ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯ 1,867 ವಿದ್ಯಾರ್ಥಿ ನಿಲಯಗಳಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಬಳಕೆಗಾಗಿ ಮಾರುಕಟ್ಟೆ ದರಕ್ಕಿಂತಲೂ ಐದಾರು ಪಟ್ಟು ಹೆಚ್ಚುವರಿ ದರದಲ್ಲಿ ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನಿಂಗ್ ಉಪಕರಣಗಳನ್ನು ಖರೀದಿಸಿರುವುದು ಇದೀಗ ಬಹಿರಂಗವಾಗಿದೆ.
ಸ್ಯಾನಿಟೈಸರ್, ಪಿಪಿಇ ಕಿಟ್, ವೆಂಟಿಲೇಟರ್ಸ್ ಖರೀದಿಯಲ್ಲಿ ಅವ್ಯವಹಾರ ನಡೆಸಿರುವ ಆರೋಪಕ್ಕೆ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಗುರಿಯಾಗಿದ್ದರೆ, ಇದರ ಬೆನ್ನಲ್ಲೇ ಹೊರಬಿದ್ದಿರುವ ಸಮಾಜ ಕಲ್ಯಾಣ ಇಲಾಖೆಯಲ್ಲಿನ ಅಕ್ರಮಗಳು ಕೋವಿಡ್ -19ರ ಭ್ರಷ್ಟಾಚಾರವನ್ನು ಇನ್ನಷ್ಟು ವಿಸ್ತರಿಸಿದೆ.
ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನಿಂಗ್ ಉಪಕರಣ ಖರೀದಿಸಲು ವಿದ್ಯಾರ್ಥಿ ನಿಲಯಗಳ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ರಾಜ್ಯವಲಯದಿಂದ ಜಿಲ್ಲಾ ಮಟ್ಟಗಳಿಗೆ ಬಿಡುಗಡೆಯಾಗಿರುವ 8 ಕೋಟಿ ರು. ಅನುದಾನವನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಇಲಾಖೆ ಅಧಿಕಾರಿಗಳು ನಿಗದಿಪಡಿಸಿರುವ ಖರೀದಿ ದರ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರವಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟ ಸಂಭವಿಸಿದೆ. 2020ರ ಮೇ 19ರಂದು ಹೊರಡಿಸಿರುವ ಆದೇಶದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ವೈದ್ಯಕೀಯ ಸಲಕರಣೆ ಅಥವಾ ಉಪಕರಣಗಳ ಉತ್ಪಾದಕರಲ್ಲದ ಮತ್ತು ಅದರ ಅನುಭವವೂ ಇಲ್ಲದ ಕಿಯೋನಿಕ್ಸ್ ಸಂಸ್ಥೆ ಮೂಲಕ ಖರೀದಿಸಲು ಆದೇಶ ಹೊರಡಿಸಿರುವುದು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ. ಆದರೆ ಈ ಪ್ರಕರಣದ ಬಗ್ಗೆ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
500 ಎಂ ಎಲ್ ಸ್ಯಾನಿಟೈಸರ್‌ಗೆ 600 ರು.
ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಒಟ್ಟು 1,867 ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ 500 ಎಂ ಎಲ್ ಪ್ರಮಾಣದ ಸ್ಯಾನಿಟೈಸರ್ ಬಾಟಲ್‌ವೊಂದಕ್ಕೆ 600 ರು. ದರದಲ್ಲಿ ಖರೀದಿಸಲು ಒಟ್ಟು 44,80,800 ರು.ಗೆ ಅನುಮೋದನೆ ದೊರೆತಿರುವುದು ಆದೇಶದಿಂದ ತಿಳಿದು ಬಂದಿದೆ. 1,867 ವಿದ್ಯಾರ್ಥಿ ನಿಲಯಗಳಿಗೆ 500 ಎಂ ಎಲ್ ಪ್ರಮಾಣದ ಸ್ಯಾನಿಟೈಸರ್ ಬಾಟಲಿಗಳನ್ನು 600 ರು. ದರದ ಪ್ರಕಾರ 11,20,200 ರು.ಗಳನ್ನು ಇಲಾಖೆ ಪಾವತಿಸಲಿದೆ.
ಆದರೆ ಕರ್ನಾಟಕ ಡ್ರಗ್ಸ್ ಅಂಡ್ ಲಾಜಿಸ್ಟಿಕ್ಸ್ ಸಂಸ್ಥೆಯು ಸ್ಯಾನಿಟೈಸರ್ ಖರೀದಿಗೆ ಇತ್ತೀಚೆಗಷ್ಟೇ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ್ದ ಸರಬರಾಜುದಾರರೊಬ್ಬರು 500 ಎಂ ಎಲ್ ಪ್ರಮಾಣದ ಸ್ಯಾನಿಟೈಸರ್ ಬಾಟಲ್‌ವೊಂದಕ್ಕೆ 78 ರು. ದರವನ್ನು ನಮೂದಿಸಿ ಎಲ್ 1 ಆಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯೂ ಇದೇ ದರದ ಪ್ರಕಾರ 1, 867 ವಿದ್ಯಾರ್ಥಿ ನಿಲಯಗಳಿಗೆ ಖರೀದಿಸಿದ್ದರೆ ಒಟ್ಟು 1,45,626 ರು.ಗಳಾಗುತ್ತಿತ್ತು. ಇನ್ನು, ಟೆಂಡರ್ ಇಲ್ಲದೇ ಮುಕ್ತ ಮಾರುಕಟ್ಟೆಯಲ್ಲಿರುವ ಗರಿಷ್ಠ ದರ 180 ರು.ನಲ್ಲಿ ಖರೀದಿಸಿದ್ದರೆ 3,36,060 ರು.ಗಳಾಗುತ್ತಿತ್ತು.
ಆದರೆ ಇಲಾಖೆ ಅಧಿಕಾರಿಗಳು 500 ಎಂ ಎಲ್ ಬಾಟಲ್‌ವೊಂದಕ್ಕೆ 600 ರು. ದರದಲ್ಲಿ ಖರೀದಿಸಲು ಆದೇಶ ಹೊರಡಿಸಿದ್ದಾರೆ. 78 ರು. ದರದ ಪ್ರಕಾರ ಲೆಕ್ಕ ಹಾಕಿದರೆ ಬಾಟಲ್‌ವೊಂದಕ್ಕೆ 522 ರು. ವ್ಯತ್ಯಾಸವಿದೆ. ಇದರಿಂದ ಸರ್ಕಾರಕ್ಕೆ 9,74,574 ರು. ನಷ್ಟವಾಗಿದೆ.
ಅದೇ ರೀತಿ 180 ರು. ದರದಲ್ಲೇ ಖರೀದಿಸದೇ 600 ರು. ದರದಲ್ಲಿ ಖರೀದಿ ಲೆಕ್ಕಾಚಾರದ ಪ್ರಕಾರ ಬಾಟಲ್‌ವೊಂದಕ್ಕೆ 420 ರು. ವ್ಯತ್ಯಾಸವಿದೆ. ಹೀಗೆ ಹೆಚ್ಚಿನ ದರದಲ್ಲಿ ಖರೀದಿಸಲು ಆದೇಶ ನೀಡುವ ಮೂಲಕ 7,84,140 ರು. ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಇದು ಕೇವಲ ಒಂದು ಬಾಟಲ್‌ನ ಲೆಕ್ಕಾಚಾರವಷ್ಟೇ. ಒಂದೊಂದು ವಿದ್ಯಾರ್ಥಿ ನಿಲಯ ಇದೇ ದರದಲ್ಲಿ ಎಷ್ಟು ಸಂಖ್ಯೆಯಲ್ಲಿ ಬಾಟಲಿಗಳನ್ನು ಖರೀದಿಸಿದೆ ಎಂಬುದರ ಮೇಲೆ ನಷ್ಟದ ಮೊತ್ತ ದ್ವಿಗುಣಗೊಳ್ಳುತ್ತದೆ. ಜರ್ಮನ್ ಫಾರ್ಮುಲಾ ಪ್ರಕಾರ ತಯಾರಿಸಿರುವ 500 ಎಂ ಎಲ್ ಪ್ರಮಾಣದ ಸ್ಯಾನಿಟೈಸರ್‌ಗೆ 160 ರು. ನಿಂದ 180 ರು. , ಭಾರತದ ಫಾರ್ಮುಲಾ ಪ್ರಕಾರ ಗರಿಷ್ಟ 100 ರು. ದರದಲ್ಲಿ 500 ಎಂ ಎಲ್ ಪ್ರಮಾಣದ ಸ್ಯಾನಿಟೈಸರ್ ಖರೀದಿಸಬಹುದಾಗಿತ್ತು. ಆದರೆ ಅಧಿಕಾರಿಗಳು ಇದಾವುದನ್ನು ಪರಿಶೀಲಿಸದೆಯೇ ಐದಾರು ಪಟ್ಟು ದರದಲ್ಲಿ ಖರೀದಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರು. ನಷ್ಟ ಸಂಭವಿಸಲು ಕಾರಣರಾಗಿದ್ದಾರೆ.
ಥರ್ಮಲ್ ಸ್ಕ್ಯಾನರ್‌ಗೆ 9,000 ರು.
ಇತರೆ ಅಗತ್ಯ ತುರ್ತು ಸಾಮಗ್ರಿ ಖರೀದಿ ಹೆಸರಿನಲ್ಲಿ ಥರ್ಮಲ್ ಸ್ಕ್ಯಾನರ್ ಖರೀದಿಸಿರುವುದರಲ್ಲಿಯೂ ಅಕ್ರಮ ನಡೆದಿರುವುದು ಗೊತ್ತಾಗಿದೆ. ಥರ್ಮಲ್ ಸ್ಕ್ಯಾನರ್ ಉಪಕರಣವೊಂದಕ್ಕೆ 9,000 ರು. ದರದಲ್ಲಿ ಖರೀದಿಸಲು ಒಟ್ಟು 1,68,03,000 ರು. ಗೆ ಸಮಾಜ ಕಲ್ಯಾಣ ಇಲಾಖೆ ಅನುಮೋದಿಸಿರುವುದು ಆದೇಶದಿಂದ ತಿಳಿದು ಬಂದಿದೆ.
ಉಪಕರಣವೊಂದಕ್ಕೆ 6,000 ರು. ನಿಂದ 8,000 ರು.ವರೆಗೆ ಹೆಚ್ಚಿನ ದರ ವ್ಯತ್ಯಾಸವಿರುವುದು ತಿಳಿದು ಬಂದಿದೆ. ಇದರ ಪ್ರಕಾರ ಗರಿಷ್ಠ ಒಟ್ಟು 1,10,17,167 ರು. ವ್ಯತ್ಯಾಸ ಕಂಡು ಬಂದಿದೆ. ಖರೀದಿ ದರ ಹೆಚ್ಚಳವಾಗಿರುವುದು ಅಕ್ರಮ ನಡೆದಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವನ್ನು ಒದಗಿಸಿದೆ.
ಮಾರುಕಟ್ಟೆಯಲ್ಲಿ ಬ್ರಾಂಡೆಡ್ ಉಪಕರಣವೊಂದಕ್ಕೆ 3,099 ರು.ನಿಂದ 5,999 ರು., ಬ್ರಾಂಡೆಡ್ ಬೇಡವೆಂದಾದಲ್ಲಿ ಕನಿಷ್ಠ 1,800 ರು. ದರವಿದೆ. ಅಧಿಕಾರಿಗಳು ಇದಾವುದನ್ನೂ ಪರಿಶೀಲಿಸುವ ಗೋಜಿಗೆ ಹೋಗಿಲ್ಲದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
1,800 ರು. ದರದಲ್ಲಿ ಥರ್ಮಲ್ ಸ್ಕ್ಯಾನರ್ ಖರೀದಿಸಿದ್ದರೆ 33,60,600 ರು.ಗಳಾಗುತ್ತಿತ್ತು. 3,099 ರು. ದರದಲ್ಲಿ 57,85,833 ರು., , 5,999 ರು.ದರದಲ್ಲಿ ಖರೀದಿಸಿದ್ದರೆ 1.12 ಕೋಟಿ ರು. ದರವಾಗುತ್ತಿತ್ತು. ಇದೇ ದರವನ್ನು ಲೆಕ್ಕಾಚಾರ ಮಾಡಿದರೆ 9,000 ರು. ದರದಲ್ಲಿ ಖರೀದಿಸುವ ಮೂಲಕ 1,10,17,167 ರು. ಗಳ ನಷ್ಟಕ್ಕೆ ಅಧಿಕಾರಿಗಳು ಕಾರಣರಾಗಿದ್ದಾರೆ.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಮಾಸ್ಕ್‌ಗಳನ್ನು ಖರೀದಿಸಲು ಒಟ್ಟು 22,15,653 ರು. ಗೆ ಇಲಾಖೆ ಅನುಮೋದಿಸಿದೆಯಾದರೂ, ಮಾಸ್ಕ್‌ವೊಂದಕ್ಕೆ ಎಷ್ಟು ದರ ಎಂಬುದನ್ನು ಆದೇಶದಲ್ಲಿ ಉಲ್ಲೇಖಿಸಿಲ್ಲ. ಖರೀದಿಯಲ್ಲಿನ ಅಕ್ರಮದ ಬಗ್ಗೆ ಮುಖ್ಯ ಕಾರ್ಯದರ್ಶಿಗೆ 2020ರ ಜೂನ್ 24ರಂದು ದೂರು ನೀಡಿರುವ ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್ ಅವರು ‘ವಿದ್ಯಾರ್ಥಿಗಳ ಹೆಸರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ತನಿಖೆ ನಡೆಸಬೇಕಲ್ಲದೆ ಕಾನೂನು ರೀತಿ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.
2016-17ನೇ ಸಾಲಿನ ಆಯವ್ಯಯ ಘೋಷಣೆಯಂತೆ ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಗಣಕ ಯಂತ್ರ ತರಬೇತಿ, ಗ್ರಂಥಾಲಯ, ಇ-ಕಲಿಕಾ ಕೇಂದ್ರ, ಸ್ಪೋಕನ್ ಇಂಗ್ಲಿಷ್ ಇತ್ಯಾದಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಬಿಡುಗಡೆ ಮಾಡಿರುವ 5 ಕೋಟಿ ರು. ಅನುದಾನದಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಿದ ನಂತರವೂ ಉಳಿಕೆಯಾಗಿರುವ 23,74,155 ರು.,ರು. ನಲ್ಲಿ ಥರ್ಮಲ್ ಸ್ಕ್ಯಾನರ್ ಖರೀದಿಸಲು ಆದೇಶ ಹೊರಡಿಸಿದೆ.
ವಿದ್ಯಾರ್ಥಿ ನಿಲಯಗಳ ಮೂಲಸೌಕರ್ಯ ಕಲ್ಪಿಸಲು ರಾಜ್ಯ ವಲಯದಿಂದ ಜಿಲ್ಲಾ ಮಟ್ಟಗಳಿಗೆ ಬಿಡುಗಡೆಯಾಗಿರುವ ಇತರೆ ಅಗತ್ಯ ತುರ್ತು ಸಾಮಗ್ರಿ ಖರೀದಿಗಾಗಿ ಜಿಲ್ಲಾಧಿಕಾರಿ, ಜಂಟಿ ನಿರ್ದೇಶಕರ ಜಂಟಿ ಖಾತೆಯಲ್ಲಿರುವ 3.00 ಕೋಟಿ ರು.ಗಳನ್ನು ಸ್ಯಾನಿಟೈಸರ್ ಖರೀದಿಸಲು ಬಳಸಿಕೊಳ್ಳಲು ಇಲಾಖೆ 2020ರ ಮೇ 19ರಂದೇ ಆದೇಶ ಹೊರಡಿಸಿದೆ.
‘ವೈದ್ಯಕೀಯ ಸಲಕರಣೆಗಳ ಖರೀದಿಗೂ ಕಿಯೋನಿಕ್ಸ್‌ಗೂ ಸಂಬಂಧವೇ ಇಲ್ಲ. ಸರ್ಕಾರದ ಅಂಗ ಸಂಸ್ಥೆಯಾಗಿದ್ದರೂ ಕಿಯೋನಿಕ್ಸ್ ಉತ್ಪಾದಕ ಸಂಸ್ಥೆಯಲ್ಲ. ಅದು ಕೇವಲ ತರಬೇತಿ ನೀಡುವುದು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿ ಮತ್ತು ನಿರ್ವಹಣೆ ಮಾಡುತ್ತದೆ. ಈ ಸಂಸ್ಥೆ ಮೂಲಕ ಖರೀದಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಸಾಕಷ್ಟು ಕಾಲವಕಾಶ ಇದ್ದರೂ ಅಲ್ಪಾವಧಿ ಟೆಂಡರ್ ಅಥವಾ ಕೊಟೇಷನ್ ಪಡೆಯದೇ ಕಿಯೋನಿಕ್ಸ್ ಮೂಲಕ ಖರೀದಿಸಿರುವುದು ಭ್ರಷ್ಟಾಚಾರ ಮಾಡುವ ಉದ್ದೇಶ ಸ್ಪಷ್ಟವಾಗಿ ಗೋಚರಿಸುತ್ತದೆ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಎನ್ ದೀಪಕ್.