧರ್ ಅವರನ್ನು ಜೆ ಬಿ ಕಾವಲ್ ಸಂಶೋಧನಾ ವಲಯಕ್ಕೆ, , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರು ಶಾಂತಿನಗರ ವಲಯದ ಗಿರೀಶ್ ಹೆಚ್ ಅವರನ್ನು ಹೊಳೆಹೊನ್ನೂರು ವಲಯಕ್ಕೆ ಹಾಗೂ ರಾಯಚೂರು ಕಲಬುರ್ಗಿ ವಲಯದ ವಿಜಯಕುಮಾರ್ ಅವರನ್ನು ಲಿಂಗಸುಗೂರ ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ವರ್ಗಾವಣೆ ಮಾಡಲು ಶಿಫಾರಸ್ಸು ಪತ್ರ ನೀಡಿರುವುದು ಪತ್ರದಿಂದ ಗೊತ್ತಾಗಿದೆ.
ಶಿಫಾರಸ್ಸು ಮಾಡಿದ ಶಾಸಕರ ಪಟ್ಟಿ
ದೇವರಹಿಪ್ಪರಗಿ ಶಾಸಕ ಸೋಮನಗೌಡ ಬಿ ಪಾಟೀಲ ಅವರು ಬಸವನ ಬಾಗೇವಾಡಿಯ ಸಾಮಾಜಿಕ ಅರಣ್ಯ ವಿಭಾಗಕ್ಕೆ ಎಂ ಎಚ್ ಚವ್ಹಾಣ್ ಅವರನ್ನು ವರ್ಗಾಯಿಸಲು ಶಿಫಾರಸ್ಸು ಮಾಡಿದ್ದಾರೆ. ಶಿರಹಟ್ಟಿ ಶಾಸಕ ರಾಮಪ್ಪ ಎಸ್ ಲಮಾಣಿ ಅವರು ಮಂಗಳೂರು ವಲಯದದ ಟಿಂಬರ್ ಯಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಮನಗೌಡ ಪಾಟೀಲ ಅವರನ್ನು ಮುಂಡರಗಿ ಸಾಮಾಜಿಕ ವಲಯಕ್ಕೆ, ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಬಳ್ಳಾರಿ ಅರಣ್ಯ ಸಂಚಾರಿ ದಳದಲ್ಲಿರುವ ಕೆ ಶಂಕರ್ ಅವರನ್ನು ಸಂಡೂರು ಉಪ ವಲಯಕ್ಕೆ, ಹಾಸನ ಶಾಸಕ ಪ್ರೀತಮ್ ಜೆ ಗೌಡ ಅವರು ಸಕಲೇಶಪುರ ಸಾಮಾಜಿಕ ಅರಣ್ಯ ವಲಯದಲ್ಲಿರುವ ರಾಜಶೇಖರೇಗೌಡ ಅವರನ್ನು ಹೊಳೆನರಸೀಪುರದ ಪ್ರಾದೇಶಿಕ ವಲಯಕ್ಕೆಸಂಸದ ಶಿವಕುಮಾರ ಉದಾಸಿ ಅವರು ಖಾಸಿಂ ಸಾಬ್ ಬೆನ್ನೂರು ಅವರನ್ನು ಸಾಗರ ವಿಭಾಗಕ್ಕೆ, , ಅಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ್ ಅವರು ಭೂಸನೂರು ಶಾಖೆಯ ಸಂತೋಷ ಕುಮಾರ್ ಅವರನ್ನು ಕಲಬುರಗಿ ಸಾಮಾಜಿಕ ಅರಣ್ಯ ವಲಯಕ್ಕೆ, ಲಾಲಾಜಿ ಅರ್ ಮೆಂಡನ್ ಅವರು ಜೀವನ್‌ದಾಸ್ ಶೆಟ್ಟಿ ಅವರನ್ನು ಪಡುಬದ್ರಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಜಾಗಕ್ಕೆ, ವಿರಾಜಪೇಟೆಯ ಶಾಸಕ ಕೆ ಜಿ ಬೋಪಯ್ಯ ಅವರು ಡಿ ಪಿ ಸಂಜಿತ್ ಅವರನ್ನು ವಿರಾಜಪೇಟೆ ಶಾಖೆಗೆ ವರ್ಗಾವಣೆ ಮಾಡಲು ಶಿಫಾರಸ್ಸು ಪತ್ರ ನೀಡಿದ್ದಾರೆ.
‘ಮುಖ್ಯಮಂತ್ರಿ, ಸಚಿವರ ಶಿಫಾರಸ್ಸು ಪತ್ರ ಪಡೆದು ಇಂದು ವರ್ಗಾವಣೆ ಬಯಸುವ ಸರ್ಕಾರಿ ನೌಕರರು ಅನೇಕರಿದ್ದಾರೆ. ಈಗಾಗಲೇ ಅನೇಕರು ಇಂತಹ ಶಿಫಾರಸ್ತು ಪತ್ರದ ಮೂಲಕವೂ ವರ್ಗಾವಣೆ ಪಡೆದಿದ್ದಾರೆ. ಆದ್ರೇ ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗುವುದಿಲ್ಲ. ಕಾರಣ, ಅಧಿಕಾರಿಗಳ ವರ್ಗಾವಣೆಗೆ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ನೀಡುವ ಶಿಫಾರಸ್ಸು ಪತ್ರವೇ ಕಾನೂನು ಬಾಹಿರ’ ಎಂದು 2019 ಡಿಸೆಂಬರ್ 18ರಂದು ಹೈಕೋರ್ಟ್ ಹೇಳಿತ್ತು.
ಈ ಕುರಿತಂತೆ ಎಂಜಿನಿಯರ್ ಕೆ ಎಂ ವಾಸು ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ ಆಯುಕ್ತರ ವಿವೇಚನಾಧಿಕಾರವಾಗಿದೆ. ಇಂತಹ ವರ್ಗಾವಣೆಯಲ್ಲಿ ಶಿಫಾರಸ್ಸು ಪತ್ರ ನೀಡಲು ಕೇಂದ್ರ ಸಚಿವರಿಗೂ ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲ. ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆಯಲ್ಲೂ ಇವರಿಗೆ ಅಧಿಕಾರ ಇಲ್ಲ ಎಂದು ಅಭಿಪ್ರಾಯ ಪಟ್ಟಿತ್ತು.