ಕೋವಿಡ್‌ ಭ್ರಷ್ಟಾಚಾರ ತನಿಖೆಗೆ ತಡೆ ; ಸಾಮಾನ್ಯ ಮಾಹಿತಿಯ ಕಡತ ಒದಗಿಸಲು ನಿರಾಕರಣೆ

ಬೆಂಗಳೂರು: ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಪರಿಶೀಲನೆಗೆ ತಡೆ ಒಡ್ಡುವ ಭಾಗವಾಗಿ ಹೊರಡಿಸಿದೆ ಎನ್ನಲಾಗಿರುವ ಲಘು ಪ್ರಕಟಣೆ ಸಂಬಂಧ ವಿಧಾನಸಭೆ ಸಚಿವಾಲಯ ತೆರೆದಿರುವ ಕಡತ ಮತ್ತು ಅದರೊಳಗಿನ ಸಾಮಾನ್ಯ ಮಾಹಿತಿ’ಯನ್ನೊಳಗೊಂಡಿರುವ ಟಿಪ್ಪಣಿ ಹಾಳೆಗಳನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಒದಗಿಸಲು ವಿಧಾನಸಭೆ ಸಚಿವಾಲಯ ನಿರಾಕರಿಸಿದೆ.


ಸಚಿವಾಲಯದ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆಯಲ್ಲದೆ ಕೋವಿಡ್‌-19 ರ ಹಿನ್ನೆಲೆಯಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿನ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿದೆ ಎನ್ನಲಾಗಿರುವ ಪ್ರಕರಣಗಳನ್ನು ಮುಚ್ಚಿ ಹಾಕಲು ಹವಣಿಸಿದೆಯೇ ಎಂಬ ಸಂಶಯಗಳನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.


ವಿಧಾನಸಭೆ ಸಚಿವಾಲಯ ಹೊರಡಿಸಿದ್ದ ಲಘು ಪ್ರಕಟಣೆ ವಿವಾದಕ್ಕೆ ಕಾರಣವಾಗಿತ್ತಲ್ಲದೆ, ಸ್ಪೀಕರ್‌ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ಗುಡುಗಿದ್ದರು.


ಲಘು ಪ್ರಕಟಣೆ ಹೊರಡಿಸಿರುವ ಸಂಬಂಧ ಸಂಪೂರ್ಣ ಕಡತ ಮತ್ತು ಕಡತದೊಳಗಿನ ಟಿಪ್ಪಣಿ ಹಾಳೆಗಳಿಗಾಗಿ ಮಾಹಿತಿ ಹಕ್ಕಿನ ಅಡಿಯಲ್ಲಿ ‘ದಿ ಫೈಲ್‌’ 2020ರ ಜೂನ್‌ 1ರಂದು ಅರ್ಜಿ ಸಲ್ಲಿಸಿತ್ತು. ಆದರೆ ‘ಮಾಹಿತಿ ಹಕ್ಕು ಅಧಿನಿಯಮ 8(ಸಿ) ಪ್ರಕಾರ ಕಡತದ ಟಿಪ್ಪಣಿ ಹಾಳೆಗಳನ್ನು ನೀಡಲು ಸಾಧ್ಯವಿರುವುದಿಲ್ಲ,’ ಎಂದು 2020ರ ಜೂನ್‌ 29ರಂದು ಹಿಂಬರಹ ನೀಡಿರುವ ವಿಧಾನಸಭೆ ಸಚಿವಾಲಯ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಸ್ಪೀಕರ್‌ ಆದೇಶದ ಪ್ರಕಾರ ಕರ್ನಾಟಕ ವಿಧಾನಸಭೆಯ (15ನೇ ವಿಧಾನಸಭೆ) ಸಾಂಸದಿಕ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿ ಅಡಿಯಲ್ಲಿ 2020ರ ಮೇ 26ರಂದು ಲಘು ಪ್ರಕಟಣೆ( ಸಂಖ್ಯೆ 104) ಹೊರಡಿಸಿತ್ತು. ಪ್ರಕಟಣೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವ ಪ್ರಕಾರ ಇದೊಂದು ಸಾಮಾನ್ಯ ಮಾಹಿತಿಯಷ್ಟೇ.

