ಐಎಎಸ್‌ ಅಧಿಕಾರಿ ಮೊಹ್ಸೀನ್‌ ಬೆನ್ನು ಬಿದ್ದ ಬಿಜೆಪಿ ಸರ್ಕಾರ; ಚಾರ್ಜ್‌ಶೀಟ್‌ ಸಲ್ಲಿಸಲು ಒತ್ತಡ?

ಬೆಂಗಳೂರು; ರಾಜ್ಯ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತಪಾಸಣೆ ನಡೆಸಿ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕದ ಐಎಎಸ್‌ ಅಧಿಕಾರಿ ಮೊಹಮ್ಮದ್‌ ಮೊಹ್ಸೀನ್‌ರ ಬೆನ್ನು ಬಿದ್ದಿದೆ.
ಮಧ್ಯಾಹ್ನ ಉಪಹಾರ ಮತ್ತು ಕ್ಷೀರ ಭಾಗ್ಯ ಯೋಜನೆಯ ಟೆಂಡರ್‌ ಪ್ರಕ್ರಿಯೆ ಪ್ರಕರಣದಲ್ಲಿ ಆರೋಪಿ ಎಂದು ಹೇಳಲಾಗಿರುವ ಮೊಹ್ಸೀನ್‌ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಮತ್ತು ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಲು ಪ್ರಾಥಮಿಕ ಶಿಕ್ಷಣ ಇಲಾಖೆಗೆ ಒತ್ತಡ ಹೇರುತ್ತಿರುವುದು ಇದೀಗ ಬಹಿರಂಗವಾಗಿದೆ.


ಅಲ್ಲದೆ ಈ ಪ್ರಕರಣದಲ್ಲಿ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ದೋಷಾರೋಪಣೆ ಪಟ್ಟಿ ಜಾರಿಗೊಳಿಸಲು ಅನುಮೋದನೆ ನೀಡುವ ಸಂಬಂಧದ ಕಡತವನ್ನು ಮಂಡಿಸಬೇಕು ಎಂದು ಅಧಿಕಾರಿಗಳಿಗೆ ಬೆನ್ನು ಬಿದ್ದಿದ್ದಾರೆ ಎಂದು ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.


ಇತ್ತೀಚೆಗಷ್ಟೇ ಸಾಮಾಜಿಕ ಜಾಲ ತಾಣದಲ್ಲಿ ಗೋಧಿ ಮೀಡಿಯಾ ಎಂದು ಜರೆದಿದ್ದ ಮೊಹ್ಮದ್‌ ಮೊಹ್ಸೀನ್‌ ಅವರು ಬಿಜೆಪಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿದ್ದ ಅವರನ್ನು ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಕಂದಾಯ ಇಲಾಖೆಗೆ ವರ್ಗಾಯಿಸಲಾಗಿತ್ತು.


ಐಎಎಸ್‌ ಅಧಿಕಾರಿ ಮೊಹಮ್ಮದ್‌ ಮೊಹ್ಸೀನ್‌ ಅವರನ್ನು 10 ಕೋಟಿ ರು. ಮೊತ್ತದ ಟೆಂಡರ್‌ ಪ್ರಕ್ರಿಯೆ ವಿಳಂಬ ಪ್ರಕರಣದಲ್ಲಿ ದೋಷಾರೋಪಣೆ ನಿಗದಿಗೊಳಿಸಿದ್ದ ಹಳೆಯ ಪ್ರಕರಣದಲ್ಲಿ ಶಿಸ್ತು ಕ್ರಮ ಜರುಗಿಸುವ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 2020ರ ಫೆ.29 ಮತ್ತು ಮೇ 11ರಂದು ಸತತವಾಗಿ ಪ್ರಾಥಮಿಕ ಶಿಕ್ಷಣ ಇಲಾಖೆಗೆ ಸರಣಿ ಪತ್ರಗಳನ್ನು ಬರೆಯುತ್ತಿದೆ. ಇದಕ್ಕೆ ಸಂಬಂಧಿಸಿದ ಕೆಲ ಪತ್ರಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.


‘ಮೊಹಮದ್‌ ಮೊಹ್ಸೀನ್‌ ಅವರ ವಿರುದ್ಧ ಪ್ರತ್ಯೇಕವಾಗಿ ಶಿಸ್ತುಕ್ರಮ ಜರುಗಿಸುವ ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಲು ಇಲಾಖೆ ಸಚಿವರ ಅನುಮೋದನೆ ಪಡೆದು ತಮಗೆ ಪ್ರಸ್ತಾವನೆ ಸಲ್ಲಿಸಲಾಗುವುದು,’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಡಿಪಿಎಆರ್‌ಗೆ ಪತ್ರ ಬರೆದಿರುವುದು ಗೊತ್ತಾಗಿದೆ.

ಏನದು ಪ್ರಕರಣ?


ಮೊಹಮ್ಮದ್‌ ಮೊಹ್ಸೀನ್ ಅವರು ಕಾಂಗ್ರೆಸ್‌ಸರ್ಕಾರದ ಅವಧಿಯಲ್ಲಿ (2013-2015) ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಆ ಅವಧಿಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಮತ್ತು ಕ್ಷೀರ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಸ್ಟೀಮ್‌ ಬಾಯ್ಲರ್‌ ಅಳವಡಿಸುವ 10.00 ಕೋಟಿ ರು.ಯೋಜನೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಐಎಫ್‌ಎಸ್‌ಅಧಿಕಾರಿ ಶಿವಶೈಲಂ ನೇತೃತ್ವದಲ್ಲಿ ತನಿಖೆ ನಡೆದಿತ್ತು.


ಈ ತನಿಖಾ ವರದಿಯಲ್ಲಿ ಮೊಹಮ್ಮದ್‌ ಮೊಹ್ಸೀನ್‌ ಕೂಡ ಟೆಂಡರ್‌ ಪ್ರಕ್ರಿಯೆಯಲ್ಲಿ ಆಗಿರುವ ವಿಳಂಬಕ್ಕೆ ಕಾರಣರು ಎಂದು ಹೇಳಲಾಗಿತ್ತು. ಈ ವರದಿ ಆಧರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಪ ನಿಗದಿಪಡಿಸಿತ್ತು.


ವಿಶೇಷವೆಂದರೆ ಹಿಂದಿನ ಕಾಂಗ್ರೆಸ್‌ಸರ್ಕಾರ ಜಾರಿಗೆ ತಂದಿದ್ದ ಕ್ಷೀರಭಾಗ್ಯ ಯೋಜನೆಗೆ ರಾಷ್ಟ್ರೀಯ ಪ್ರಶಂಸೆ ದೊರೆತಿತ್ತಲ್ಲದೆ ಕರ್ನಾಟಕ ಮಾದರಿ ಅನುಷ್ಠಾನಕ್ಕೆ ಪಂಜಾಬ್ ರಾಜ್ಯ ಸರ್ಕಾರವೂ  ಆಸಕ್ತಿ ವಹಿಸಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಟೆಂಡರ್‌ ಪ್ರಕ್ರಿಯೆಯಲ್ಲಿ ಆಗಿರುವ ವಿಳಂಬವನ್ನು ಮುಂದಿಟ್ಟುಕೊಂಡು ಮೊಹ್ಸೀನ್‌ ಅವರ ವಿರುದ್ಧ ದೋಷಾರೋಪ ಪಟ್ಟಿ ಜಾರಿಗೊಳಿಸಲು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ 2019ರ ಡಿಸೆಂಬರ್‌ 6ರಿಂದ ಪತ್ರ ಬರೆಯುತ್ತಲೇ ಬಂದಿದೆ.


ಮೊಹ್ಸೀನ್ ಅವರು ಐಎಎಸ್‌ ಅಧಿಕಾರಿಯಾಗಿರುವ ಕಾರಣ ‘ಇವರ ವಿರುದ್ಧ ಪ್ರತ್ಯೇಕವಾಗಿ ಶಿಸ್ತು ಕ್ರಮ ಜರುಗಿಸಬೇಕಿದೆ. ಹೀಗಾಗಿ ಈ ಅಧಿಕಾರಿಯ ವಿರುದ್ಧ ಸ್ಪಷ್ಟ ಮತ್ತು ನಿರ್ದಿಷ್ಟ ಆರೋಪಗಳುಳ್ಳ ಪರಿಪೂರ್ಣ ದೋಷಾರೋಪಣಾ ಪಟ್ಟಿ ಸಲ್ಲಿಸಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಸೂಚಿಸಿತ್ತು.


‘4 ವರ್ಷಗಳ ಹಿಂದೆ ನಡೆದಿರುವ ಈ ಪ್ರಕರಣದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯ ಜಂಟಿ ನಿರ್ದೇಶಕ ಎಚ್‌ವಿ ವೆಂಕಟೇಶಪ್ಪ, ಬೆಳ್ಳಶೆಟ್ಟಿ ಮತ್ತು ವ್ಯವಸ್ಥಾಪಕರಾಗಿದ್ದ ವಿ ಹನುಮಂತರಾವ್‌ ಅವರಿಂದ ಆರ್ಥಿಕ ನಷ್ಟ ಉಂಟಾಗಿದ್ದಲ್ಲಿ ಈ ಮೂವರು ಅಧಿಕಾರಿಗಳ ವಿರುದ್ಧ ದಾವೆ ಹೂಡುವ ಸಲುವಾಗಿ ಸ್ಪಷ್ಟ ಅಭಿಪ್ರಾಯದೊಂದಿಗೆ ಆರೋಪ ಪಟ್ಟಿ ಸಲ್ಲಿಕೆಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ,’ ಎಂದು  ಸೂಚಿಸಿತ್ತು. ಆದರೆ ಈ ಮೂವರು ಅಧಿಕಾರಿಗಳು ವಯೋ ನಿವೃತ್ತಿ ಹೊಂದಿದ್ದಾರೆ.


ಬಿಸಿಯೂಟಕ್ಕಾಗಿ ಶಾಲೆ­ಗಳಲ್ಲಿ ಸ್ಟೀಮ್‌ ಬಾಯ್ಲರ್‌­ಗಳನ್ನು ಅಳವಡಿಸುವ ಯೋಜನೆಯ ಟೆಂಡರ್‌ಪ್ರಕ್ರಿಯೆ ವಿಳಂಬವಾಗಲು ಕಾರಣ­ರಾಗಿದ್ದಾರೆ ಎಂದು ಹೇಳಲಾಗಿದ್ದ ಪ್ರಥಮ ದರ್ಜೆ ಸಹಾಯಕ ಎಂ.ಆರ್‌. ಜಗದೀಶ್‌ ಅವರನ್ನು ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್‌ ಮೊಹ್ಸೀನ್‌ ಸೇವೆಯಿಂದ ಅಮಾನತುಗೊಳಿಸಿದ್ದನ್ನು ಸ್ಮರಿಸಬಹುದು.


ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಬಿಸಿಯೂಟ ಯೋಜನೆಗೆ ಸ್ಟೀಮ್ ಬಾಯ್ಲರ್ ಖರೀದಿಯಲ್ಲಿ ಅಕ್ಷರ ದಾಸೋಹದ ಮಾರ್ಗಸೂಚಿಯೂ ಉಲ್ಲಂಘನೆಯಾಗಿತ್ತೆಂಬ ಅರೋಪವೂ ಕೇಳಿ ಬಂದಿತ್ತು. ಇದು 2014ರ ಅಧಿವೇಶನ ಸಂದರ್ಭದಲ್ಲಿ ವಿಧಾನ ಪರಿಷತ್‌ನಲ್ಲಿ ಸಾಕಷ್ಟು ಗದ್ದಲಕ್ಕೂ ಕಾರಣವಾಗಿತ್ತು. 1-10 ನೇ ತರಗತಿ ಇರುವ ಶಾಲೆಗಳಲ್ಲಿ ಕೇಂದ್ರ ಸರ್ಕಾರದ ಬಿಸಿಯೂಟ ಕಾರ್ಯಕ್ರಮದ ಅನುದಾನ ಬಳಸಿ ಬಾಯ್ಲರ್ ಖರೀದಿಸಲು ರಾಜ್ಯ ವಲಯದಲ್ಲಿ ಶಿಕ್ಷಣ ಇಲಾಖೆ ನೇರವಾಗಿ ಗುತ್ತಿಗೆ ಕರೆದಿತ್ತು.
ಆದರೆ ಮಾರ್ಗಸೂಚಿ ಪ್ರಕಾರ ಜಿಲ್ಲಾ ಮಟ್ಟದಲ್ಲಿ ಅಥವಾ ಶಾಲಾ ಮಟ್ಟದಲ್ಲಿ ಗುತ್ತಿಗೆ ಕರೆಯಬೇಕು. ಇಲಾಖೆಯ ಆಯುಕ್ತರು, ಜಂಟಿ ನಿರ್ದೇಶಕರು ಹಾಗೂ ಹಾಗೂ ಅಧೀನ ಕಾರ್ಯದರ್ಶಿ ನಿಯಮ ಉಲ್ಲಂಘಿಸಿ ಆರೋಪಕ್ಕೆ ಗುರಿಯಾಗಿದ್ದರು.


ಬಾಯ್ಲರ್ ಖರೀದಿಗೆ 10 ಕೋಟಿ ಮೀಸಲಿಟ್ಟಿದ್ದ ಸರ್ಕಾರ, ಇದನ್ನು ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಬಾಯ್ಲರ್ ಬಳಸಲು ಯೋಜನೆ ರೂಪಿಸಿತ್ತು. ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆಯನ್ನು ಪರಿಣಾಮಕಾರಿ­ಯಾಗಿ ಜಾರಿ ಮಾಡುವ ಉದ್ದೇಶದಿಂದ ಬಾಯ್ಲ­ರ್‌ಒದಗಿ­ಸುವ ಸಂಬಂಧದ ಕಡತ ವಿಳಂಬ ಮಾಡಿದ ಆರೋಪ ಮೊಹ್ಸೀನ್ ಸೇರಿದಂತೆ ಇತರ ಅಧಿಕಾರಿಗಳ ಮೇಲಿತ್ತು. ರಾಜ್ಯದ 1.03 ಕೋಟಿ ಮಕ್ಕಳಿಗೆ ಸುಮಾರು 412 ಕೋಟಿ ವೆಚ್ಚದಲ್ಲಿ ಜಾರಿಗೆ ತಂದಿದ್ದ ಕ್ಷೀರಭಾಗ್ಯ ಯೋಜನೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಿತ್ತು.

the fil favicon

SUPPORT THE FILE

Latest News

Related Posts