ಉಳುವವನೇ ಭೂ ಒಡೆಯ; 46 ವರ್ಷಗಳಾದರೂ ಇತ್ಯರ್ಥಗೊಂಡಿಲ್ಲ 4.75 ಲಕ್ಷ ಪ್ರಕರಣಗಳು

ಬೆಂಗಳೂರು; ರಾಜ್ಯದಲ್ಲಿ ದೇವರಾಜ ಅರಸು ಸರ್ಕಾರದ ಅವಧಿಯಲ್ಲೆ ಜಾರಿಗೊಂಡಿದ್ದ ಭೂ ಸುಧಾರಣೆ ಕಾಯ್ದೆಯ ಉಳುವವನೇ ಭೂ ಒಡೆಯ ಯೋಜನೆ ಅನುಷ್ಠಾನಗೊಂಡು 46 ವರ್ಷಗಳು ಪೂರ್ಣಗೊಂಡಿದ್ದರೂ ಯೋಜನೆ ಫಲಾನುಭವಿಗಳ ಪ್ರಕರಣಗಳು ಭೂ ನ್ಯಾಯ ಮಂಡಳಿಯಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಇತ್ಯರ್ಥಗೊಂಡಿಲ್ಲ. 

ಭೂ ನ್ಯಾಯ ಮಂಡಳಿಯಲ್ಲಿ ಇತ್ಯರ್ಥಕ್ಕಾಗಿ 4,75,801 ಪ್ರಕರಣಗಳು  ಬಾಕಿ ಇವೆ. ರಾಜ್ಯದ 4 ಪ್ರಾದೇಶಿಕ ವಿಭಾಗಗಳ ಪೈಕಿ ಬೆಳಗಾವಿ ವಿಭಾಗವೊಂದರಲ್ಲೇ 2,17,822 ಪ್ರಕರಣಗಳು ಇತ್ಯರ್ಥಗೊಳ್ಳಲು ಇನ್ನೂ ಬಾಕಿ ಇರುವುದು ದಾಖಲೆಯಿಂದ ತಿಳಿದು ಬಂದಿದೆ. 

ಮೈಸೂರಿನ ಕೆ ಆರ್‌ ನಗರ  ವಿಧಾನಸಭೆ ಸದಸ್ಯ ಸಾ ರಾ ಮಹೇಶ್‌ ಅವರು 2020ರ ಮಾರ್ಚ್  23ರಂದು ಸದನದಲ್ಲಿ ಕೇಳಿದ  ಪ್ರಶ್ನೆಗೆ ಉತ್ತರಿಸಿರುವ ಕಂದಾಯ ಸಚಿವ ಆರ್‌ ಅಶೋಕ್‌ ಅವರು 4  ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಕ್ಕಾಗಿ ಭೂ ನ್ಯಾಯಮಂಡಳಿಯಲ್ಲಿ ಬಾಕಿ ಇವೆ ಎಂದು ಮಾಹಿತಿ ಒದಗಿಸಿದ್ದಾರೆ. 

ಬೆಳಗಾವಿ ವಿಭಾಗದ ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿ 91,470 ಪ್ರಕರಣಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಮೈಸೂರು ವಿಭಾಗದಲ್ಲಿ 1,28,769, ಬೆಂಗಳೂರು ವಿಭಾಗದಲ್ಲಿ 86,940, ಕಲಬುರಗಿ ವಿಭಾಗದಲ್ಲಿ 42,270 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಮೈಸೂರು ವಿಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ  ಹೆಚ್ಚು ಎಂದರೆ 78,832  ಪ್ರಕರಣಗಳು ಇತ್ಯರ್ಥಕ್ಕೆ  ಬಾಕಿ ಇದ್ದರೆ, ಬೆಂಗಳೂರು ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 33,987, ಕಲಬುರಗಿ ವಿಭಾಗದ ಕಲಬುರಗಿ ಜಿಲ್ಲೆಯಲ್ಲಿ 11,741 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇರುವುದು ಕಂದಾಯ ದಾಖಲೆಯಿಂದ ಗೊತ್ತಾಗಿದೆ. 

ಮೈಸೂರು ಜಿಲ್ಲೆಯಲ್ಲಿ 16,454, ಬೆಂಗಳೂರು ನಗರ ಜಿಲ್ಲೆಯಲ್ಲಿ 17,702, ಹಾಸನ ಜಿಲ್ಲೆಯಲ್ಲಿ 12,364, ಬೆಳಗಾವಿ  ಜಿಲ್ಲೆಯೊಂದರಲ್ಲಿ 61,008 ಪ್ರಕರಣಗಳಿಗೆ  ಇನ್ನೂ ಮುಕ್ತಿ ಸಿಕ್ಕಿಲ್ಲ. 

ಸಾಮಾಜಿಕ ಪರಿವರ್ತನಾಶೀಲ ರಾಜಕಾರಣಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಾರಿಗೊಂಡಿದ್ದ ಉಳುವವನೇ ಭೂ ಒಡೆಯ ಯೋಜನೆ, ಭೂರಹಿತರು ಸ್ವಂತ ಭೂಮಿ ಹೊಂದುವ ಅವಕಾಶ ಕಲ್ಪಿಸಿದಂತಾಗಿತ್ತು. ಈ ಯೋಜನೆಗೆ ಅಂದಿನ ಭೂಮಾಲೀಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರೂ ಧೃತಿಗೆಡದ ದೇವರಾಜ ಅರಸು ಅವರು ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಕಟಿಬದ್ಧರಾಗಿದ್ದರು.

ದೇವರಾಜ ಅರಸು ಅವರ ನಂತರದ ಅನೇಕ  ವರ್ಷಗಳವರೆಗೆ ಕಾಂಗ್ರೆಸ್‌ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಉಳುವವನೇ ಭೂ ಒಡೆಯ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾಯಿತು.ಅದರಲ್ಲೂ ಮಲೆನಾಡು ಮತ್ತು ಕರಾವಳಿ ಭಾಗ ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿ ಮತ್ತು ಸಮರ್ಪಕವಾಗಿ ಅನುಷ್ಠಾನಗೊಳ್ಳಲೇ ಇಲ್ಲ.

ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಅರ್ಹ ಗೇಣಿದಾರರಿಗೆ ಭೂ ಒಡೆತನ ನೀಡಲು ಮುಂದಾಗಿದ್ದರು. ಆದರೆ ಆ ನಂತರ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರದ ಅವಧಿಯಲ್ಲಿ ಭೂಒಡೆತನ  ನೀಡಲು ಎದುರಾಗಿದ್ದ  ಕಾನೂನು ತೊಡಕುಗಳನ್ನು ನಿವಾರಿಸುವ ಗೋಜಿಗೆ ಹೋಗಿರಲಿಲ್ಲ.

the fil favicon

SUPPORT THE FILE

Latest News

Related Posts