‘ಬಡವರ ಬಂಧು’ವಿನಲ್ಲೂ ಅಕ್ರಮ ; ಅನರ್ಹರಿಗೂ ಸೌಲಭ್ಯ ಒದಗಿಸಿ ಮೇಯ್ದ ಬಿಜೆಪಿ ಸರ್ಕಾರ

ಬೆಂಗಳೂರು; ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಹಿಂದಿನ ಮೈತ್ರಿ ಸರ್ಕಾರ ಜಾರಿಗೊಳಿಸಿದ್ದ ಬಡವರ ಬಂಧು, ಕಾಯಕ ಯೋಜನೆಯ ಸೌಲಭ್ಯಗಳನ್ನು ಈಗಾಗಲೇ ಸೌಲಭ್ಯ ಪಡೆದಿರುವ ಫಲಾನುಭವಿಗಳಿಗೆ ನೀಡಿರುವ ಬಹುದೊಡ್ಡ ಅಕ್ರಮ ಹೊರಬಿದ್ದಿದೆ. ಯೋಜನೆ ಸೌಲಭ್ಯಗಳು ಅರ್ಹರಿಗೆ ದೊರೆಯದೇ ಅನರ್ಹರಿಗೆ ಕರುಣಿಸುತ್ತಿರುವ ಅಧಿಕಾರಿಗಳು ಮುಕ್ಕುತ್ತಿದ್ದಾರೆ.


ಸಹಕಾರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2020ರ ಜೂನ್‌ 17ರಂದು ನಡೆದಿದ್ದ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಸಭೆಯ ನಡವಳಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.


‘ಬಡವರ ಬಂಧು, ಕಾಯಕ, ಎಸ್‌ಎಚ್‌ಜಿ ಹಾಗೂ ಇತರೆ ಯೋಜನೆಗಳ ಸೌಲಭ್ಯಗಳನ್ನು ಈಗಾಗಲೇ ಸೌಲಭ್ಯ ಪಡೆದಿರುವ ಫಲಾನುಭವಿಗಳಿಗೆ ಕೊಟ್ಟಿರುವುದು ಕಂಡು ಬಂದಿದೆ. ಹೊಸ ಫಲಾನುಭವಿಗಳು/ಹೊಸ ಅರ್ಜಿದಾರರಿಗೆ ಏಕೆ ಕೊಟ್ಟಿಲ್ಲ, ಅಂತಹವರು ಸೌಲಭ್ಯಗಳನ್ನು ಪಡೆಯಲು ಅರ್ಹರೇ? ಅಥವಾ ಇಲ್ಲವೇ?,’ ಎಂದು ತರಾಟೆಗೆ ತೆಗೆದುಕೊಂಡಿರುವ ಸಹಕಾರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಎನ್‌ ನಾಗಾಂಬಿಕಾ ದೇವಿ ಅವರು ಈ ಬಗ್ಗೆ ವಿವರವಾದ ಮಾಹಿತಿ ಹಾಗೂ ಅಂಕಿ ಅಂಶಗಳೊಂದಿಗೆ ವರದಿ ಸಲ್ಲಿಸಬೇಕು,’ ಎಂದು ಅಧಿಕಾರಿಗಳಿಗೆ ಸೂಚಿಸಿರುವುದು ನಡವಳಿಯಿಂದ ಗೊತ್ತಾಗಿದೆ.

ಹಿಂದಿನ ಮೈತ್ರಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದ ಬಡವರ ಬಂಧು ಯೋಜನೆಗೆ 110.00 ಲಕ್ಷ ರು. ಅನುದಾನ ಒದಗಿಸಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿಯೇ ಈವರೆವಿಗೂ ಆಡಳಿತಾತ್ಮಕ ಮಂಜೂರಾತಿ ದೊರೆತಿಲ್ಲ. ಹಾಗೆಯೇ 10 ಕೋಟಿ ರು. ಅನುದಾನದ ಪೈಕಿ ಕೇವಲ 90.00 ಲಕ್ಷ ರು. ಮಾತ್ರ ಬಿಡುಗಡೆಯಾಗಿರುವುದು ತಿಳಿದು ಬಂದಿದೆ. ಅನುದಾನ ಸದ್ಭಳಕೆ ಮಾಡಿಕೊಳ್ಳುವುದರಲ್ಲಿ ತೆವಳುತ್ತಿರುವ ಅಧಿಕಾರಿಗಳು, ಯೋಜನೆಯಲ್ಲಿ ಪ್ರಗತಿ ಸಾಧಿಸದೇ ಭಂಡ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ.


ಸ್ವಸಹಾಯ ಗುಂಪುಗಳಿಗೆ ಬಡ್ಡಿ ಧನ ಸಹಾಯ ಮಾಡುವ ಯೋಜನೆಗೆ 8650.00 ಲಕ್ಷ ರು. ಅನುದಾನ ಒದಗಿಸಲಾಗಿದೆ. 2020ರ ಜೂನ್‌ 1ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಈ ಯೋಜನೆಯಡಿ ಸಾಕಷ್ಟು ಅನುದಾನ ಇದ್ದರೂ ಸಹ ಬಿಲ್ಲುಗಳು ಇಲ್ಲ ಎಂದು ಅನುದಾನಕ್ಕೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಧಿಕಾರಿಗಳ ಈ ನಡೆಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಾಗಾಂಬಿಕಾ ದೇವಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದು ನಡವಳಿಯಿಂದ ಗೊತ್ತಾಗಿದೆ.


‘ಬಿಲ್‌ಗಳು ಸ್ವೀಕೃತವಾಗಿಲ್ಲದೇ ಇರುವುದರಿಂದ ಪ್ರಸ್ತಾವನೆ ಸಲ್ಲಿಸಿಲ್ಲವೆಂಬ ಸಬೂಬುಗಳನ್ನು ಹೇಳುವುದು ಬೇಡ. ಅಂತಹ ಬಿಲ್ಲುಗಳನ್ನು ತಯಾರಿಸಲು ಹಿಂಬಾಲಿಕಾ ಕ್ರಮ ವಹಿಸಿ, ಸಂಬಂಧಪಟ್ಟ ಸಂಸ್ಥೆ/ಆರ್ಥಿಕ ಇಲಾಖೆಯೊಂದಿಗೆ ಸಂಪರ್ಕಿಸಿ ಬಾಕಿಯಿರುವ ಕ್ಷೇಮು/ಬಿಲ್‌ ಪಡೆಯಲು ಪ್ರಸ್ತಾವನೆ ಸಲ್ಲಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಕರ್ನಾಟಕ ರಾಜ್ಯ ಸಹಕಾರಿ ನೂಲು ಗಿರಣಿಗಳ ಮಹಾ ಸಂಘಕ್ಕೆ ಸಹಾಯಾನುದಾನಕ್ಕೆ ಸಂಬಂಧಿಸಿದಂತೆ 18.00 ಲಕ್ಷ ರು. ಅನುದಾನ ಒದಗಿಸಲಾಗಿದ್ದರೂ ಆಡಳಿತಾತ್ಮಕ ಮಂಜೂರಾತಿಗೆ ಸರ್ಕಾರಕ್ಕೆ ಈವರೆವಿಗೂ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಸರಿಯಾದ ಪ್ರಸ್ತಾವನೆ ಲಭ್ಯವಿಲ್ಲವೆಂದು ತಿಳಿಸಿದ್ದ ಅಧಿಕಾರಿಗಳಿಗೆ ಕಾರಣ ಕೇಳುವ ನೋಟೀಸ್‌ ಜಾರಿಗೊಳಿಸಲು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿರುವುದು ನಡವಳಿಯಿಂದ ತಿಳಿದು ಬಂದಿದೆ. 


ಬಡವರ ಬಂಧು ಯೋಜನೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಈ ಯೋಜನೆಗೆ ಬಿಜೆಪಿ ಸರ್ಕಾರ ಕತ್ತರಿ ಹಾಕಲು ಮುಂದಾಗಿತ್ತು. ಆರ್ಥಿಕವಾಗಿ ಅಶಕ್ತರಾದವರು, ಬೀದಿಬದಿ ವ್ಯಾಪಾರಿಗಳನ್ನು ಲೇವದೇವಿದಾರರ ಮೀಟರ್ ಬಡ್ಡಿ ವರ್ತುಲದಿಂದ ಪಾರು ಮಾಡುವ ಸದುದ್ದೇಶದಿಂದ ಜಾರಿ ಮಾಡಲಾದ ಬಡವರ ಬಂಧು ಯೋಜನೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಬಹುತೇಕ ನೆನೆಗುದಿಗೆ ಬಿದ್ದಿತ್ತು.


ಖಾಸಗಿ ಲೇವದೇವಿದಾರರ ಶೋಷಣೆಯಿಂದ ಬೀದಿಬದಿ ವ್ಯಾಪಾರಿಗಳನ್ನು ರಕ್ಷಿಸುವ ಸಲುವಾಗಿ ಕುಮಾರಸ್ವಾಮಿ ಅವರು ಈ ಮಹತ್ವದ ಯೋಜನೆಯನ್ನು 2018ರ ನವೆಂಬರ್ 22 ರಂದು ಜಾರಿಗೊಳಿಸಿದ್ದರು. ಶೂನ್ಯ ಬಡ್ಡಿಯಲ್ಲಿ ಸರ್ಕಾರವೇ ನಿತ್ಯ ಸುಮಾರು 10 ಸಾವಿರ ರೂ.ವರೆಗೂ ಕೈ ಸಾಲ ಕೊಡುವ ಮಹತ್ವದ ಯೋಜನೆ ಇದಾಗಿದೆ.


2018-19ನೇ ಸಾಲಿನಲ್ಲಿ ಈ ಯೋಜನೆಯಡಿ 50 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ ಬಡವರ ಬಂಧು ಯೋಜನೆ ಜಾರಿಯಾದ ಬಳಿಕ ಸುಮಾರು 11 ಸಾವಿರ ವ್ಯಾಪಾರಿಗಳಷ್ಟೇ ಯೋಜನೆಯ ಲಾಭ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.


‘ಬಡವರ ಬಂಧು’ ಯೋಜನೆಯು ನಗರ, ಪಟ್ಟಣಗಳ ಬಡ ಹಾಗೂ ಅಸಂಘಟಿತ ವ್ಯಾಪಾರಿ ವರ್ಗಕ್ಕೆ ಆಸರೆಯಾಗಿತ್ತು. ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು (ಡಿಸಿಸಿ), ಮಹಿಳಾ ಹಾಗೂ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಮೂಲಕ ಅರ್ಹ ಫಲಾನುಭವಿಗಳಿಗೆ ₹ 2 ಸಾವಿರದಿಂದ ₹ 10 ಸಾವಿರದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ಈ ಯೋಜನೆಯಿಂದ ಚಿಕ್ಕಪುಟ್ಟ ವ್ಯಾಪಾರ ಮಾಡುವವರು ತುಸು ಚೇತರಿಸಿಕೊಂಡಿದ್ದರು.


ಯೋಜನೆ ಜಾರಿಯಾಗಿದ್ದ ಮೊದಲ ಐದು ತಿಂಗಳಲ್ಲಿ 15,200 ಜನರು ಒಟ್ಟು ₹ 9 ಕೋಟಿ ಸಾಲ ಪಡೆದಿದ್ದರು. ನಗರಗಳಲ್ಲಿ ‘ಮೀಟರ್‌’ ಬಡ್ಡಿಯ ವಿಷವರ್ತುಲದಿಂದ ಪಾರಾಗಲು ಸಣ್ಣ ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ಈ ಯೋಜನೆ ಅತ್ಯುತ್ತಮ ದಾರಿ ತೋರಿಸಿತ್ತು. ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಯೋಜನೆ ಪಡೆದುಕೊಂಡಿದ್ದ ವೇಗ ಬಿಜೆಪಿ ಅಸ್ತಿತ್ವಕ್ಕೆ ಬಂದ ಬಳಿಕ ತೆವಳುತ್ತಿದೆ. ಬಿಜೆಪಿ ಸರ್ಕಾರ ಬಂದ ಬಳಿಕ ಯೋಜನೆಗೆ ಸಮರ್ಪಕವಾಗಿ ಹಣ ಬಿಡುಗಡೆಯಾಗದೇ ಹಂತಹಂತವಾಗಿ ಯೋಜನೆ ಮಹತ್ವ ಕಳೆದುಕೊಳ್ಳುತ್ತಾ ಬಂದಿತ್ತು.


ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಸಂಘಗಳು ಸ್ವಯಂ ಉದ್ಯೋಗ ಪ್ರಾರಂಭಿಸಿ ಆರ್ಥಿಕವಾಗಿ ಬೆಳೆಯುವ ನಿಟ್ಟಿನಲ್ಲಿ ಸರ್ಕಾರ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ದೊರೆಯಲಿತ್ತು. ರಾಜ್ಯದ ಸುಮಾರು 3,000 ಸ್ವಸಹಾಯ ಸಂಘಗಳಿಗೆ ಸ್ವಯಂ ಉದ್ಯೋಗ ಪ್ರಾರಂಭಿಸಲು ಸಾಲ ನೀಡುವ ಗುರಿ ಹೊಂದಿತ್ತು.

the fil favicon

SUPPORT THE FILE

Latest News

Related Posts