ನಿವೇಶನ ಹಗರಣ; ಬಿಡಿಎ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಆಡಳಿತಾಧಿಕಾರಿ ನೇಮಕ

ಬೆಂಗಳೂರು; ನಿವೇಶನ ಹಂಚಿಕೆ ನಿಯಮ ಉಲ್ಲಂಘನೆ ಪ್ರಕರಣಗಳು ಸೇರಿದಂತೆ ಇನ್ನಿತರೆ ನಿಯಮಬಾಹಿರ ಚಟುವಟಿಕೆಗಳ ಆರೋಪಕ್ಕೆ ಗುರಿಯಾಗಿರುವ ಬಿಡಿಎ ಎಂಪ್ಲಾಯೀಸ್‌ ವೆಲ್‌ಫೇರ್‌ ಅಸೋಸಿಯೇಷನ್‌ಗೆ ಆಡಳಿತಾಧಿಕಾರಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.


ಈ ಸಂಘದಲ್ಲಿ ನಡೆದಿದ್ದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್‌ ಸಿ ಇಂಗಳಗಿ ಅವರು ಸಲ್ಲಿಸಿದ್ದ ವಿಚಾರಣೆ ವರದಿ ಆಧರಿಸಿ ಸಂಘದ ಆಡಳಿತ ಮಂಡಳಿಯನ್ನು ಸರ್ಕಾರ ರದ್ದುಗೊಳಿಸಿದೆ. ಹಾಗೆಯೇ ಸಂಘದ ಸದಸ್ಯರ ಹಿತದೃಷ್ಟಿಯಿಂದ ಸಹಕಾರ ಸಂಘಗಳ ಜಂಟಿ ನಿಬಂಧಕ ಆರ್‌ ಲೋಕೇಶ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ 2020ರ ಮೇ 4ರಂದು ನೇಮಿಸಿ ಆದೇಶಿಸಿದೆ.


ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಪ್ಲಾಯೀಸ್‌ ಅಸೋಸಿಯೇಷನ್‌ನಲ್ಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿದ್ದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಒಟ್ಟು 12 ಆರೋಪಗಳು ಸಾಬೀತಾಗಿವೆ ಎಂದು ಎಸ್‌ ಸಿ ಇಂಗಳಗಿ ಅವರು ವಿಚಾರಣೆ ವರದಿ ಸಲ್ಲಿಸಿದ್ದರು. ಈ ವರದಿ ಇತ್ತೀಚಿನ ವರದಿ ಆಗಿದೆಯಲ್ಲದೆ ಇದು ಸಮಂಜಸವಾಗಿರುವ ಕಾರಣ ವರದಿಯನ್ನು ಪರಿಗಣಿಸಬಹುದು ಎಂದು ಸಹಕಾರ ಇಲಾಖೆ ಅಭಿಪ್ರಾಯಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

ಬಿಡಿಎ ಹಂಚಿಕೆ ನಿಯಮ 1984’ ಉಲ್ಲಂಘಿಸಿದ್ದ ಈ ಸಂಘ ಪ್ರಾಧಿಕಾರದ ನೌಕರರೊಬ್ಬರ ಕುಟುಂಬದ ಸದಸ್ಯರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ್ದ ಆರೋಪಗಳು ಸೇರಿದಂತೆ ಒಟ್ಟು 31 ಆರೋಪಗಳು ಕೇಳಿ ಬಂದಿದ್ದವು. ಈ ಸಂಘದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಮರು ವಿಚಾರಣೆ ನಡೆಸಬೇಕು ಎಂದು ವಿಧಾನಸಭೆಗಳ ಅರ್ಜಿಗಳ ಸಮಿತಿಯೂ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.


ಹಂಚಿಕೆ ನಿಯಮಗಳನ್ನು ಉಲ್ಲಂಘಿಸಿ, ತಮಗೆ ಹಾಗೂ ಮಧ್ಯವರ್ತಿಗಳಿಗೆ ಲಾಭ ಮಾಡಿಕೊಂಡು ಪ್ರಾಧಿಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ. ಕರ್ತವ್ಯ ಲೋಪ ಎಸಗಿರುವ ಇವರ ವಿರುದ್ಧ ಕೆಸಿಎಸ್‌ಆರ್‌ ನಿಯಮದಡಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಬಿಡಿಎ ನಿವೃತ್ತ ನೌಕರ ಬಿ.ಎಂ. ಚಿಕ್ಕಯ್ಯ ಎಂಬುವವರು ಆಯುಕ್ತ ರಾಕೇಶ್ ಸಿಂಗ್‌ ಅವರಿಗೆ ದೂರು ಸಲ್ಲಿಸಿದ್ದರು.


ಲಿಂಗಧೀರನಹಳ್ಳಿಯ 40 ಎಕರೆ 2 ಗುಂಟೆಯಲ್ಲಿ ಬಡಾವಣೆ ಅಭಿವೃದ್ಧಿಪಡಿಸಿದ್ದ ಬಿಡಿಎ ಎಂಪ್ಲಾಯೀಸ್‌ ವೆಲ್‌ಫೇರ್ ಅಸೋಸಿಯೇಷನ್‌ ಪ್ರಾಧಿಕಾರದ ನೌಕರರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಉದ್ದೇಶಿಸಿತ್ತು.
ಅಲ್ಲಿನ ಎಂ.ಕೆ.ಎಸ್‌. 1ನೇ ಹಂತದ ಬಡಾವಣೆಯಲ್ಲಿ ಬಿ.ವೆಂಕಟರಮಣಪ್ಪ ಹಾಗೂ ಅವರ ಪತ್ನಿ ಕೆ.ಪದ್ಮಾವತಿ 2015ರಲ್ಲಿ ನಿವೇಶನ ಪಡೆದಿದ್ದರು. ಅದಕ್ಕೆ ₹3.10 ಲಕ್ಷ ಪಾವತಿಸಿದ್ದರು. ವೆಂಕಟರಮಣಪ್ಪ ಸಹೋದರ ಬಿ.ಬೀರಪ್ಪ ಅವರಿಗೆ ಅಸೋಸಿಯೇಷನ್‌ 2015ರ ಮಾರ್ಚ್‌ನಲ್ಲಿ ನಿವೇಶನ ಮಾರಿತ್ತು. ಆ ವೇಳೆ ಬೀರಪ್ಪ ₹2.07 ಲಕ್ಷ ನೀಡಿದ್ದರು.


ಜೆ.ಪಿ.ನಗರದ 8ನೇ ಹಂತದಲ್ಲೂ ವೆಂಕಟರಮಣಪ್ಪ ಅವರ ಪತ್ನಿ ಕೆ.ಪದ್ಮಾವತಿ ಅವರಿಗೆ 2018ರ ಜುಲೈನಲ್ಲಿ ಇನ್ನೊಂದು ನಿವೇಶನ ಮಂಜೂರಾಗಿತ್ತು. ಈ ವೇಳೆ 4.10 ಲಕ್ಷ ಪಾವತಿಸಿಕೊಳ್ಳಲಾಗಿತ್ತು. ಬೀರಪ್ಪ ಅವರ ಪತ್ನಿ ಸವಿತಾ ಅವರಿಗೂ ಅದೇ ಬಡಾವಣೆಯಲ್ಲಿ ಮತ್ತೊಂದು ನಿವೇಶನ ನೀಡಲಾಗಿತ್ತು.


ಇದೇ ರೀತಿ ಕುಟುಂಬದ ಮತ್ತಿಬ್ಬರಿಗೆ ನಿವೇಶನ ನೀಡಲಾಗಿದೆ. ಪ್ರಾಧಿಕಾರದ ವಿಷಯ ನಿರ್ವಾಹಕ ಬಿ.ವೆಂಕಟರಮಣಪ್ಪ ಹಾಗೂ ಅವರ ಕುಟುಂಬದ ಹಲವು ಸದಸ್ಯರಿಗೆ ನಾಲ್ಕು ನಿವೇಶನಗಳನ್ನು ನೀಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಲಾಗಿತ್ತು.
ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಬಿಡಿಎ ಅಥವಾ ಬೇರೆ ಯಾವುದೇ ಪ್ರಾಧಿಕಾರದಿಂದ ಮನೆ ಅಥವಾ ನಿವೇಶನ ಇಲ್ಲದವರು ಪ್ರಾಧಿಕಾರದ ನಿವೇಶನಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ನಿಯಮವನ್ನು ಗಾಳಿಗೆ ತೂರಲಾಗಿತ್ತು.


ನಿಯಮಗಳ ಪ್ರಕಾರ ಸಗಟು ಹಂಚಿಕೆ ಪ್ರಕ್ರಿಯೆಯನ್ನು ಉಪ ಕಾರ್ಯದರ್ಶಿ–1 ವಿಭಾಗದಲ್ಲಿ ಮಾಡಬೇಕಿತ್ತು. ಆದರೆ ಉಪ ಕಾರ್ಯದರ್ಶಿ–4 ವಿಭಾಗದಲ್ಲಿ ಕಾನೂನುಬಾಹಿರವಾಗಿ ಕಡತಗಳನ್ನು ಮಂಡಿಸಿ ನಿವೇಶನಗಳನ್ನು ಹಂಚಲಾಗಿತ್ತು. ಹಾಗೆಯೇ ಫಲಾನುಭವಿಗಳ ಪಟ್ಟಿಯನ್ನು ಮೂರು ಸಲ ಪರಿಷ್ಕರಣೆ ಮಾಡಲಾಗಿತ್ತು. ನಿಯಮಬಾಹಿರವಾಗಿ 45 ನಿವೇಶನಗಳನ್ನು ಹಂಚಲಾಗಿದೆ ಎಂದು ಚಿಕ್ಕಯ್ಯ ಆರೋಪಿಸಿದ್ದರು.

the fil favicon

SUPPORT THE FILE

Latest News

Related Posts