ಮಾಸ್ಕ್‌, ಮಲ್ಟಿ ಪ್ಯಾರಾಮೀಟರ್‌ ಮಾನಿಟರ್‌ ಖರೀದಿಯಲ್ಲಿ ಅಕ್ರಮ; ದರದಲ್ಲಿ ಭಾರೀ ವ್ಯತ್ಯಾಸ?

ಬೆಂಗಳೂರು; ಕೋವಿಡ್‌-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ, ಒಂದೇ ತರಹದ ಉಪಕರಣಗಳು ಹಾಗೂ ಪರಿಕರಗಳಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಪಾವತಿಸಿರುವ ದರದಲ್ಲಿ ಭಾರೀ ವ್ಯತ್ಯಾಸ ಇರುವುದು ಪತ್ತೆಯಾಗಿದೆ. ಒಂದೇ ಉಪಕರಣಗಳಿಗೆ ಎರಡು ಇಲಾಖೆಗಳು ದುಪ್ಪಟ್ಟು ದರವನ್ನು ಪಾವತಿಸಿರುವುದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಸಂಭವಿಸಲು ಕಾರಣವಾಗಿದೆ.


ಪಿಪಿಇ ಕಿಟ್‌, ಸ್ಯಾನಿಟೈಸರ್‌, ಗ್ಲುಕೋಸ್‌, ಡಯಾಲಿಸಿಸ್‌, ವೆಂಟಿಲೇಟರ್‌ ಖರೀದಿಯಲ್ಲಿನ ಅಕ್ರಮಗಳಿಗೆ ಕಡಿವಾಣ ಬೀಳದ ಕಾರಣ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅಕ್ರಮಗಳು ಇನ್ನೂ ಮುಂದುವರೆದಿವೆ ಎಂಬುದಕ್ಕೆ ಎನ್‌ 95 ಮಾಸ್ಕ್‌, ಮಲ್ಟಿ ಪ್ಯಾರಾ ಮೀಟರ್‌ ಉಪಕರಣಗಳ ಖರೀದಿ ಪ್ರಕರಣಗಳೇ ಸಾಕ್ಷಿಯಾಗಿದೆ.


ಕೋವಿಡ್‌-19ರ ತುರ್ತು ಪರಿಸ್ಥಿತಿಯನ್ನೇ ನೆಪ ಮಾಡಿಕೊಂಡಿರುವ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ, ಎನ್‌- 95 ಮಾಸ್ಕ್‌ ಮತ್ತು ಮಲ್ಟಿ ಪ್ಯಾರಾಮೀಟರ್‌ ಮಾನಿಟರ್‌ ಒಂದೇ ತರಹದ ಉಪಕರಣಗಳಿಗೆ ಪಾವತಿಸಿರುವ ದರದಲ್ಲಿ ಗಣನೀಯ ವ್ಯತ್ಯಾಸವಿರುವುದು ಗೊತ್ತಾಗಿದೆ.


ಕೆಎಸ್‌ಡಿಎಲ್‌ಡಬ್ಲ್ಯೂಎಸ್‌ ಸಂಸ್ಥೆಯು ಎನ್‌-95 ಮಾಸ್ಕ್‌ನ್ನು 147 ರು.ಗೆ ಖರೀದಿಸಿದ್ದರೆ ವೈದ್ಯಕೀಯ ಶಿಕ್ಷಣ ಇಲಾಖೆ ಇದೇ ಮಾಸ್ಕ್‌ನ್ನು 295 ರು.ಗೆ ಖರೀದಿಸಿದೆ ಎಂದು ತಿಳಿದು ಬಂದಿದೆ. ಮೆಡಿ ಅರ್ಥ್ ಲೈಫ್‌ಕೇರ್‌ ಪ್ರೈವೈಟ್‌ ಲಿಮಿಟೆಡ್‌ನಿಂದ ಎನ್‌ 95 ಮಾಸ್ಕ್‌ಗಳನ್ನು ತಲಾ ಒಂದಕ್ಕೆ 147 (ಜಿಎಸ್‌ಟಿಯೂ ಒಳಗೊಂಡಂತೆ) ರು.ನಂತೆ ಒಟ್ಟು 2.20 ಕೋಟಿ ರು. ಗೆ 1,50,000 ಮಾಸ್ಕ್‌ಗಳನ್ನು 2020ರ ಮಾರ್ಚ್‌ನಲ್ಲಿ ಖರೀದಿಸಿರುವುದು ದಾಖಲೆಯಿಂದ ಗೊತ್ತಾಗಿದೆ.