ಹೀಗಾಗಿ ಸಚಿವಾಲಯದ ಸಹಾಯಕ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ಉಲ್ಲೇಖಿಸಿರುವ ಮಾಹಿತಿ ಹಕ್ಕು ಅಧಿನಿಯಮ 8(ಸಿ) ವ್ಯಾಪ್ತಿಗೆ ಲಘು ಪ್ರಕಟಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಡತದ ಮಾಹಿತಿ ಒಳಪಡುವುದೇ ಇಲ್ಲ. ಇದೊಂದು ಸಾಮಾನ್ಯ ಮಾಹಿತಿ ಎಂದು ಲಘು ಪ್ರಕಟಣೆಯಲ್ಲೇ ಸ್ಪಷ್ಟಪಡಿಸಿದ್ದರೂ ಮಾಹಿತಿ ಹಕ್ಕು ಅಧಿನಿಯಮ 8(ಸಿ) ರಕ್ಷಣೆ ಪಡೆದಿರುವುದು ತೀರಾ ಬಾಲಿಶಃ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


ಅಧಿನಿಯಮ 8(ಸಿ) ಏನು ಹೇಳುತ್ತದೆ?


‘ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಸಂಸತ್ತು ಅಥವಾ ರಾಜ್ಯ ವಿಧಾನಮಂಡಲದ ಹಕ್ಕುಚ್ಯುತಿ ಉಂಟಾಗುವುದೋ ಅಂಥ ಮಾಹಿತಿ’ಯನ್ನು ನೀಡಲು ಅಧಿನಿಯಮದ 8(ಸಿ) ವಿನಾಯಿತಿ ನೀಡುತ್ತದೆ.’

ಮಾಹಿತಿಯನ್ನು ಒದಗಿಸುವುದಕ್ಕೆ ವಿನಾಯಿತಿ ನೀಡುವ ಸಂಬಂಧ ಅಧಿನಿಯಮ ಸ್ಪಷ್ಟವಾಗಿ ಹೇಳಿದ್ದರೂ ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುವ ಲಘು ಪ್ರಕಟಣೆ ವಿಚಾರಕ್ಕೆ ಸಂಬಂಧಿಸಿದಂತೆ ತೆರೆದಿರುವ ಕಡತ ಮತ್ತು ಟಿಪ್ಪಣಿ ಹಾಳೆಗಳನ್ನು ಒದಗಿಸುವುದು ಸಂಸತ್ತಿಗೆ ಅಥವಾ ರಾಜ್ಯ ವಿಧಾನಮಂಡಲಕ್ಕೆ ಹಕ್ಕುಚ್ಯುತಿ ಉಂಟಾಗಲಿದೆ ಎಂದು ಮಾಹಿತಿ ಹಕ್ಕು ಅಧಿಕಾರಿ ಮುಂದೊಡ್ಡಿರುವ ವಾದವೇ ವಿಕೃತವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.


‘ಹಕ್ಕುಚ್ಯುತಿ ಆಗಲಿದೆ ಎಂದು ಅಧಿಕಾರಿಗಳು ಮಂಡಿಸಿರುವ ವಾದವೇ ಬಹಳ ವಿಕೃತ. ಕೇಳಿರುವ ಮಾಹಿತಿ ಕೂಡ ಸಾರ್ವಜನಿಕ ಒಳಿತು ಸಾಧಿಸುವ ಸಾರ್ವಜನಿಕ ನಿರ್ಧಾರಗಳ ಬಗ್ಗೆ ಆಗಿರುವುದರಿಂದ ಇಲ್ಲಿ ಗೌಪ್ಯತೆ ಅಥವಾ ಹಕ್ಕುಚ್ಯುತಿಯಾಗಲಿದೆ ಎಂಬ ವಾದವನ್ನು ಮಂಡಿಸಲಿಕ್ಕೆ ಎಳ್ಳಷ್ಟೂ ಅವಕಾಶವಿಲ್ಲ. ಇದು ಮಾಹಿತಿ ಹಕ್ಕು ಅಧಿಕಾರಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಕಾಯ್ದೆ ಕನಿಷ್ಠ ತಿಳಿವಳಿಕೆಯೂ ಇರುವಂತೆಯೂ ಕಾಣುವುದಿಲ್ಲ. ಈ ಎಲ್ಲ ಕಾರಣಗಳಿಗೋಸ್ಕರ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷರು ಸೇರಿದಂತೆ ಉಳಿದ ಸದಸ್ಯರೂ ನ್ಯಾಯಾಲಯಕ್ಕೆ ತುರ್ತಾಗಿ ಅರ್ಜಿ ಸಲ್ಲಿಸುವುದು ಉತ್ತಮ,’ ಎನ್ನುತ್ತಾರೆ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕೆ ವಿ ಧನಂಜಯ.


ಪ್ರಕರಣದ ಹಿನ್ನೆಲೆ


ಕೋವಿಡ್‌-19ರ ಹಿನ್ನೆಲೆಯಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರ, ಖರೀದಿಸಲಾಗಿರುವ ಉಪಕರಣಗಳ ದರ, ಕಾರ್ಯಕ್ಷಮತೆ ಮತ್ತು ವಿಮಾನ ನಿಲ್ದಾಣ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಕಲ್ಪಿಸಲಾಗಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲು 2020ರ ಮೇ 28ರ ಗುರುವಾರ ಮಧ್ಯಾಹ್ನ 12.30ರ ನಂತರ ತಪಾಸಣೆ ನಡೆಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು, 2020ರ ಮೇ 26ರಂದು ನಡೆದಿದ್ದ ಸಭೆಯಲ್ಲೇ ಸದಸ್ಯರು ನಿರ್ಣಯಿಸಿದ್ದರು.


ಮಾಧ್ಯಮಗಳಲ್ಲಿ ಈ ಭೇಟಿ ಕುರಿತು ವರದಿ ಪ್ರಕಟವಾಗಿ ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ 2020ರ ಮೇ 27ರ ಮಧ್ಯಾಹ್ನ 2.30ಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಉಪ ಕಾರ್ಯದರ್ಶಿಯವರಿಗೆ ಕರ್ನಾಟಕದ ವಿಧಾನಸಭೆಯ ಕಾರ್ಯದರ್ಶಿ (ಪ್ರ)ಯವರಿಂದ (ಟಿಪ್ಪಣಿ ಸಂಖ್ಯೆ: ಕವಿಸಸ/ಶಾರಶಾ/311/ಸಪ್ರ/2020) ಲಘು ಪ್ರಕಟಣೆ ಭಾಗ-2 (ಸಂಖ್ಯೆ 104) ತಲುಪಿತ್ತು.


ಲಘು ಪ್ರಕಟಣೆಯಲ್ಲೇನಿತ್ತು?


“ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನ ವೈರಸ್ (ಕೋವಿಡ್-19)ನ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಮಂಡಲ/ವಿಧಾನಸಭೆಯ ಸಮಿತಿಗಳು ಅಧ್ಯಯನ ಪ್ರವಾಸ ಕೈಗೊಂಡಲ್ಲಿ ಇಲಾಖಾ ಅಧಿಕಾರಿಗಳು/ಸಾರ್ವಜನಿಕರು ಸಮಿತಿಯನ್ನು ಭೇಟಿ ಮಾಡುವ ಸಂದರ್ಭವಿರುವುದರಿಂದ, ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರ ಇತ್ಯಾದಿಗಳನ್ನು ಕಾಪಾಡಿಕೊಳ್ಳುವುದು ಅವಶ್ಯವಿರುತ್ತದೆ. ಆದುದರಿಂದ, ಮುಂದಿನ ಆದೇಶದವರೆಗೂ ರಾಜ್ಯದೊಳಗೆ ಅಥವಾ ಹೊರ ರಾಜ್ಯಗಳಲ್ಲಿ ಯಾವುದೇ ಅಧ್ಯಯನ ಪ್ರವಾಸವನ್ನು ಹಾಗೂ ಸ್ಥಳೀಯವಾಗಿಯೂ ಯಾವುದೇ ಭೇಟಿ ಅಥವಾ ಸ್ಥಳ ಪರಿಶೀಲನೆಗಳನ್ನು ಕೈಗೊಳ್ಳಬಾರದೆಂದು ಮಾನ್ಯ ಸಭಾಧ್ಯಕ್ಷರು ಆದೇಶಿಸಿರುತ್ತಾರೆಂದು ಈ ಮೂಲಕ ತಿಳಿಯಪಡಿಸಲಾಗಿದೆ” ಎಂದು ಹೇಳಲಾಗಿತ್ತು.


ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಭ್ರಷ್ಠಾಚಾರದ ದೂರುಗಳನ್ನು ತಪಾಸಣೆ ಮಾಡಲು, ಪರಿಶೀಲಿಸಲು ಕ್ರಮ ಕೈಗೊಳ್ಳುವ ಉದ್ದೇಶದಿಂದ ಸ್ಥಳ ಪರಿಶೀಲನೆ ಮಾಡಲು ನಿರ್ಣಯ ಕೈಗೊಂಡ ನಂತರ ಈ ಪ್ರಕಟಣೆ ಹೊರಬಿದ್ದಿತ್ತು. ಇದಕ್ಕೆ ಆಕ್ಷೇಪ ಎತ್ತಿದ್ದ ಸಮಿತಿಯ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ‘ಭ್ರಷ್ಠಾಚಾರದ ಪ್ರಕರಣಗಳ ತನಿಖೆಯನ್ನು ತಡೆಯುವ ಉದ್ದೇಶದಿಂದಲೇ ಇಂಥ ಪ್ರಕಟಣೆ ಹೊರಬಿದ್ದಿರಬಹುದೆಂಬ ಸಂದೇಹ ಸಹಜವಾಗಿ ಸಾರ್ವಜನಿಕರಿಗೆ ಉಂಟಾಗುತ್ತಿದೆ. ಸಮಿತಿಯ ಸದಸ್ಯರು ಸಹ ಇಂಥ ಪ್ರಕಟಣೆಯನ್ನು ಒಪ್ಪಲು ಅಥವಾ ಸ್ವೀಕರಿಸಲು ಸಾಧ್ಯವಾಗುವುದಿಲ್ಲ,’ ಎಂದು ತಿರುಗೇಟು ನೀಡಿದ್ದರು.


ಸಾಮಾಜಿಕ ಅಂತರ ಸುರಕ್ಷತಾ ಕ್ರಮಗಳನ್ನು ಒಳಗೊಂಡಂತೆ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆಯೇ, ಸರ್ಕಾರವು ಹೇಳಿಕೊಳ್ಳುತ್ತಿರುವಂತೆ ಸೌಲಭ್ಯ, ಸೌಕರ್ಯಗಳನ್ನು ಒದಗಿಸಿ ಕೋವಿಡ್ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆಯೇ, ಸೋಂಕಿಗೆ ತುತ್ತಾಗಿರಬಹುದಾದ ಶಂಕಿತರನ್ನು ಪ್ರತ್ಯೇಕಿಸುವ (Quarantine) ವ್ಯವಸ್ಥೆ ಕಲ್ಪಿಸಲಾಗಿರುವ ಕೇಂದ್ರಗಳಲ್ಲಿ ಅಪೇಕ್ಷಿತ ಪ್ರಮಾಣದ ಸುರಕ್ಷತಾ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂಬ ಬಗ್ಗೆ ಸ್ಥಳ ಪರಿಶೀಲನೆ ಇಲ್ಲದೆಯೇ ನಿರ್ಣಯಕ್ಕೆ ಬರುವುದು ಕಷ್ಟ ಸಾಧ್ಯ ಎಂದು ಎಚ್‌ ಕೆ ಪಾಟೀಲ್‌ ಅವರು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ 2020ರ ಮೇ 28ರಂದು ವಿವರವಾದ ಪತ್ರವನ್ನು ಬರೆದಿದ್ದರು.


ಸರ್ಕಾರಿ ಕಛೇರಿಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ವಿಧಾನ ಮಂಡಲದ ಸಚಿವಾಲಯವು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಮಿತಿಗಳ ಕಾರ್ಯಕಲಾಪಗಳು ಪ್ರಾರಂಭವಾಗಿವೆ. ಹೀಗಿರುವಾಗ ಭ್ರಷ್ಠಾಚಾರದ ಪ್ರಕರಣಗಳ ಬಗ್ಗೆ ತನಿಖೆ ಮಾಡಲು ಸಾರ್ವಜನಿಕರಿಗೆ ಸಂಕಷ್ಟ ಕಾಲದಲ್ಲಿ ಒದಗಿಸಬೇಕಾದ ಸೌಲಭ್ಯ, ಸೌಕರ್ಯ, ಸೇವೆ ನೀಡಲಾಗುತ್ತಿದೆಯೇ ಎಂಬ ಬಗ್ಗೆ ತಪಾಸಣೆ ಮಾಡಲು ಸಾರ್ವಜನಿಕ ಲೆಕ್ಕಪತ್ರ ಸಮಿತಿಯಂತಹ ವಿಧಾನ ಮಂಡಲದ ಮಹತ್ವದ ಸಮಿತಿಯ ಕಾರ್ಯನಿರ್ವಹಣೆಗೆ ರಾಜ್ಯದೊಳಗೆ ಅಥವಾ ಹೊರರಾಜ್ಯಗಳಲ್ಲಿ ಯಾವುದೇ ಅಧ್ಯಯನ ಪ್ರವಾಸಗಳನ್ನು ಹಾಗೂ ಸ್ಥಳೀಯವಾಗಿ ಯಾವುದೇ ಭೇಟಿ ಅಥವಾ ಸ್ಥಳ ಪರಿಶೀಲನೆಗಳನ್ನು ಕೈಗೊಳ್ಳಬಾರದೆಂಬ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಭಾಗವಾಗಿಯೇ ಹೊರಡಿಸಿತ್ತು ಎನ್ನಲಾಗಿದ್ದ ಆದೇಶ, ಸಮಿತಿ ಪಾಲಿಗೆ ಆಘಾತವಾಗಿತ್ತು.


ಈ ಹಿನ್ನೆಲೆಯಲ್ಲಿ ಲಘು ಪ್ರಕಟಣೆ 104ನ್ನು ತಕ್ಷಣ ಹಿಂಪಡೆದು ಭ್ರಷ್ಠಾಚಾರ ಹೆಪ್ಪುಗಟ್ಟುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸರಿಯಾದ ಸೌಲಭ್ಯ, ಸೌಕರ್ಯಗಳಿಂದ ಅವ್ಯವಹಾರದ ಕಾರಣಕ್ಕಾಗಿ ವಂಚಿತ ಮಾಡುವ ಮತ್ತು ಕೊರೊನಾ ವಾರಿಯರ್ಸ್‍ಗೆ ಅಗತ್ಯದ ಪರಿಕರಗಳನ್ನು ವಿತರಿಸದಿರುವ ಮತ್ತು ಗುಣಮಟ್ಟದ ಬಗ್ಗೆ ಸಂಶಯಾತ್ಮಕ ಸ್ಥಿತಿ ಉಂಟಾಗಿರುವಾಗ ಆದೇಶವನ್ನು ಹಿಂಪಡೆಯಬೇಕು ಎಂದು ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರು ಪತ್ರದಲ್ಲಿ ಒತ್ತಾಯಿಸಿದ್ದನ್ನು ಸ್ಮರಿಸಬಹುದು.
ಅಲ್ಲದೆ, ಈ ಪರಿಶೀಲನೆ ಮತ್ತು ತಪಾಸಣೆ ಸಾರ್ವಜನಿಕ ಹಣದ ಸದ್ವಿನಿಯೋಗದ ಕುರಿತು ಪರಿಶೀಲಿಸಲು ಮತ್ತು ಪ್ರಮಾದಗಳನ್ನು ಪತ್ತೆ ಹಚ್ಚಲು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಗಳ 264)1)ರನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಬಳಸಿಕೊಂಡಿತ್ತು.


ನಿರ್ಭಯವಾಗಿ, ನಿರ್ಧಾಕ್ಷಿಣ್ಯವಾಗಿ, ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ಸಮಿತಿಗೆ ಯಾವುದೇ ಅಡ್ಡಿ ಆಗಕೂಡದು. ಈ ಹಿನ್ನೆಲೆಯಲ್ಲಿ ಲಘು ಪ್ರಕಟಣೆಯನ್ನು ತಕ್ಷಣ ಹಿಂಪಡೆದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ಸೃಷ್ಠಿಯಾಗುವಂತೆ ಸಂವಿಧಾನ ಮತ್ತು ಕಾನೂನಾತ್ಮಕ ವ್ಯವಸ್ಥೆಯನ್ನು ಬುಡಮೇಲು ಮಾಡದಂತೆ ವಿಧಾನ ಮಂಡಲದ ಸಮಿತಿಗಳ ಅಧಿಕಾರವನ್ನು ಮೊಟಕುಗೊಳಿಸುವ ಇಂಥ ಪ್ರಯತ್ನವನ್ನು ಕೈಬಿಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದರು.


‘ವಿಧಾನಸಭೆ ಸಚಿವಾಲಯವು ಕೊಡಬೇಕಾಗಿರುವ ಮಾಹಿತಿಯನ್ನು ನಿರಾಕರಿಸಲು ಕೊಟ್ಟಿರುವ ಕಾರಣಗಳು ಎಷ್ಟು ಬಾಲಿಶಃ ಎನ್ನುವುದು ಮಾಹಿತಿ ಹಕ್ಕು ಕಾಯ್ದೆಯ ಪರಿಜ್ಞಾನ ಇರುವವರು ಮತ್ತು ಕೋವಿಡ್‌ 19ರ ಹಗರಣದ ಅವಗಾಹನೆ ಇರುವವರಿಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇವರೆಲ್ಲ ಎಷ್ಟೇ ತಿಪ್ಪರಲಾಗ ಹಾಕಿದರೂ ಸತ್ಯ ಒಂದಲ್ಲ ಒಂದು ದಿನ ಹೊರ ಬರುತ್ತದೆ. ಭ್ರಷ್ಟರಿಗೆ ಮತ್ತು ಭ್ರಷ್ಟರ ರಕ್ಷಣೆಗೆ ನಿಂತು ಸಾಂವಿಧಾನಿಕ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿರುವವರಿಗೆ ಶಿಕ್ಷೆ ಆಗಿಯೇ ತೀರುತ್ತದೆ, ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

the fil favicon

SUPPORT THE FILE

Latest News

Related Posts