ಎಸ್‌. ಮೂರ್ತಿ ಮರು ನೇಮಕಕ್ಕೆ ಆದೇಶ ಹೊರಬಿದ್ದ ಬೆನ್ನಲ್ಲೇ ಅಮಾನತು ಅವಧಿಯೂ ವಿಸ್ತರಣೆ

ಬೆಂಗಳೂರು; ವಿಧಾನಸಭೆಯ ಕಾರ್ಯದರ್ಶಿ ಆಗಿದ್ದ ಎಸ್‌ ಮೂರ್ತಿ ಅವರ ವಿರುದ್ಧದ ಆರೋಪಗಳ ಕುರಿತಾದ ಇಲಾಖೆ ವಿಚಾರಣೆ ಪೂರ್ಣಗೊಳ್ಳದ ಕಾರಣ ವಿಧಾನಸಭೆ ಸಚಿವಾಲಯ ಅವರ ಅಮಾನತು ಅವಧಿಯನ್ನು ಇಲಾಖೆ ವಿಚಾರಣೆ ಮುಗಿಯುವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಂದುವರೆಸಿದೆ.


ಬೆಳಗಾವಿ ಅಧಿವೇಶನಕ್ಕೆ ಸಂಬಂಧಿಸಿದ ಅವ್ಯವಹಾರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಳಿಸಿದ್ದ ಪ್ರಕರಣದಲ್ಲಿ ಮೂರು ವಾರದೊಳಗೆ ಮರು ನೇಮಕಗೊಳಿಸಬೇಕು ಎಂದು ಹೈಕೋರ್ಟ್‌ ಆದೇಶ ಹೊರಡಿಸಿದ ಬೆನ್ನಲ್ಲೇ ಅಮಾನತು ಅವಧಿ ವಿಸ್ತರಣೆಗೊಳಿಸಿ ಹೊರಡಿಸಿದ್ದ ಆದೇಶ ಹೊರಬಿದ್ದಿದೆ.


2020ರ ಜೂನ್‌ 29ರಂದು ವಿಧಾನಸಭೆ ಸಚಿವಾಲಯದ ಉಪ ಕಾರ್ಯದರ್ಶಿ ಕೆ ಎನ್‌ ಅಕ್ಕಮಹಾದೇವಿ ಅವರು ಹೊರಡಿಸಿರುವ ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕರ್ನಾಟಕ ವಿಧಾನಸಭೆ ಸಚಿವಾಲಯದ ನೇಮಕಾತಿ ಹಾಗೂ ಶಿಸ್ತು ಪ್ರಾಧಿಕಾರವು 2003ರ ಕರ್ನಾಟಕ ವಿಧಾನಸಭೆ ಸಚಿವಾಲಯದ ನೇಮಕಾತಿ ಹಾಗೂ ಸೇವಾ ಷರತ್ತುಗಳು ಮತ್ತು ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 10(5)(ಬಿ) ಅನುಸಾರ ಅಮಾನತು ಅವಧಿಯನ್ನು ಇಲಾಖೆ ವಿಚಾರಣೆ ಮುಗಿಯುವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಂದುವರೆಸಿದೆ.


ಎಸ್‌ ಮೂರ್ತಿ ಅವರನ್ನು ಅಮಾನತುಗೊಳಿಸಿದ್ದ ವಿಧಾನಸಭೆ ಸಚಿವಾಲಯ, ನ್ಯಾಯಾಲಯದ ಮುಂದೆ ಸಮರ್ಥ ವಾದವನ್ನು ಮಂಡಿಸುವಲ್ಲಿ ವಿಫಲವಾಗಿತ್ತು. ಸಚಿವಾಲಯದ ಉನ್ನತ ಅಧಿಕಾರಿಗಳ ಲೋಪದಿಂದಾಗಿಯೇ ಮೂರ್ತಿ ಅವರನ್ನು ಮರು ನೇಮಕಗೊಳಿಸಲು ನ್ಯಾಯಪೀಠ ಆದೇಶಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.


ಈ ಪ್ರಕರಣದಲ್ಲಿ ಹಿಂದಿನ ಸ್ಪೀಕರ್‌ ಕೆ ಆರ್‌ ರಮೇಶ್‌ ಕುಮಾರ್‌ ಅವರು ತೋರಿಸಿದ್ದ ಆಸಕ್ತಿ, ಹಾಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅವಧಿಯಲ್ಲಿ ಕಂಡು ಬಂದಿಲ್ಲ. ನ್ಯಾಯಪೀಠ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಲುಅವಕಾಶಗಳಿವೆಯಾದರೂ ಸಚಿವಾಲಯಕ್ಕೆ ಅನಗತ್ಯ ಕಾನೂನು ವೆಚ್ಚದ ಹೊರೆ ಹೊರಿಸಿದಂತಾಗಿದೆ.


2016 ಹಾಗೂ 2017ನೇ ಸಾಲಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಂಬಂಧ ಭರಿಸಲಾಗಿದ್ದ ಖರ್ಚು ವೆಚ್ಚಗಳಲ್ಲಿ ಅವ್ಯವಹಾರವಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಹಿಂದಿನ ಸಭಾಧ್ಯಕ್ಷ ಕೆ ಆರ್‌ ರಮೇಶ್‌ಕುಮಾರ್‌ ಅವರ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಸಮಗ್ರ ತನಿಖೆ ನಡೆಸಿತ್ತು.


ತನಿಖಾ ವರದಿ ಆಧರಿಸಿ ಗುರುತರ ಕರ್ತವ್ಯ ಲೋಪ ಮತ್ತು ನಡತೆ ನಿಯಮಾವಳಿಗಳ ನಿಯಮ 3 ನ್ನು ಉಲ್ಲಂಘಿಸಿದ್ದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಹೀಗಾಗಿ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಎಸ್‌ ಮೂರ್ತಿ ಅವರನ್ನು ಅಮಾನತುಗೊಳಿಸಲಾಗಿತ್ತು.


ಈ ನಡುವೆ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಆರೋಪದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳವೂ ದಾಳಿ ನಡೆಸಿತ್ತಲ್ಲದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. ‘ಆರೋಪಿತ ಸರ್ಕಾರಿ ಅಧಿಕಾರಿಯು ತನ್ನ ಗೊತ್ತಾದ ಆದಾಯಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿಯನ್ನು ಹೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಇವರನ್ನು ಪ್ರಸ್ತುತ ಇರುವ ಹುದ್ದೆಯಲ್ಲಿಯೇ ಮುಂದುವರೆಸಿದ್ದೇ ಆದಲ್ಲಿ ತನ್ನ ಹುದ್ದೆಯ ಪ್ರಭಾವವನ್ನು ಬಳಸಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ, ತನಿಖೆಗೆ ಅವಶ್ಯವಿರುವ ಸಾಕ್ಸ್ಯಾಧಾರಗಳನ್ನು ನಾಶಪಡಿಸುವ ಅಥವಾ ತಿರುಚುವ , ಸಾಕ್ಷಿದಾರರುಗಳಿಗೆ ಬೆದರಿಕೆ ಒಡ್ಡುವ ಸಾಧ್ಯತೆಗಳು ಇರುವ ಕಾರಣ ಅವರನ್ನು ಅಮಾನತುಗೊಳಿಸಬೇಕು,’ ಎಂದು ಎಸಿಬಿಯ ಎಸ್‌ ಪಿ 2019ರ ಅಕ್ಟೋಬರ್‌ 14ರಂದು ಪತ್ರ ಬರೆದಿದ್ದರು.


ಆದರೆ ಈ ಪತ್ರ ಆಧರಿಸಿ ಯಾವುದೇ ಕ್ರಮ ಕೈಗೊಳ್ಳದಿದ್ದ ವಿಧಾನಸಭೆ ಸಚಿವಾಲಯ, ಮೂರ್ತಿ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್‌ ಆದೇಶವನ್ನು ಕಾಯ್ದಿರಿಸುತ್ತಿದ್ದಂತೆಯೇ ಅಮಾನತು ಅವಧಿಯನ್ನು ಮುಂದುವರೆಸಿ ಆದೇಶ ಹೊರಡಿಸಿದೆ.


‘ಅರ್ಜಿದಾರರನ್ನು ಅಮಾನತು ಮಾಡಿದ ಆದೇಶವನ್ನು ಪರಿಗಣಿಸುವಲ್ಲಿ ಹಾಗೂ ಕಾಲಕಾಲಕ್ಕೆ ಮರು ಪರಿಶೀಲಿಸುವಲ್ಲಿ ವಿಶೇಷ ನ್ಯಾಯ ಮಂಡಳಿ ವಿಫಲವಾಗಿದೆ ಎಂದು ಹೇಳಿದ್ದ ನ್ಯಾಯಪೀಠ, ಮೂರು ವಾರದೊಳಗೆ ಮರು ನೇಮಕಗೊಳಿಸಬೇಕು,’ ಎಂದು 2020ರ ಜೂನ್‌ 2ರಂದು ಹೈಕೋರ್ಟ್‌ ಆದೇಶಿಸಿತ್ತು.


ಈ ಪ್ರಕರಣದಲ್ಲಿ 1 ವರ್ಷ 8 ತಿಂಗಳು ಕಳೆದರೂ ವಿಚಾರಣೆ ಪೂರ್ಣಗೊಳಿಸಿಲ್ಲ. 2019ರ ಫೆ.2ರಂದು ಎರಡು ವಾರದೊಳಗೆ ವಿವರಣೆ ನೀಡಬೇಕು ಎಂದು ಅರ್ಜಿದಾರರಿಗೆ ಸೂಚಿಸಿತ್ತು. ಅರ್ಜಿದಾರರು ವಿವರಣೆ ನೀಡುವ ಮುನ್ನವೇ 2019ರ ಫೆ.26ರಂದು ವಿಚಾರಣಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. 2019ರ ಮೇ 27ರಂದು ಅರ್ಜಿದಾರರು ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ನೀಡಿದ್ದರು. ಆದರೆ ಉಸ್ತುವಾರಿ ಕಾರ್ಯದರ್ಶಿ ಅರ್ಜಿದಾರರ ವಿವರಣೆಯನ್ನು ವಿಶೇಷ ಮಂಡಳಿ ಮುಂದೆ ಮಂಡಿಸಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಿಸಿತ್ತು.

SUPPORT THE FILE

Latest News

Related Posts