ಕೋವಿಡ್‌ ಸಂಕಷ್ಟದಲ್ಲೂ ಎಪಿಎಂಸಿಗೆ 123 ಕೋಟಿ ಹೊರೆ; ಕಮಿಷನ್‌ನಲ್ಲಿ ಪಾಲೆಷ್ಟು?

ಬೆಂಗಳೂರು; ಕೋವಿಡ್‌ ಸಂಕಷ್ಟದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುವ ಹೊತ್ತಿನಲ್ಲೇ ಹಣ್ಣು ಮತ್ತು ತರಕಾರಿಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆ 42 ಎಕರೆ 31 ಗುಂಟೆ ಜಮೀನಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಶೇ.12ರಷ್ಟು ಹೆಚ್ಚುವರಿಯಾಗಿ ನಿಗದಿಪಡಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು. ಆರ್ಥಿಕ ಹೊರೆ ಹೊರಿಸಿರುವ ಪ್ರಕರಣವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.


ಆನೇಕಲ್‌ ತಾಲೂಕಿನ ಸರ್ಜಾಪುರ ಹೋಬಳಿಯ ಗೂಳಿಮಂಗಲದಲ್ಲಿ ಉದ್ದೇಶಿತ ಹಣ್ಣು ತರಕಾರಿಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರ ಮೊತ್ತದ ಪೈಕಿ 123.23 ಕೋಟಿ ರು.ಗಳನ್ನು ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಗೆ ಠೇವಣಿ ಮಾಡಲು ವಿಶೇಷ ಭೂ ಸ್ವಾಧೀನಾಧಿಕಾರಿಗಳು 2020ರ ಏಪ್ರಿಲ್‌ 26ರಂದು ಪತ್ರ ಬರೆದ ಬೆನ್ನಲ್ಲೇ ಈ ಪ್ರಕರಣ ಮುನ್ನೆಲೆಗೆ ಬಂದಿದೆ.

ಈ ಪ್ರಕರಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಕಂದಾಯ ಇಲಾಖೆಯ ‘ವ್ಯವಹಾರಸ್ಥ’ ಉನ್ನತ ಅಧಿಕಾರಿಗಳ ಒಂದು ಗುಂಪು ಕಾಯ್ದೆನುಸಾರ ಜಮೀನಿನ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸದೇ ಸರ್ಕಾರವನ್ನೇ ದಾರಿ ತಪ್ಪಿಸುತ್ತಿದೆ. ಈ ಪ್ರಕರಣದ ಬಗ್ಗೆ ಕಂದಾಯ ಸಚಿವ ಆರ್‌ ಅಶೋಕ್‌ ಮತ್ತು ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಈವರೆವಿಗೂ ತುಟಿ ಬಿಚ್ಚದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


ಗೂಳಿಮಂಗಲ ಗ್ರಾಮದ ಸರ್ವೆ ನಂಬರ್‌ 69ರಿಂದ 146 ರವರೆಗಿನ ಒಟ್ಟು 42 ಎಕರೆ 31 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಕೋವಿಡ್‌ ಸಂಕಷ್ಟದ ಕಾಲದಲ್ಲೂ ಪರಿಹಾರ ನಿಗದಿಯ ಪ್ರಸ್ತಾವನೆಗೆ ಅನುಮೋದನೆ ಪಡೆದುಕೊಳ್ಳಲು ಅಧಿಕಾರಿಗಳ ತರಾತುರಿ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.


ಬೆಂಗಳೂರು ವಿಶೇಷ ಭೂ ಸ್ವಾಧೀನಾಧಿಕಾರಿ ರಚಿಸಿರುವ ಐ ತೀರ್ಪಿನಲ್ಲಿ ಜಮೀನಿನ ಮಾರುಕಟ್ಟೆ ಮೌಲ್ಯವನ್ನು ಕಾಯ್ದೆ ಅನುಸಾರ ಲೆಕ್ಕಹಾಕಿ ನಿಗದಿಪಡಿಸದೇ ತಪ್ಪಾಗಿ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಿರುವುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ. ಇದರಿಂದಾಗಿ ಒಟ್ಟು ಐ ತೀರ್ಪಿನ ಮೊತ್ತ 125,35,35,551 ರು.ಗಳಿಗೆ ಹೆಚ್ಚಿರುವುದು ಕಂಡು ಬಂದಿದೆ.
ಈ ಪ್ರಕರಣದಲ್ಲಿ ನ್ಯಾಯಾಲಯಗಳಿಂದ ಯಾವುದೇ ತಡೆಯಾಜ್ಞೆ ಇಲ್ಲದೇ ಇದ್ದರೂ ಸಹ ಪರಿಹಾರ ಧನದ ಐ ತೀರ್ಪನ್ನು ರಚಿಸುವಲ್ಲಿ ಅಧಿಕಾರಿಗಳು ಎಸಗಿರುವ ವಿಳಂಬವೇ ಇದಕ್ಕೆ ಮೂಲ ಕಾರಣ ಎಂದು ದಾಖಲೆಯಿಂದ ತಿಳಿದು ಬಂದಿದೆ.


ಪ್ರಕರಣದ ವಿವರ


ಸಿಂಗೇನ ಅಗ್ರಹಾರ ಉಪ ಮಾರುಕಟ್ಟೆ ವಿಸ್ತರಣೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪರವಾಗಿ 15 ವರ್ಷಗಳ ಹಿಂದೆಯೇ ಆನೇಕಲ್‌ ತಾಲೂಕಿನ ಸರ್ಜಾಪುರ ಹೋಬಳಿಯ ಗೂಳಿಮಂಗಲ ಗ್ರಾಮದ 42-31 ಎಕರೆ ಜಮೀನನ್ನು ಗುರುತಿಸಲಾಗಿತ್ತು. 2007ರ ನವೆಂಬರ್‌ 22ರಿಂದ 2010ರ ನವೆಂಬರ್‌ 23ರವರೆಗೆ ಪ್ರತಿ ಗುಂಟೆಗೆ 1,46,508 ರು. ಮಾರಾಟದ ಬೆಲೆ ಎಂದೂ 4,53,80,750 ರು. ಮಾರಾಟದ ಮೌಲ್ಯವೆಂದು ಘೋಷವಾರೆ ಹೊರಡಿಸಿತ್ತು. 2010ರಲ್ಲಿ ಖುಷ್ಕಿ ಜಮೀನು ಪ್ರತಿ ಗುಂಟೆಗೆ 75,000 ರು.ಲೆಕ್ಕದಲ್ಲಿ ಪ್ರತಿ ಎಕರೆಗೆ 30.00 ಲಕ್ಷ ರು.ಮಾರ್ಗಸೂಚಿ ಬೆಲೆಯಾಗಿತ್ತು.


1894ರ ಭೂ ಸ್ವಾಧೀನ ಕಾಯ್ದೆಯನ್ವಯ ಒಟ್ಟು 21 ಕ್ರಯಗಳ ಪೈಕಿ ಅತೀ ಹೆಚ್ಚಿನ ಮೊತ್ತದ ಅರ್ಧದಷ್ಟು ವಹಿವಾಟುಗಳ ಸರಾಸರಿ ಮೌಲ್ಯವನ್ನು ಲೆಕ್ಕ ಹಾಕಿ ನಂತರ ಜಮೀನಿಗೆ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಬೇಕಿತ್ತು. ಆದರೆ ಬೆಂಗಳೂರಿನ ವಿಶೇಷ ಭೂ ಸ್ವಾಧೀನಾಧಿಕಾರಿ ಒಟ್ಟು ಕ್ರಯ ವಹಿವಾಟುಗಳ ಪೈಕಿ 5 ವಹಿವಾಟುಗಳ ಅಂಕಿ ಅಂಶಗಳನ್ನು ಪರಿಗಣಿಸಿ ಖುಷ್ಕಿ ಜಮೀನಿನ ಪ್ರತಿ ಗುಂಟೆಗೆ 2,74,275 ರು.ಮಾರುಕಟ್ಟೆ ಮೌಲ್ಯವೆಂದು ನಿಗದಿಪಡಿಸಿರುವುದು ದಾಖಲೆಯಿಂದ ಗೊತ್ತಾಗಿದೆ.


ಆ ನಂತರ ಪ್ರಾದೇಶಿಕ ಆಯುಕ್ತರು ಈ ಮಾರುಕಟ್ಟೆ ಮೌಲ್ಯವನ್ನು ಪ್ರತಿ ಗುಂಟೆಗೆ 1,26,911 ರು.ಗಳಂತೆ ನಿಗದಿಪಡಿಸಿ ಒಟ್ಟು 42-31 ಎಕರೆ ಜಮೀನಿಗೆ ಆಡಳಿತ ವೆಚ್ಚ ಮತ್ತು ಆಡಿಟ್‌ ವೆಚ್ಚವನ್ನು ಹೊರತುಪಡಿಸಿ 52,75,84,333 ರು.ಗಳ ಐ ತೀರ್ಪು ರಚಿಸಿ ಸರ್ಕಾರಕ್ಕೆ ಕಳಿಸಿದ್ದರು. ಈ ಪೈಕಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ 2,06,57,507 ರು.ಗಳನ್ನು ಮಾತ್ರ ಠೇವಣಿ ಮಾಡಿ ಉಳಿದ ಮೊತ್ತವನ್ನು ಠೇವಣಿ ಮಾಡಿರಲಿಲ್ಲ ಎಂಬುದು ತಿಳಿದು ಬಂದಿದೆ.


ಜಮೀನಿನ ಮಾರುಕಟ್ಟೆ ಮೌಲ್ಯವನ್ನು ಲೆಕ್ಕ ಹಾಕುವಾಗ 1894ರ ಭೂ ಸ್ವಾಧೀನ ಕಾಯ್ದೆಯನ್ವಯ ಲೆಕ್ಕ ಹಾಕಿರಲಿಲ್ಲ. ಕಾಯ್ದೆ ಅನುಸಾರ ಮಾರ್ಗಸೂಚಿ ಬೆಲೆ ಅಥವಾ ಮಾರಾಟದ ಸರಾಸರಿ ಮಾರುಕಟ್ಟೆ ಬೆಲೆ ಇವುಗಳಲ್ಲಿ ಯಾವುದು ಹೆಚ್ಚಾಗುತ್ತದೆಯೋ ಆ ಬೆಲೆಯನ್ನು ಮಾರುಕಟ್ಟೆ ಬೆಲೆ ಎಂದು ಪರಿಗಣಿಸಿ ಪ್ರತಿ ಗುಂಟೆಗೆ 1,54,547 ರು.( ಪ್ರತಿ ಎಕರೆಗೆ 61,88,047) ಎಂದು ನಿಗದಿಪಡಿಸಿತ್ತು.


ಇದರಂತೆ ಗೂಳಿಮಂಗಲ ಗ್ರಾಮದ ಸರ್ವೆ ನಂಬರ್‌ 69ರಿಂದ 106/2ರಲ್ಲಿನ ಒಟ್ಟು 42.31 ಎಕರೆಗೆ(ಪ್ರತಿ ಗುಂಟೆಗೆ 1,54,547 ರು.ರಂತೆ) ಒಟ್ಟು 26,44,29,917 ರು.ಗಳಾಗಿತ್ತು. ಇದಕ್ಕೆ ಶೇ.30ರಷ್ಟು ಸಾಂತ್ವನ ಪರಿಹಾರ ಧನವೆಂದು 7,93,28,975 ರು. ಸೇರಿಸಲಾಗಿತ್ತು. ಈ ಐ ತೀರ್ಪನ್ನು ರದ್ದುಪಡಿಸುವಂತೆ ಕೋರಿದ್ದ ಭೂ ಮಾಲೀಕರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.(11298,10876/2005) ಈ ಬಗ್ಗೆ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಿ ಹೊಸದಾಗಿ ಐ ತೀರ್ಪು ರಚಿಸಿಬೇಕು ಎಂದು 2010ರ ನವೆಂಬರ್‌ 22ರಂದು ಆದೇಶಿಸಿದ್ದ ಹೈಕೋರ್ಟ್‌ 2005ರ ಮಾರ್ಚ್‌ 3ರಂದು ಘೋಷಿಸಿದ್ದ ಐ ತೀರ್ಪನ್ನು ರದ್ದುಗೊಳಿಸಿತ್ತು.
‘2010ರ ನವೆಂಬರ್‌ 22ರಂದು ಹೈಕೋರ್ಟ್‌ ನೀಡಿದ್ದ ತೀರ್ಪಿನ ಪ್ರಕಾರ ವಿಶೇಷ ಭೂ ಸ್ವಾಧೀನಾಧಿಕಾರಿ ಪರಿಹಾರ ಧನದ ಐ ತೀರ್ಪನ್ನು ರಚಿಸಿದ್ದರೆ 2020ರ ಮೇ 16ರವರೆಗಿನ(ಪ್ರತಿ ದಿನಕ್ಕೆ 86,936 ರಂತೆ) ಒಟ್ಟು 3462 ದಿನಗಳಿಗೆ ತಗಲುವ ಶೇ.12ರ ಹೆಚ್ಚುವರಿ ಮಾರುಕಟ್ಟೆ ಮೌಲ್ಯ 30,09,72,432 ರು.ಗಳ ಆರ್ಥಿಕ ಹೊರೆಯನ್ನು ತಪ್ಪಿಸಬಹುದಾಗಿತ್ತು,’ ಎಂಬ ಅಂಶ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.


ಇದಷ್ಟೇ ಅಲ್ಲ ಇದೇ ರಿಟ್‌ ಪ್ರಕರಣದಲ್ಲಿ 2010ರ ನವೆಂಬರ್‌ 22ರಂದು ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಭೂ ಮಾಲೀಕರು ದಾಖಲಿಸಿದ್ದ ಮೇಲ್ಮನವಿ (33-34/2011) ಮತ್ತು ಇತರೆ ಪ್ರಕರಣಗಳಲ್ಲಿ 2011ರ ಸೆಪ್ಟಂಬರ್‌ 5ರಂದು ನೀಡಿದ್ದ ಆದೇಶದಲ್ಲಿ ಪ್ರಕರಣವನ್ನು ವಜಾಗೊಳಿಸಲಾಗಿತ್ತು. ಹಾಗೆಯೇ ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿತ್ತು.


ಈ ಹಂತದಲ್ಲಿಯೂ ವಿಶೇಷ ಭೂ ಸ್ವಾಧೀನಾಧಿಕಾರಿ ವಿಳಂಬ ಧೋರಣೆಯನ್ನು ಅನುಸರಿಸದೇ 2011ರ ಸೆ.5ರ ತೀರ್ಪಿನ ಪ್ರಕಾರವೇ ಪರಿಹಾರ ಧನದ ಐ ತೀರ್ಪುನ್ನು ರಚಿಸಿದ್ದರೆ 2020ರ ಮಾರ್ಚ್‌ 16ರವರೆಗೆ ಸುಮಾರು 2800 ದಿನಗಳಿಗೆ ತಗಲುವ ಶೇ.12ರ ಹೆಚ್ಚುವರಿ ಮಾರುಕಟ್ಟೆ ಮೌಲ್ಯ( ಪ್ರತಿ ದಿನಕ್ಕೆ 86,936ರಂತೆ) 24,34,20,800 ರು.ಗಳ ಆರ್ಥಿಕ ಹೊರೆ ತಪ್ಪಿಸಬಹುದಾಗಿತ್ತು.

2011ರ ಸೆ. 5ರಂದು ನೀಡಿದ್ದ ಆದೇಶದ ವಿರುದ್ಧ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ 2010ರ ನವೆಂಬರ್‌ 22ರಂದು ನೀಡಿದ್ದ ತೀರ್ಪನ್ನು ಮಾನ್ಯ ಮಾಡಿತ್ತಲ್ಲದೆ 2017ರ ಏಪ್ರಿಲ್‌ 17ರಂದು ಎಪಿಎಂಸಿಯ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿತ್ತು. ಈ ಆದೇಶದ ನಂತರ ವಿಳಂಬ ಮಾಡದೇ ಪರಿಹಾರ ಧನದ ಐ ತೀರ್ಪು ರಚಿಸಿದ್ದರೆ 2020ರ ಮೇ 16ರವರೆಗಿನ ಸುಮಾರು 1125 ದಿನಗಳಿಗೆ (ಪ್ರತಿ ದಿನಕ್ಕೆ 86936) ತಗಲುವ ಶೇ.12ರ ಹೆಚ್ಚುವರಿ ಮಾರುಕಟ್ಟೆ ಮೌಲ್ಯ ಒಟ್ಟು 9,78,03,000 ರು.ಗಳ ಆರ್ಥಿಕ ಹೊರೆ ತಪ್ಪಿಸಬಹುದಾಗಿತ್ತು ಎಂಬ ಅಂಶ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

‘ಉಂಡ ಮನೆಯ ಗಳ ಹಿರಿಯುವಂತಹ ನೀಚ ಬುದ್ಧಿಯ ಅಧಿಕಾರಿಗಳೇ ಇಂದು ಸರ್ಕಾರದಲ್ಲಿ ತುಂಬಿದ್ದಾರೆ. ಸರ್ಕಾರಕ್ಕೆ ಎಷ್ಟು ನಷ್ಟವಾದರೂ ಸರಿ ಜಮೀನು ಕಳೆದುಕೊಂಡ ರೈತರು ಬೀದಿಗೆ ಬಿದ್ದರೂ ಸರಿ ಇವರಿಗೆ ಮಾತ್ರ ಅಕ್ರಮ ಸಂಪತ್ತು ಬರುತ್ತಿರಲೇಬೇಕು. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕಲ್ಲದೆ, ಇದಕ್ಕೆ ಕಾರಣರಾದ ಅಧಿಕಾರಿಗಳು ಇನ್ನೂ ಸೇವೆಯಲ್ಲಿ ಇದ್ದರೇ ಅವರನ್ನೂ ಅಮಾನತುಗೊಳಿಸಬೇಕು. ಮತ್ತು ಕಾರಣರಾದ ಹಾಲಿ ಮತ್ತು ನಿವೃತ್ತ ಅಧಿಕಾರಿಗಳೆಲ್ಲರ ಆಸ್ತಿಯನ್ನು ವಿಚಾರಣೆ ಪೂರ್ಣಗೊಳ್ಳುವವರೆಗೂ ಮುಟ್ಟುಗೋಲು ಹಾಕಿಕೊಳ್ಳಬೇಕು, ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

SUPPORT THE FILE

Latest News

Related Posts