ಕೊರೊನಾ ಬೆನ್ನ ಹಿಂದೆಯೇ ಬರಲಿದೆ ಮಲೇರಿಯಾ; ಜೋಪಾನ ಎಂದಿದೆ ವಿಶ್ವ ಆರೋಗ್ಯ ಸಂಸ್ಥೆ

ಬೆಂಗಳೂರು; ಜಗತ್ತಿನೆಲ್ಲೆಡೆ ವ್ಯಾಪಿಸಿರುವ ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ಭೀತಿ ಹುಟ್ಟಿಸಿರುವ ಹೊತ್ತಿನಲ್ಲೇ ಸಾಂಕ್ರಾಮಿಕ ರೋಗಗಳಲ್ಲೊಂದಾದ ಮಲೇರಿಯಾ ಕೂಡ ದೇಶವನ್ನು ಕಾಡಲಿದೆ. ಏಪ್ರಿಲ್‌ ತಿಂಗಳು ಕಾಲಿಟ್ಟ  ಬೆನ್ನಲ್ಲೇ ಮಲೇರಿಯಾದ ಭೀತಿಯೂ ಎದುರಾಗಿದೆ. ರಾಷ್ಟ್ರೀಯ ಮಲೇರಿಯಾ ನಿವಾರಣಾ ಚೌಕಟ್ಟು ಮಾರ್ಗಸೂಚಿಗಳಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ಮತ್ತು ವೈದ್ಯಕೀಯ ನಿಯತಕಾಲಿಕಗಳು ದೇಶವನ್ನು ಎಚ್ಚರಿಸಿವೆ. 

ಕರ್ನಾಟಕದಲ್ಲಿ ಮಲೇರಿಯಾ ರೋಗವು 2015ರಿಂದ ಇಳಿಮುಖವಾಗುತ್ತಿದೆ ಎಂದು  ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಹೇಳುತ್ತಿದೆಯಾದರೂ ದಕ್ಷಿಣ ಕನ್ನಡ  ಜಿಲ್ಲೆಯ ಮಂಗಳೂರು ನಗರದಲ್ಲಿ  ಮಾತ್ರ ಮಲೇರಿಯಾ ರೋಗ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದೆ. ಉಳಿದ ಎಲ್ಲಾ ಜಿಲ್ಲೆಗಳಲ್ಲಿ ನಿವಾರಣ ಹಂತಕ್ಕೆ  ತಲುಪಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 9 ಪ್ರಕರಣಗಳು ಕೊರೊನಾ ವೈರಸ್‌ ದೃಢಪಟ್ಟಿವೆ. ಈ ಪೈಕಿ ಯಾರೊಬ್ಬರೂ ಆಸ್ಪತ್ರೆಯಿಂದ ಬಿಡುಗಡೆಯಾಗಿಲ್ಲ. ಜಿಲ್ಲಾಡಳಿತವೂ ಕೊರೊನಾ ಪ್ರಕರಣಗಳನ್ನು ತಡೆಗಟ್ಟುವುದರಲ್ಲೇ ಮಗ್ನವಾಗಿದೆ. ಮಂಗಳೂರು ನಗರದಲ್ಲಿ ಮಲೇರಿಯಾ ರೋಗವು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದೆ ಎಂದು ಆರೋಗ್ಯ, ಕುಟುಂಬ ಕಲ್ಯಾಣ ಸಚಿವ  ಶ್ರೀರಾಮುಲು ಅವರು ಸದನದಲ್ಲೇ ಉತ್ತರಿಸಿದ್ದಾರೆ. ಹೀಗಾಗಿ ಕೊರೊನಾ ತಡೆಗಟ್ಟುವ ಜತೆಜತೆಯಲ್ಲಿಯೇ ಮಲೇರಿಯಾ ರೋಗವನ್ನು ಹಿಮ್ಮೆಟ್ಟಿಸುವುದರತ್ತಲೂ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಬೇಕಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.  

ಇದರ ಬೆನ್ನಲ್ಲೇ ಹೀಗಾಗಿ ಹಾಗೆಯೇ ಸಾಂಕ್ರಾಮಿಕ ರೋಗ ಏಕಾಏಕಿ ಮೇಲೆರೆಗಿದಾಗ ಎಚ್ಚೆತ್ತುಕೊಳ್ಳುವುದಕ್ಕಿಂತಲೂ ಮಲೇರಿಯಾ-ಸ್ಥಳೀಯ ಪ್ರದೇಶಗಳಿಗೆ ಹೆಚ್ಚಿನ ಒತ್ತು  ನೀಡಬೇಕಿದೆ ಎಂದೂ ಹೇಳುತ್ತಾರೆ ಆರೋಗ್ಯ ಅಧಿಕಾರಿಯೊಬ್ಬರು. 

