ಐ ಟಿ ಉದ್ಯಮವನ್ನೂ ಬಾಧಿಸಿದ ಕೊರೊನಾ; ನೂರಾರು ಸಂಖ್ಯೆಯಲ್ಲಿ ಹೊರಬೀಳಲಿದ್ದಾರೆ ಉದ್ಯೋಗಿಗಳು!

ಬೆಂಗಳೂರು; ಲಾಕ್‌ಡೌನ್‌ ಅವಧಿಯನ್ನು ಮೇ  3ರ ತನಕ  ವಿಸ್ತರಿಸಿರುವ ಆದೇಶ ಹೊರಬೀಳುತ್ತಿದ್ದಂತೆ ಐ ಟಿ ಉದ್ಯಮ ಮೇಲೆ  ಕರಾಳ ಛಾಯೆ ಆವರಿಸಲಾರಂಭಿಸಿದೆ. ಕೊರೊನಾ ವೈರಸ್‌ ಸೃಷ್ಟಿಸಿರುವ  ಆರ್ಥಿಕ  ಹಿಂಜರಿತಕ್ಕೆ ಎಲ್ಲಾ ಬಗೆಯ ಉದ್ಯಮಗಳು ನೆಲಕಚ್ಚಿರುವ ಬೆನ್ನಲ್ಲೇ ಈ ಸಾಲಿಗೆ ಇದೀಗ ಸೇರ್ಪಡೆಯಾಗಿರುವ ಐ ಟಿ ಉದ್ಯಮದ ಮೇಲೆ ಭಾರೀ ಹೊಡೆತ ಬಿದ್ದಿದೆ.  

ಮಾಹಿತಿ ತಂತ್ರಜ್ಞಾನವನ್ನು  ತೀವ್ರವಾಗಿ ಬಾಧಿಸಿರುವ ಕೊರೊನಾ ವೈರಸ್‌, ಸಾಫ್ಟ್‌ವೇರ್‌ ಕಂಪನಿಗಳಲ್ಲಿ  ಕಾರ್ಯನಿರ್ವಹಿಸುತ್ತಿರುವ ನೌಕರರ ಉದ್ಯೋಗಕ್ಕೂ ಕುತ್ತು ತಂದಿದೆ. ಆದಾಯದ ಕುಸಿತವಾಗಲಿದೆ  ಎಂಬ ಕಾರಣವನ್ನು  ಮುಂದೊಡ್ಡಿರುವ  ಕಂಪನಿಗಳು ನೌಕರರನ್ನು  ವೇತನ ರಹಿತ ರಜೆ, ದೀರ್ಘ ರಜೆ ಮೇಲೆ ಮನೆಗೆ ಕಳಿಸುವ ಪ್ರಕ್ರಿಯೆಗೆ ಬಿರುಸಿನಿಂದ ಚಾಲನೆ ನೀಡಿವೆ. 

ಬೆಂಗಳೂರು, ಪುಣೆ ಸೇರಿದಂತೆ ದೇಶದ  ಹಲವೆಡೆ ಕಾರ್ಯನಿರ್ವಹಿಸುತ್ತಿರುವ ಐ ಟಿ ಕಂಪನಿಗಳೀಗ ನೌಕರರ  ವೇತನ ಕಡಿತ  ಮತ್ತು ಸಾಧ್ಯವಾದೆಡೆ ನೌಕರರನ್ನು ಮನೆಗೆ ಕಳಿಸುವ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ನ್ಯೂಯಾರ್ಕ್‌ ಸೇರಿದಂತೆ ವಿಶ್ವದ ವಿವಿಧೆಡೆಗಳಲ್ಲಿ ನೆಲೆಗೊಂಡಿರುವ  ಐ ಟಿ ಕಂಪನಿಗಳು, ಯಾವ ನೋಟೀಸ್‌ ನೀಡದೆಯೂ ನೌಕರರನ್ನು ತೆಗೆದುಹಾಕುತ್ತಿವೆ. 

ಕರ್ನಾಟಕದಲ್ಲಿ ಏನಾಗುತ್ತಿದೆ ಎಂದರೆ ಟೆಲಿಕಾಂ ಉದ್ಯಮದ ಅಮೇರಿಕನ್ ಸಾಫ್ಟ್‌ವೇರ್ ಕಂಪನಿಯಾಗಿರುವ ಪ್ಯಾರೆಲಲ್ ವೈರ್‌ಲೆಸ್, ಭಾರತದಲ್ಲಿರುವ ತನ್ನ  ಕಚೇರಿಗಳಲ್ಲಿ 15 ಉದ್ಯೋಗಿಗಳನ್ನು ವಜಾಗೊಳಿಸಿದೆ. ಹುಲಾ ಇನ್ಫೋಟೈನ್‌ಮೆಂಟ್, 3 ಡಿ ಸಿಜಿಐ ಪ್ರೊಡಕ್ಷನ್ ಹೌಸ್ 30 ನೌಕರರನ್ನು ತೆಗೆದು ಹಾಕಿದೆ. ಐಟಿ ಸೇವೆಗಳ ಕಂಪನಿಯಾದ ಐವಿಟಿ ಕೋ 22 ಉದ್ಯೋಗಿಗಳನ್ನು ಮನೆಗೆ ಕಳಿಸಿದೆ. ಅಲ್ಲದೆ  ಉಳಿದಿರುವ ನೌಕರರ  ಒಟ್ಟು ವೇತನದಲ್ಲಿ ಶೇ.50ರಷ್ಟು ಕಡಿತಗೊಳಿಸಿದೆ. ಏಪ್ರಿಲ್‌ ಮಧ್ಯದ  ಅವಧಿಯಲ್ಲಿದ್ದರೂ ಮಾರ್ಚ್‌  ವೇತನವನ್ನೂ ಎಲ್ಲಾ ಉದ್ಯೋಗಿಗಳಿಗೆ ನೀಡಿಲ್ಲ.  

ನ್ಯೂಯಾರ್ಕ್‌ನ ಕಂಪನಿಯೊಂದು ಯಾವ ಕಾರಣವನ್ನೂ ನೀಡದೆ  ಗುರ್‌ಗಾಂವ್‌ ಮತ್ತು ಪುಣೆ ಕಚೇರಿ ಸೇರಿದಂತೆ ಇತರೆ ಕಚೇರಿಗಳಲ್ಲಿ  ಒಟ್ಟು 300 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಐ ಟಿ ಕಂಪನಿಗಳು ತೆಗೆದುಕೊಂಡಿರುವ  ಹಠಾತ್‌ ನಿರ್ಧಾರದಿಂದಾಗಿ  ಅಲ್ಲಿನ ನೌಕರರು ನಿಶ್ಚಿತ ಆದಾಯವಿಲ್ಲದೆ ಬೀದಿಗೆ  ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.  

ಕೋವಿಡ್‌-19 ಏಕಾಏಕಿ  ಜಾಗತಿಕ  ಮಟ್ಟದದಲ್ಲಿ 100,000  ಕ್ಕೂ ಹೆಚ್ಚು ಬಲಿ ತೆಗೆದುಕೊಂಡಿದೆ. ಇದು  ಭಾರತದಲ್ಲಿ ಪ್ರವರ್ಧಮಾನಕ್ಕೆ  ಬರುತ್ತಿರುವ  ಐಟಿ ಕಂಪನಿಗಳಲ್ಲಿನ ಅಂದಾಜು ಆದಾಯ 191 ಶತಕೋಟಿ ಮೇಲೆ ಪರಿಣಾಮ ಬೀರಲಿದೆ  ಎಂದು ಹೇಳಲಾಗುತ್ತಿದೆ. 

ಐ ಟಿ ಕಂಪನಿಗಳಲ್ಲಿ 4.6 ದಶಲಕ್ಷದಷ್ಟು ಉದ್ಯೋಗಿಗಳಿದ್ದಾರೆ. 2020ರ ಹಣಕಾಸು ವರ್ಷದಲ್ಲಿ 147 ಬಿಲಿಯನ್‌ ಯುಎಸ್‌ ಡಾಲರ್‌ ರಫ್ತು ಗಳಿಸುವ ಗುರಿ ಹೊಂದತ್ತು. ಆದರೀಗ  ಕೋವಿಡ್‌ ಪರಿಣಾಮ  ಈ ಗುರಿ ತಲುಪುವುದು ಅಸಾಧ್ಯ.   ಸಣ್ಣ ಮತ್ತು ಮಧ್ಯಮ ದರ್ಜೆಯ ಐ ಟಿ ಕಂಪನಿಗಳೀಗ  ಸಾಮೂಹಿಕವಾಗಿ ನೌಕರರನ್ನು ವಜಾಗೊಳಿಸಲಾರಂಭಿಸಿರುವುದು, ನಿಶ್ಚಿತ  ಗುರಿ  ತಲುಪುವುದು ಅನುಮಾನ ಎನ್ನಲಾಗುತ್ತಿದೆ. 

ಹೆಕ್ಸಾವೇರ್ ಟೆಕ್ನಾಲಜೀಸ್ ಸುಮಾರು 300 ಉದ್ಯೋಗಿಗಳ ವೇತನವನ್ನು ಕಡಿತಗೊಳಿಸಲು ಮುಂದಾಗಿದೆ. ಎಫ್‌ಐಟಿಇ ಪ್ರಕಾರ ಕಂಪನಿಯು ತನ್ನ ಉದ್ಯೋಗಿಗಳಿಗೆ ಏಪ್ರಿಲ್‌ನಿಂದ  ವೇತನ ನೀಡುವುದಿಲ್ಲ  ಎಂದು  ಈಗಾಗಲೇ  ತಿಳಿಸಿದೆ. 

ಇದು ಕೇವಲ ಸಣ್ಣ ಪ್ರಮಾಣದ ಐಟಿ ಸಂಸ್ಥೆಗಳ  ಪರಿಸ್ಥಿತಿಯಷ್ಟೇ ಅಲ್ಲ,  ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಇನ್ಫೋಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಮತ್ತು ವಿಪ್ರೊ ಮುಂತಾದ ಉನ್ನತ ಐಟಿ ಉದ್ಯಮದ  ಬಹುದೊಡ್ಡ ಕಂಪನಿಗಳ ಮೇಲೂ ಗಂಭೀರ ಪರಿಣಾಮ ಬೀರುವ ನಿರೀಕ್ಷೆ ಇದೆ. 

ಡೆಲ್ಟಾ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಕಾಗ್ನಿಜೆಂಟ್ ಮತ್ತು ಐಬಿಎಂಗೆ ಒಪ್ಪಂದಗಳನ್ನು ಹೊರಗುತ್ತಿಗೆ ನೀಡುತ್ತದೆ. ಕಾಗ್ನಿಜೆಂಟ್ ಸಹ ತನ್ನ ವಾರ್ಷಿಕ ಆದಾಯದ ಯೋಜನೆಯನ್ನು ತಡೆಹಿಡಿದಿದ್ದರೆ ಅಕ್ಸೆಂಚರ್ ತನ್ನ ವಾರ್ಷಿಕ ಬೆಳವಣಿಗೆಯ ದರವನ್ನು ಅರ್ಧದಷ್ಟು ಕಡಿಮೆ  ಮಾಡಿಕೊಂಡಿದೆ.

ಕೊರೊನಾ ವೈರಸ್‌ಗೆ ಅಮೇರಿಕ ತತ್ತರಿಸಿ ಹೋಗಿದೆ. ಅಂದರೆ  ಅಲ್ಲಿನ ಸಾಫ್ಟ್‌ವೇರ್‌ ಮಾರುಕಟ್ಟೆಯೇ ಬುಡಮೇಲಾದಂತೆ. ಸದ್ಯದ ಮಟ್ಟಿಗೆ ಐ ಟಿ ಕಂಪನಿಗಳು ಸ್ಥಗಿತಗೊಂಡಿಲ್ಲವಾದರೂ  ತನ್ನ ನೌಕರರ ವೇತನದಲ್ಲಿ  ಕಡಿತ ಮಾಡಲಾರಂಭಿಸಿವೆ. ಆರಂಭಿಕ ಹಂತದದಲ್ಲಿ ಮಾಸಿಕ ವೇತನ 1 ಲಕ್ಷ ರು. ಮತ್ತು ಅದಕ್ಕೂ ಹೆಚ್ಚಿನ ವೇತನ ಪಡೆಯುತ್ತಿರುವ ನೌಕರರನ್ನು ಗುರಿಯಾಗಿಸಿಕೊಂಡಿರುವ ಕಂಪನಿಗಳು ಶೇ.50ರಷ್ಟು ವೇತನ ಕಡಿತಗೊಳಿಸುವ ನಿರ್ಧಾರವನ್ನು ಪ್ರಕಟಿಸಿವೆ. 

ಇನ್ಫೋಸಿಸ್‌, ಟಿಸಿಎಸ್‌ ಮತ್ತು  ಆಕ್ಸೆಂಚರ್‌ ಸೇರಿದಂತೆ ಇನ್ನಿತರೆ ಸೇವಾ ವಲಯದ ಕಂಪನಿಗಳು ಸದ್ಯಕ್ಕೆ ಕಠಿಣ ನಿರ್ಧಾರಗಳನ್ನು ತಳೆಯದಿದ್ದರೂ, ಹೊಸ ನೇಮಕಾತಿ ಮಾಡಿಕೊಳ್ಳುವುದರಿಂದ  ಬಹಳ ದೂರ ಉಳಿಯಲಿದೆ ಎನ್ನುತ್ತಾರೆ ಐ ಟಿ ಉದ್ಯೋಗಿಯೊಬ್ಬರು. 

SUPPORT THE FILE

Latest News

Related Posts