ಕೋವಿಡ್‌ ಭ್ರಷ್ಟಾಚಾರ; ಸಿದ್ದರಾಮಯ್ಯಗೆ ಒದಗಿಸಿರುವ ಮಾಹಿತಿಯಲ್ಲಿ ಕಂಪನಿಗಳ ವಿವರವೇ ಇಲ್ಲ

ಬೆಂಗಳೂರು; ಕೋವಿಡ್‌-19ರ ಹಿನ್ನೆಲೆಯಲ್ಲಿ ವೆಂಟಿಲೇಟರ್‌, ಮಾಸ್ಕ್‌, ಸ್ಯಾನಿಟೈಸರ್‌, ಪಿಪಿಇ ಕಿಟ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳ ಖರೀದಿಗೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅರೆಬರೆ ಮಾಹಿತಿ ನೀಡಿ ಕೈತೊಳೆದುಕೊಂಡಿದೆ.


ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆ ಕುರಿತು ಮಾಹಿತಿ ಕೇಳಿದ್ದ ಸಿದ್ದರಾಮಯ್ಯ ಅವರಿಗೆ ಆರೋಗ್ಯ ಇಲಾಖೆ 2020ರ ಮೇ 9 ರಂದು 6 ಪುಟಗಳ ಮಾಹಿತಿ ಒದಗಿಸಿದೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.  ಮಾಸ್ಕ್‌, ವೆಂಟಿಲೇಟರ್‌, ಪಿಪಿಇ ಕಿಟ್‌, ಸರ್ಜಿಕಲ್‌ ಗ್ಲೋವ್ಸ್‌ಗಳನ್ನು ಸರಬರಾಜು ಮಾಡಿರುವ ಕಂಪನಿಗಳಿಗೆ ಪಾವತಿಸಿರುವ ದರದಲ್ಲಿ ಸಾಕಷ್ಟು ವ್ಯತ್ಯಾಸ ಇರುವುದು ಇಲಾಖೆ ಒದಗಿಸಿರುವ ಮಾಹಿತಿಯಿಂದ ಗೊತ್ತಾಗಿದೆ.


ಎಚ್‌ಎಲ್‌ಎಲ್‌ ಲೈಫ್‌ಕೇರ್‌ ಪ್ರೈ ಲಿ., ಮತ್ತು ಸ್ಕ್ಯಾನ್‌ ರೇ ಕಂಪನಿ ಹೊರತುಪಡಿಸಿ ಉಳಿದ ಕಂಪನಿಗಳ ವಿವರಗಳನ್ನು ಒದಗಿಸಿಲ್ಲ. ಕರ್ನಾಟಕ ಸ್ಟೇಟ್‌ ಡ್ರಗ್‌ ಅಂಡ್‌ ಲಾಜಿಸ್ಟಿಕ್ಸ್‌ ಸೊಸೈಟಿ, ಏಪ್ರಿಲ್‌ 20ರಂದು ಆರೋಗ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯುದರ್ಶಿಗೆ ಸಲ್ಲಿಸಿದ್ದ ವರದಿಯಲ್ಲಿ ನಮೂದಿಸಿದ್ದ ಪ್ಲಾಸ್ಟಿ ಸರ್ಜಿ, ರುದ್ರಾಂಶ್‌ ಆಗ್ರೋ ಇಂಡಸ್ಟ್ರೀಸ್‌, ಎ ಟೆಕ್‌ ಟ್ರಾನ್‌ ಕಂಪನಿಗಳ ವಿವರಗಳು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಒದಗಿಸಿರುವ ಮಾಹಿತಿಯಲ್ಲಿ ಕಂಡು ಬಂದಿಲ್ಲ. ಈ ಕಂಪನಿಗಳ ವಿವರಗಳನ್ನು ಮರೆಮಾಚಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಅಲ್ಲದೆ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ವಿವಿಧ ಕಂಪನಿಗಳ ದರ ಪಟ್ಟಿ, ಕನಿಷ್ಠ ಮತ್ತು ಗರಿಷ್ಠ ದರ ನಮೂದಿಸಿದ್ದ ಕಂಪನಿಗಳ ವಿವರಗಳನ್ನು ನೀಡಿಲ್ಲ. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.


2020ರ ಮಾರ್ಚ್‌ 9ರಿಂದ ಜೂನ್‌ 30ರವರೆಗೆ ಖರೀದಿಸಿರುವ ಪಿಪಿಇ ಕಿಟ್‌, ಎನ್‌-95 ಮಾಸ್ಕ್‌, ಸರ್ಜಿಕಲ್‌ ಗ್ಲೋವ್ಸ್‌, ಸ್ಯಾನಿಟೈಸರ್‌, ವೆಂಟಿಲೇಟರ್ಸ್‌, ಕೋವಿಡ್‌ ವೆಂಟಿಲೇಟರ್ಸ್‌, ಐಸಿಯು ವೆಂಟಿಲೇಟರ್ಸ್‌, ರ್ಯಾಪಿಡ್‌ ಟೆಸ್ಟ್‌ ಕಿಟ್‌, ಆಕ್ಸಿಜನ್‌ ಸಿಲಿಂಡರ್‌, ಮಾದರಿ ಸಂಗ್ರಹದ ಕಿಯೋಸ್ಕ್‌, ಥರ್ಮೋಮೀಟರ್‌ಗಳಿಗೆ ಒಟ್ಟು 104.29 ಕೋಟಿ ರು.ಗಳನ್ನು ಪಾವತಿಸಿರುವುದು ಇಲಾಖೆ ಒದಗಿಸಿರುವ ಮಾಹಿತಿಯಿಂದ ತಿಳಿದು ಬಂದಿದೆ.


2020ರ ಮಾರ್ಚ್‌ 9ರಿಂದ ಏಪ್ರಿಲ್‌ 10ರವರೆಗಿನ ಅವಧಿಯಲ್ಲಿ ವಿವಿಧ ದರದಲ್ಲಿ ಪಿಪಿಇ ಕಿಟ್‌ಗಳನ್ನು ಖರೀದಿಸಿರುವ ಇಲಾಖೆ, ಒಟ್ಟು 83.49 ಕೋಟಿ ರು.ಗಳನ್ನು ಕಂಪನಿಗಳಿಗೆ ಪಾವತಿಸಿದೆ. ಕಿಟ್‌ನ ಯೂನಿಟ್‌ವೊಂದಕ್ಕೆ 330.4 ರು.ಗಳಿಂದ 1,448 ರು.ಮೊತ್ತ ಪಾವತಿಸಿರುವುದು ಗೊತ್ತಾಗಿದೆ.


ಎನ್‌-95 ಮಾಸ್ಕ್‌ಗಳನ್ನು ಖರೀದಿಸಿರುವ ಇಲಾಖೆ ಯೂನಿಟ್‌ವೊಂದಕ್ಕೆ 126 ರು.ಗಳಿಂದ 156 ರು.ಗಳವರೆಗೆ ಪಾವತಿಸಿದೆ. ಸ್ಥಳೀಯ ಸರಬರಾಜುದಾರರು ಎನ್‌ 95 ಮಾಸ್ಕ್‌ಗಳನ್ನು ಪೊರೈಕೆ ಮಾಡದ ಕಾರಣ ಆಮದು ಮಾಡಿಕೊಳ್ಳಲಾಗಿದೆ. 2020ರ ಮಾರ್ಚ್‌ 21ರಂದು ತಲಾ 126 ರು. ದರದಲ್ಲಿ ಒಟ್ಟು 5 ಲಕ್ಷ ಮಾಸ್ಕ್‌ಗಳಿಗೆ 6.30 ಕೋಟಿ ರು. ಪಾವತಿಸಿದೆ. ಆದರೆ ಯಾವ ಕಂಪನಿಯಿಂದ ಆಮದು ಮಾಡಿಕೊಂಡಿದೆ ಎಂಬ ವಿವರವನ್ನು ಒದಗಿಸಿಲ್ಲ.


2020ರ ಮಾರ್ಚ್‌ 26ರಂದು 1,80,000 ಮಾಸ್ಕ್‌ಗಳನ್ನು ಸರಬರಾಜು ಮಾಡಿರುವ ಎಚ್‌ಎಲ್‌ಎಲ್‌ ಲೈಫ್‌ ಕೇರ್‌ ಪ್ರೈ ಲಿ.,ಗೆ ಎಷ್ಟು ಮೊತ್ತ ಪಾವತಿಸಿದೆ ಎಂಬ ಮಾಹಿತಿಯನ್ನು ಒದಗಿಸಿಲ್ಲ. ಮಾರ್ಚ್‌ 30ರಂದು ಔಷಧ ನಿಯಂತ್ರಕರ ನೆರವಿನೊಂದಿಗೆ ಎನ್‌ 95 ಮಾಸ್ಕ್‌ವೊಂದಕ್ಕೆ ತಲಾ 97.89 ರು. ದರದಲ್ಲಿ 83,040 ಮಾಸ್ಕ್‌ಗಳಿಗೆ 81,28,786 ರು ಪಾವತಿಸಿದೆ. 2020ರ ಏಪ್ರಿಲ್‌ 21ರಂದು ತಲಾ ಮಾಸ್ಕ್‌ವೊಂದಕ್ಕೆ 147 ರು.ದರದಲ್ಲಿ ಒಟ್ಟು 8,100 ಮಾಸ್ಕ್‌ಗಳಿಗೆ 11,90,700 ರು. ಪಾವತಿಸಿದೆ.


2020ರ ಮಾರ್ಚ್‌ 22 ಮತ್ತು ಏಪ್ರಿಲ್‌ 3ರಂದು ಒಟ್ಟು 1,380 ವೆಂಟಿಲೇಟರ್‌ಗಳ ಬೇಡಿಕೆಗೆ ಎದುರಾಗಿ ಎಚ್‌ಎಲ್ಎಲ್‌ ಲೈಫ್‌ಕೇರ್‌ ಕಂಪನಿ 630 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿದೆಯಾದರೂ ತಲಾ ವೆಂಟಿಲೇಟರ್‌ಗೆ ಎಷ್ಟು ದರ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಒದಗಿಸಿಲ್ಲ. ಸ್ಕ್ಯಾನ್‌ ರೇ ಟೆಕ್ನಾಲಾಜೀಸ್‌ನಿಂದ 2020ರ ಮಾರ್ಚ್‌ 22ರಂದು 130 ವೆಂಟಿಲೇಟರ್‌ಗೆ ಎದುರಾಗಿ 35 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿದೆ. ತಲಾ ವೆಂಟಿಲೇಟರ್‌ಗೆ 5,60,000 ರು. ದರದಲ್ಲಿ ಒಟ್ಟು 1,75,60,000 ರು.ಗಳನ್ನು ಕಂಪನಿಗೆ ಈಗಾಗಲೇ ಪಾವತಿಯಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ವೆಂಟಿಲೇಟರ್‌ಗಳು ಪೂರೈಕೆಯಾಗಿಲ್ಲ.


ಅದೇ ರೀತಿ ಲಾಕ್‌ಡೌನ್‌ ಘೋಷಣೆಯಾಗಿದ್ದ 2020ರ ಮಾರ್ಚ್‌ 22ರಂದು ಒಟ್ಟು 10 ವೆಂಟಿಲೇಟರ್‌ಗಳಿಗೆ ಎದುರಾಗಿ 12 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಿರುವ ಸ್ಕ್ಯಾನ್‌ ರೇ ಟೆಕ್ನಾಲಾಜೀಸ್‌, 4 ವೆಂಟಿಲೇಟರ್‌ಗಳಿಗೆ ತಲಾ 11,92,800 ರು.(47,71,200 ರು.) ಮತ್ತು 12,32,000 ರು. ದರದಲ್ಲಿ(12,32,00 ರು ಮತ್ತು 86,24,000 ರು.) ಒಟ್ಟು 1,46,27,200 ರು.ಗಳನ್ನು ಪಾವತಿಸಿರುವುದು ತಿಳಿದು ಬಂದಿದೆ.


2020ರ ಮಾರ್ಚ್‌ 24, 29 ಮತ್ತು ಏಪ್ರಿಲ್‌ 16ರಂದು ಐಸಿಯು ವೆಂಟಿಲೇಟರ್‌ಗಳನ್ನು ಖರೀದಿಸಿದೆಯಾದರೂ ಯಾರಿಂದ ಖರೀದಿಸಿದೆ ಎಂಬ ಮಾಹಿತಿಯನ್ನೇ ಒದಗಿಸಿಲ್ಲ. ಅಲ್ಲದೆ ಒಂದೊಂದು ವೆಂಟಿಲೇಟರ್‌ಗೆ ಒಂದೊಂದು ದರ ಪಾವತಿಸಿದೆ. 2020ರ ಮಾರ್ಚ್‌ 24ರಂದು 18,20,000, 13,44,000 ಮತ್ತು 12,32,000 ಮತ್ತು 12,88,000 ರು. ಸೇರಿದಂತೆ ಒಟ್ಟು 44 ವೆಂಟಿಲೇಟರ್‌ಗಳಿಗೆ 85,40,000 ರು.ಗಳನ್ನು ಪಾವತಿಸಿದೆ.


2020ರ ಮಾರ್ಚ್‌ 30ರಂದು 6 ವೆಂಟಿಲೇಟರ್‌ಗಳಿಗೆ ತಲಾ 10,03,520 ರು., 2 ವೆಂಟಿಲೇಟರ್‌ಗಳಿಗೆ ತಲಾ 13,72,000 ರು., ಏಪ್ರಿಲ್‌ 16ರಂದು ಖರೀದಿಸಿರುವ 2 ವೆಂಟಿಲೇಟರ್‌ಗಳಿಗೆ ತಲಾ 7,76,160 ರು ಮತ್ತು 9,42,480 ರು.ಗಳನ್ನು ಪಾವತಿಸಿದೆ. ಮಾದರಿ ಸಂಗ್ರಹಿಸುವ ಉದ್ದೇಶದಿಂದ ಜೂನ್‌ 6ರಂದು ಕಿಯೋಸ್ಕ್‌ವೊಂದಕ್ಕೆ 34,000 ರು. ದರದಲ್ಲಿ 150 ಕಿಯೋಸ್ಕ್‌ಗಳಿಗೆ ಒಟ್ಟು 85,00,000 ರು.ಗಳನ್ನು ಪಾವತಿಸಿದೆ. ಆದರೆ ಯಾವ ಕಂಪನಿ ಎಂಬ ವಿವರ ಒದಗಿಸಿಲ್ಲ. ಅದೇ ರೀತಿ ಮಾರ್ಚ್‌ 14ರಂದು ಲಾಕ್‌ಡೌನ್‌ ಜಾರಿಯಲ್ಲಿದ್ದ ದಿನದಲ್ಲಿ 5,000 ಥರ್ಮೋಮೀಟರ್‌ಗಳನ್ನು ಚೀನಾದಿಂದ ಖರೀದಿಸಿರುವ ಇಲಾಖೆ ತಲಾ 5,000 ರು. ದರದಲ್ಲಿ 2,97,24,200 ರು. ಪಾವತಿಸಿದೆ. ಆದರೆ ಯಾವ ಕಂಪನಿ ಎಂಬ ಮಾಹಿತಿಯನ್ನೇ ಒದಗಿಸಿಲ್ಲ.


ಹಾಗೆಯೇ 2020ರ ಮಾರ್ಚ್‌ 27ರಂದು ಥರ್ಮೋಮೀಟರ್‌ವೊಂದಕ್ಕೆ 3,500 ರು. ದರದಲ್ಲಿ ಒಟ್ಟು 5,000ಥರ್ಮೋಮೀಟರ್‌ಗಳನ್ನು ಖರೀದಿಸಿರುವ ಇಲಾಖೆ 1,40,00,000 ರು.ಗಳನ್ನು ಪಾವತಿಸಿದೆಯಾದರೂ ಇದರಲ್ಲಿ 1,000 ಥರ್ಮೋಮೀಟರ್‌ಗಳ ಖರೀದಿ ಆದೇಶವನ್ನು ರದ್ದುಗೊಳಿಸಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts