ಎಪಿಎಂಸಿ ಕಾಯ್ದೆ ತಿದ್ದುಪಡಿ; ಸಂಗ್ರಹಿಸಿರುವ 618 ಕೋಟಿ ರು. ಶುಲ್ಕವೂ ಖೋತಾ?

ಬೆಂಗಳೂರು; ತೀವ್ರ ವಿರೋಧದ ನಡುವೆಯೂ ಎಪಿಎಂಸಿ ಕಾಯಿದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಲು ಬಿಜೆಪಿ ಸರ್ಕಾರ ಹೊರಟಿರುವುದರ ಬೆನ್ನಲ್ಲೇ ಈಗಾಗಲೇ ಸಂಗ್ರಹವಾಗಿರುವ ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕವೂ ಖೋತಾ ಆಗಲಿದೆ ಎಂದು ಅಧಿಕಾರಿಗಳು ಲೆಕ್ಕಾಚಾರ ಮಾಡಿದ್ದಾರೆ.


ಕಾಯ್ದೆಯ ಕಲಂ 8 ರಡಿ ರಾಜ್ಯದ ಮಾರುಕಟ್ಟೆ ಸಮಿತಿಗಳು ಎಪಿಎಂಸಿ ಪ್ರಾಂಗಣಕ್ಕೆ ತಮ್ಮ ನಿಯಂತ್ರಣವನ್ನು ಮಿತಿಗೊಳಿಸಿದಲ್ಲಿ ಈಗಾಗಲೇ ಸಂಗ್ರಹಿಸಿರುವ 618 ಕೋಟಿ ರು. ಖೋತಾ ಆಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ತಾವು ಬೆಳೆದ ಬೆಳೆಗಳನ್ನು ಕೇಳುವವರಿಲ್ಲದೆ ರೈತ ಸಮುದಾಯ ಪರಿತಪಿಸುತ್ತಿದೆ. ಇನ್ನೊಂದೆಡೆ ಮಾರುಕಟ್ಟೆ ಮತ್ತು ಬಳಕೆದಾರರ ಶುಲ್ಕ ಕೈ ತಪ್ಪಲಿದೆ ಎಂಬ ಮಾಹಿತಿ ಇದ್ದರೂ ಸುಗ್ರೀವಾಜ್ಞೆ ಹೊರಡಿಸಿರುವ ಸರ್ಕಾರ, ಕೃಷಿ ಮಾರಾಟ ಇಲಾಖೆಯನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ.


ಈ ಕುರಿತು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ 2020ರ ಜೂನ್‌ 25ರಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.


‘2019-20ನೇ ಸಾಲಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಂದ 618 ಕೋಟಿ ರು. ಮೊತ್ತದ ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗಿದ್ದು, ಕಾಯ್ದೆಯ ಕಲಂ 8 ರಡಿ ರಾಜ್ಯದ ಮಾರುಕಟ್ಟೆ ಸಮಿತಿಗಳು ಎಪಿಎಂಪಿ ಪ್ರಾಂಗಣಕ್ಕೆ ತಮ್ಮ ನಿಯಂತ್ರಣವನ್ನು ಮಿತಿಗೊಳಿಸಿದಲ್ಲಿ ಮಾರುಕಟ್ಟೆ ಶುಲ್ಕ ಮತ್ತು ಬಳಕೆದಾರರ ಶುಲ್ಕದ ಸಂಗ್ರಹಣೆಯಲ್ಲಿ ಖೋತಾ ಉಂಟಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ,’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಹೀಗಾಗಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ( ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1966ಕ್ಕೆ ತಿದ್ದುಪಡಿಯ ಅಧ್ಯಾದೇಶ ಸಂಖ್ಯೆ 08/2020 ಬದಲಿ ವಿಧೇಯಕಕ್ಕೆ ಆರ್ಥಿಕ ಜ್ಞಾಪನಾ ಪತ್ರವನ್ನು ಒದಗಿಸಿ ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರಿಗೆ ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.


ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ– 1966ಕ್ಕೆ ರಾಜ್ಯ ಸರ್ಕಾರ ಕೇವಲ ಎರಡು (ಸೆಕ್ಷನ್‌ 8(2) ಮತ್ತು ಸೆಕ್ಷನ್‌ 117) ತಿದ್ದುಪಡಿಗಳನ್ನು ತಂದಿದೆ. ಸೆಕ್ಷನ್‌ 8(2)ಕ್ಕೆ ಮಾಡಿರುವ ತಿದ್ದುಪಡಿ ಪ್ರಕಾರ, ಮುಖ್ಯ ಮಾರುಕಟ್ಟೆ ಪ್ರಾಂಗಣ ಹಾಗೂ ಉಪ-ಮಾರುಕಟ್ಟೆ ಪ್ರಾಂಗಣಗಳಲ್ಲಿ ನಡೆಯುವ ಕೃಷಿ ಉತ್ಪನ್ನಗಳ ಸಗಟು ಮಾರಾಟ ವ್ಯವಹಾರಕ್ಕಷ್ಟೇ ಎಪಿಎಂಸಿಗಳ ಕಾರ್ಯ ಕ್ಷೇತ್ರವನ್ನು ಸೀಮಿತಗೊಳಿಸಿದೆ.


ತಿದ್ದುಪಡಿ ಮಾಡಲಾದ ಮತ್ತೊಂದು ಸೆಕ್ಷನ್‌ 117. ಇದು ಕಾಯ್ದೆಯ ಸೆಕ್ಷನ್‌ 8(b) (1) ಯನ್ನು ಉಲ್ಲಂಘಿಸಿದವರಿಗೆ, ಅಂದರೆ ಮಾರುಕಟ್ಟೆ ಪ್ರಾಂಗಣಗಳ ಹೊರಗೆ ವ್ಯವಹಾರ ಮಾಡಿ ಕಾನೂನು ಉಲ್ಲಂಘಿಸಿದವರಿಗೆ, ವಿಧಿಸಲಾಗುವ ದಂಡಕ್ಕೆ ಸಂಬಂಧಿಸಿದೆ. ಪ್ರಸ್ತುತ ಸೆಕ್ಷನ್‌ 8 ರ ತಿದ್ದುಪಡಿಯಿಂದ ಎಪಿಎಂಸಿ ಅಧಿಕಾರವನ್ನು ಮಾರುಕಟ್ಟೆ ಪ್ರಾಂಗಣಗಳಿಗಷ್ಟೆ ಸೀಮಿತಗೊಳಿಸಿದ ಕಾರಣ ಪ್ರಾಂಗಣಗಳ ಹೊರಗೆ ನಡೆಯುವ ಮಾರಾಟ ವ್ಯವಹಾರಕ್ಕೆ ದಂಡ ವಿಧಿಸುವ ಅಧಿಕಾರ ತನ್ನಿಂದ ತಾನಾಗಿಯೇ ಎಪಿಎಂಸಿಗಳಿಗೆ ಇಲ್ಲದಂತಾಗುತ್ತದೆ ಎಂಬ ಆತಂಕವನ್ನು ಕೃಷಿ ಮಾರಾಟ ತಜ್ಞರು ವ್ಯಕ್ತಪಡಿಸಿದ್ದಾರೆ.


ಈಗಲೂ ಶೇ 40ರಿಂದ ಶೇ 60ರಷ್ಟು ಕೃಷಿ ಉತ್ಪನ್ನಗಳ ಸಗಟು ವ್ಯಾಪಾರ ಹಳ್ಳಿಗಳಲ್ಲಿ ನಡೆಯುತ್ತಿದೆ. ಅಂದರೆ ಎಪಿಎಂಸಿ ಪ್ರಾಂಗಣಗಳ ಹೊರಗೆ ನಡೆಯುತ್ತಿತ್ತು. ಈ ವ್ಯವಹಾರ ಕಾನೂನುಬಾಹಿರವಾಗಿತ್ತು. ಈಗ ಮಾಡಿರುವ ತಿದ್ದುಪಡಿಯಿಂದ ಅದು ಕಾನೂನುಬದ್ಧ ವ್ಯವಹಾರ ಎನಿಸಿಕೊಳ್ಳಲಿದೆ ಎನ್ನುತ್ತಾರೆ ತಜ್ಞರು.


ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಒಂದಕ್ಕಿಂತ ಹೆಚ್ಚಿನ ಅವಕಾಶಗಳು ದೊರೆಯಲಿವೆ ಎಂದರೂ ಎಪಿಎಂಸಿ ಪ್ರಾಂಗಣಗಳಲ್ಲಿ ಹೆಚ್ಚಿನ ಬೆಲೆ ದೊರೆಯುತ್ತಿದ್ದರೆ (ಸಾಗಾಣಿಕೆ ವೆಚ್ಚ + ಹಮಾಲಿ ಎರಡನ್ನೂ ಲೆಕ್ಕ ಹಾಕಿದಾಗ) ಅಲ್ಲಿಯೇ ಮಾರಾಟ ಮಾಡಬಹುದು. ಇಲ್ಲದಿದ್ದರೆ ತನ್ನ ಜಮೀನಿನವರೆಗೆ ಬರುವ ವ್ಯಾಪಾರಸ್ಥರಿಗೂ ಮಾರಬಹುದು. ಹೀಗಾಗಿ ರೈತರಿಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸ್ಪರ್ಧಾತ್ಮಕ ಅವಕಾಶಗಳೂ ಒದಗಲಿವೆ. ಕಾಯ್ದೆಗೆ ಮಾಡಿರುವ ತಿದ್ದುಪಡಿಗೆ ಪೂರಕವಾಗಿ ಈಗ ನಿಯಮಾವಳಿ ರೂಪಿಸಬೇಕಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.


ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧವಿದೆ. ಇದರ ನಡುವೆಯೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಅಧ್ಯಾದೇಶದ ಮೂಲಕ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದೆ. ಸ್ಥಳೀಯ ಮಾರುಕಟ್ಟೆ ಸಮಿತಿಗಳ ಅಧಿಕಾರ ಮೊಟಕು, ಖಾಸಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳ ಸ್ಥಾಪನೆ ಮತ್ತು ಖಾಸಗಿ ಕಂಪೆನಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.


ತಿದ್ದುಪಡಿಯಲ್ಲೇನಿರುತ್ತೆ?


ಸ್ಥಳೀಯ ಸಮಿತಿ ಅಧಿಕಾರ ಮೊಟಕು ಈ ಮೊದಲು ರೈತ ತನ್ನ ವ್ಯಾಪ್ತಿ ಬಿಟ್ಟು ಬೇರೆಡೆ ಉತ್ಪನ್ನ ಮಾರಾಟ ಮಾಡಿದರೆ ಚುನಾಯಿತ ಸಮಿತಿಗೆ ನಿಯಂತ್ರಿಸುವ ಅಧಿಕಾರ ಇತ್ತು. ಆದರೆ ಈಗ ಸಮಿತಿಯ ಅಧಿಕಾರ ಕೇವಲ ಮಾರುಕಟ್ಟೆ ಒಳಗೆ ಮಾತ್ರ. ಆದರೆ ರಾಜ್ಯ ಮಟ್ಟದ ನಿರ್ದೇಶಕ ಮಂಡಳಿಗೆ ಪೂರ್ಣ ಪ್ರಮಾಣದ ಅಧಿಕಾರ ಇರುತ್ತದೆ. ಇದು ಎಲ್ಲವನ್ನೂ ನಿಯಂತ್ರಣ ಮಾಡಬಹುದಾಗಿದೆ.


ಖಾಸಗಿ ಮಾರುಕಟ್ಟೆಗೆ ಸಿಗಲಿದೆಯೇ ಅವಕಾಶ?


ಖಾಸಗಿ ಮಾರುಕಟ್ಟೆಗಳ ಸ್ಥಾಪನೆ ಮತ್ತು ಖಾಸಗಿ ಸಂಸ್ಥೆಗಳ ಪ್ರವೇಶಕ್ಕೆ ತಿದ್ದುಪಡಿ ಅವಕಾಶ ಕಲ್ಪಿಸಿದೆ. ಆದರೆ ಖಾಸಗಿ ಕಂಪೆನಿ ಅಥವಾ ಖಾಸಗಿ ಮಾರುಕಟ್ಟೆ ಸ್ಥಾಪಿಸುವವರು ಸೂಕ್ತ ಬ್ಯಾಂಕ್‌ ಖಾತರಿ, ಠೇವಣಿ, ರಾಜ್ಯ ಮಟ್ಟದ ಸಮಿತಿಯ ಅನುಮತಿ ಪಡೆಯುವುದು ಅಗತ್ಯ. ತೂಕ ಮತ್ತು ಅಳತೆ ಮತ್ತಿತರ ವಿಚಾರ, ಬೆಲೆ ನಿಗದಿ, ಪಾವತಿ ಅಕ್ರಮವಾದರೆ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಸಮಿತಿಗೆ ಇರುತ್ತದೆ.


ರೈತರಿಗೆ ಉಪಯೋಗವೇ?


ಸರ್ಕಾರದ ಪ್ರಕಾರ ರೈತ ತಾನು ಬೆಳೆದ ಉತ್ಪನ್ನವನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ, ಖಾಸಗಿ ಮಾರುಕಟ್ಟೆಯಲ್ಲಿ ಅಥವಾ ಬೇರೆ ಎಲ್ಲಾದರೂ ತನಗೆ ಬೇಕಾದ ಕಡೆ ಮಾರಬಹುದು. ಇದರಿಂದ ಆತನಿಗೆ ತನ್ನ ಬೆಳೆ ಅಥವಾ ಉತ್ಪನ್ನವನ್ನು ತಾನು ಬಯಸಿದವರಿಗೆ ಮಾರಾಟ ಮಾಡುವ ಅವಕಾಶ ಇರುತ್ತದೆ. ಖಾಸಗಿಯವರು ರೈತನ ಹೊಲಕ್ಕೆ ಹೋಗಿ ಖರೀದಿಸಬಹುದು.


ಆತಂಕ ಇರುವುದಾದರೂ ಎಲ್ಲಿ?


ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವವರ ಪ್ರಕಾರ, ಖಾಸಗಿ ಕಂಪೆನಿಗಳು ಪ್ರವೇಶ ಮಾಡಿದರೆ ಪ್ರಾರಂಭದಲ್ಲಿ ರೈತರ ಉತ್ಪನ್ನಗಳಿಗೆ ಆಕರ್ಷಕ ಬೆಲೆಯ ರುಚಿ ತೋರಿಸಿ ಅನಂತರ ತಾವು ನಿಗದಿ ಪಡಿಸಿದ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಸಬಹುದು. ರೈತರಿಗೆ ತೂಕ ಮತ್ತು ಅಳತೆ, ಹಣ ಪಾವತಿಯಲ್ಲಿ ಸಮಸ್ಯೆಯಾದರೆ ದೂರು ಕೊಡಲು ರಾಜ್ಯ ಸಮಿತಿಯತ್ತ ನೋಡಬೇಕು. ಇದರಿಂದ ರೈತರಿಗೆ ಭವಿಷ್ಯದಲ್ಲಿ ತೊಂದರೆ ಇದೆ. ಸ್ಥಳೀಯ ಬೀದಿ ಬದಿ ವ್ಯಾಪಾರ, ಸಣ್ಣ ಪುಟ್ಟ ಮಾರುಕಟ್ಟೆ ಮುಚ್ಚಬೇಕಾಗುತ್ತದೆ.

the fil favicon

SUPPORT THE FILE

Latest News

Related Posts