ಕೊಡಗು ಪ್ರವಾಹ; ವರ್ಷವಾದರೂ ಗುತ್ತಿಗೆದಾರರಿಗೆ ಹಣ ಪಾವತಿಸದ ಸರ್ಕಾರ

ಬೆಂಗಳೂರು; 2019-20ನೇ ಸಾಲಿನಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಹಾನಿಯಾದ ಸಾರ್ವಜನಿಕ ರಸ್ತೆ, ಸೇತುವೆ, ತಡೆಗೋಡೆ ಸೇರಿದಂತೆ ಇನ್ನಿತರೆ ಅನುಮೋದಿತ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ರಾಜ್ಯ ಸರ್ಕಾರ ಒಂದು ವರ್ಷವಾದರೂ ಹಣ ಪಾವತಿ ಮಾಡಿಲ್ಲ.

ಲಕ್ಷಾಂತರ ಮೊತ್ತದ ಕಾಮಗಾರಿಗಳಿಗೆ ಠೇವಣಿ ಅನುದಾನ ಬಿಡುಗಡೆ ಮಾಡದೇ ಭಂಡ ನಿರ್ಲಕ್ಷ್ಯ ವಹಿಸಿದ್ದ ಸರ್ಕಾರ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಕೂಡ ಮಾಡಿಲ್ಲ. ಹೀಗಾಗಿ ಗುತ್ತಿಗೆದಾರರು ಪ್ರಗತಿಯಲ್ಲಿರುವ ಕಾಮಗಾರಿಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ಇದೀಗ ಬಹಿರಂಗವಾಗಿದೆ. ಆದರೆ ಕಂದಾಯ ಸಚಿವ ಆರ್‌ ಅಶೋಕ್‌ ಅವರು ಈವರೆವಿಗೂ ಬಾಕಿ ಬಿಲ್ ಪಾವತಿಸುವ ಸಂಬಂಧ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

2019ರ ಆಗಸ್ಟ್‌ ನಲ್ಲಿ ಸುರಿದ ಭಾರೀ ಮಳೆಗೆ ತತ್ತರಿಸಿ ಹೋಗಿದ್ದ ಇಡೀ ಕೊಡಗು ಜಿಲ್ಲೆಯನ್ನು ಪುನರ್‌ ರೂಪಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ 100 ಕೋಟಿ ರು.ಗಳ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಆದರೆ ಒಂದು ವರ್ಷದ ಅವಧಿಯಲ್ಲಿ ಕಳೆದ ಸಾಲಿನ ಕಾಮಗಾರಿಗಳೇ ಪೂರ್ಣಗೊಂಡಿಲ್ಲ ಎಂಬ ವಿಚಾರವನ್ನು ಕೊಡಗು ಜಿಲ್ಲಾಧಿಕಾರಿ 2020ರ ಜೂನ್‌ 15ರಂದು ಆರ್ಥಿಕ ಇಲಾಖೆಗೆ ಬರೆದಿರುವ ಪತ್ರ ಅನಾವರಣಗೊಳಿಸಿದೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪ್ರಾಥಮಿಕ ಪ್ರೌಢಶಿಕ್ಷಣ, ಪಶುಸಂಗೋಪನೆ ಮೀನುಗಾರಿಕೆ, ಸಣ್ಣ ನೀರಾವರಿ, ಕಾವೇರಿ ನೀರಾವರಿ ನಿಗಮ ಸೇರಿದಂತೆ ಇನ್ನಿತರೆ ಇಲಾಖೆಗಳು ಒಟ್ಟು 1,072 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದವು.

ವರ್ಷವಾದರೂ ಬಿಡುಗಡೆಯಾಗದ ಠೇವಣಿ ಅನುದಾನ

ಒಟ್ಟು 9060.05 ಲಕ್ಷ ಅಂದಾಜಿನ ಕಾಮಗಾರಿಗಳಿಗೆ ಠೇವಣಿ ಅನುದಾನ ಬಿಡುಗಡೆ ಮಾಡಬೇಕಿದ್ದ ಸರ್ಕಾರ ವರ್ಷವಾದರೂ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರರು ಪೂರ್ಣಗೊಳಿಸಿರುವ ಕಾಮಗಾರಿಯ 1738.65 ಲಕ್ಷ ಮೊತ್ತದ ಬಿಲ್‌ ಕೂಡ ಪಾವತಿಯಾಗಿಲ್ಲ. ಪ್ರಗತಿಯಲ್ಲಿರುವ 7,322.30 ಲಕ್ಷ ಮೊತ್ತದ ಕಾಮಗಾರಿಗಳನ್ನು ಗುತ್ತಿಗೆದಾರರು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರಲ್ಲದೆ ಉಳಿದಿರುವ 939.05 ಲಕ್ಷ ಮೊತ್ತದ ಕಾಮಗಾರಿಗಳನ್ನೂ ಆರಂಭಿಸದಿರುವುದು ಜಿಲ್ಲಾಧಿಕಾರಿ ಪತ್ರದಿಂದ ತಿಳಿದು ಬಂದಿದೆ.

‘ಜಿಲ್ಲೆಯಲ್ಲಿ ಈಗಾಗಲೇ ಮಳೆ ಶುರುವಾಗಿದ್ದು ಪೂರ್ಣ ಪ್ರಮಾಣದ ಮಳೆ ಪ್ರಾರಂಭವಾಗುವುದಕ್ಕಿಂತ ಮುಂಚಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ಆದ್ದರಿಂದ 100 ಕೋಟಿ ಅನುದಾನ ಬಿಡುಗಡೆ ಮಾಡಬೇಕು,’ ಎಂದು ಜಿಲ್ಲಾಧಿಕಾರಿ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಅತಿವೃಷ್ಠಿಯಿಂದಾದ ಭೂ ಕುಸಿತ ಹಾಗೂ ಪ್ರವಾಹದಿಂದ ಅಪಾರ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿತ್ತು. ಅಲ್ಲದೆ ಇದರಿಂದಾಗಿ ದೈನಂದಿನ ಜನಜೀವನಕ್ಕೆ ತೊಂದರೆಯಾಗಿತ್ತು. ಭೂ ಕುಸಿತ ಹಾಗೂ ಪ್ರವಾಹದಿಂದ ಸಾರ್ವಜನಿಕ ರಸ್ತೆ, ಸೇತುವೆ, ತಡೆಗೋಡೆ ಮತ್ತು ಇತರ ಮೂಲಭೂತ ಸೌಕರ್ಯಗಳು ಹಾನಿಯಾಗಿದ್ದವು.

the fil favicon

SUPPORT THE FILE

Latest News

Related Posts