ಆದರೆ ಎನ್‌ 95 ಮಾಸ್ಕ್‌ ತಲಾ ಒಂದಕ್ಕೆ ಮಾರುಕಟ್ಟೆಯಲ್ಲಿ 45 ರು.ನಿಂದ 109 ರು.ಗೆ ದೊರೆಯಲಿದೆ. ಆದರೂ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ 147 ರು. ದರ ದುಪ್ಪಟ್ಟು ನೀಡಿ ಖರೀದಿಸಿರುವುದರ ಹಿಂದೆ ಅವ್ಯವಹಾರ ನಡೆದಿದೆ ಎಂಬ ಶಂಕೆ ಇದೆ.


ಅದೇ ರೀತಿ ಬೈಪಾಪ್‌ ಉಪಕರಣಕ್ಕೆ 1,18,000 ರು.ನೀಡಿ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಖರೀದಿಸಿದ್ದರೆ ಇದೇ ಉಪಕರಣವನ್ನು ವೈದ್ಯಕೀಯ ಶಿಕ್ಷಣ ಇಲಾಖೆ 4,30,200 ರು.ದರದಲ್ಲಿ ಖರೀದಿಸಿದೆ ಎಂದು ತಿಳಿದು ಬಂದಿದೆ.


ಇನ್ನು, ಅಲೈಡ್‌ ಮೆಡಿಕಲ್‌ ಲಿಮಿಟೆಡ್‌ನಿಂದ ಮಲ್ಟಿ ಪ್ಯಾರಾ ಮೀಟರ್‌ ಮಾನಿಟರ್‌ವೊಂದಕ್ಕೆ (M 747 MODIL WITH ETCO2) 1,67,132 ರು. ದರದಲ್ಲಿ ಒಟ್ಟು 5 ಉಪಕರಣಗಳನ್ನು 8,35,660 ರು.ಗಳಿಗೆ ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ಖರೀದಿಸಿದ್ದರೆ, ವೈದ್ಯಕೀಯ ಶಿಕ್ಷಣ ಇಲಾಖೆ ಇದೇ ಉಪಕರಣವನ್ನು ವೈದ್ಯಕೀಯ ಶಿಕ್ಷಣ ಇಲಾಖೆ 5,37,600 ರು.ದರದಲ್ಲಿ ಖರೀದಿಸಿದೆ ಎಂದು ಗೊತ್ತಾಗಿದೆ.


ಇದೇ ಕಂಪನಿಯಿಂದ ಬಯಾಪ್ಸಿಕ್‌ ಡೆಫ್ರಿಲೇಟರ್‌ ತಲಾ ಒಂದಕ್ಕೆ 2,33,640 ರು.ದರದಲ್ಲಿ 2 ಉಪಕರಣಗಳಿಗೆ 4,67,280 ರು., ಮಲ್ಟಿ ಪ್ಯಾರಾ ಮೀಟರ್‌ ಮಾನಿಟರ್‌ (M 747 MODEL)ಗೆ ತಲಾ ಒಂದಕ್ಕೆ 87,437 ರು. ದರದಲ್ಲಿ 5 ಉಪಕರಣಗಳಿಗೆ 4,37,185 ರು ಸೇರಿದಂತೆ ಒಟ್ಟು 3 ಉಪಕರಣಗಳನ್ನು 20,53,348 ರು.ದರದಲ್ಲಿ ಖರೀದಿಸಿರುವುದು ಸರಬರಾಜು ಆದೇಶದಿಂದ ತಿಳಿದು ಬಂದಿದೆ.

ಕರ್ನಾಟಕ ಡ್ರಗ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಾದ ಶ್ರೀರಾಮುಲು ಮತ್ತು ಡಾ ಕೆ ಸುಧಾಕರ್‌ ಅವರು ತುಟಿ ಬಿಚ್ಚದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

the fil favicon

SUPPORT THE FILE

Latest News

Related Posts