ಕೋವಿಡ್‌ ಆರೈಕೆ ಕೇಂದ್ರಕ್ಕೆ ಹಾಸಿಗೆ, ದಿಂಬು, ಹೊದಿಕೆ; ಬಾಡಿಗೆ ಹೆಸರಿನಲ್ಲಿ 168 ಕೋಟಿ ವೆಚ್ಚ?

ಬೆಂಗಳೂರು: ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ತಲೆ ಎತ್ತಿರುವ ಕೊರೊನಾ ಆರೈಕೆ ಕೇಂದ್ರಕ್ಕೆ ಮಂಚ, ಹಾಸಿಗೆ, ಹೊದಿಕೆ ಮತ್ತು ಪೀಠೋಪಕರಣಗಳನ್ನು 4 ತಿಂಗಳ ಅವಧಿಗೆ ಬಾಡಿಗೆ ಆಧಾರದ ಮೇಲೆ ಪಡೆದುಕೊಂಡಿರುವುದು ಅನಗತ್ಯ ವೆಚ್ಚಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ಆರೋಪಗಳು ಉನ್ನತ ಅಧಿಕಾರಿಗಳಿಂದಲೇ ಕೇಳಿ ಬಂದಿವೆ.


ಒಟ್ಟು 10,100 ಹಾಸಿಗೆ ಸಾಮರ್ಥ್ಯವುಳ್ಳ ದೇಶದ ಅತೀ ದೊಡ್ಡ ಕೊರೋನಾ ಆರೈಕೆ ಕೇಂದ್ರಕ್ಕೆ ಬಾಡಿಗೆ ಆಧಾರದ ಮೇಲೆ ಹಾಸಿಗೆ, ದಿಂಬು, ಹೊದಿಕೆಗೆ ದಿನವೊಂದಕ್ಕೆ 700 ರು. ಬಾಡಿಗೆ ದರ ನಿಗದಿಪಡಿಸಿದೆ ಎಂದು ತಿಳಿದು ಬಂದಿದೆ. ಒಟ್ಟು 10,100 ಹಾಸಿಗೆಗಳಿಗೆ 4 ತಿಂಗಳು ಅಂದರೆ 120 ದಿನಕ್ಕೆ ಅಂದಾಜು 84. 84 ಕೋಟಿ ರು. ವೆಚ್ಚವಾಗಲಿದೆ. ಇದು ಅನಗತ್ಯ ಎಂದು ಪ್ರತಿಪಾದಿಸಿರುವ ಐಎಎಸ್‌ ಅಧಿಕಾರಿಯೊಬ್ಬರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಸೌಮ್ಯ ಪ್ರಕರಣಗಳಿಗಾಗಿ ಆಸ್ಪತ್ರೆಗಳನ್ನು ಹೊರತುಪಡಿಸಿ ಇತರೆ ಸ್ಥಳಗಳಲ್ಲಿ ಸುಮಾರು 20,000 ಹಾಸಿಗೆಗಳ ಸಾಮರ್ಥ್ಯ ಸಿದ್ಧಗೊಳಿಸಿದಲ್ಲಿ ದಿನವೊಂದಕ್ಕೆ 700 ರು. ಬಾಡಿಗೆ ದರದಲ್ಲಿ ಒಟ್ಟು 168 ಕೋಟಿ ರು. ವೆಚ್ಚವಾಗಲಿದೆ. ಇದಲ್ಲದೆ ನೈರ್ಮಲ್ಯ , ಆಹಾರ ಲಾಜಿಸ್ಟಿಕ್ಸ್‌, ವೈದ್ಯಕೀಯ ಮತ್ತು ಕಾರ್ಯಾಚರಣೆಯ ನಿರ್ವಹಣೆಗೆ ಮಾನವ ಶಕ್ತಿಯ ಗುರುತಿಸುವಿಕೆ ಮತ್ತು ತರಬೇತಿ ಇತ್ಯಾದಿ ವಿಷಯಗಳಿಗೆ ಪ್ರತ್ಯೇಕ ವೆಚ್ಚವಾಗಲಿದೆ ಎಂದು ಹೇಳಲಾಗುತ್ತಿದೆ.


‘ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳಿಗೆ ಅಗತ್ಯವಿರುವ ಹಾಸಿಗೆ, ದಿಂಬು, ಹೊದಿಕೆ ಮುಂತಾದ ವಸ್ತುಗಳನ್ನು ಬಾಡಿಗೆ ಆಧಾರದದಲ್ಲಿ ಪಡೆಯಲಾಗುತ್ತಿದೆ. ಈ ವಸ್ತುಗಳು ಗುಣಮಟ್ಟದಲ್ಲಿ ಉತ್ತಮವಾಗಿರುವುದಿಲ್ಲ. ಅಲ್ಲದೆ ಕೋವಿಡ್‌ ಆರೈಕೆ ಕೇಂದ್ರಗಳು ಇನ್ನು ಮೂರರಿಂದ ನಾಲ್ಕು ತಿಂಗಳವರೆಗೆ ಕಾರ್ಯನಿರ್ವಹಿಸುವ ಸಾಧ್ಯತೆ ಇದ್ದು, ಈ ವಸ್ತುಗಳಿಗೆ ನೀಡುತ್ತಿರುವ ಬಾಡಿಗೆಯು ವಸ್ತುವಿನ ಮೂಲ ಬೆಲೆಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ ಅಗತ್ಯವಿರುವ ಉತ್ತಮ ಗುಣಮಟ್ಟದ ಹಾಸಿಗೆ, ದಿಂಬು ಇತ್ಯಾದಿ ಪರಿಕರಗಳನ್ನು ಬಾಡಿಗೆಗೆ ಪಡೆಯುವ ಬದಲಾಗಿ ಖರೀದಿಸಬಹುದಾಗಿದೆ. ಅವುಗಳನ್ನು ಈಗಾಗಲೇ ಪ್ರಾರಂಭವಾಗಿರುವ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಮತ್ತು ಮುಂದೆ ಪ್ರಾರಂಭಿಸಲಾಗುವ ಕೇಂದ್ರಗಳಲ್ಲಿ ಬಳಸಿಕೊಂಡು ಮುಂದಿನ ದಿನಗಳಲ್ಲಿ ಸೋಂಕು ಮುಕ್ತಗೊಳಿಸುವ ಮೂಲಕ ಸರ್ಕಾರಿ ವಿದ್ಯಾರ್ಥಿ ನಿಲಯಗಳು, ಆಸ್ಪತ್ರೆಗಳು, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸುವ ವಿದ್ಯಾರ್ಥಿ ನಿಲಯಗಳಲ್ಲಿ ಮತ್ತು ಇತರೆ ಅಗತ್ಯವಿರುವ ಕಡೆ ಮರು ಬಳಕೆ ಮಾಡಿಕೊಳ್ಳಬಹುದು,’ ಎಂದು ಉನ್ನತ ಅಧಿಕಾರಿಯೊಬ್ಬರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ.


ಕೋವಿಡ್‌ ಆರೈಕೆ ಕೇಂದ್ರಕ್ಕೆ ಹಾಸಿಗೆ, ದಿಂಬು, ಹೊದಿಕೆಗಳನ್ನು ಬಾಡಿಗೆಗೆ ಪಡೆಯುವ ಬದಲು ಅಲ್ಪಾವಧಿ ಟೆಂಡರ್‌, ಕರ್ನಾಟಕ ಪಾರದರ್ಶಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ 4(ಜಿ) ಅಡಿ ವಿನಾಯಿತಿ ಪಡೆಯಲು ಅವಕಾಶವಿತ್ತು. ಅಥವಾ ಜೆಮ್‌ ಪೋರ್ಟಲ್‌ ಮೂಲಕ ಖರೀದಿಸಲು ಅವಕಾಶವಿತ್ತು. ಆದರೆ ಈ ಯಾವ ಪ್ರಕ್ರಿಯೆಗಳನ್ನು ನಡೆಸದ ಸರ್ಕಾರ 168 ಕೋಟಿ ರು.ವೆಚ್ಚ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.


ಬೃಹತ್‌ ಬೆಂಗಳೂರು ಮಹಾನಗರ ವ್ಯಾಪ್ತಿಯ 8 ವಲಯಗಳಲ್ಲಿ ಕೋವಿಡ್‌ ಆರೈಕೆ ಕೇಂದ್ರಗಳ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಮಾಡಲು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ 8 ಜನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ 3 ಕೇಂದ್ರಗಳು ಈಗಾಗಲೇ ಕಾರ್ಯಾರಂಭಗೊಂಡಿವೆ ಎಂದು ತಿಳಿದು ಬಂದಿದೆ.
ಲಭ್ಯವಿರುವ ಹಾಸಿಗೆಗಳು ಭರ್ತಿಯಾದ ಬಳಿಕ ರೋಗಿಗಳನ್ನು ಸ್ಥಳಾಂತರಿಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಈ ಕೇಂದ್ರ ಸ್ಥಾಪಿಸಲಾಗುತ್ತಿದೆ. ನಗರದಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೊಂಕು ನಿಯಂತ್ರಣಕ್ಕೆ‌ ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ‌ಗಳನ್ನು ತೆಗೆದುಕೊಳ್ಳುತ್ತಿದೆ. ಈ ಕೇಂದ್ರದಲ್ಲಿ 10,100 ಸೋಂಕಿತರಿಗೆ ಚಿಕಿತ್ಸೆ ನೀಡಬಹುದಾಗಿದೆ. ರೋಗ ಲಕ್ಷಣ ಇಲ್ಲದವರು ಮತ್ತು ಕಡಿಮೆ ಲಕ್ಷಣ ಇರುವ ರೋಗಿಗಳನ್ನು ಇಲ್ಲಿ ಆರೈಕೆ ಮಾಡುವುದು ಉದ್ದೇಶ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದನ್ನು ಸ್ಮರಿಸಬಹುದು.


ಈ ಕೇಂದ್ರದಲ್ಲಿ ವೈದ್ಯರು, ನರ್ಸ್‌ಗಳು ಮತ್ತು ಇತರರು ಸೇರಿ ಒಟ್ಟು 2,200 ಸಿಬ್ಬಂದಿ ನೇಮಿಸಲಿದೆ. ಪ್ರತಿ ನೂರು ಮಂದಿಗೆ ಒಬ್ಬ ವೈದ್ಯ, ಇಬ್ಬರು ನರ್ಸ್‌ಗಳು, ಒಬ್ಬ ಸಹಾಯಕರು, ಒಬ್ಬರು ಸ್ವಚ್ಛತಾ ಸಿಬ್ಬಂದಿ ಮತ್ತು ಇಬ್ಬರು ಬಿಬಿಎಂಪಿ ಮಾರ್ಷಲ್‌ಗಳು ಕಾರ್ಯನಿರ್ವಹಿಸಲಿದ್ದಾರೆ. 


ಉತ್ತಮ ಊಟ, ಮನರಂಜನೆಗೆ ಕೇರಂ ಬೋರ್ಡ್, ಚೆಸ್‌ ಆಡಲು ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಅಲ್ಲದೆ, ಕೇಂದ್ರವನ್ನು ಸಮೀಪದ ಆಸ್ಪತ್ರೆಯೊಂದಿಗೆ ಸಂಯೋಜಿಸಲಾಗಿದೆ. 24 ಗಂಟೆ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲಿದೆಯಲ್ಲದೆ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ಸೋಂಕಿತರ ಬೆಡ್ ಶೀಟ್, ಬ್ಲಾಂಕೆಟ್ ತೊಳೆಯಲು ಲಾಂಡ್ರಿ ವ್ಯವಸ್ಥೆ ಕಲ್ಪಿಸಲಾಗಿದೆ.

the fil favicon

SUPPORT THE FILE

Latest News

Related Posts