ಕೊರೊನಾ ವೈರಸ್‌ ವಿರುದ್ಧ ಹೋರಾಟವನ್ನು ಮುನ್ನಡೆಸದ ಪರಿಸರ ಇಲಾಖೆ; ಎಲ್ಲಿದ್ದಾರೆ ಸಚಿವ ಆನಂದ್‌ಸಿಂಗ್‌?

ಬೆಂಗಳೂರು; ಕೊರೊನಾ ವೈರಸ್‌ ಸೋಂಕಿನ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿರಬೇಕಾಗಿದ್ದ ಪರಿಸರ  ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ  ನಿಯಂತ್ರಣ ಮಂಡಳಿಯೇ ಮೈಮರೆತು ಕೂತಿದೆ. ಈ ನಡುವೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವ ಆನಂದ್‌ಸಿಂಗ್‌ ಕೂಡ ಇದಕ್ಕೂ ತನಗೂ ಸಂಬಂಧವಿಲ್ಲದಂತಿದ್ದಾರೆ.

ಆರೋಗ್ಯ ಸಚಿವ ಬಿ ಶ್ರೀರಾಮುಲು,  ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌ ಅವರು ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ  ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ  ಇಲಾಖೆಯ ಸಚಿವ  ಆನಂದ್‌  ಸಿಂಗ್‌ ಅವರ ಸುಳಿವೇ  ಇಲ್ಲದಂತಾಗಿದೆ. ಅತ್ಯಗತ್ಯ ಸೇವೆಗಳ ಕಾಯ್ದೆಯಿಂದ  ಇಲಾಖೆಯನ್ನು ಹೊರಗಿಟ್ಟಿದ್ದಾಗಲೂ ಮತ್ತು ಕಾಯ್ದೆ  ವ್ಯಾಪ್ತಿಗೆ ಸೇರಿಸಿದಾಗಲೂ ಸಚಿವ ಆನಂದ್‌ಸಿಂಗ್‌ ಎಲ್ಲಿದ್ದಾರೆ, ಅಧಿಕಾರಿಗಳೊಂದಿಗೆ ಯಾಕೆ ಸಭೆ ನಡೆಸುತ್ತಿಲ್ಲ ಎಂಬ ಪ್ರಶ್ನೆಗಳು ಕೇಳಿಬಂದಿವೆ.  

ಹಾಗೆಯೇ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿ ನಡುವೆ ಸಮನ್ವಯತೆಯೇ ಇಲ್ಲವಾಗಿದೆ. ಕೊರೊನಾ ವೈರಸ್‌ನಂತಹ ಜಾಗತಿಕ  ಮಹಾ ವಿಪತ್ತಿನ ನಡುವೆಯೂ ಮಂಡಳಿ ಅಧ್ಯಕ್ಷರು,  ಸದಸ್ಯ ಕಾರ್ಯದರ್ಶಿ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ.  

ಕರ್ನಾಟಕ  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ  ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿದೆ.  ಜೈವಿಕ ತ್ಯಾಜ್ಯ ನಿರ್ವಹಣೆ, ಅಪಾಯಕಾರಿ ತ್ಯಾಜ್ಯ ನಿರ್ವಹಣೆ, ಜಲ, ವಾಯು ಮಾಲಿನ್ಯ  ನಿವಾರಣೆ ಹಾಗೂ ನಿಯಂತ್ರಣ ವಿಷಯಗಳಲ್ಲದೆ ಕೊರೊನಾ ಸಾಂಕ್ರಾಮಿಕ  ರೋಗದ ಹರಡುವಿಕೆ  ನಿಯಂತ್ರಣದ ದೃಷ್ಟಿಯಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ. 

ಅದೇ ರೀತಿ ಕೊರೊನಾ ವೈರಸ್‌ ಸೋಂಕಿತರ ಮನೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ  ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕಿತ್ತು. ತ್ಯಾಜ್ಯ ನೀರಿನ ನಿರ್ವಹಣೆಯಲ್ಲದೆ ಅತಿ ಹೆಚ್ಚು ಬಳಕೆಯಾಗುತ್ತಿರುವ ಸ್ಯಾನಿಟೇಸರ್‌ನಿಂದ ಬಳಸಿದ ನೀರು ಎಲ್ಲಿಗೆ ಹೋಗುತ್ತಿದೆ, ಜೈವಿಕ ತ್ಯಾಜ್ಯವನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದರ ಮೇಲೆ ಹದ್ದಿನ ಕಣ್ಣಿಟ್ಟು ಪರಿಸರವನ್ನು ಸಮತೋಲನದಲ್ಲಿಡಬೇಕಿದ್ದ ಮಂಡಳಿ ಅಧಿಕಾರಿಗಳೇ ಈಗ ಕಚೇರಿಯಲ್ಲಿಲ್ಲ. 

ಈ ಎಲ್ಲಾ ಹಿನ್ನೆಲೆಯಲ್ಲಿ ಕೋವಿಡ್‌-19ನ್ನು ತಡೆಗಟ್ಟುವ ನಿಟ್ಟಿನಲ್ಲಿ ಶುರುವಾಗಿರುವ ಹೋರಾಟವನ್ನು ಪರಿಸರ ಇಲಾಖೆಯೇ ಮುನ್ನಡೆಸಬೇಕಿತ್ತು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಕಾಲಕಾಲಕ್ಕೆ  ನಿರ್ದೇಶನಗಳನ್ನೂ ನೀಡುವ ಮೂಲಕ ಕೊರೊನಾ ವೈರಸ್‌ ಪ್ರಕರಣಗಳನ್ನು ತಡೆಗಟ್ಟಲು ಮುಂದಾಗಬೇಕಿತ್ತು.  

ಈ ವಿಚಾರದಲ್ಲಿ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಎಷ್ಟು ಮುಖ್ಯವೋ ಪರಿಸರ ಇಲಾಖೆಯ ಕಾರ್ಯದರ್ಶಿಯೂ ಅಷ್ಟೇ ಮುಖ್ಯ. ಕೊರೊನಾ ಸಾಂಕ್ರಾಮಿಕ ರೋಗದ ಹರಡುವಿಕೆಯ ನಿಯಂತ್ರಣ  ದೃಷ್ಟಿಯಿಂದ ಅತಿ ಹೆಚ್ಚಿನ  ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದ್ದ ಪರಿಸರ ಇಲಾಖೆಯೇ ಭಂಡ  ನಿರ್ಲಕ್ಷ್ಯವನ್ನು ಮೆರೆದಿದೆ. 

ಕೊರೊನಾ ವೈರಸ್‌ ವಿರುದ್ಧ  ಶುರುವಾಗಿರುವ ಹೋರಾಟ 21 ದಿನಗಳು ಕಳೆದಿದ್ದರೂ ಪರಿಸರ ಇಲಾಖೆಯ ಸರ್ಕಾರದ ಹಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ, ಕಾರ್ಯದರ್ಶಿ ವಿಜಯಕುಮಾರ್‌  ಗೋಗಿ, ಮಾಲಿನ್ಯ ನಿಯಂತ್ರಣ ಮಂಡಳಿ  ಅಧ್ಯಕ್ಷ ಡಾ ಸುಧೀಂದ್ರರಾವ್‌,  ಮಂಡಳಿಯ ಸದಸ್ಯ ಕಾರ್ಯದರ್ಶಿ ಬಸವರಾಜ ಪಾಟೀಲ್‌ ಈ  ಹೋರಾಟದ  ಕಣದ ಮುಂಚೂಣಿಯಲ್ಲಿ ಕಾಣಿಸಿಕೊಂಡಿಲ್ಲ.

ವಿಪರ್ಯಾಸದ ಸಂಗತಿ ಎಂದರೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ  ಇಲಾಖೆ ಮತ್ತು ಇದಕ್ಕೆ ಸಂಬಂಧಿಸಿದ ಮಾಲಿನ್ಯ ನಿಯಂತ್ರಣ  ಮಂಡಳಿಯನ್ನು ಆರಂಭದಲ್ಲಿ ಅತ್ಯಗತ್ಯ ಸೇವೆಗಳ ಕಾಯ್ದೆಗಳ ವ್ಯಾಪ್ತಿಯಿಂದ ಹೊರಗಿಟ್ಟಿದ್ದರೂ, ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಯೂ ತುಟಿ ಬಿಚ್ಚಿರಲಿಲ್ಲ. 

ಕಡೆಗಳಿಗೆಯಲ್ಲಿ ಪರಿಸರ ಇಲಾಖೆಯನ್ನು ಅತ್ಯಗತ್ಯ ಸೇವೆಗಳ ಕಾಯ್ದೆ ವ್ಯಾಪ್ತಿಗೆ ಸೇರಿಸಲಾಗಿತ್ತಾದರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ  ಡಾ ಸುಧೀಂದ್ರರಾವ್‌, ಕಾನೂನು  ಸಲಹೆ ಪಡೆದು ಅಗತ್ಯ ಸೇವೆ ಕಾಯ್ದೆಯಿಂದ ಹೊರಗುಳಿಯಲು ಪ್ರಯತ್ನಿಸಿದ್ದರು. 

‘ಮಂಡಳಿಯ ಸದಸ್ಯ ಕಾರ್ಯದರ್ಶಿ 2020ರ ಏಪ್ರಿಲ್‌ 9ರಂದು ಹೊರಡಿಸಿದ್ದ ಸುತ್ತೋಲೆಯೇ ಕಾನೂನುಬಾಹಿರ ಮತ್ತು ತಮ್ಮ ಕಾರ್ಯ ವ್ಯಾಪ್ತಿಯಲ್ಲಿಲ್ಲದಿದ್ದರೂ ಸುತ್ತೋಲೆ ಹೊರಡಿಸಿದ್ದರು,’ ಎಂದು ಮಂಡಳಿಗೆ ಗುರುರಾಜ್‌ ಜೋಷಿ ಅವರು 2020 ರ ಏಪ್ರಿಲ್‌ 10ರಂದು ಕಾನೂನು ಸಲಹೆ ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ. 

ಮಂಡಳಿ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿ ನಡುವೆ ಸಮನ್ವಯ  ಇಲ್ಲದ ಕಾರಣ, ಮಂಡಳಿ ಮತ್ತು ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಎಲ್ಲಾ ಸ್ತರದ ಅಧಿಕಾರಿ, ನೌಕರರು ಯಾರ ನಿರ್ಧಾರವನ್ನು ಪಾಲಿಸಬೇಕು ಎಂಬ ಗೊಂದಲದಲ್ಲಿ ಮುಳುಗಿದ್ದಾರೆ. 

ಅಲ್ಲದೆ, ಸದಸ್ಯ  ಕಾರ್ಯದರ್ಶಿ 2020ರ ಏಪ್ರಿಲ್‌ 9ರಂದು ಹೊರಡಿಸಿದ್ದ ಸುತ್ತೋಲೆ ಪ್ರಕಾರ ಅಧಿಕಾರಿ, ನೌಕರರು ಕರ್ತವ್ಯಕ್ಕೆ ಮರಳಬೇಕಿತ್ತು.  ಆದರೆ ಅಧಿಕಾರಿ, ನೌಕರರು ಕರ್ತವ್ಯಕ್ಕೆ ಮರಳಲು ಈವರೆವಿಗೂ ಯಾವುದೇ ಸಾರಿಗೆ  ಸಂಪರ್ಕ ಸೌಲಭ್ಯಗಳನ್ನು ನೀಡಿಲ್ಲ. ಅದರಲ್ಲೂ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ  ಸಿಬ್ಬಂದಿಗೆ ಸಾರಿಗೆ, ಸಂಪರ್ಕ ಸೌಲಭ್ಯವಿಲ್ಲ. ಇದು ಗೊತ್ತಿದ್ದರೂ ಸದಸ್ಯ ಕಾರ್ಯದರ್ಶಿ ಮತ್ತು ಮಂಡಳಿ ಅಧ್ಯಕ್ಷರು ಹಗ್ಗ ಜಗ್ಗಾಟದಲ್ಲಿ ನಿರತರಾಗಿರುವುದು ಗೊತ್ತಾಗಿದೆ. 

SUPPORT THE FILE

Latest News

Related Posts