ವಿಶ್ವದ ಮಲೇರಿಯಾ ಪೀಡಿತ 11 ದೇಶಗಳಲ್ಲಿ ಭಾರತವೂ ಸೇರಿದೆ. 2018 ರಲ್ಲಿ ಸುಮಾರು 430,000 ಪ್ರಕರಣಗಳು ದಾಖಲಾಗಿದ್ದವು. ದೇಶದಲ್ಲಿ ಶೇ 95ರಷ್ಟು ಮಂದಿ ಮಲೇರಿಯಾ ಸ್ಥಳೀಯ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಕೋವಿಡ್‌  19ನ್ನು ಎದುರಿಸುವಲ್ಲಿ ಆರೋಗ್ಯ ಇಲಾಖೆ ತೊಡಗಿಸಿಕೊಂಡಿರುವ  ಕಾರಣ, ಮಲೇರಿಯಾವನ್ನು ತಡೆಗಟ್ಟುವುದರತ್ತಲೂ ಗಮನ ಹರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. 

ಜಾಗತಿಕ ಮಲೇರಿಯಾ ಪ್ರಕರಣಗಳ ಪೈಕಿ ಭಾರತದಲ್ಲಿ ಶೇ. 3ರಷ್ಟಿದೆ ಮತ್ತು 2030 ರ ವೇಳೆಗೆ ರೋಗವನ್ನು ತೊಡೆದುಹಾಕುವ ಗುರಿಯನ್ನು ಹೊಂದಿದೆ. ಆದರೆ ಕೋವಿಡ್‌ 19ನ  ಸದ್ಯದ ಸ್ಥಿತಿ ಭಾರತದ ಆರ್ಥಿಕ ಸ್ಥಿತಿಗೆ  ದೊಡ್ಡಮಟ್ಟದ  ಹೊಡೆತ ನೀಡಿದೆ.  ಇದರ ಬೆನ್ನಲ್ಲೇ ಮಲೇರಿಯಾ ಕೂಡ ಧಾವಿಸಿದಲ್ಲಿ ಭಾರತದ ಪ್ರಗತಿಗೆ ಇನ್ನಷ್ಟು  ಅಪಾಯ ತಂದೊಡ್ಡುವ  ಸ್ಥಿತಿ ಇದೆ. 

ಮೇ ತಿಂಗಳಿಂದಲೇ ಮಲೇರಿಯಾ ಆರಂಭವಾಗುತ್ತದೆ. ಮಾನ್ಸೂನ್‌ ನಂತರ ಜುಲೈ ಮತ್ತು ಆಗಸ್ಟ್‌ವರೆಗೂ ಮುಂದುವರೆಯುವ ಮಲೇರಿಯಾವನ್ನು ಈಗಲೇ ಕಟ್ಟಿಹಾಕಲು ಜಾಗೃತಿ ಅಭಿಯಾನ  ನಡೆಸಬೇಕು ಎಂದು  ಹೇಳಿರುವ ವಿಶ್ವ  ಆರೋಗ್ಯ ಸಂಸ್ಥೆ, ಈ ಬಗ್ಗೆ ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ಕೊರೊನಾ ವೈರಸ್‌ ಬೆನ್ನ ಹಿಂದೆಯೇ ಮಲೇರಿಯಾವು ದೇಶದ ಹೆಗಲೇರಲಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದೆ. 

ಕೋವಿಡ್‌ 19 ಮತ್ತು ಮಲೇರಿಯಾ ರೋಗ ಲಕ್ಷಣಗಳಲ್ಲಿನ ಹೋಲಿಕೆ  ಕುರಿತು ವಿಶ್ವ ಆರೋಗ್ಯ ಸಂಸ್ಥೆ ಗಮನ ಸೆಳೆದಿದೆ. ಅದೇ ರೀತಿ  ಜ್ವರ, ಆಯಾಸ ಸೇರಿದಂತೆ  ಇನ್ನಿತರೆ ಲಕ್ಷಣಗಳು ಕೋವಿಡ್‌ 19ರಂತೆಯೇ ಇದೆ ಎಂಬ ಗೊಂದಲಕ್ಕೊಳಗಾಗಿ ಆರಂಭಿಕ  ಹಂತದಲ್ಲೇ ಸವಾಲುಗಳಿಗೂ ಕಾರಣವಾಗಬಹುದು ಎಂದು ವೈದ್ಯಕೀಯ ನಿಯತಕಾಲಿಕ ಲ್ಯಾನ್ಸೆಟ್‌ ಕೂಡ  ಎಚ್ಚರಿಸಿದೆ.  

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತರುವ ಹೊತ್ತಿನಲ್ಲೇ  ಸಾಂಕ್ರಾಮಿಕ ರೋಗ ಮಲೇರಿಯಾವನ್ನು ಎದುರಿಸಲು ಆರೋಗ್ಯ ಯಂತ್ರೋಪಕರಣಗಳ  ಲಭ್ಯತೆ ಕುರಿತೂ ಗಮನಹರಿಸಬೇಕಿದೆ.ಇಲ್ಲವಾದಲ್ಲಿ ಕೊರೊನಾ ತಡೆಗಟ್ಟುವುದರಲ್ಲಿ  ಹೆಣಗಾಡುತ್ತಿರುವ ಸರ್ಕಾರ,  ಮಲೇರಿಯಾ ಪ್ರಕರಣಗಳನ್ನು ತಡೆಗಟ್ಟುವ ಸವಾಲು ಎದುರಿಸುವ ಅನಿವಾರ್ಯತೆ ಇದೆ ಎಂದು ಪುಣೆ ಮೂಲದ ಜಾಗತಿಕ  ಆರೋಗ್ಯ  ಬಯೋ  ಎಥಿಕ್ಸ್‌ ಹಾಗೂ ಆರೋಗ್ಯ ನೀತಿಯ ಸಂಶೋಧಕ ಅನಂತ್‌ ಭನ್‌ ಹೇಳುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮಲೇರಿಯಾ ಜಾಗತಿಕ ವರದಿ 2019 ರ ಪ್ರಕಾರ, ಭಾರತ, ಆಫ್ರಿಕಾ ಸೇರಿದಂತೆ ಒಟ್ಟು 19 ದೇಶಗಳು ಜಾಗತಿಕ ಮಲೇರಿಯಾ ಹೊರೆಯ ಪೈಕಿ ಶೇ. 85ರಷ್ಟು ಹೊತ್ತುಕೊಂಡಿವೆ.

ಇನ್ನು ದೇಶಾದ್ಯಂತ ಜಾರಿಯಲ್ಲಿರುವ 21 ದಿನಗಳ ಲಾಕ್‌ಡೌನ್, ಜನರನ್ನು ಮನೆಯೊಳಗೇ ಬಂಧಿಸಿಟ್ಟಿದೆ. ಹೀಗಾಗಿ ಮಲೇರಿಯಾ ವಿರೋಧಿ ಜಾಗೃತಿ ಅಭಿಯಾನವೂ ನಿಂತಂತಾಗಿದೆ. “ಅಗತ್ಯವಾದ ಜಾಗೃತಿ ಹರಡದಿದ್ದರೆ ಮತ್ತು ಜನರು ಗಮನ ಹರಿಸದಿದ್ದರೆ, ಪರಿಸ್ಥಿತಿಯನ್ನು ಮಲೇರಿಯಾ ಇನ್ನಷ್ಟು ಹದಗೆಡಿಸಬಹುದು” ಎಂದು ಪಿಜಿಐಎಂ ಆರ್‌ ಎನ್‌  ಗುಪ್ತಾ ಹೇಳುತ್ತಾರೆ. 

ಇಡೀ ದೇಶದ ಗಮನ ಕೋವಿಡ್‌ 19ರ ಮೇಲಿದೆ. ಹೀಗಾಗಿ ಮಲೇರಿಯಾ ನಿಯಂತ್ರಣ ಅಥವಾ ತಡೆಗಟ್ಟುವಲ್ಲಿ ಹಿನ್ನಡೆಯಾದಂತಾಗಿದೆ.  ಇದು ಕೇವಲ ಮಲೇರಿಯಾಕ್ಕೆ ಮಾತ್ರವಲ್ಲದೆ ಕ್ಷಯ ಮತ್ತು ಅತಿಸಾರ ನಿಯಂತ್ರಣಕ್ಕೂ ಅಥವಾ ರೋಗನಿರೋಧಕ ಶಕ್ತಿ ಸೇರಿದಂತೆ ಯಾವುದೇ ದಿನನಿತ್ಯದ ಕಾರ್ಯಕ್ರಮಕ್ಕೂ ಅನ್ವಯಿಸುತ್ತದೆ. 

ಇನ್ನು, ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಯ ಬಹುತೇಕ ಸಿಬ್ಬಂದಿಗಳು ಕೊರೊನಾ ವೈರಸ್‌ ತಡೆಗಟ್ಟುವುದರತ್ತಲೇ ಕಾರ್ಯೋನ್ಮುಖವಾಗಿದ್ದಾರೆ. ಈ ಚಟುವಟಿಕೆಗಳಲ್ಲೇ ಹೈರಾಣಾದ ಮೇಲೆ ಮಲೇರಿಯಾ ನಿಯಂತ್ರಣ, ಜಾಗೃತಿ ಅಭಿಯಾನವನ್ನು ಯಾರು ಮುಂದುವರೆಸುತ್ತಾರೆ? 

ಹಾಗೆಯೇ ಕೊರೊನಾ ವೈರಸ್‌ ಹಳ್ಳಿಗಳಿಗೂ ಹರಡಿದ್ದೇ ಆದಲ್ಲಿ ಮಲೇರಿಯಾವನ್ನು ಎದುರಿಸುವ ಸಾಮರ್ಥ್ಯ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ. ಹಳ್ಳಿಗಳಲ್ಲಿ  ಕೊರೊನಾ ವೈರಸ್‌ ಎಷ್ಟು ಪ್ರಮಾಣದಲ್ಲಿ  ಹರಡಲಿದೆ ಮತ್ತು ಈ ಹೊತ್ತಿನಲ್ಲಿ  ಎಷ್ಟು ಸಂಖ್ಯೆಯಲ್ಲಿ ಮಲೇರಿಯಾ ಪ್ರಕರಣಗಳು ದಾಖಲಾಗಬಹುದು ಎಂಬ  ಅಂದಾಜನ್ನು ಈ ಹಂತದಲ್ಲಿ ಲೆಕ್ಕಾಚಾರ ಮಾಡಲಾಗದಿದ್ದರೂ ಇದರ ಬಗ್ಗೆ  ಹೆಚ್ಚಿನ ಒತ್ತನ್ನು ನೀಡುವ ತುರ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ವೈರಸ್ ನಿಂದ ಹರಡುವ ಕಾಯಿಲೆಗಳ ನಿಯಂತ್ರಣ ಕಾರ್ಯಕ್ರಮವನ್ನು ಉಲ್ಲೇಖಿಸಿರುವ 2019-20ನೇ ಸಾಲಿನ ರಾಜ್ಯ ಆರ್ಥಿಕ ಸರ್ವೇ ಪ್ರಕಾರ,  2018ರಲ್ಲಿ ಡೆಂಗ್ಯೂನಿಂದ ನಾಲ್ವರು ಮೃತಪಟ್ಟಿದ್ದರೆ 4, 848 ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 13 ಮಂದಿ ಸಾವನ್ನಪ್ಪಿದ್ದು, 15, 586 ಪ್ರಕರಣಗಳು ದಾಖಲಾಗಿವೆ.

ಮಲೇರಿಯಾ, ಜಪಾನೀಸ್ ಎನ್ಸೆಫಾಲಿಟಿಸ್ ಪ್ರಕರಣಗಳು ಕಡಿಮೆಯಾಗಿವೆ. 2018ರಲ್ಲಿ 380, 2019ರಲ್ಲಿ 329 ಜೆಇ ಪ್ರಕರಣಗಳು ಕಂಡುಬಂದಿದ್ದರೆ  2018ರಲ್ಲಿ 5,289ರಷ್ಟಿದ್ದ ಮಲೇರಿಯಾ ಪ್ರಕರಣಗಳು 2019ರಲ್ಲಿ  3,206ಕ್ಕೆ ಇಳಿದಿದೆ ಎಂದು ದಾಖಲೆಯಿಂದ ತಿಳಿದು ಬಂದಿದೆ. 

SUPPORT THE FILE

Latest News

Related Posts