ಬೆಂಗಳೂರು; ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ಹೇಳಲಾಗಿದ್ದ ಕರ್ನಾಟಕ ವಿದ್ಯುತ್ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿ (2017)ಗೆ ಕೋವಿಡ್-19ರಿಂದ ಸಂಭವಿಸಿರುವ ಆರ್ಥಿಕ ಮುಗ್ಗಟ್ಟು ತೀವ್ರ ಹೊಡೆತ ಕೊಟ್ಟಿದೆ.
ಸದ್ಯದ ಆರ್ಥಿಕ ಪರಿಸ್ಥಿತಿಯಿಂದಾಗಿ ಪ್ರೋತ್ಸಾಹ ಧನ ಬೇಡಿಕೆ ಪ್ರಸ್ತಾವನೆಯನ್ನು ಈ ನೀತಿಯ ವ್ಯಾಪ್ತಿಗೊಳಪಡಿಸದಿರಲು ಆರ್ಥಿಕ ಇಲಾಖೆ ನಿರ್ಧರಿಸಿದೆ. ಕೋವಿಡ್-19ರಿಂದ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟುಗಳಿಂದಾಗಿ ಈ ನೀತಿಯ ಅನುಸಾರ ಘೋಷಿಸಿದ್ದ ಪ್ರೋತ್ಸಾಹ ಧನ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಕೈ ಚೆಲ್ಲಿದೆ.
ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ಅನುಮೋದಿಸಿದ್ದ ಈ ನೀತಿ ಪ್ರಕಾರ ರಾಜ್ಯ ಸರ್ಕಾರ ಆಕರ್ಷಿಸಬೇಕಿದ್ದ 31,000 ಕೋಟಿ ರು. ಬಂಡವಾಳ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಅಂದಾಜು 55,000 ಉದ್ಯೋಗ ಅವಕಾಶಗಳು ಕೈತಪ್ಪುವ ಸಾಧ್ಯತೆಗಳಿವೆ.
ಈ ನೀತಿಯ ಲಾಭ ಪಡೆದುಕೊಂಡು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸಲು ಪೈಪೋಟಿಗಿಳಿದಿದ್ದ ನಾನಾ ಕಂಪನಿಗಳ ಉತ್ಪಾದನೆ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿವೆ. ಪ್ರೋತ್ಸಾಹ ಧನ ಬೇಡಿಕೆಯನ್ನು ಈ ನೀತಿ ವ್ಯಾಪ್ತಿಯೊಳಗೆ ತರಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ಹೇಳಿರುವುದು ದೇಶದ ಮೊತ್ತ ಮೊದಲ ವಿದ್ಯುತ್ ವಾಹನ ನೀತಿಗೆ ತೀವ್ರತರದ ಹಿನ್ನಡೆಯಾಗಲಿದೆ ಎಂದು ಹೇಳಲಾಗಿದೆ.
ಪ್ರೋತ್ಸಾಹ ಧನ ಬೇಡಿಕೆಗಳನ್ನು ಈ ಹಂತದಲ್ಲಿ ಪರಿಶೀಲಿಸಲು ನಿರಾಕರಿಸಿರುವ ಆರ್ಥಿಕ ಇಲಾಖೆ ಈ ಸಂಬಂಧ ಆಡಳಿತ ಇಲಾಖೆಯಾಗಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2020ರ ಮೇ 7ರಂದು ತನ್ನ ಅಭಿಪ್ರಾಯವನ್ನು ನೀಡಿದೆ. ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಅಡಳಿತ ಇಲಾಖೆಯ ಪ್ರಸ್ತಾವನೆ ಪರಿಶೀಲಿಸಲಾಯಿತು. ಕೋವಿಡ್ -19 ರ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಪ್ರೋತ್ಸಾಹ ಧನ ಬೇಡಿಕೆ ಪ್ರಸ್ತಾವನೆಯನ್ನು ಈ ನೀತಿ ವ್ಯಾಪ್ತಿಯೊಳಗೆ ತರಲು ಸಾಧ್ಯವಿಲ್ಲ,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಅಭಿಪ್ರಾಯ ತಿಳಿಸಿದ್ದಾರೆ.
ಬೆಂಗಳೂರನ್ನು ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯನ್ನಾಗಿ ಮಾಡಲು ಹೊರಟಿದ್ದ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯನ್ನು ಸಾಕಾರಗೊಳಿಸಲು ಹಲವು ಕಂಪನಿಗಳು ಮುಂದೆ ಬಂದಿದ್ದವು. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಈಗಾಗಲೇ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಂಡಿರುವ ಬೋಶ್ಚ್ ಮತ್ತು ಡೆಲ್ಫಿ ಕಂಪನಿಗಳು ಅತ್ಯುತ್ಸಾಹ ತೋರಿಸಿದ್ದವು. ಈ ನೀತಿಯ ಅಡಿಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಪ್ರೋತ್ಸಾಹ, ವಾಹನ ಖರೀದಿದಾರರಿಗೆ ವಿವಿಧ ತೆರಿಗೆ ವಿನಾಯಿತಿಯನ್ನು ಘೋಷಿಸಿತ್ತು.
2017ರಲ್ಲೇ ರಾಜ್ಯ ಸರಕಾರ ಎಲೆಕ್ಟ್ರಿಕ್ ವಾಹನಗಳ ಕುರಿತು ನೀತಿಯನ್ನು ಜಾರಿಗೆ ತಂದ ನಂತರ ಕೇಂದ್ರ ಸರಕಾರ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಇವುಗಳನ್ನು ರಾಜ್ಯಕ್ಕೆ ತಕ್ಕಂತೆ ರೂಪಾಂತರಿಸಿ ವಾಹನ ನೋಂದಣಿ ಹಾಗೂ ಇತ್ಯಾದಿ ಅಂಶಗಳಲ್ಲಿ ಸ್ಪಷ್ಟತೆ ಕಂಡುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿತ್ತು.
ವಿದ್ಯುತ್‌ಚಾಲಿತ ವಾಹನಗಳಲ್ಲಿ ಬ್ಯಾಟರಿಯ ಬೆಲೆ ದುಬಾರಿಯಾಗಿದೆ. ಇದು ಜನರ ಕೈಗೆಟುಕುವಂತಾದರೆ ಉಪಯೋಗವಾಗುತ್ತದೆ ಎನ್ನುವ ದೃಷ್ಟಿಯಿಂದ ರಾಜ್ಯ ಸರಕಾರ ಈ ನೀತಿಯಲ್ಲಿ ಹಲವು ಉತ್ತೇಜನಾ ಕ್ರಮಗಳನ್ನು ಅಳವಡಿಸಿತ್ತು.
ವಿದ್ಯುತ್ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿಗೆ ಅನುಮೋದನೆ ದೊರೆಯುತ್ತಿದ್ದಂತೆ ಬೋಶ್ಚ್ ಕಂಪನಿ ಕೂಡ ಹಲವು ಯೋಜನೆಗಳನ್ನು ಘೋಷಿಸಿತ್ತು. ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ, ಬ್ಯಾಟರಿ ಪ್ಯಾಕ್ಸ್‌ಗಳನ್ನು ಮುಂದಿನ 12 ತಿಂಗಳಲ್ಲಿ ಉತ್ಪಾದನೆ ಮಾಡಲು ಮುಂದಾಗಿತ್ತು.
2016ರಿಂದಲೇ ಈ ಕಂಪನಿಯ ಸಂಶೋಧನಾ ಘಟಕ ಕಾರ್ಯನಿರ್ವಹಿಸಲಾರಂಭಿಸಿತ್ತು. ವಿದ್ಯುತ್‌ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚುಗೊಳಿಸುವ ಉದ್ದೇಶ ಹೊಂದಿದ್ದ ಈ ನೀತಿ ಅನುಸಾರ 2020ರ ಹೊತ್ತಿಗೆ ಎಲ್ಲೆಡೆ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿಸುವ ಗುರಿಯನ್ನೂ ಹೊಂದಿತ್ತು. ಭವಿಷ್ಯದ ಹೊಂಗಿರಣಗಳು ಎಂದು ಬಣ್ಣನೆಗೊಳಗಾಗಿದ್ದ ಎಲೆಕ್ಟ್ರಿಕ್ ವಾಹನಗಳು, ಮಿತಿಮೀರಿದ ವಾಹನಗಳಿಂದಾಗಿ ಉಂಟಾಗಿರುವ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯಕ್ಕೆ ಕಡಿವಾಣ ಹಾಕಲಿದ್ದವು.
ಉದ್ಯಮ ಕ್ಷೇತ್ರ ಮತ್ತು ಸಾರ್ವಜನಿಕರಿಬ್ಬರಿಗೂ ಲಾಭವಾಗಬೇಕೆಂಬ ದೃಷ್ಟಿಯಿಂದ ರಾಜ್ಯವು ವಿದ್ಯುತ್‌ಚಾಲಿತ ವಾಹನಗಳು ಮತ್ತು ಇಂಧನ ಸಂಗ್ರಹಣೆ ನೀತಿ 2017ನ್ನು ಜಾರಿಗೆ ತಂದಿತ್ತು. ಇಂಥದೊಂದು ನೀತಿ ಕೇಂದ್ರ ಸರ್ಕಾರದಲ್ಲಾಗಲಿ, ಉಳಿದ ರಾಜ್ಯಗಳಲ್ಲಾಗಲಿ ಇಲ್ಲ. ಈ ಮೂಲಕ ಕರ್ನಾಟಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿತ್ತು.
ಅದರಂತೆ ರಾಜ್ಯದಲ್ಲಿ 2020ರ ಬಳಿಕ ಎಲೆಕ್ಟ್ರಿಕ್ ವಾಹನಗಳ ನೋಂದಣಿಗೆ ಚಾಲನೆ ದೊರೆಯಬೇಕಿತ್ತು. ದ್ವಿಚಕ್ರ ವಾಹನ ಹೊರತುಪಡಿಸಿ ಇನ್ನುಳಿದ ಇ-ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸುವ ಕುರಿತು ಸರ್ಕಾರ ಚಿಂತನೆ ನಡೆಸಿತ್ತು. ಸದ್ಯದ ಮಟ್ಟಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಹೆಚ್ಚಾಗಿ ವಿವಿಧ ಮಾದರಿಗಳಲ್ಲಿ ಮಾರುಕಟ್ಟೆಗೆ ಬಂದಿವೆಯಾದರೂ ಪರಿಸರಸ್ನೇಹಿ ವಾಹನಗಳಾಗಿರುವ ಕಾರಣ, ನೋಂದಣಿ ಮಾಡುವ ಪ್ರಮೇಯ ಇಲ್ಲ. ಇ-ವಾಹನಗಳತ್ತ ಸಾರ್ವಜನಿಕರನ್ನು ಸೆಳೆಯಲು ಸರ್ಕಾರವೇ ಇಂಥ ಕ್ರಮವನ್ನು ಕೈಗೊಂಡಿತ್ತು.
ಕೇಂದ್ರ ಸರಕಾರ ಪೂರಕ ಕ್ರಮಗಳನ್ನು ಕೈಗೊಂಡಿರುವ ಕಾರಣ ಉತ್ಪಾದನೆಗೆ ವೇಗ ಸಿಗಲಿತ್ತು. ಹತ್ತು ಲಕ್ಷ ರೂ. ಒಳಗಿನ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ರಿಯಾಯಿತಿ ಘೋಷಿಸಲಾಗಿತ್ತು. ಭವಿಷ್ಯದಲ್ಲಿ ಭಾರಿ ವಾಹನಗಳನ್ನು ಕೂಡ ವಿದ್ಯುತ್ ವಾಹನಗಳಾಗಿ ಬದಲಾಯಿಸುವ ಸಾಧ್ಯತೆ ಇರುವುದರಿಂದ ಮಾಲೀಕತ್ವ, ಸುರಕ್ಷತೆ, ವಿಮೆ ಹಾಗೂ ಇನ್ನಿತರ ಕಾರಣಕ್ಕೆ ನೋಂದಣಿ ಮಾಡುವುದು ಅನಿವಾರ್ಯ ಎಂಬ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಈ ಸಂಬಂಧ ಮಾರ್ಗಸೂಚಿ ಸಿದ್ಧಪಡಿಸುವತ್ತ ಗಮನ ಹರಿಸಿತ್ತು.
ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಬದಲಾಯಿಸಲು ಸಾರಿಗೆ ಇಲಾಖೆಯೂ ಮುಂದಾಗಿತ್ತು. ಈಗಾಗಲೇ ಬಿಎಂಟಿಸಿಯಲ್ಲಿ ಇಂತಹ 100 ಇ-ವಾಹನಗಳ ಖರೀದಿ ಅಂತಿಮ ಹಂತದಲ್ಲಿತ್ತು. ಕೇಂದ್ರ ಸರಕಾರದಿಂದ ಅನುದಾನ ಸಿಗಲಿರುವುದರಿಂದ ಬಿಎಂಟಿಸಿಯು ನಗರದ ಕೆಲ ಪ್ರದೇಶಗಳಿಗೆ ಎಲೆಕ್ಟ್ರಿಕ್ ಬಸ್‌ಗಳನ್ನೇ ಓಡಿಸಲು ಚಿಂತನೆ ನಡೆಸಿತ್ತು.
ಎಲೆಕ್ಟ್ರಿಕ್ ವಾಹನಗಳಿಗೆ ಮುಖ್ಯವಾಗಿ ಚಾರ್ಜಿಂಗ್ ಕೇಂದ್ರಗಳ ಅಗತ್ಯವಿದ್ದ ಕಾರಣ ಮೊದಲ ಹಂತವಾಗಿ ನಗರದಲ್ಲಿ 5 ಕಡೆ ಚಾರ್ಜಿಂಗ್ ಕೇಂದ್ರಗಳನ್ನು ಬೆಸ್ಕಾಂ ಆರಂಭಿಸಿತ್ತು. ಹೆಚ್ಚುವರಿಯಾಗಿ 110 ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸುವ ಕಾರ್ಯ ಅಂತಿಮಗೊಂಡಿತ್ತಲ್ಲದೆ, ಸದ್ಯದಲ್ಲೇ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಹೇಳಲಾಗಿತ್ತು.