ಕರೊನಾ ಯುದ್ಧಭೂಮಿ; ಮೋದಿ ಕಾರ್ಯತಂತ್ರದಲ್ಲಿ ಯಾವ ಬದಲಾವಣೆಯೂ ಆಗಿಲ್ಲವೇ?

ಬೆಂಗಳೂರು; ಕರೊನಾ ವೈರಸ್‌ ಸೋಂಕಿತರ ಪಟ್ಟಿಗೆ ಹೊಸ ಸೋಂಕಿತರ ಸಂಖ್ಯೆ  1,242ಕ್ಕೇರಿದೆ. ಇದು  ದೇಶದಲ್ಲಿ  ದೈನಂದಿನ ಲೆಕ್ಕಚಾರದಲ್ಲಿ ಅತ್ಯಧಿಕ ಏರಿಕೆ. ಈ ಸಾಂಕ್ರಾಮಿಕ ರೋಗ ದಿನೇ  ದಿನೇ ತನ್ನ ಕಬಂಧಬಾಹುಗಳನ್ನು ಚಾಚುತ್ತಲೇ ಚಕ್ರವ್ಯೂಹವನ್ನು ಸೃಷ್ಟಿಸಿದೆ.  

ಇದನ್ನು ಬೇಧಿಸಲು ಪ್ರಧಾನಿ ನರೇಂದ್ರಮೋದಿ ಕಠಿಣ ಸ್ವರೂಪದ ಲಾಕ್‌ಡೌನ್‌ ದಿನಗಳನ್ನು ಮೇ 3ರವರೆಗೆ  ವಿಸ್ತರಿಸಿದ್ದಾರೆ. ಆದರೆ ಈ ಚಕ್ರವ್ಯೂಹದಿಂದ ಹೇಗೆ ಹೊರಬರಬೇಕು ಎಂಬುದನ್ನು ಚರ್ಚಿಸಿಲ್ಲ. ಅಲ್ಲದೆ  ಕಾರ್ಯತಂತ್ರದಲ್ಲಿ ಯಾವ ಬದಲಾವಣೆಗಳೂ ಆಗಿಲ್ಲ. ಇಂದು ಬೆಳಗ್ಗೆ  ದೇಶವನ್ನುದ್ದೇಶಿಸಿ ಮಾಡಿರುವ ಭಾಷಣವೇ ಇದನ್ನು ನಿರೂಪಿಸಿತು 

ಎಂದಿನಂತೆ ಮನೆಯಲ್ಲೇ ಇರಿ, ಮುಖಗವಸುಗಳನ್ನು ಧರಿಸಿ, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿ,  ಚಪ್ಪಾಳೆ, ದೀಪಗಳನ್ನು ಬೆಳಗಿಸಿ ಎಂದು ಕರೆ ಕೊಡುತ್ತಿರುವ ಮೋದಿ, ಇದಕ್ಕೆ ಪ್ರತಿಯಾಗಿ ನಿಖರವಾಗಿ ಏನು  ಕ್ರಮ ಕೈಗೊಂಡಿದ್ದಾರೆ?

ಜನರ ನೋವನ್ನು ತಗ್ಗಿಸಲು, ಉದ್ಯೋಗ ನೀಡಿಕೆ,  ವ್ಯವಹಾರಗಳು ಮತ್ತು ಆರ್ಥಿಕತೆಯನ್ನು ಉಳಿಸಲು ರಚನಾತ್ಮಕವಾಗಿ ಯಾವ ಯೋಜನೆಗಳನ್ನು ರೂಪಿಸಿದ್ದಾರೆ, ಕರೋನಾ ಚಕ್ರವ್ಯೂಹದಿಂದ ಹೇಗೆ ನಿರ್ಗಮಿಸಬೇಕು,  ಅದಕ್ಕೆ ಅನುಸರಿಸಬೇಕಾದ  ತಂತ್ರಗಾರಿಕೆಗಳೇನು ಎಂಬ ಬಗ್ಗೆ ಯಾವ ಸುಳಿವನ್ನೂ ನೀಡಿಲ್ಲ. 

ಲಾಕ್‌ಡೌನ್‌ ಘೋಷಣೆ ಮತ್ತು ಅದರ ವಿಸ್ತರಣೆಯಿಂದಾಗಿ ಹಸಿವಿನಿಂದ  ಬಳಲುವ ಜನರ ಸಂಖ್ಯೆ ದುಪ್ಪಟ್ಟುಗೊಳ್ಳಲಿದೆ. ಅಪಾಯದ ಅಂಚಿನಲ್ಲಿರುವ ವ್ಯವಹಾರ ಉದ್ಯಮಗಳು ಅದರಲ್ಲೂ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳನ್ನು ಬಲವರ್ಧನೆಗೊಳಿಸುವ ಕುರಿತು  ಕೈಗೊಂಡಿರುವ  ನಿರ್ಧಾರಗಳನ್ನು ಅಪ್ಪಿತಪ್ಪಿಯೂ ತಮ್ಮ  ಭಾಷಣದಲ್ಲಿ ಎಲ್ಲಿಯೂ ಪ್ರಸ್ತಾಪಿಸಲೇ ಇಲ್ಲ.  

ಬೇರೆ ದೇಶದ  ಜನರಂತೆ ಭಾರತೀಯರೂ ವೈರಸ್‌ಗೆ ತುತ್ತಾಗುತ್ತಿದ್ದಾರೆ. ಕಳೆದ  ವಾರ  ಆರೋಗ್ಯ ಸಚಿವಾಲಯವೇ ಸೂಚಿಸಿರುವಂತೆ ಲಾಕ್‌ಡೌನ್‌ ಆದೇಶಿಸದಿದ್ದಲ್ಲಿ ಭಾರತದಲ್ಲಿ  ಸೋಂಕಿತರ  ಸಂಖ್ಯೆ  ಸುಮಾರು 8 ಲಕ್ಷಕ್ಕೆ ತಲುಪುತ್ತಿತ್ತು. ಅಂದರೆ ವಿಶ್ವದಲ್ಲೇ  ಅತಿ ಹೆಚ್ಚು. ಈವರೆವಿಗೆ 340 ಮಂದಿ  ಸಾವನ್ನಪ್ಪಿದ್ದಾರೆ. ಸೋಂಕು  ಖಚಿತಪಡಿಸಿದ ರೋಗಿಗಳಲ್ಲಿ ಶೇ.3ರಿಂದ 4ರಷ್ಟು ದರದಷ್ಟು ಏರಿಕೆಯಾಗಿದೆ. 

ಲಾಕ್‌ಡೌನ್ ಹೊರತಾಗಿಯೂ ಕರೊನಾ  ವೈರಾಣು ಹರಡುವಿಕೆ ನಿಯಂತ್ರಣಕ್ಕೆ  ಬರುತ್ತಿಲ್ಲ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕಂಡು  ಬಂದಿರುವ ಏರಿಕೆ  ಪ್ರಮಾಣವೇ ಇದಕ್ಕೆ ಸ್ಪಷ್ಟ ನಿದರ್ಶನ. ಅಲ್ಲದೆ, ದೇಶದ ಹಲವೆಡೆ ಸೂಕ್ಷ್ಮ  ಮತ್ತು ಕಟ್ಟೆಚ್ಚರದ ತಾಣಗಳ  ಸಂಖ್ಯೆಯೂ ಹೆಚ್ಚಿದೆ.  

ಇನ್ನು, ತಾಪಮಾನ ಏರಿಕೆಯಾದ ನಂತರ ವೈರಸ್ ಕಡಿಮೆಯಾಗುತ್ತದೆ ಎಂದು ಆಶಿಸಿದವರು ಈಗ ನಿರಾಶೆಗೊಂಡಿದ್ದಾರೆ. ನೈಸರ್ಗಿಕ ಕಾರಣಗಳು, ಬಿಸಿಜಿ ಲಸಿಕೆಗಳು, ಆನುವಂಶಿಕ ಮತ್ತು ಪರಿಸರ ಅಂಶಗಳಿಂದಾಗಿ ಭಾರತೀಯರು ರೋಗನಿರೋಧಕತೆಯನ್ನು ಹೊಂದಿದ್ದಾರೆ ಎಂಬ ಇತರ ಸಿದ್ಧಾಂತಗಳನ್ನು ಸಮರ್ಥಿಸಲಾಗಿಲ್ಲ. ಭಾರತವು ಯುರೋಪ್ ಮತ್ತು ಯುಎಸ್ ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ  ಎಂದರೆ  ಅದು  ಕೇವಲ ಎರಡು ಅಂಶಗಳಿಂದಾಗಿಯಷ್ಟೆ. ಈ ರೋಗವು ಸ್ವಲ್ಪ ತಡವಾಗಿ ಭಾರತೀಯನನ್ನು ಬಾಧಿಸಿತು ಮತ್ತು ಆ ಹೊತ್ತಿಗೆ ಅನೇಕ ರಾಜ್ಯಗಳು ಲಾಕ್ ಆಗಿದ್ದವು.

ಕೊರೊನಾ ವೈರಸ್‌ ವಿರುದ್ಧ  ಸೆಣೆಸುತ್ತಿರುವ  ವಿಶ್ವದ ಅನೇಕ ದೇಶಗಳು ಭಾರಿ ಪ್ರಮಾಣದ ಹಣವನ್ನು ಖರ್ಚು ಮಾಡಿವೆ. ಅಮೇರಿಕ ತನ್ನ ಜಿಡಿಪಿಯ ಶೇಕಡಾ 10 ರಷ್ಟು ಖರ್ಚು ಮಾಡಿದೆ, ಅದರ ಫೆಡರಲ್ ಬ್ಯಾಂಕ್, ಸರ್ಕಾರ ಮತ್ತು ಉದ್ಯಮಕ್ಕೆ ಸಹಾಯ ಮಾಡಲು ಇನ್ನೂ 2.3 ಟ್ರಿಲಿಯನ್ ಡಾಲರ್‌ಗಳ ನೆರವು ನೀಡಿದೆ. ಜಪಾನ್ ಮತ್ತು ಮಲೇಷ್ಯಾದಲ್ಲಿ ಅಲ್ಲಿನ ಸರ್ಕಾರಗಳು ನಿಯಮಿತವಾಗಿ ಹಣ ಮತ್ತಿತರೆ ನೆರವಿನ ಪ್ರಮಾಣ ಹೆಚ್ಚಿಸಿವೆ.  ಹೀಗಾಗಿ  ಅಲ್ಲಿನ ಉದ್ಯಮಗಳು ತುಸು ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ಸಣ್ಣದಾಗಿ ಹುಟ್ಟಿಸಿವೆ. 

ಆದರೆ ಈ ವಿಚಾರದಲ್ಲಿ ಭಾರತವು ಯುರೋಪ್, ಆಗ್ನೇಯ ಏಷ್ಯಾ ಮತ್ತು ಯುಎಸ್ ಜೊತೆ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ, ಮಾರ್ಚ್ 25 ರಿಂದ ಒಂದು ಪೈಸೆಯನ್ನೂ ಖರ್ಚು ಮಾಡಲು ಮೋದಿ ಅಸಮರ್ಥರಾಗಿದ್ದಾರೆ ಎಂಬಂತೆ  ಅವರ ಕಾರ್ಯನೀತಿಗಳೇ ಹೇಳುತ್ತಿವೆ.  ಲಾಕ್‌ಡೌನ್‌ನ ಆರ್ಥಿಕ ಪರಿಣಾಮ ಮತ್ತು ಜನರ ಜೀವನದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಅವರು ವಹಿಸಿರುವ  ಮೌನ, ಸರ್ಕಾರಿ ಯಂತ್ರವೇ ಸ್ಥಗಿತಗೊಂಡಿದೆ ಎಂಬುದನ್ನು ಸೂಚಿಸುತ್ತಿದೆ. 

ಆರ್ಥಿಕತೆಯ ವೆಚ್ಚದಲ್ಲಿ ಜೀವಗಳನ್ನು ಉಳಿಸುತ್ತಾರೆಯೇ ಅಥವಾ ಆರ್ಥಿಕತೆಯನ್ನು ಜೀವಂತವಾಗಿಡಲು ಅವರು ಜೀವವನ್ನು ಅಪಾಯಕ್ಕೆ ತೆಗೆದುಕೊಳ್ಳುತ್ತಾರೆಯೇ? ಎಂಬ ಪ್ರಶ್ನೆಗಳಿಗೆ  ಮೋದಿ ಸೇರಿದಂತೆ  ಕೇಂದ್ರ ಮತ್ತು  ಬಿಜೆಪಿ  ಆಳ್ವಿಕೆ  ಇರುವ  ರಾಜ್ಯ ನಾಯಕರ  ಬಳಿ  ಉತ್ತರಗಳೇ ಇಲ್ಲದಂತಾಗಿದೆ. 

ಫ್ರೆಂಚ್‌ ಅಧ್ಯಕ್ಷ ಎಮ್ಯಾನುಯೆಲ್‌  ಮ್ಯಾಕ್ರೋನ್‌  ಈ ಸಾಂಕ್ರಾಮಿಕವನ್ನು ಗುಪ್ತ ಶತ್ರುಗಳ ವಿರುದ್ಧದ ಯುದ್ಧ ಎಂದು ಕರೆದಿದ್ದಾರೆ. ಈ  ಗುಪ್ತ ಶತ್ರುವಿನ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ  ಜಯಶಾಲಿಯಾಗುವುದು ಹೇಗೆಂದರೆ  ಒಂದೋ ಕರೊನಾ ವೈರಸ್‌  ವ್ಯಾಪ್ತಿಯಿಂದ ಹೊರಗುಳಿಯುವುದೊಂದೇ ಏಕೈಕ ಮಾರ್ಗ. ಹೀಗಾಗಿ ಸರ್ಕಾರ ತನ್ನ ಹೆಚ್ಚಿನ ಸಮಯವನ್ನು ವಿಜ್ಞಾನಿಗಳಿಗೆ ನೀಡಬೇಕು. ತಪಾಸಣೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಇದಾಗಬೇಕಿದ್ದಲ್ಲಿ  ಪ್ರಯೋಗಾಲಯಗಳ ಸಂಖ್ಯೆಯಲ್ಲಿಯೂ ಗಣನೀಯವಾಗಿ ಹೆಚ್ಚಳವಾಗಬೇಕು. 

ಈ ಮಹಾ ವಿಪತ್ತಿನ ಕುರಿತು ನಡೆಯುತ್ತಿರುವ ಎಲ್ಲಾ ಬಗೆಯ ಚರ್ಚೆಗಳ ನಡುವೆಯೇ ಮಹಾಕಾವ್ಯಗಳು ಮತ್ತೆ ಪ್ರಚಲಿತಕ್ಕೆ  ಬಂದಿವೆ.  ಪ್ರಧಾನಿ ನರೇಂದ್ರ ಮೋದಿ ಅವರು ಕರೊನಾ ವೈರಸ್‌ನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಅನುಸರಿಸಿರುವ ತಂತ್ರವನ್ನು ಮಹಾಭಾರತದಲ್ಲಿನ ಅಭಿಮನ್ಯುವಿನ ಕಥೆಯೊಂದಿಗೆ ಹೋಲಿಸಲಾಗುತ್ತಿದೆ.

ಅಂದರೆ  ಅರ್ಜುನನ ಯೋಧ ಮಗ ಅಭಿಮನ್ಯುವಿನೊಂದಿಗೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ನಡೆಸಬೇಕಿದ್ದ ಮೋದಿ, ಈ  ಚಕ್ರವ್ಯೂಹದಿಂದ ಹೇಗೆ  ಹೊರಬರಬೇಕು  ಎಂಬ ಬಗ್ಗೆ ತಂತ್ರಗಾರಿಕೆಗಳು ತಿಳಿದಿಲ್ಲ. 

21 ದಿನಗಳ ಲಾಕ್‌ಡೌನ್‌ ನಂತರವೂ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗದೇ ಇರುವುದು ನಿಜಕ್ಕೂ ಗಾಬರಿ ತರುವ  ವಿಚಾರ.ಹಾಗೆಯೇ  19  ದಿನಗಳ ಲಾಕ್‌ಡೌನ್‌ ಮುಂದುವರೆಸಿರುವುದರ  ಹಿಂದೆ ಸರ್ಕಾರ ಜನರ ಮುಂದೆ ಬಿಚ್ಚಿಡಲಾರದ ಹಲವು ಸತ್ಯಗಳಿವೆ ಎಂಬ  ಸಂಶಯವನ್ನು ಉಂಟು ಮಾಡುತ್ತಿದೆ. 

ಈಗಾಗಲೇ ಸೋಂಕು ಸಮುದಾಯಕ್ಕೆ ಹರಡಿರುವುದನ್ನು, ಸಾಕಷ್ಟು ಪ್ರಮಾಣದಲ್ಲಿ ಪರೀಕ್ಷೆಗಳನ್ನು ಮಾಡುವುದಕ್ಕೆ ವ್ಯವಸ್ಥೆ ಅಥವಾ ಸೌಲಭ್ಯಗಳು  ಇಲ್ಲದೇ ಇರುವುದನ್ನು,  ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಆಸ್ಪತ್ರೆಗಳಲ್ಲಿ ದಾಖಲಾದರೆ ಆ ಪರಿಸ್ಥಿತಿಯನ್ನು ನಿಭಾಯಿಸುವ ಸಾಧ್ಯತೆಗಳು ನಮ್ಮಲ್ಲಿ ಕ್ಷೀಣವಾಗಿರಬಹುದಾದ ಎಲ್ಲಾ ಸಂಶಯಗಳು ಈಗ ನಿಜವೆನಿಸುತ್ತಿವೆ.  

‘ಈ  ಎಲ್ಲಾ ವಿಚಾರಗಳ ಬಗ್ಗೆ ಮೋದಿ  ಅವರು ಏನನ್ನೂ ಹೇಳಿಲ್ಲ ಮತ್ತು ಈ 19 ದಿನಗಳ ಲಾಕ್‌ಡೌನ್‌ ಮುಂದುವರೆಸುವುದಕ್ಕೆ ಇರಬಹುದಾದ ಸಮರ್ಥನೆಯನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಇದು ತೀರಾ ಆತಂಕಕಾರಿ ವಿಚಾರ.  ದೇಶದ  ಆರ್ಥಿಕತೆ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಮತ್ತು ಅದನ್ನು ಎದುರುಗೊಳ್ಳುವಲ್ಲಿ ಸರ್ಕಾರದ ಪಾತ್ರವೇನಿರುತ್ತದೆ ಎಂಬ ಬಗ್ಗೆಯೂ ಯಾವ ಮಾತನ್ನೂ ಆಡಿಲ್ಲ. ಇಂದಿನ ಭಾಷಣ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಯಾವ  ಅಂಶಗಳೂ ಇರಲಿಲ್ಲ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.  

the fil favicon

SUPPORT THE FILE

Latest News

Related Posts