ಡಿಸಿಸಿ ಬ್ಯಾಂಕ್‌ಗಳಲ್ಲೇ ಅಕ್ರಮ; ಹೊರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೆ 2,000 ಕೋಟಿ ರು ಸಾಲ

ಬೆಂಗಳೂರು; ರಾಜ್ಯದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳು(ಡಿಸಿಸಿ) ಭೌಗೋಳಿಕ ಕಾರ್ಯ ವ್ಯಾಪ್ತಿ ಮೀರಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ರಮೇಶ್‌ ಜಾರಕಿಹೊಳಿ, ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್‌, ಮುರುಗೇಶ್‌ ನಿರಾಣಿ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳ ಒಡೆತನದಲ್ಲಿರುವ ಮತ್ತು ನಿರ್ದೇಶಕರಾಗಿರುವ ಸಕ್ಕರೆ ಕಾರ್ಖಾನೆಗಳು 2 ಸಾವಿರ ಕೋಟಿ ರು. ಗೂ ಅಧಿಕ ಮೊತ್ತದಲ್ಲಿ ಸಾಲ ನೀಡಿರುವುದು ಬಹಿರಂಗವಾಗಿದೆ.


ಡಿಸಿಸಿ ಬ್ಯಾಂಕ್‌ಗಳು ಬೇರೆ ಬೇರೆ ಜಿಲ್ಲೆಗಳಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಿರುವ ಬಗ್ಗೆ ಸಹಕಾರ ಸಚಿವ ಎಸ್ ಟಿ ಸೋಮಶೇಖರ್‌ ಅವರು ಸಹಕಾರ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ 2 ಸಾವಿರ ಕೋಟಿ ರು.ಗೂ ಮೀರಿ ಸಾಲ ನೀಡಿರುವ ಪ್ರಕರಣಗಳು ಮುನ್ನೆಲೆಗೆ ಬಂದಿವೆ.


ಸಕ್ಕರೆ ಕಾರ್ಖಾನೆಗಳಿಗೆ ಬೇರೆ ಜಿಲ್ಲೆಗಳ ಡಿಸಿಸಿ ಬ್ಯಾಂಕ್‌ಗಳು ಯಾವ ಆಧಾರದಲ್ಲಿ ಸಾಲ ನೀಡುತ್ತಿವೆ, ಈವರೆವಿಗೆ ಎಷ್ಟು ಸಕ್ಕರೆ ಕಾರ್ಖಾನೆಗಳಿಗೆ ಸಾಲ ಕೊಟ್ಟಿವೆ, ಸಕ್ಕರೆ ಕಾರ್ಖಾನೆಗಳು ಪಡೆದಿರುವ ಸಾಲ ಮರು ಪಾವತಿ ಮಾಡಿವೆಯೇ, ಒಂದು ರೂಪಾಯಿ ಸಾಲ ಮರು ಪಾವತಿ ಮಾಡದ ಕಾರ್ಖಾನೆಗಳು ಎಷ್ಟಿವೆ ಎಂಬ ಮಾಹಿತಿ ನೀಡಲು ಅಧಿಕಾರಿಗಳಿಗೆ ಸಚಿವ ಎಸ್‌ ಟಿ ಸೋಮಶೇಖರ್‌ ಸೂಚಿಸಿದ್ದಾರೆ. 

 

ಡಿಸಿಸಿ ಬ್ಯಾಂಕ್‌ಗಳು ತಮ್ಮ ವ್ಯಾಪ್ತಿ ಹೊರಗಿನ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೆ ನೀಡಿರುವ ಸಾಲದ ವಿವರವನ್ನು ‘ದಿ ಫೈಲ್‌’ ಇದೀಗ ಮುಂದಿಡುತ್ತಿದೆ. ಒಂದೊಂದು ಡಿಸಿಸಿ ಬ್ಯಾಂಕ್‌ ಕನಿಷ್ಠ 25 ಕೋಟಿ ರು. ಪ್ರಮಾಣದಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಿವೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ಭೌಗೋಳಿಕ ಕಾರ್ಯವ್ಯಾಪ್ತಿಯಿಂದ ಹೊರಗಿದ್ದರೂ ಡಿಸಿಸಿ ಬ್ಯಾಂಕ್‌ಗಳು ನೂರಾರು ಕೋಟಿ ರು.ಲೆಕ್ಕದಲ್ಲಿ ಸಾಲ ವಿತರಿಸಿರುವುದು ತಿಳಿದು ಬಂದಿದೆ.


ಹೊರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಿರುವ ಸಹಕಾರ ಬ್ಯಾಂಕ್‌ಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮುಂಚೂಣಿಯಲ್ಲಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ 2,000 ಕೋಟಿ ರು.ಗೂ ಅಧಿಕ ಮೊತ್ತದಲ್ಲಿ ಸಾಲ ದೊರೆತಿರುವುದು ವಿಶೇಷ.


ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳ ಪೈಕಿ 11 ಡಿಸಿಸಿ ಬ್ಯಾಂಕ್‌ಗಳು 2019ರ ಮಾರ್ಚ್‌ ಅಂತ್ಯಕ್ಕೆ ಒಟ್ಟು 2,189 ಕೋಟಿ ರು.ಸಾಲ ವಿತರಿಸಿವೆ. ಇದರಲ್ಲಿ ಪ್ರಭಾವಿ ರಾಜಕೀಯ ಮುಖಂಡರು ಮತ್ತು ಹಾಲಿ, ಮಾಜಿ ಸಚಿವರ ಒಡೆತನ ಮತ್ತು ನಿರ್ದೇಶಕರಾಗಿರುವ ಸಕ್ಕರೆ ಕಾರ್ಖಾನೆಗಳು 2,000 ಕೋಟಿ ರು. ಸಾಲ ಪಡೆಯುವ ಮೂಲಕ ಒಟ್ಟು ಸಾಲದಲ್ಲಿ ಸಿಂಹಪಾಲು ಪಡೆದಿವೆ.
ಎತ್ತಿರುವ ಒಟ್ಟು ಸಾಲ ಮೊತ್ತದ ಪೈಕಿ ಸಕ್ಕರೆ ಕಾರ್ಖಾನೆಗಳು 1,500 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿವೆ. ಒಕ್ಕೂಟ ಸಾಲ ಯೋಜನೆಯಡಿಯಲ್ಲಿ ವಿತರಣೆಯಾಗಿರುವ 326 ಕೋಟಿ ರು. ಪೈಕಿ, 255 ಕೋಟಿ ರು. ವಸೂಲಾಗಬೇಕಿರುವುದು ದಾಖಲೆಯಿಂದ ಗೊತ್ತಾಗಿದೆ.


ದ.ಕ. ಡಿಸಿಸಿ ಬ್ಯಾಂಕ್‌ ಮುಂಚೂಣಿ


ಸಕ್ಕರೆ ಮತ್ತು ಔಷಧ ಕಾರ್ಖಾನೆಗಳಿಗೆ ಸಾಲ ನೀಡಿರುವ ಡಿಸಿಸಿ ಬ್ಯಾಂಕ್‌ಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ವೊಂದೇ 1,184.46 ಕೋಟಿ ರು.ಸಾಲ ನೀಡಿದೆ. ಈ ಪೈಕಿ 930,26 ಕೋಟಿ ರು.ಮೊತ್ತ ಈ ಬ್ಯಾಂಕ್‌ಗೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.


ಹಾಗೆಯೇ ಈ ಬ್ಯಾಂಕ್‌ನಿಂದ ಅತಿ ಹೆಚ್ಚು ಸಾಲ ಪಡೆದಿರುವ ಸಕ್ಕರೆ, ಔಷಧ ಕಾರ್ಖಾನೆಗಳು ವಿಜಯಪುರ, ಮದ್ದೂರು, ಬಾಗಲಕೋಟೆ, ಬೆಳಗಾವಿ, ಬೀದರ್‌ ಜಿಲ್ಲೆಯ ಕಾರ್ಯವ್ಯಾಪ್ತಿಯಲ್ಲಿವೆ. ಮಂಗಳೂರು ಮತ್ತು ಉಡುಪಿ ಜಿಲ್ಲೆಗಷ್ಟೇ ಕಾರ್ಯವ್ಯಾಪ್ತಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ತನ್ನ ಕಾರ್ಯವ್ಯಾಪ್ತಿಯನ್ನೂ ಮೀರಿ ಉತ್ತರ ಮತ್ತು ಹೈದರಾಬಾದ್‌ ಕರ್ನಾಟಕ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಕೋಟ್ಯಂತರ ರು.ಮೊತ್ತ ಸಾಲ ನೀಡಿರುವುದು ತಿಳಿದು ಬಂದಿದೆ.


ರಮೇಶ್‌ ಜಾರಕಿಹೊಳಿ, ಲಕ್ಷ್ಮಣ ಸಂಗಪ್ಪ ಸವದಿ, ಮುರುಗೇಶ್‌ ನಿರಾಣಿ, ಲಕ್ಷ್ಮಿ ಹೆಬ್ಬಾಳ್ಕರ್‌, ಎಸ್‌ ಆರ್ ಪಾಟೀಲ್‌, ಬಿ ಬಿ ಚಿಮ್ಮನಕಟ್ಟಿ, ಎಸ್‌ ಆರ್‌ ಪಾಟೀಲ್‌, ಪ್ರಭಾಕರ ಬಿ ಕೋರೆ ಸೇರಿ ಇನ್ನಿತರೆ ಚುನಾಯಿತ ಜನಪ್ರತಿನಿಧಿಗಳ ಒಡೆತನದ ಸಕ್ಕರೆ ಕಾರ್ಖಾನೆಗಳಿಗೆ ಒಟ್ಟು 834.83 ಕೋಟಿ ರು. ಸಾಲ ವಿತರಣೆಯಾಗಿದ್ದರೆ, ಈ ಪೈಕಿ 663.73 ಕೋಟಿ ರು. ಮರು ಪಾವತಿಗೆ ಬಾಕಿ ಇದೆ.
ರಮೇಶ್‌ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯಲಕ್ಷ್ಮಿ ಶುಗರ್ಸ್‌(95 ಕೋಟಿ ರು.)(56.4 ಕೋಟಿ ರು. ಬಾಕಿ) ಉಪ ಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ ಮತ್ತು ಆನಂದ ಸಿದ್ದು ನ್ಯಾಮಗೌಡ ನಿರ್ದೇಶಕರಾಗಿರುವ ಜಮಖಂಡಿ ಶುಗರ್ಸ್‌(117 ಕೋಟಿ ರು.)( 111.98 ಕೋಟಿ ರು. ಬಾಕಿ) ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುರುಗೇಶ್‌ ನಿರಾಣಿ ಒಡೆತನದ ನಿರಾಣಿ ಶುಗರ್ಸ್‌(127 ಕೋಟಿ ರು.)(127 ಕೋಟಿ ರು. ಬಾಕಿ) ಶ್ರೀ ಸಾಯಿ ಪ್ರಿಯ ಶುಗರ್ಸ್( 153.59 ಕೋಟಿ ರು.,) (81.08 ಕೋಟಿ ರು.ಬಾಕಿ) ಹನುಮಂತಪ್ಪ ರುದ್ರಪ್ಪ ನಿರಾಣಿ ಮತ್ತು ಸೋದರರ ಒಡೆತನದಲ್ಲಿರುವ ಎಂಆರ್‌ ಎನ್‌ಕೇನ್‌ ಪವರ್‌ ಇಂಡಿಯಾ ಲಿಮಿಟೆಡ್‌( 65 ಕೋಟಿ ರು.)(65 ಕೋಟಿ ರು. ಬಾಕಿ) ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ಮುಖಂಡ ಪ್ರಭಾಕರ ಬಿ ಕೋರೆ ನಿರ್ದೇಶಕರಾಗಿರುವ ಶಿವಶಕ್ತಿ ಶುಗರ್ಸ್‌(23 ಕೋಟಿ ರು.)(10.02 ಕೋಟಿ ರು.ಬಾಕಿ) ಕಾಂಗ್ರೆಸ್‌ ಮುಖಂಡ ಎಸ್‌ ಆರ್‌ ಪಾಟೀಲ್‌ ನಿರ್ದೇಶಕರಾಗಿರುವ ಬೀಳಗಿ ಶುಗರ್ಸ್‌(110 ಕೋಟಿ ರು.)(86.98 ಕೋಟಿ ರು.) ಲಕ್ಷ್ಮಿ ಹೆಬ್ಬಾಳ್ಕರ್‌ ನಿರ್ದೇಶಕರಾಗಿರುವ ಹರ್ಷ ಶುಗರ್ಸ್‌ (135 ಕೋಟಿ ರು.)(116.05 ಕೋಟಿ ರು.) ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಬಿ ಬಿ ಚಿಮ್ಮನಕಟ್ಟಿ ಒಡೆತನದ ಬಾದಾಮಿ ಶುಗರ್ಸ್‌(9.24 ಕೋಟಿ ರು.) (9.22 ಕೋಟಿ ರು.ಬಾಕಿ ) ಕೂಡ ಡಿಸಿಸಿ ಬ್ಯಾಂಕ್‌ಗಳಿಂದ ಕೋಟ್ಯಂತರ ರು ಮೊತ್ತದಲ್ಲಿ ಸಾಲ ಪಡೆದಿರುವುದು ದಾಖಲೆಯಿಂದ ಗೊತ್ತಾಗಿದೆ.


ಡಿಸಿಸಿ ಬ್ಯಾಂಕ್‌ಗಳು ಸಕ್ಕರೆ ಕಾರ್ಖಾನೆಗಳಿಗಷ್ಟೇ ಸಾಲ ವಿತರಿಸಿಲ್ಲ. ಔಷಧ, ಸಿಮೆಂಟ್‌ ಕಾರ್ಖಾನೆ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕೂ ಕೋಟ್ಯಂತರ ರು.ಸಾಲ ನೀಡಿವೆ. ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌, ಮಂಗಳೂರಿನ ದೇರಳಕಟ್ಟೆಯಲ್ಲಿರುವ ಕಣಚೂರು ಇಸ್ಲಾಮಿಕ್‌ ಸೊಸೈಟಿಗೆ ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್‌ನ ಸಹಭಾಗಿತ್ವದಲ್ಲಿ 985.35 ಲಕ್ಷ ರು. ಸಾಲ ವಿತರಿಸಿದೆ. ಬೆಳಗಾವಿಯ ಆನಂದ ಲೈಫ್‌ ಸಯನ್ಸ್‌ಸ್‌ ಲಿಮಿಟೆಡ್‌ (50 ಕೋಟಿ) ರತ್ನ ಸಿಮೆಂಟ್ಸ್‌ ಲಿ(43 ಕೋಟಿ ರು)ಗೆ ಸಾಲ ದೊರೆತಿದೆ.


ಇನ್ನು, ಸಕ್ಕರೆ ಉತ್ಪಾದಿಸಲೆಂದು ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ ಡಿಸಿಸಿ ಬ್ಯಾಂಕ್‌ ಮತ್ತು ಅಪೆಕ್ಸ್‌ ಬ್ಯಾಂಕ್‌ ದಾವಣಗೆರೆಯ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 3.48 ಕೋಟಿ ರು.ಸಾಲ ವಿತರಿಸಿದೆ. ಅದೇ ರೀತಿ ಶಿವಮೊಗ್ಗ ಮತ್ತು ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ವಿದ್ಯುತ್‌ ಉತ್ಪಾದನೆ, ಇಥೆನಾಲ್‌ ಘಟಕ ಅಭಿವೃದ್ಧಿ ಹೆಸರಿನಲ್ಲಿ ಮಂಡ್ಯದ ಚಾಮುಂಡೇಶ್ವರಿ ಶುಗರ್ಸ್‌ಗೆ 27 ಕೋಟಿ ರು. ಸಾಲ ವಿತರಿಸಿದೆ. ಈ ಪೈಕಿ ಒಟ್ಟು 30.56 ಕೋಟಿ ರು.ಗಳನ್ನು ಈ ಎರಡೂ ಕಂಪನಿಗಳು ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.


ಕೋಟ್ಯಂತರ ರು.ಮೊತ್ತದಲ್ಲಿ ಸಾಲ ವಿತರಿಸಿರುವ ಡಿಸಿಸಿ ಬ್ಯಾಂಕ್‌ಗಳು ಸಕ್ಕರೆ ಕಾರ್ಖಾನೆಗಳಿಂದ ಬಾಕಿ ವಸೂಲಿ ಮಾಡುವಲ್ಲಿ ದೊಡ್ಡಮಟ್ಟದ ಹಿನ್ನಡೆಯನ್ನೂ ಅನುಭವಿಸುತ್ತಿವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಹಾಗೂ ನಬಾರ್ಡ್‌ ನೀತಿ, ನಿಯಮಗಳನ್ನು ಗಾಳಿಗೆ ತೂರಿರುವ ಡಿಸಿಸಿ ಬ್ಯಾಂಕ್‌ಗಳು ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳಿಗೂ ಹೊಸ ಸಾಲ ನೀಡಿರುವುದು ಗೊತ್ತಾಗಿದೆ.


ಒಕ್ಕೂಟ ಸಾಲ, ಸಮೂಹ ಹಣಕಾಸು, ಅವಧಿ ಸಾಲ, ದುಡಿಯುವ ಬಂಡವಾಳ ರೂಪದ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳಡಿಯಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕೋಟ್ಯಂತರ ರೂ.ಮೊತ್ತವನ್ನು ಡಿಸಿಸಿ ಬ್ಯಾಂಕ್‌ಗಳು ಎಗ್ಗಿಲ್ಲದೆ ಸಾಲ ವಿತರಿಸಿವೆ.
ಬಹುತೇಕ ಡಿಸಿಸಿ ಬ್ಯಾಂಕ್‌ಗಳು ಅಪೆಕ್ಸ್‌ ಬ್ಯಾಂಕ್‌ನ ಮಧ್ಯಸ್ಥಿಕೆ, ಇನ್ನು ಹಲವು ಡಿಸಿಸಿ ಬ್ಯಾಂಕ್‌ಗಳು ನೆರೆಹೊರೆಯ ಡಿಸಿಸಿ ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ಕಾರ್ಯವ್ಯಾಪ್ತಿಯಿಂದ ಹೊರಗಿರುವ ಸಕ್ಕರೆ ಕಾರ್ಖಾನೆಗಳಿಗೂ ಸಾಲ ವಿತರಿಸಿರುವುದು ದಾಖಲೆಯಿಂದ ತಿಳಿದು ಬಂದಿದೆ.


ಒಂದೊಂದು ಡಿಸಿಸಿ ಬ್ಯಾಂಕ್‌ ಕನಿಷ್ಠ 25 ಕೋಟಿ ರು. ಪ್ರಮಾಣದಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಿವೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ಭೌಗೋಳಿಕ ಕಾರ್ಯವ್ಯಾಪ್ತಿಯಿಂದ ಹೊರಗಿದ್ದರೂ ಡಿಸಿಸಿ ಬ್ಯಾಂಕ್‌ಗಳು ನೂರಾರು ಕೋಟಿ ರು.ಲೆಕ್ಕದಲ್ಲಿ ಸಾಲ ವಿತರಿಸಿರುವುದು ಗೊತ್ತಾಗಿದೆ. 

the fil favicon

SUPPORT THE FILE

Latest News

Related Posts