ತೋಟಗಾರ್ಸ್‌ ಸೊಸೈಟಿಯಿಂದಲೂ ಆಹಾರ ಧಾನ್ಯ ಕಿಟ್‌ ಖರೀದಿ; ದರದ ಮಾಹಿತಿ ಒದಗಿಸದ ಇಲಾಖೆ?

ಬೆಂಗಳೂರು; ಲಾಕ್‌ಡೌನ್‌ ಅವಧಿಯಲ್ಲಿ ಅತಂತ್ರರಾಗಿದ್ದ ಕಟ್ಟಡ ಕಾರ್ಮಿಕರಿಗೆ ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿನಿಧಿಸಿರುವ ಶಿರಸಿ-ಸಿದ್ದಾಪುರ ವಿಧಾನಸಭೆ ಕ್ಷೇತ್ರದಲ್ಲಿನ ದಿ ತೋಟಗಾರ್ಸ್‌ ಕೋ ಆಪರೇಟೀವ್‌ ಸೇಲ್‌ ಸೊಸೈಟಿಯಿಂದಲೂ ಆಹಾರ ಧಾನ್ಯ ಕಿಟ್‌ ಖರೀದಿಸಿತ್ತು ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.


ಸೊಸೈಟಿಯಿಂದ 65,000 ಆಹಾರ ಧಾನ್ಯ ಕಿಟ್‌ಗಳನ್ನು ಖರೀದಿಸಿದೆ ಎಂದು ಮಾಹಿತಿ ಒದಗಿಸಿರುವ ಬೆಳಗಾವಿ ಪ್ರಾದೇಶಿಕ ವಿಭಾಗದ ಉಪ ಆಯುಕ್ತ ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಅವರು, ತಲಾ ಕಿಟ್‌ಗೆ ಎಷ್ಟು ಮೊತ್ತ ಪಾವತಿಸಲಾಗಿದೆ ಎಂಬ ವಿವರಗಳನ್ನು ಒದಗಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಹೆಚ್ಚಿನ ವಿವರಗಳನ್ನು ಕೇಳಿದೆ ಎಂದು ತಿಳಿದು ಬಂದಿದೆ.


ಈ ಸೊಸೈಟಿ 2020ರ ಮೇ 10ರಿಂದ 22ರವರೆಗೆ ಬೆಳಗಾವಿ ಪ್ರಾದೇಶಿಕ ವಿಭಾಗದ ಜಿಲ್ಲೆಗಳಲ್ಲಿ ಒಟ್ಟು 65,000 ಆಹಾರ ಧಾನ್ಯ ಕಿಟ್‌ಗಳನ್ನು ವಿತರಿಸಿದೆ. ಈ ಸಂಬಂಧ ‘ದಿ ಫೈಲ್‌’ಗೆ ದಾಖಲೆಗಳು ಲಭ್ಯವಾಗಿವೆ.


ಶಿಗ್ಗಾಂವಿ, ಸವಣೂರು, ಹಿರೇಕೆರೂರ, ಕುಮಟಾ, ಕಾರವಾರ ಉಪ ವಿಭಾಗ, ದಾವಣಗೆರೆ, ಹಳಿಯಾಳ ಸೇರಿದಂತೆ ವಿಭಾಗ ವ್ಯಾಪ್ತಿಯಲ್ಲಿನ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿನ ಕಾರ್ಮಿಕರಿಗೆ ಗರಿಷ್ಠ 5,700 ಆಹಾರ ಧಾನ್ಯ ಕಿಟ್‌ ವಿತರಿಸಿದೆ ಎಂದು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.


‘ವಿಧಾನಸಭಾಧ್ಯಕ್ಷರ ಕ್ಷೇತ್ರದಲ್ಲಿರುವ ಸೊಸೈಟಿಯಿಂದ ಕಿಟ್‌ ಖರೀದಿ ಮಾಡಿರುವುದರಲ್ಲಿ ಪಾರದರ್ಶಕತೆ ಇಲ್ಲ. ಯಾವ ದರದಲ್ಲಿ ಖರೀದಿ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡದಿರುವುರ ಹಿನ್ನೆಲೆಯಲ್ಲಿ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಪರಿಶೀಲನೆಗೆ ಸಭಾಧ್ಯಕ್ಷರು ಅನುಮತಿ ನೀಡದೇ ಇರುವುದನ್ನು ನಾವು ಆಲೋಚಿಸಬೇಕಿದೆ. ಈ ಒಟ್ಟಾರೆ ಅಕ್ರಮಗಳಲ್ಲಿ ಸಭಾಧ್ಯಕ್ಷರ ನೇರ ಅಥವಾ ಪರೋಕ್ಷ ಪಾಲು ಇರಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.


ಅದೇ ರೀತಿ ಹುಬ್ಬಳ್ಳಿಯ ಶುಭರಾಂ ಫುಡ್‌ ಅಂಡ್‌ ಪ್ಯಾಕರ್ಸ್‌ನಿಂದ 43,000 ಆಹಾರ ಧಾನ್ಯ ಕಿಟ್‌ಗಳನ್ನು ಖರೀದಿಸಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ, 2020ರ ಮೇ 21ರಿಂದ ಜೂನ್‌ 2ರವರೆಗೂ ಧಾರವಾಡ, ಬೆಳಗಾವಿ, ನಿಪ್ಪಾಣಿ, ಖಾನಾಪುರ, ಹಳಿಯಾಳ, ಕುಮಟಾ, ಭಟ್ಕಳ, ಕುಡಚಿ ಕ್ಷೇತ್ರದಲ್ಲಿ ವಿತರಿಸಿದೆ ಎಂದು ಹೇಳಿರುವ ಇಲಾಖೆ, ಯಾವ ದರದಲ್ಲಿ ಕಿಟ್‌ ಖರೀದಿಸಲಾಗಿದೆ ಮತ್ತು ಸರಬರಾಜು ಮಾಡಿರುವ ಕಂಪನಿಗೆ ಎಷ್ಟು ಮೊತ್ತವನ್ನು ಪಾವತಿಸಲಾಗಿದೆ ಎಂಬ ಮಾಹಿತಿ ಒದಗಿಸದಿರುವುದು ಸಂಶಯಗಳಿಗೆ ಕಾರಣವಾಗಿದೆ.


ಇನ್ನು, ಕಟ್ಟಡ ಕಾರ್ಮಿಕರಿಗೆ ಮಾಸ್ಕ್‌, ಸ್ಯಾನಿಟೈಸರ್‌ ಮತ್ತು ಸೋಪ್‌ ಖರೀದಿಗೆ 2020ರ ಮಾರ್ಚ್‌ 18ರಂದು 41 ಕಾರ್ಮಿಕ ಅಧಿಕಾರಿ ಕಚೇರಿಗಳಿಗೆ ತಲಾ 10 ಲಕ್ಷ ರು.ನಂತೆ ಒಟ್ಟು 4.10 ಕೋಟಿ ರು. ಬಿಡುಗಡೆ ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ. ಮಾಸ್ಕ್‌, ಸ್ಯಾನಿಟೈಸರ್‌, ಸೋಪ್‌ಗಳನ್ನು ಯಾವ ಕಂಪನಿಯಿಂದ ಯಾವ ದರದಲ್ಲಿ ಖರೀದಿಸಲಾಗಿದೆ ಎಂಬ ವಿವರಗಳನ್ನೂ ಒದಗಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


ಕಟ್ಟಡ ನಿರ್ಮಾಣ, ವಲಸಿಗರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರ ಖಾತೆಗೆ ಆಗಿರುವ ನೇರ ನಗದು ವರ್ಗಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ. ಬ್ಯಾಂಕ್‌ ಖಾತೆಯನ್ನು ಆಧಾರ್‌ ಜತೆ ಜೋಡಣೆ ಮಾಡಿರುವವರಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆ ಹೇಳುತ್ತಿದೆಯಾದರೂ ಲಭ್ಯವಿರುವ ಅಂಕಿ ಅಂಶದ ಪ್ರಕಾರ ಇಲಾಖೆ ಬಳಿ ಅಂದಾಜು 1,25,006 ಕಾರ್ಮಿಕರ ವಿವರಗಳೇ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ.


ಇಷ್ಟು ಸಂಖ್ಯೆಯ ಖಾತೆಗಳ ನೈಜತೆ ಬಗ್ಗೆಯೇ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದೆ. ಅಲ್ಲದೆ 1,25,006 ಕಾರ್ಮಿಕರಿಗೆ ತಲುಪಿದೆ ಎಂದು ಹೇಳಲಾಗಿರುವ ಒಟ್ಟು 62.00 ಕೋಟಿ ರು.ಗಳನ್ನು ಅಧಿಕಾರಿಗಳು ಕಬಳಿಸಿದ್ದಾರೆಯೇ ಎಂಬ ಅನುಮಾನಗಳು ಮೂಡಿವೆ.


ಅಲ್ಲದೆ 1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಯಾವ ರಾಜ್ಯದವರು, ರಾಜ್ಯದ ಕಾರ್ಮಿಕರಾಗಿದ್ದರೆ ಯಾವ ಜಿಲ್ಲೆಯವರು ಎಂಬ ವಿವರಗಳು ಇರಲೇಬೇಕು. ಆದರೂ ಈ ಯಾವ ಮಾಹಿತಿಯೂ ಇಲಾಖೆ ಅಧಿಕಾರಿಗಳ ಬಳಿ ಇಲ್ಲ. ಮಾಹಿತಿಯೇ ಇಲ್ಲವೆಂದಾದ ಮೇಲೆ ಯಾವ ಮಾನದಂಡದ ಮೇಲೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂಬ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಉತ್ತರವೇ ಇಲ್ಲ ಎಂದು ತಿಳಿದು ಬಂದಿದೆ.


ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವರ ಪೈಕಿ 46,045 ಮಂದಿ ಕಾರ್ಮಿಕರು ಮಾತ್ರ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಇಲಾಖೆ ಮಾಹಿತಿ ಒದಗಿಸಿದೆ. ಆದರೆ ಬೆಂಗಳೂರು ಮೆಟ್ರೋ ಕಾಮಗಾರಿವೊಂದರಲ್ಲೇ ಅಂದಾಜು 50,000 ಕಾರ್ಮಿಕರಿದ್ದಾರೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ಸಾವಿರಾರು ಸಂಖ್ಯೆಯ ಕಾರ್ಮಿಕರು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ.


ಅದಷ್ಟೇ ಅಲ್ಲ 2018-19ರ ಆರ್ಥಿಕ ಸಮೀಕ್ಷೆ ಪ್ರಕಾರ ಬೆಂಗಳೂರು ನಗರವೊಂದರಲ್ಲಿ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ವಲಯವೂ ಸೇರಿದಂತೆ ಒಟ್ಟು 1.50 ಕೋಟಿ ಕಾರ್ಮಿಕರಿದ್ದಾರೆ. ಹೀಗಿರುವಾಗ ಬೆಂಗಳೂರಿನಲ್ಲಿ ಕೇವಲ 46,045 ಕಾರ್ಮಿಕರಷ್ಟೇ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಇಲಾಖೆ ಒದಗಿಸಿರುವ ಮಾಹಿತಿ ಬಗ್ಗೆಯೇ ಹಲವು ಅನುಮಾನಗಳು ವ್ಯಕ್ತವಾಗಿವೆ.


ಪರಿಹಾರ ರೂಪದಲ್ಲಿ ತಲಾ ಕಾರ್ಮಿಕರಿಗೆ 5,000 ರು. ಲೆಕ್ಕದಲ್ಲಿ ಇದುವರೆಗೆ 14,78,388 ಕಾರ್ಮಿಕರಿಗೆ ಒಟ್ಟು 739.19 ಕೋಟಿ ರು.ಪರಿಹಾರ ನೀಡಿದೆ ಎಂದು ಕಾರ್ಮಿಕ ಇಲಾಖೆ ಸಮಿತಿಗೆ ಈಗಾಗಲೇ ಮಾಹಿತಿ ನೀಡಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts