ಬೀದರ್‌ ಡಿಸಿಸಿ ಬ್ಯಾಂಕ್‌ ಬಹುಕೋಟಿ ಹಗರಣ; ಸಿಬಿಐ ತನಿಖೆ ಪ್ರಸ್ತಾವನೆಗೆ ಮರು ಜೀವ

ಬೆಂಗಳೂರು; ಬೀದರ್‌ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿರುವ ಬಹು ಕೋಟಿ ರು. ಮೊತ್ತದ ಹಗರಣವನ್ನು ಸಿಬಿಐಗೆ ವಹಿಸಬೇಕೆನ್ನುವ 3 ವರ್ಷದ ಹಿಂದಿನ ಪ್ರಸ್ತಾವನೆ ಇದೀಗ ಮರು ಜೀವ ಪಡೆದಿದೆ. ಈ ಕುರಿತು 2020ರ ಜೂನ್‌ 3ರಂದು ಅರೆ ಸರ್ಕಾರಿ ಪತ್ರ ಇಲಾಖೆ ಮುಖ್ಯಸ್ಥರಿಗೆ ತಲುಪಿದೆ.


ಬೀದರ್‌ ಡಿಸಿಸಿ ಬ್ಯಾಂಕ್‌ನ ಅವ್ಯವಹಾರ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸಹಕಾರ ಸಂಘಗಳ ನಿಬಂಧಕರು ಕಳೆದ 3 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರೂ ಹಿಂದಿನ ಕಾಂಗ್ರೆಸ್‌ ಸರ್ಕಾರ ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ.


ಹಗರಣವನ್ನು ಸಿಬಿಐ ತನಿಖೆಗೆ ವಹಿಸುವ ಸಂಬಂಧ ಸಹಕಾರ ಸಂಘಗಳ ನಿಬಂಧಕರು 2017ರ ಜುಲೈ 15ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅಲ್ಲದೆ 2018ರ ಏಪ್ರಿಲ್‌ 13ರಂದು ಮತ್ತೊಂದು ಪತ್ರ ಬರೆದಿತ್ತು.


3 ವರ್ಷಗಳ ನಂತರ 2020ರ ಜೂನ್‌ 3ರಂದು ಮತ್ತೊಂದು ಅರೆ ಸರ್ಕಾರಿ ಪತ್ರ ಬರೆದಿರುವ ಸಂಬಂಧಿಸಿದ ಅಧಿಕಾರಿಗಳು ಸಿಬಿಐಗೆ ವಹಿಸಬೇಕು ಎಂದು ವರದಿ ಮಾಡಿರುವುದು ಲಭ್ಯ ಇರುವ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ. ‘5 ಕೋಟಿಗಿಂತ ಹೆಚ್ಚು ಹಣ ದುರುಪಯೋಗವಾಗಿರುವುದು ಕಂಡು ಬಂದಿದ್ದು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬಹುದಾಗಿದೆ,’ ಎಂದು ಬರೆದಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. ಈ ಸಂಬಂಧ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರ ಅನುಮೋದನೆಗೆ ಸದ್ಯದಲ್ಲೇ ಕಡತ ಮಂಡಿಸಲಾಗುವುದು ಎಂದು ವಿಶ್ವಸನೀಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

ಬೀದರ್‌ನ ಡಿಸಿಸಿ ಬ್ಯಾಂಕಿನಲ್ಲಿ ಸುಮಾರು 200 ರಿಂದ 300 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಖಾಜಿ ಅರ್ಷದ್ ಅಲಿ ಆರೋಪಿಸಿದ್ದರು.


ಡಿಸಿಸಿ ಬ್ಯಾಂಕಿನ ಕೃಷಿಯೇತರ ಸಾಲವನ್ನು ಏಕಕಾಲಿಕ ಸಾಲ ತೀರುವಳಿ ಎಂದು ನಿಯಮ ಬಾಹಿರವಾಗಿ ಸಾಲ ಮನ್ನಾ ಹಾಗೂ ಸಾಲ ಭದ್ರತೆ ಪಡೆಯದೇ ಇರುವ ಪ್ರಕರಣಗಳ ವಸೂಲಾತಿಗೆ ನಿರ್ದೇಶಕ, ಬ್ಯಾಂಕಿನ ಹಾಲಿ ಅಧ್ಯಕ್ಷ ಗುರುಪಾದಪ್ಪ ನಾಗಮಾರಪಳ್ಳಿ ಹಾಗೂ ಉಪಾಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರನ್ನು ಕಲಂ 29ರಡಿ ಅನರ್ಹಗೊಳಿಸಿ, ಸಹಕಾರ ಇಲಾಖೆ ಈ ಹಿಂದೆಯೇ ಆದೇಶ ಹೊರಡಿಸಿತ್ತು.


ಇದಲ್ಲದೆ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ತನಿಖೆಗಾಗಿ ಸಂಸದರಾಗಿದ್ದ ಭಗವಂತ ಖೂಬಾ ಹಾಗೂ ಹಾಲಿ ಸಚಿವ ಪ್ರಭು ಚವ್ಹಾಣ್ ಲೋಕಾಯು­ಕ್ತಕ್ಕೆ ದೂರು ಸಲ್ಲಿಸಲು ಮುಂದಾಗಿದ್ದರು. ಸಾಲ ವಿತರಣೆಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ ನಿಯಮ ಉಲ್ಲಂಘಿಸಲಾಗಿದೆ. ರೈತರಿಗಿಂತ ಉದ್ಯಮಿಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ತಮಗೆ ಬೇಕಾದವರ ಹಿತ ಕಾಯಲು ಕಾನೂನು ಬಾಹಿರವಾಗಿ ಬಡ್ಡಿ ಮನ್ನಾ ಮಾಡಲಾಗಿದೆ. ಕೆಲ ಪ್ರಕರಣಗಳಲ್ಲಿ ಅಸಲನ್ನೂ ಮನ್ನಾ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.


ಬ್ಯಾಂಕ್ ಅಧ್ಯಕ್ಷರ ಪುತ್ರ ದಿವಂಗತ ವಿಜಯ ಕುಮಾರ ಕೈಗಾರಿಕೆ ಉದ್ದೇಶಕ್ಕೆ ಪಡೆದಿದ್ದ 1 ಕೋಟಿ ರೂಪಾಯಿ ಅಸಲು ಹಾಗೂ ಬಡ್ಡಿಯನ್ನು ಮನ್ನಾ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಬ್ಯಾಂಕ್ ಸಿಬ್ಬಂದಿ ನೇಮಕಾತಿಗಾಗಿ 2012ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ 3,421 ಮಂದಿ ಗುಮಾಸ್ತ ಹುದ್ದೆಗೆ ಮತ್ತು 1,437 ಅಟೆಂಡರ್‌ಗೆ ಸೇರಿ 4,858 ಜನ ಅರ್ಜಿ ಸಲ್ಲಿಸಿದ್ದರು. ಎರಡು ವರ್ಷವಾದರೂ ನೇಮಕಾತಿ ನಡೆದಿಲ್ಲ. ಆದರೆ, ರಾಜಕೀಯ ಲಾಭಕ್ಕಾಗಿ ಅರ್ಜಿ ಸಲ್ಲಿಸಿದವರನ್ನು ಬಿಟ್ಟು, 84 ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು.


ಬ್ಯಾಂಕ್‌ನಿಂದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಗೆ ರೂ 250 ಕೋಟಿ ಸಾಲ ನೀಡಲಾಗಿತ್ತು. ಆದರೆ, ಎಲ್ಲ ಆಸ್ತಿಯೂ ಸೇರಿದಂತೆ ಕಾರ್ಖಾನೆಯ ಒಟ್ಟು ಆಸ್ತಿ ರೂ 150 ಕೋಟಿ ಆಗಿದೆ. ಸಹಕಾರ ಆಸ್ಪತ್ರೆ ನೋಂದಣಿಗೆ ಮುನ್ನವೇ 2012 ರಲ್ಲಿ ಅಧ್ಯಕ್ಷರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಕಾನೂನು ಬಾಹಿರವಾಗಿ ರೂ 30 ಕೋಟಿ ಷೇರು ಸಂಗ್ರಹಿಸಲಾಗಿದೆ. ರೈತರಿಗೆ ಹೆಚ್ಚು ಸಾಲ ಮಂಜೂರು ಮಾಡಿ, ಅದರಲ್ಲಿ ಷೇರು ಹಣ ಪಡೆ­ಯ­ಲಾಗಿತ್ತು ಎಂಬ ಆರೋಪಗಳಿವೆ.


ಅಧ್ಯಕ್ಷರ ಹೆಸರಿನಲ್ಲಿ ರೂ 2.8 ಕೋಟಿ ಡ್ರಾ ಮಾಡಿದ್ದು, ಅದನ್ನು ಯಾವುದಕ್ಕೆ ಉಪಯೋ­ಗಿಸ­ಲಾಗಿದೆ ಎನ್ನುವ ಮಾಹಿತಿಯನ್ನು ಷೇರುದಾರ­ರಿಗೂ ನೀಡಿಲ್ಲ. ಬ್ಯಾಂಕ್‌ನಲ್ಲಿ ನಡೆದ ಅವ್ಯವಹಾರದ ಬಗ್ಗೆ ನಿಯಮ 64ರ ಅಡಿ ತನಿಖೆ ನಡೆಸಲಾಗಿತ್ತು. ಅದರ ಆಧಾರದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ­ನ್ನು ಅನರ್ಹಗೊಳಿಸಲಾಗಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts