ಕೋವಿಡ್‌ ಸಂಕಷ್ಟ; ಕೌಶಲ್ಯಾಭಿವೃದ್ಧಿ ಅನುದಾನದಲ್ಲಿ 23 ಕೋಟಿ ಕಡಿತ

ಬೆಂಗಳೂರು; ಕೋವಿಡ್‌ ಸಂಕಷ್ಟದಿಂದಾಗಿ ವಿವಿಧ ವಲಯಗಳ ಪುನಶ್ಚೇತನಕ್ಕಾಗಿ ಪರಿಹಾರ ಧನ ಘೋಷಿಸಿರುವ ಕೇಂದ್ರ ಸರ್ಕಾರ, ರಾಜ್ಯಗಳ ಕೌಶಲ್ಯಾಭಿವೃದ್ಧಿ ಯೋಜನೆಗಳಿಗೆ ಅನುದಾನ ಕಡಿತ ಮಾಡಿದೆ. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ರಾಜ್ಯಕ್ಕಿನ್ನೂ ಬಿಡಿಗಾಸು ಕೂಡ ಹಂಚಿಕೆಯಾಗಿಲ್ಲ.


ಅನುದಾನ ಕಡಿತದಿಂದಾಗಿ ಲಕ್ಷಾಂತರ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡಿರುವ ನಿರುದ್ಯೋಗಿಗಳ ಕೌಶಲ್ಯಾಭಿವೃದ್ಧಿ ತರಬೇತಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿವೆ. ದೀನ್‌ದಯಾಳ್‌ ಗ್ರಾಮೀಣ ಕೌಶಲ್ಯ ಯೋಜನೆಯಡಿ ಬಡ ಗ್ರಾಮೀಣ ಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಉದ್ಯೋಗ ಕಲ್ಪಿಸುವ ಕೇಂದ್ರ ಪುರಸ್ಕೃತ ಯೋಜನೆಗೂ ಹಿನ್ನಡೆಯಾಗಲಿದೆ.


ಕೇಂದ್ರ ಸರ್ಕಾರ 2019-20ರಲ್ಲಿ ಕರ್ನಾಟಕಕ್ಕೆ 108 ಕೋಟಿ ರು. ಅನುದಾನ ನೀಡಿದ್ದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ 85 ಕೋಟಿ ರು. ಹಂಚಿಕೆ ಮಾಡುವ ಮೂಲಕ ಒಟ್ಟು ಅನುದಾನದಲ್ಲಿ 23 ಕೋಟಿ ಕಡಿಮೆ ಮಾಡಿದೆ. ಇದೇ ಅನುದಾನದಲ್ಲಿಯೇ ಸಿಬ್ಬಂದಿಯ ವೇತನವನ್ನೂ ಸರಿದೂಗಿಸಬೇಕಿರುವ ಅನಿವಾರ್ಯತೆ ಎದುರಾಗಿದೆ. ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಅನುದಾನದಲ್ಲಿಯೇ ಕಡಿತವಾಗಿರುವ ಕಾರಣ ಮುಖ್ಯಮಂತ್ರಿ ಕೌಶಲ್ಯ ವಿಕಾಸ ಯೋಜನೆ ಅನುದಾನದಲ್ಲಿಯೂ ಸಹಜವಾಗಿ ಕಡಿತವಾಗಲಿದೆ.


ಉತ್ತರ ಭಾರತದ ಹಲವು ರಾಜ್ಯಗಳ ಕಾರ್ಮಿಕರು ಕೊರೊನಾ ವೈರಾಣು ಭೀತಿಯಿಂದ ಬೆಂಗಳೂರು ಸೇರಿದಂತೆ ವಿವಿಧ ಕೈಗಾರಿಕೆ ನಗರಗಳನ್ನು ತೊರೆದು ಹೋಗಿರುವ ಕಾರಣ ಕೌಶಲ್ಯ ತರಬೇತಿ ಪಡೆದ ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ. ಇದರ ಬೆನ್ನಲ್ಲೇ ಕೌಶಲ್ಯಾಭಿವೃದ್ಧಿ ಯೋಜನೆ ಅನುದಾನ ಕಡಿತಗೊಂಡಿರುವುದು ತರಬೇತಿಗೆ ನೋಂದಾಯಿಸಿಕೊಂಡಿದ್ದ ನಿರುದ್ಯೋಗಿಗಳನ್ನು ನಿರಾಶೆಯಲ್ಲಿ ಮುಳುಗಿಸಿದೆ.


ಕಳೆದ ವರ್ಷ ರಾಜ್ಯದಲ್ಲಿ 50,000 ಮಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗಿತ್ತು. ಒಟ್ಟು ಅನುದಾನದಲ್ಲಿ 23 ಕೋಟಿ ರು. ಕಡಿಮೆ ಮಾಡಿರುವುದರಿಂದ ಕಳೆದ ಬಾರಿಗಿಂತಲೂ ಈ ಬಾರಿ ತರಬೇತಿ ಪಡೆಯುವರ ಸಂಖ್ಯೆಯೂ ಕಡಿಮೆಯಾಗಲಿದೆ. 2020ರ ಮಾರ್ಚ್‌ 12ರ ಅಂತ್ಯಕ್ಕೆ ರಾಜ್ಯದಲ್ಲಿ 10,40,000 ನಿರುದ್ಯೋಗಿಗಳು ತರಬೇತಿಗೆ ನೋಂದಾಯಿಸಿದ್ದಾರೆ.


85 ಕೋಟಿ ರು.ನಲ್ಲಿ ಸಿಬ್ಬಂದಿ ವೇತನಕ್ಕೆ ಶೇ.25ರಷ್ಟು ಎಂದರೆ 21 ಕೋಟಿ ರು. ಖರ್ಚಾದರೆ ಉಳಿದ 63 ಕೋಟಿ ರು., ತರಬೇತಿಗೆ ವೆಚ್ಚಕ್ಕೆ ದೊರೆಯಲಿದೆ. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಕಳೆದ ವರ್ಷ 10 ಕೋಟಿ ರು. ಬಿಡುಗಡೆಯಾಗಿತ್ತು. ಈ ಪೈಕಿ 8 ಕೋಟಿ ರು. ಈಗಾಗಲೇ ವೆಚ್ಚವಾಗಿದೆ ಎಂದು ತಿಳಿದು ಬಂದಿದೆ.


ದೀನ್‌ ದಯಾಳ್‌ ಗ್ರಾಮೀಣ ಕೌಶಲ್ಯ ಯೋಜನೆಯಡಿ 18ರಿಂದ 35 ವರ್ಷದೊಳಗಿನ ಬಡತನ ರೇಖೆಯಲ್ಲಿ ಬರುವ ಯುವಕ, ಯುವತಿಯರಿಗೆ ತರಬೇತಿ ನೀಡಲಾಗುತ್ತದೆ. ಇದೇ ಯೋಜನೆಯಡಿ ಒಟ್ಟು 500ಕ್ಕೂ ಹೆಚ್ಚು ವೃತ್ತಿ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಆಂಗ್ಲಭಾಷೆ ಬಳಕೆ, ಬೇಸಿಕ್ ಕಂಪ್ಯೂಟರ್‌ ಮತ್ತು ಕೌಶಲ್ಯಗಳಿಂದ ಉದ್ಯೋಗಾರ್ಹತೆ ಗಳಿಸಲು ಈ ಯೋಜನೆ ಒಂದು ಅಡಿಪಾಯದಂತೆ ಕಾರ್ಯನಿರ್ವಹಿಸುತ್ತದೆ.


ಅಲ್ಲದೆ, ಗ್ರಾಮೀಣ ಸ್ವ ಉದ್ಯೋಗ ತರಬೇತಿ ಯೋಜನೆಯಡಿ 18ರಿಂದ 45 ವರ್ಷದ ಗ್ರಾಮೀಣ ನಿರುದ್ಯೋಗ ವಿದ್ಯಾವಂತ ಯುವಕ, ಯುವತಿಯರಿಗೆ ಸ್ವಯ ಉದ್ಯೋಗ ಪ್ರಾರಂಭಿಸಲು 10ರಿಂದ 45 ದಿನಗಳವರೆಗೆ ತರಬೇತಿ ನೀಡುವ ಮೂಲಕ ಅವರ ಜೀವನೋಪಾಯಕ್ಕೆ ಸಹಕಾರಿಯಾಗುತ್ತಿತ್ತು. ಆದರೀಗ ಈ ಬಾರಿ ಒಟ್ಟು ಅನುದಾನದಲ್ಲಿ ಕಡಿತಗೊಂಡಿರುವ ಕಾರಣ ತರಬೇತಿಗಳ ಸಂಖ್ಯೆಯಲ್ಲಿಯೂ ಕಡಿಮೆ ಆಗಲಿದೆ.


ರಾಜ್ಯದ ಎಲ್ಲಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ 2020ರ ಫೆಬ್ರುವರಿ ಅಂತ್ಯಕ್ಕೆ ಒಟ್ಟು 3,44,174 ಅಭ್ಯರ್ಥಿಗಳು ಉದ್ಯೋಗಕ್ಕಾಗಿ ನೋಂದಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts