ತಬ್ಲಿಘಿ; ಮಾರ್ಚ್‌ ಸಮಾವೇಶದಲ್ಲಿ ನೇರ ಭಾಗಿಯಾಗದ ಮೈಸೂರು ಸೋಂಕಿತರು

ಬೆಂಗಳೂರು; ಮೈಸೂರು ಜಿಲ್ಲೆಯಲ್ಲಿ ತಬ್ಲಿಘಿ ಜಮಾತ್‌ಗೆ ಸಂಬಂಧಿಸಿದವರು ಮಾರ್ಚ್‌ ತಿಂಗಳಲ್ಲಿ ದೆಹಲಿ ನಿಜಾಮುದ್ದಿನ್‌ ಪ್ರದೇಶದಲ್ಲಿ ನಡೆದಿದ್ದ ಸಮಾವೇಶದಲ್ಲಿ ನೇರವಾಗಿ ಭಾಗಿಯಾಗಿರಲಿಲ್ಲ ಎಂಬ ಸಂಗತಿಯನ್ನು ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವರದಿ ಹೊರಗೆಡವಿದೆ.


ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಾಣು ಹರಡುವಿಕೆಯ ನಿಯಂತ್ರಣ ಮತ್ತು ನಿವಾರಣ ಸಂಬಂಧ ಕೈಗೊಂಡಿದ್ದ ಕ್ರಮಗಳ ಕುರಿತು ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಐಎಎಸ್‌ ಅಧಿಕಾರಿ ಎನ್‌ ಜಯರಾಮ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿಯಿಂದ ಈ ವಿಚಾರ ತಿಳಿದು ಬಂದಿದೆ. ಜಯರಾಮ್‌ ಅವರು 2020ರ ಏಪ್ರಿಲ್ 6ರಂದು ವರದಿ ಸಲ್ಲಿಸಿದ್ದರು. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ .


ತಬ್ಲಿಘಿ ಜಮಾತ್‌ಗೆ ಸಂಬಂಧಿಸಿದವರ ಪೈಕಿ ಮೈಸೂರು ಜಿಲ್ಲೆಯಲ್ಲಿ 63 ಮಂದಿ ಇದ್ದಾರೆ. ಇವರಲ್ಲಿ 12 ಮಂದಿಗೆ ಕೊರೊನಾ ವೈರಾಣು ಸೋಂಕಿರುವುದು ದೃಢಪಟ್ಟಿತ್ತು. ಈ 63 ಜನರಲ್ಲಿ ಹಲವರು ಮೈಸೂರು, ಮಂಡ್ಯ, ಬೆಂಗಳೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದರು ಎಂಬುದು ವರದಿಯಿಂದ ಗೊತ್ತಾಗಿದೆ.


‘ಇವರ್ಯಾರು ದೆಹಲಿ ನಿಜಾಮುದ್ದಿನ್‌ ಪ್ರದೇಶದಲ್ಲಿ ನೇರವಾಗಿ ಮಾರ್ಚ್‌ ತಿಂಗಳಲ್ಲಿ ನಡೆದಿದ್ದ ಸಮಾವೇಶದಲ್ಲಿ ಭಾಗಿಯಾಗದಿರುವುದು ಕಂಡು ಬಂದಿದೆ. ಬದಲಾಗಿ ಜನವರಿ ತಿಂಗಳಲ್ಲಿ ನಡೆದಿದ್ದ ದೆಹಲಿ ಹಾಗೂ ದೇಶದ ಇನ್ನಿತರ ಪ್ರದೇಶಗಳ ಮುಖಾಂತರ ಮೈಸೂರಿಗೆ ಬಂದವರಾಗಿರುತ್ತಾರೆ,’ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಐಎಎಸ್‌ ಅಧಿಕಾರಿ ಎನ್‌ ಜಯರಾಮ್‌ ಅವರು ವರದಿಯಲ್ಲಿ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಾಣು ಹರಡುವಲ್ಲಿ ತಬ್ಲಿಕ್‌ಗಳೇ ಮೂಲ ಕಾರಣರು ಎಂಬ ಆರೋಪ ಕೇಳಿ ಬಂದಿತ್ತು. ಮಾರ್ಚ್‌ 8ರಿಂದ 20ರವರೆಗೆ ದೆಹಲಿಯ ನಿಜಾಮುದ್ದಿನ್‌ ಸಮಾವೇಶದಲ್ಲಿ ಭಾಗವಹಿಸಿದ್ದವರೇ ಮೈಸೂರಿನಲ್ಲಿ ಕೊರೊನಾ ವೈರಾಣು ಹರಡುವಿಕೆಗೆ ಕಾರಣರಾಗಿದ್ದರು ಎಂಬ ಆಪಾದನೆಗೆ ಗುರಿಯಾಗಿದ್ದರು.


ಆದರೀಗ ಮಾರ್ಚ್‌ ತಿಂಗಳಿನಲ್ಲಿ ನಡೆದಿದ್ದ ಸಮಾವೇಶದಲ್ಲಿ ಇವರ್ಯಾರು ಭಾಗಿಯಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್‌ ಅಧಿಕೃತವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಆಪಾದನೆಯಿಂದ ಅವರನ್ನು ಮುಕ್ತಗೊಳಿಸಿದಂತಾಗಿದೆ.


ದೆಹಲಿಯ ನಿಜಾಮುದ್ದೀನ್‌ ಜಮಾತ್‌ ಧಾರ್ಮಿಕ ಸಭೆಯಲ್ಲಿ ರಾಜ್ಯದಿಂದ ಪಾಲ್ಗೊಂಡಿದ್ದವರ ಬಗ್ಗೆ ವಿವರ ಕಲೆ ಹಾಕಲಾಗಿತ್ತು. ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಮುಖಂಡರು, ತಮ್ಮ ಜಿಲ್ಲೆಗಳ ಸಹಿತ ರಾಜ್ಯದ 24 ಜಿಲ್ಲೆಗಳಲ್ಲಿ ಸಂಚರಿಸಿ, ಧಾರ್ಮಿಕ ಸಭೆಯ ಮಹತ್ವ ಸಾರಿದ್ದರು ಎಂದು ಆರೋಪಿಸಲಾಗಿತ್ತು.


ನಿಜಾಮುದ್ದೀನ್‌ ಮರ್ಕಾಜ್‌ ಬಳಿ ನಡೆದ ತಬ್ಲಿಘಿ-ಎ- ಜಮಾತ್‌ ಕಾರ್ಯಕ್ರಮದಲ್ಲಿ ರಾಜ್ಯದ 13ಕ್ಕೂ ಅಧಿಕ ಜಿಲ್ಲೆಗಳಿಂದ ಸಮುದಾಯದ ಮುಖಂಡರ ಸಹಿತ ಸುಮಾರು 1,500 ಮಂದಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿತ್ತು.
ಮೈಸೂರಿನಿಂದ 40 ಸೇರಿದಂತೆ ಬೆಳಗಾವಿಯಿಂದ 65, ದಕ್ಷಿಣಕನ್ನಡ, ಉಡುಪಿಯಿಂದ ಒಟ್ಟು 40, ಬೆಂಗಳೂರಿನಿಂದ 45ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದನ್ನು ಸ್ಮರಿಸಬಹುದು.


ಮಾರ್ಚ್‌ನಲ್ಲಿ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಗೆ ಕರ್ನಾಟಕದ 1,500 ಮಂದಿ ದಿಲ್ಲಿಗೆ ಹೋಗಿದ್ದರು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಧಿಕೃತವಾಗಿ ಹೇಳಿಕೆ ನೀಡಿದ್ದರು.
ಮೈಸೂರು ಜಿಲ್ಲೆಯಲ್ಲಿ ಕೊರೊನಾ ವೈರಾಣು ಸೋಂಕಿತರ ಸಂಖ್ಯೆ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಹೆಚ್ಚಿತ್ತು. ಇದರ ಬೆನ್ನಲ್ಲೇ ನಂಜನಗೂಡಿನ ಜ್ಯುಬಿಲಿಯಂಟ್‌ ಔಷಧ ಕಾರ್ಖಾನೆಯ 19 ಸಿಬ್ಬಂದಿಗೂ ವೈರಾಣು ಹರಡಿತ್ತು. ಪ್ರಕರಣ ಪತ್ತೆಯಾದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಹೊತ್ತಿದ್ದ ಸಚಿವ ವಿ ಸೋಮಣ್ಣ ಅವರನ್ನು ಬದಲಾಯಿಸಿದ್ದಲ್ಲದೆ, ಆ ಜಾಗಕ್ಕೆ ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರನ್ನು ನೇಮಿಸಲಾಗಿತ್ತು.


90 ಮಂದಿ ಕೊರೊನಾ ಸೋಂಕಿತರು ಇದ್ದ ಕಾರಣ ಮೈಸೂರು ಜಿಲ್ಲೆ ಕೆಂಪು ವಲಯದಲ್ಲಿತ್ತು. 2020ರ ಮೇ 11ರ ಅಂತ್ಯಕ್ಕೆ ಜಿಲ್ಲೆಯಲ್ಲಿ 88 ಮಂದಿ ಮಾತ್ರ ಸೋಂಕಿತರಿದ್ದಾರೆ. ಇವರಲ್ಲಿ 84 ಬಿಡುಗಡೆಗೊಂಡ ಪ್ರಕರಣಗಳಿದ್ದರೆ 4 ಸಕ್ರಿಯ ಪ್ರಕರಣಗಳಿವೆ.
ದಿನದಿಂದ ದಿನಕ್ಕೆ ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಹುತೇಕ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಲ್ಲದೆ, ಕಳೆದ 6 ದಿನಗಳಿಂದ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ.


ಲಾಕ್ ಡೌನ್ ಸಡಿಲಿಕೆಯಿಂದ ಜನಜೀವನ ನಿಧಾನವಾಗಿ ಚುರುಕುಗೊಳ್ಳುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿ, ಕೈಗಾರಿಕಾ ಚಟುವಟಿಕೆಗಳಿಗೆ ಜಿಲ್ಲಾಧಿಕಾರಿಗಳು ಅವಕಾಶ ನೀಡಿದ ಹಿನ್ನೆಲೆಯಲ್ಲಿ, ಜನ ಸಂಚಾರ ಎಂದಿನಂತಿದೆ.

the fil favicon

SUPPORT THE FILE

Latest News

Related Posts