ಕೋವಿಡ್‌ ; ಐಎಎಸ್‌ ಅಧಿಕಾರಿಗಳ ಬೆವರಿಳಿಸಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ

ಬೆಂಗಳೂರು; ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರ ಪ್ರಕರಣಗಳಿಗೆ ಕಾರಣರಾದ ಮತ್ತು ಕೋವಿಡ್‌ ಸೋಂಕಿತರನ್ನು ಅಮಾನುಷ ಮತ್ತು ಅಮಾನವೀಯವಾಗಿ ನಡೆಸಿಕೊಂಡಿರುವ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಐಎಎಸ್‌ ಅಧಿಕಾರಿಗಳನ್ನು ಎಚ್‌ ಕೆ ಪಾಟೀಲ್‌ ಅಧ್ಯಕ್ಷತೆಯಲ್ಲಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಬೆವರಿಳಿಸಿದೆ.


ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಅಧಿಕಾರಿಗಳನ್ನು ಪಕ್ಷಬೇಧ ಮರೆತು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಮಿತಿ ಸದಸ್ಯರು ಕೋವಿಡ್‌ ಸೋಂಕಿತರೊಂದಿಗೆ ಮಾನವೀಯತೆಯಿಂದ ವರ್ತಿಸಿ ಎಂದು ನಿರ್ದೇಶಿಸಿದರು ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.


ಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಜಾವೇದ್‌ ಅಖ್ತರ್‌, ಪಂಕಜಕುಮಾರ್‌ ಪಾಂಡೆ, ಮಂಜುಶ್ರೀ ಮತ್ತು ರಾಜೆಂದ್ರಕುಮಾರ್ ಕಟಾರಿಯಾ ಸೇರಿದಂತೆ ಇನ್ನಿತರೆ ಅಧಿಕಾರಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು ಎಂದು ತಿಳಿದು ಬಂದಿದ್ದು, ಗುಣಮಟ್ಟದ ಸೇವೆ ಮತ್ತು ಉತ್ತಮ ಚಿಕಿತ್ಸೆ ನೀಡುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿರುವುದನ್ನು ನಿರ್ದಶನಗಳ ಸಮೇತ ಎತ್ತಿ ತೋರಿಸಿದರು ಎಂದು ಗೊತ್ತಾಗಿದೆ.


‘ರಾಜ್ಯದಲ್ಲಿ ಕೊರೊನಾ ಪೀಡಿತ ರೋಗಿಗಳನ್ನು ಆರೋಗ್ಯ ಇಲಾಖೆಯು ಜಾನುವಾರುಗಳ ತರಹ ನೋಡುತ್ತಿದೆ. ಈ ಪ್ರವೃತ್ತಿಯನ್ನು ಬದಲಿಸಿಕೊಳ್ಳಬೇಕು. ಗುಣಮಟ್ಟದ ಸೇವೆ ಮತ್ತು ಉತ್ತಮ ಚಿಕಿತ್ಸಾ ವೆಚ್ಚ ಒದಗಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಸಮಿತಿ ಎಚ್‌ ಕೆ ಪಾಟೀಲ್‌ ಅವರು ನಿರ್ದೇಶಿಸಿದರು ಎಂದು ಮೂಲಗಳು ತಿಳಿಸಿವೆ.


ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ಹೊಂದಿರುವ ಅಂದಾಜು 20,000 ಹಾಸಿಗೆಗಳನ್ನು ಉಪಯೋಗಿಸಿಕೊಳ್ಳಲು ತಕ್ಷಣ ಸುಗ್ರೀವಾಜ್ಞೆ ಹೊರಡಿಸಿ ಎಂದು ಎಚ್‌ ಕೆ ಪಾಟೀಲ್‌ ಅವರು ನಿರ್ದೇಶಿಸಿದರು ಎಂದು ಗೊತ್ತಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ, ಬೆಸ್ಕಾಂ ಸೇರಿದಂತೆ ಸರ್ಕಾರದ ಹಲವು ಇಲಾಖೆಗಳು ವಿನಾಯಿತಿ ಮತ್ತು ರಿಯಾಯಿತಿ ನೀಡಿವೆ. ಹೀಗಾಗಿ ಇಂತಹ ತುರ್ತು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಸೇವೆ ಬಳಸಿಕೊಳ್ಳಬೇಕು ಎಂದು ಸಮಿತಿ ಸದಸ್ಯರು ಒಕ್ಕೊರಲಿನಿಂದ ಸೂಚಿಸಿದರು ಎಂದು ತಿಳಿದು ಬಂದಿದೆ.


‘ಇಂತಹ ತುರ್ತು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ಅಸಹಕಾರ ಯಾಕೆ ತೋರಿಸುತ್ತಿವೆ. ಇಂತಹ ಖಾಸಗಿ ಆಸ್ಪತ್ರೆಗಳಿಗೆ ತಕ್ಷಣವೇ ಆಡಳಿತಾಧಿಕಾರಿಗಳನ್ನು ನೇಮಿಸಬೇಕಲ್ಲದೆ ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಿ ಎಂದೂ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.


ಹಜ್‌ ಭವನದಲ್ಲಿ 10 ರೋಗಿಗಳಗಷ್ಟೆ ಅವಕಾಶ ಇದೆ. ಕೋವಿಡ್‌ ನಿಯಂತ್ರಿಸುವ ಸಂಬಂಧ ಸರ್ಕಾರ ಹೊರಡಿಸಿರುವ ಗುಣಮಟ್ಟದ ಕಾರ್ಯಾಚರಣೆ ಪ್ರಕಾರ (ಎಸ್‌ಒಪಿ) 10 ರೋಗಿಗಳಿಗೆ ಒಂದೇ ಶೌಚಾಲಯ, ಸ್ನಾನಗೃಹವಿದೆ ಎಂದು ಅಧಿಕಾರಿಗಳು ನೀಡಿದ ಉತ್ತರದಿಂದ ಕೆಲ ಸದಸ್ಯರು ಕೆರಳಿದರಲ್ಲದೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿರುವಾಗ ಇಂತಹ ಅವ್ಯವಸ್ಥೆಗಳೇಕೆ ಎಂದು ಜಾಡಿಸಿದರು ಎಂದು ತಿಳಿದು ಬಂದಿದೆ.


ಆಂಬುಲೆನ್ಸ್‌ಗಳ ಸಂಖ್ಯೆ ಕಡಿಮೆ ಇವೆ. ಇರುವ ಅಂಬುಲೆನ್ಸ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಮಿತಿ ಸದಸ್ಯ ಹಾಗೂ ಮಾಜಿ ಆರೋಗ್ಯ ಸಚಿವ ಕೆ ಅರ್‌ ರಮೇಶ್‌ಕುಮಾರ್‌ ಸಭೆಯಲ್ಲಿ ಪ್ರಸ್ತಾಪಿಸಿದರು ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts