ಆರ್‌ಎಸ್‌ಎಸ್‌, ಎಸ್‌ಡಿಪಿಐ ಸಂಘಟನೆ ನಿಷೇಧ; ಮಾಹಿತಿ ನೀಡಲು ‘ವಿನಾಯಿತಿ’ ರಕ್ಷಣೆ ಪಡೆದ ಬಿಜೆಪಿ ಸರ್ಕಾರ

ಬೆಂಗಳೂರು; ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌), ಹಿಂದೂ ಮಹಾಸಭಾ, ಬಜರಂಗದಳ, ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ನಿಷೇಧಿಸುವ ಕುರಿತು ಮಾಹಿತಿ ಒದಗಿಸುವುದಕ್ಕೆ ಸಂಬಂಧಿಸಿದಂತೆ ‘ವಿನಾಯಿತಿ’ ಹೆಸರಿನಲ್ಲಿ ರಕ್ಷಣೆ ಪಡೆದಿರುವ ರಾಜ್ಯ ಬಿಜೆಪಿ ಸರ್ಕಾರ ಈ ಸಂಬಂಧ ಯಾವ ಮಾಹಿತಿಯನ್ನೂ ಒದಗಿಸದಿರುವುದು ಆರ್‌ಟಿಐನಿಂದ ಬಹಿರಂಗಗೊಂಡಿದೆ.

ವಿನಾಯಿತಿ ಹೆಸರಿನಲ್ಲಿ ಮಾಹಿತಿ ನೀಡದ ಕಾರಣ ಆರ್‌ಎಸ್‌ಎಸ್‌ ಸಂಘಟನೆ ಸೇರಿದಂತೆ ಇನ್ನಿತರೆ ಸಂಘಟನೆಗಳ ನಿಷೇಧಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಮತ್ತು ಹಾಲಿ ಬಿಜೆಪಿ ಸರ್ಕಾರ ಯಾವ ನಿಲುವು ತಾಳಿವೆ ಎಂಬ ಮಾಹಿತಿ ಸಾರ್ವಜನಿಕರ ಗಮನಕ್ಕೆ ಬರದಂತಾಯಿತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಬೆಂಗಳೂರಿನ ಕಾಡುಗೊಂಡನಹಳ್ಳಿ, ಡಿ ಜೆ ಹಳ್ಳಿ ಮತ್ತು ಕಾವಲ್‌ ಬೈರಸಂದ್ರದಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಡೆದಿದ್ದ ಗಲಭೆಯಲ್ಲಿ ಕೈವಾಡವಿದೆ ಎಂಬ ಆರೋಪದಡಿಯಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ ಎಂಬ ಸಚಿವ ಈಶ್ವರಪ್ಪ ಅವರ ಹೇಳಿಕೆ ಬೆನ್ನಲ್ಲೇ ಸರ್ಕಾರ ಒದಗಿಸಿರುವ ಆರ್‌ಟಿಐ ಮಾಹಿತಿಯೂ ಮುನ್ನೆಲೆಗೆ ಬಂದಿದೆ.

ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಿಂದೂ ಮಹಾಸಭಾ, ಬಜರಂಗದಳ, ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ನಡೆದಿದ್ದ ಸಭೆಗಳು ಮತ್ತು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಕಡತವನ್ನು ತೆರೆದಿದ್ದರೆ ಅದರಲ್ಲಿರುವ ಸಂಪೂರ್ಣ ಹಾಳೆಗಳನ್ನು ಒದಗಿಸುವ ಕುರಿತು ‘ದಿ ಫೈಲ್‌’ ಆರ್‌ಟಿಐ ಅಡಿ 2020ರ ಜನವರಿ 20ರಂದು ಒಳಾಡಳಿತ ಮತ್ತು ಕಾನೂನು ಸುವ್ಯವಸ್ಥೆ ಇಲಾಖೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿತ್ತು. ಒಳಾಡಳಿತ ಇಲಾಖೆಯು ಎರಡೂ ಅರ್ಜಿಗಳನ್ನು 2020ರ ಜನವರಿ 23ರಂದು ಪೊಲೀಸ್‌ ಮಹಾನಿರ್ದೇಶಕರ ಕಚೇರಿಗೆ ವರ್ಗಾಯಿಸಿತ್ತು. ಆದರೆ ಡಿಜಿಐಜಿ ಕಚೇರಿಯ ಕಾನೂನು ಸುವ್ಯವಸ್ಥೆ ಶಾಖೆಯು ಈ ಅರ್ಜಿಗಳನ್ನು ಸ್ವೀಕರಿಸಲು ನಿರಾಕರಿಸಿತ್ತು ಎಂಬುದು ಆರ್‌ಟಿಐಗೆ ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಡಿಜಿಐಜಿ ಕಚೇರಿಯ ಕಾನೂನು ಸುವ್ಯವಸ್ಥೆ ಶಾಖೆಯು ಅರ್ಜಿಗಳನ್ನು ತೆಗೆದುಕೊಳ್ಳದ ಕಾರಣ ಒಳಾಡಳಿತ ಇಲಾಖೆಯು 2020ರ ಫೆ.4ರಂದು ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆ ವರ್ಗಾಯಿಸಿತ್ತು. ಆದರೆ ಈ ವಿಭಾಗವೂ ಆರ್‌ಟಿಐ ಅರ್ಜಿಗೆ ಯಾವುದೇ ಮಾಹಿತಿ ಒದಗಿಸಿಲ್ಲ.

ಮಾಹಿತಿ ನೀಡಲು ‘ವಿನಾಯಿತಿ’ ರಕ್ಷಣೆ

‘ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ಕೋರಿರುವ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸುವಂತೆ ಸೂಚಿಸಲಾಗಿರುತ್ತದೆ. ಉಲ್ಲೇಖ-2(ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್‌;44;ಆರ್‌ಟಿಐ;2004, ದಿನಾಂಕ 05-12-2015)ರ ಸರ್ಕಾರದ ಅಧಿಸೂಚನೆ ಅಡಿಯಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ರಾಜ್ಯ ಗುಪ್ತವಾರ್ತೆ ಘಟಕಕ್ಕೆ ವಿನಾಯಿತಿ ನೀಡಲಾಗಿದೆ,’ ಎಂದು ರಾಜ್ಯ ಗುಪ್ತವಾರ್ತೆಯ ಎಸ್‌ ಪಿ (ಭದ್ರತೆ) ಟಿ ಶ್ರೀಧರ್‌ ಅವರು 2020ರ ಫೆ.26ರಂದು ಮಾಹಿತಿ ಒದಗಿಸಿದ್ದಾರೆ.

ರಾಜ್ಯದಲ್ಲಿ ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಈ ಹಿಂದೆ ಹಲವು ಬಾರಿ ಕೋಮು ಗಲಭೆಗಳು ನಡೆದಿವೆ. ಈ ಗಲಭೆಗಳು ನಡೆದಾಗಲೆಲ್ಲ ವಿವಿಧ ಧಾರ್ಮಿಕ ಸಂಘಟನೆಗಳ ಕೈವಾಡವಿದೆ ಎಂದು ರಾಜಕೀಯ ಪಕ್ಷಗಳು ಆರೋಪಿಸುತ್ತಲೇ ಬಂದಿವೆ. ಮಂಗಳೂರು ಮತ್ತು ಇದಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ನಡೆದಿದ್ದ ಗಲಭೆಗಳಲ್ಲಿ ಆರ್‌ಎಸ್‌ಎಸ್‌, ಹಿಂದೂ ಮಹಾ ಸಭಾ, ಬಜರಂಗ ದಳದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದ್ದ ಹಲವರ ಹೆಸರುಗಳು ಪ್ರಸ್ತಾಪವಾಗಿದ್ದವು. ಅಲ್ಲದೆ ಇದಕ್ಕೆ ಸಮಾನಾಂತರವಾಗಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳಲ್ಲಿ ತೊಡಗಿಸಿಕೊಂಡವರು ಎಂದು ಆರೋಪಿಸಲಾಗಿದ್ದ ಹಲವರ ವಿರುದ್ಧವೂ ಆರೋಪಗಳು ಕೇಳಿಬಂದಿದ್ದವು.

ಇಂತಹ ಘಟನೆಗಳು ನಡೆದಾಗಲೆಲ್ಲ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಉಭಯ ಧಾರ್ಮಿಕ ಮುಖಂಡರಿಂದ ಒತ್ತಾಯಗಳು ಕೇಳಿ ಬರುತ್ತಲೇ ಇವೆ. ಅಲ್ಲದೆ ಇಂತಹ ಘಟನೆಗಳನ್ನು ರಾಜಕೀಯವಾಗಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ರಾಜಕೀಯ ಪಕ್ಷಗಳು ಕೂಡ ಬಳಸಿಕೊಂಡಿರುವುದಕ್ಕೆ ಹಲವು ನಿದರ್ಶನಗಳೂ ರಾಜ್ಯದಲ್ಲಿವೆ.

ರಾಷ್ಟ್ರೀಯ ಸ್ವಯಂಸೇವಾ ಸಂಘ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರ್‌ಎಸ್‌ಎಸ್‌ ಕೂಡ ಇಂತಹದ್ದೇ ಕೆಲಸಗಳನ್ನು ಮಾಡುತ್ತಿದೆ ಅದನ್ನು ಏನು ಮಾಡಬೇಕು ಎಂದು 2016ರ ಅಕ್ಟೋಬರ್‌ 30ರಂದು ಪ್ರಶ್ನಿಸಿದ್ದರು.

 

ಹೈಕಮಾಂಡ್ ಸಲಹೆ ಪಡೆದು ಆರ್‍ಎಸ್‍ಎಸ್ ನಿಷೇಧದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ 2018ರ ಜನವರಿ 5ರಂದು ಕಾರ್ಯಕ್ರಮವೊಂದರಲ್ಲಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ಈ ಹೇಳಿಕೆಯ್ನು ಖಂಡಿಸಿದ್ದ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕರಾಗಿದ್ದ ಹಾಲಿ ಸಚಿವ ಕೆ ಎಸ್‌ ಈಶ್ವರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಆರ್‍ಎಸ್‍ಎಸ್ ಸಂಘಟನೆಗೆ ನಿಷೇಧ ಹೇರಲಿ ಎಂದು ಸವಾಲು ಹಾಕಿದ್ದರು.

ವಿಜಯನಗರದ ಬಿಜಿಎಸ್ ಮೈದಾನದಲ್ಲಿ ನಡೆದಿದ್ದ ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ್ದ ಈಶ್ವರಪ್ಪ ಅವರು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿರುವ ಕೆಎಫ್‍ಡಿ, ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಧ ಮಾಡುವಂತೆ ಒತ್ತಾಯಿಸಿದರೆ ಆರ್‍ಎಸ್‍ಎಸ್ ಸಂಘಟನೆಯನ್ನೂ ನಿಷೇಧ ಮಾಡುವುದಾಗಿ ಹೇಳಿದ್ದಾರೆ. ತಾಕತ್ತಿದ್ದರೆ ನಿಷೇಧಿಸಿ ಎಂದು ಅಬ್ಬರಿಸಿದ್ದರು.

ಆರ್‍ಎಸ್‍ಎಸ್ ಒಂದು ದೇಶಭಕ್ತ ಸಂಘಟನೆಯಾಗಿದೆ. ದೇಶದ ಸಂಸ್ಕøತಿ, ಭಾಷೆ, ಆಚಾರ, ವಿಚಾರ ಸಂಪ್ರದಾಯಗಳನ್ನು ಪಾಲನೆ ಮಾಡುವುದು ಆರ್‍ಎಸ್‍ಎಸ್ ಧ್ಯೇಯೋದ್ದೇಶ. ಇಂತಹ ಸಂಘಟನೆಗೆ ನಿಷೇಧ ಹೇರಿದರೆ ದೇಶಭಕ್ತರು ಬೀದಿಗಿಳಿಯಲಿದ್ದಾರೆ ಎಂದು ಎಚ್ಚರಿಸಿದ್ದರು. ಕರಾವಳಿ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಹೆಚ್ಚುತ್ತಿರುವ ಗಲಭೆಗೆ ಕೆಲವು ಮೂಲಭೂತ ಸಂಘಟನೆಗಳೇ ನೇರ ಕಾರಣ. ನಿಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತುತ್ತಿದ್ದೀರಿ. ಇದು ನಿಮಗೆ ಮುಂದೊಂದಿನ ಮುಳುವಾಗಲಿದೆ ಎಂದು ಗುಡುಗಿದ್ದನ್ನು ಸ್ಮರಿಸಬಹುದು.

ಆದರೆ ಇವೆಲ್ಲವೂ ರಾಜಕೀಯ ಹೇಳಿಕೆಗಳಾಗಿದ್ದವೇ ಹೊರತು ಈ ಹಿಂದಿನ ಸರ್ಕಾರವೂ ಆರ್‌ಎಸ್‌ಎಸ್‌ ಸಂಘಟನೆಯನ್ನು ನಿಷೇಧಿಸಲು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಹಾಗೆಯೇ ಕೇಂದ್ರದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಅವರು ಸಹ ಮಹಾತ್ಮ ಗಾಂಧಿ ಹತ್ಯೆಯಾದ ದಿನ ಗೋಡ್ಸೆ ಪ್ರತಿಮೆ ಮತ್ತು ಭಾವಚಿತ್ರಕ್ಕೆ ಹಾರ ಹಾಕಲು ಮುಂದಾಗಿರುವ ಹಿಂದೂ ಮಹಾಸಭಾಕ್ಕೆ ದೇಶಾದ್ಯಂತ ನಿಷೇಧ ಹೇರಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿರುವ ರಾಜ್ಯಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

2008ರಿಂದ ಈವರೆವಿಗೆ ನಡೆದಿರುವ 17 ಕೊಲೆ ಹಾಗೂ ಅಪಹರಣ ಪ್ರಕರಣಗಳಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಾರ್ಯಕರ್ತರು ಭಾಗಿಯಾದ ಬಗ್ಗೆ ಪುರಾವೆಗಳಿವೆ ಎಂದು ಕಂದಾಯ ಸಚಿವ ಆರ್‌ ಅಶೋಕ್‌ ಅವರು ಹೇಳಿಕೆ ನೀಡಿದ್ದರು. ಮೈಸೂರಿನ ರಾಜು, ಮಡಿಕೇರಿಯ ಪುಟ್ಟಪ್ಪ, ಪ್ರವೀಣ್‌ ಪೂಜಾರಿ, ಶಿವಾಜಿನಗರದ ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌, ಶರತ್‌ ಮಡಿವಾಳ ಕೊಲೆ ಪ್ರಕರಣಗಳನ್ನು ಸಚಿವ ಅಶೋಕ್‌ ಅವರು ಉಲ್ಲೇಖಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts