ವಿತರಣೆಯಾದ 10,316 ಅಂಕಪಟ್ಟಿಗಳಿಗೆ ದಾಖಲೆಗಳೇ ಇಲ್ಲ; ಕಾನೂನು ವಿ ವಿ ಲೋಪ ಬಹಿರಂಗ

ಹುಬ್ಬಳ್ಳಿ; ಅಂಕಪಟ್ಟಿ ನಿರ್ವಹಣೆ ಮತ್ತು ಖಾಲಿ ಉತ್ತರ ಪತ್ರಿಕೆಗಳ ನಿರ್ವಹಣೆ  ಯಲ್ಲಿ ಹುಬ್ಬಳ್ಳಿಯಲ್ಲಿರುವ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಗಂಭೀರ ಲೋಪ ಎಸಗಿರುವುದು ಕಂಡು ಬಂದಿವೆ. ಕಾನೂನು ಮಹಾವಿದ್ಯಾಲಯಗಳಿಗೆ ವಿತರಣೆಯಾಗಿರುವ ಅಂಕಪಟ್ಟಿಗಳ ಲೆಕ್ಕದಲ್ಲಿ  ಭಾರೀ ಪ್ರಮಾಣದ ವ್ಯತ್ಯಾಸಗಳಾಗಿರುವುದು ಬಹಿರಂಗಗೊಂಡಿದೆ. 

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಬೆಳಗಾವಿ ಪ್ರಾಂತೀಯ ಇಲಾಖೆ ಅಧಿಕಾರಿಗಳು ೭ ವರ್ಷಗಳ ಅವಧಿ(2009-10 ರಿಂದ 2015-16) ವರೆಗೆ ನಡೆಸಿರುವ ಲೆಕ್ಕ ಪರಿಶೋಧನೆ ವೇಳೆಯಲ್ಲಿ ವಿಶ್ವವಿದ್ಯಾಲಯದ ಹಲವು ವಿಭಾಗಗಳಲ್ಲಿ ಗಂಭೀರ ಲೋಪಗಳನ್ನು ಪತ್ತೆ ಹಚ್ಚಿದ್ದಾರೆ. ಈ ವರದಿಗಳು ವಿಧಾನಸಭೆ ಅಧಿವೇಶನದಲ್ಲಿ ಮಂಡನೆಯಾಗಿದ್ದರೂ ಈ ಕುರಿತು ಕಾನೂನು, ಸಂಸದೀಯ ಸಚಿವ ಜೆ  ಮಾಧುಸ್ವಾಮಿ ಅವರು ಇದುವರೆಗೂ ತಲೆ ಎತ್ತಿಯೂ  ನೋಡಿಲ್ಲ. 

ಈ  ಪೈಕಿ ವ್ಯತ್ಯಾಸ ಕಂಡು ಬಂದಿರುವ ಒಟ್ಟು 10,316 ಅಂಕಪಟ್ಟಿಗಳ ಕುರಿತು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದಲ್ಲಿ ದಾಖಲೆಗಳೇ ಇಲ್ಲ ಎಂಬ ಸಂಗತಿಯನ್ನು ಸರ್ಕಾರಿ ಲೆಕ್ಕ ಪರಿಶೋಧಕರು ಹೊರಗೆಡವಿದ್ದಾರೆ. ಹಾಗೆಯೇ ಉತ್ತರ ಪತ್ರಿಕೆಗಳ ವಿತರಣೆಯಲ್ಲಿ ನ್ಯೂನತೆಗಳನ್ನು ಪತ್ತೆ ಹಚ್ಚಿದ್ದಾರೆ. ಕಾನೂನು ಕಾಲೇಜುಗಳಿಗೆ ವಿತರಿಸಿದ್ದ ಉತ್ತರ ಪತ್ರಿಕೆಗಳು ಕ್ರಮಬದ್ಧವಾಗಿರಲಿಲ್ಲ ಎಂಬ ಅಂಶವೂ ಹೊರಬಿದ್ದಿದೆ. ಅಂಕಪಟ್ಟಿ ಮತ್ತು ಉತ್ತರ ಪತ್ರಿಕೆಗಳ ವಿತರಣೆಯಲ್ಲಿನ ವ್ಯತ್ಯಾಸ ಮತ್ತು ನ್ಯೂನತೆಗಳನ್ನು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಅಧಿಕಾರಿಗಳು ಲೆಕ್ಕ ಪರಿಶೋಧಕರ ಎದುರು ಒಪ್ಪಿದ್ದಾರೆ. ಹೀಗಾಗಿ  ಕಾನೂನು ಮಹಾವಿದ್ಯಾಲಯಗಳಿಗೆ ವಿತರಿಸಿರುವ ಅಂಕಪಟ್ಟಿಗಳ ಲೆಕ್ಕವನ್ನು ಹಾಜರುಪಡಿಸಲು ಸರ್ಕಾರಿ ಲೆಕ್ಕ ಪರಿಶೋಧಕರು ವಿಶ್ವವಿದ್ಯಾಲಯಕ್ಕೆ ಸೂಚಿಸಿದ್ದಾರೆ.

2014ರ ಜೂನ್ ಮತ್ತು ಡಿಸೆಂಬರ್‌ ನಲ್ಲಿ ವಿವಿಧ ಕಾನೂನು ಕಾಲೇಜುಗಳಿಗೆ ವಿತರಿಸಿದ್ದ ಅಂಕಪಟ್ಟಿಗಳ ಆರಂಭಿಕ ಶುಲ್ಕದಲ್ಲಿ ವ್ಯತ್ಯಾಸ ಕಂಡು ಬಂದಿದೆ. 2014-15ನೇ ಸಾಲಿನಲ್ಲಿ ಅಂಕಪಟ್ಟಿ ಜಮಾ  ಮತ್ತು ವಿತರಣೆ ರಿಜಿಸ್ಟರ್‌ನಲ್ಲಿ ಆರಂಭಿಕ ಶುಲ್ಕ ಎಂದು 43,316 ರು. ದಾಖಲಿಸಲಾಗಿದೆ. ಆದರೆ ಇದೇ ರಿಜಿಸ್ಟರ್‌ನಲ್ಲಿ ಜೂನ್ 2014ರ  ಪರೀಕ್ಷಾ ಕಾರ್ಯಕ್ಕೆ ಚೆನ್ನೈ ಮೂಲದ ಟಿ ಆರ್‌ ಎಸ್‌ ಫಾರ್ಮ್ ಅಂಡ್‌ ಪ್ರೈವೈಟ್‌ ಲಿಮಿಟೆಡ್‌ ನಿಂದ 50,000 ಅಂಕ ಪಟ್ಟಿ ಖರೀದಿಸಿದೆ. ಅಂಕಪಟ್ಟಿಗಳ ಖರೀದಿ ಪ್ರಕ್ರಿಯೆ ನಡೆಸುವ ಮುನ್ನ ಸ್ನಾತಕ ಪೂರ್ವ(ಪದವಿ) ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 17,000 ಮತ್ತು ಉತ್ತೀರ್ಣರಾದ ಪದವಿ ವಿದ್ಯಾರ್ಥಿಗಳಿಗೆ 16,000 ಸೇರಿದಂತೆ ಒಟ್ಟು 33,000 ಆರಂಭಿಕ ಸ್ಟಾಕ್‌ ಎಂದು ದಾಖಲಿಸಿದೆ. ಸ್ಟಾಕ್‌ ರಿಜಿಸ್ಟರ್‌ನ್ನು ಪರಿಶೀಲಿಸಿರುವ ಲೆಕ್ಕ ಪರಿಶೋಧಕರು, 10,316 ಅಂಕಪಟ್ಟಿಗಳಿಗೆ ಸಂಬಂಧಿಸಿದಂತೆ ದಾಖಲೆಗಳು ಇಲ್ಲದಿರುವುದನ್ನು ಬೆಳಕಿಗೆ ತಂದಿದ್ದಾರೆ.

ಸ್ನಾತಕ ಪೂರ್ವ(ಪದವಿ) ಮತ್ತು ಸ್ನಾತಕೋತ್ತರ(ಎಲ್‌ಎಲ್‌ಎಂ) ಪದವಿ ಅಂಕ ಪಟ್ಟಿಗಳನ್ನು ವರ್ಗೀಕರಣ ಮಾಡದೆಯೇ ವಿತರಿಸಿರುವುದಕ್ಕೆ ಲೆಕ್ಕ ಪರಿಶೋಧಕರು ತಕರಾರು ಎತ್ತಿದ್ದಾರೆ. “೨೦೧೪-೧೫ನೇ ಸಾಲಿನ ಆರಂಭಿಕ ಶುಲ್ಕದಲ್ಲಿ ವ್ಯತ್ಯಾಸವಿದ್ದು, ಸ್ನಾತಕ ಪೂರ್ವ, ಸ್ನಾತಕೋತ್ತರ ಅಂಕ ಪಟ್ಟಿಗಳನ್ನು ವರ್ಗೀಕರಣ ಅನುಪಸ್ಥಿತಿಯಲ್ಲಿ ಹೇಗೆ 2014-15ನೇ ಸಾಲಿನಲ್ಲಿ ವಿವಿಧ ಮಹಾವಿದ್ಯಾಲಯಗಳಿಗೆ ವಿತರಿಸಲಾಯಿತು ಹಾಗೂ ಈ ವಿತರಣೆಯಲ್ಲಿ ಮಹಾವಿದ್ಯಾಲಯವಾರು ವರ್ಗೀಕರಣ ಲೆಕ್ಕವನ್ನು ಲೆಕ್ಕ ಪರಿಶೋಧನೆಗೆ ಹಾಜರುಪಡಿಸಬೇಕು,” ಸೂಚಿಸಿರುವುದು ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ. 

ಅಂಕ ಪಟ್ಟಿಗಳ ವಿತರಣೆಗೆ ಸಂಬಂಧಿಸಿದಂತೆ ಸೂಕ್ತ ಸ್ಪಷ್ಟೀಕರಣದೊಂದಿಗೆ ದಾಖಲೆ ಒದಗಿಸುವವರೆಗೆ 2,06,320 ರು.ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿದ್ದಾರೆ. 

ಅದೇ ರೀತಿ 2014-15ನೇ ಸಾಲಿನಲ್ಲಿ ಖಾಲಿ ಉತ್ತರ ಪತ್ರಿಕೆಗಳ ವಿತರಣೆಯಲ್ಲಿಯೂ ಹಲವು ನ್ಯೂನತೆಗಳನ್ನು ಲೆಕ್ಕ ಪರಿಶೋಧಕರು ಬೆಳಕಿಗೆ ತಂದಿದ್ದಾರೆ.  ಸೇಡಂನ ಜೆಎನ್‌ಆರ್‌  ಕಾನೂನು ಕಾಲೇಜು, ಚಿಕ್ಕಬಳ್ಳಾಪುರದ ಕೆಂಪೇಗೌಡ ಲಾ ಕಾಲೇಜು, ತುಮಕೂರಿನ ಶ್ರೀ  ಕೃಷ್ಣ ಇನ್ಸಿಟಿಟ್ಯೂಟ್‌  ಆಫ್‌ ಲಾ ಕಾಲೇಜಿಗೆ ವಿತರಿಸಿರುವ  ಉತ್ತರ ಪತ್ರಿಕೆಗಳಲ್ಲಿ ಲೋಪಗಳಾಗಿರುವುದು  ವರದಿಯಿಂದ ಗೊತ್ತಾಗಿದೆ.  ಸೇಡಂನ ಜೆಎನ್‌ಆರ್‌ ಲಡ್ಡಾ  ಲಾ ಕಾಲೇಜಿಗೆ 2೦೦ ಉತ್ತರ ಪತ್ರಿಕೆಗಳನ್ನು (ಕ್ರ ಸಂ 774801 ರಿಂದ 775೦೦೦)ವಿತರಿಸಲಾಗಿದೆ. ವಿತರಣೆಯ ರಿಜಿಸ್ಟರ್‌ನಲ್ಲಿ ಕೊಪ್ಪಳದ ಡಿಬಿಎಚ್‌ಪಿಎಸ್‌  ಲಾ ಕಾಲೇಜಿಗೆ 1,೦೦೦ ಉತ್ತರ ಪತ್ರಿಕೆಗಳನ್ನು(ಕ್ರ ಸಂ 875001 ರಿಂದ 876000)  ವಿತರಿಸಲಾಗಿದೆ  ಎಂದು ನಮೂದಿಸಲಾಗಿದೆ. ಆದರೆ ಕ್ರಮ  ಸಂಖ್ಯೆ 775000ರಿಂದ 875001ವರೆಗಿನ ಉತ್ತರ ಪತ್ರಿಕೆಗಳನ್ನು ಯಾವ  ಮಹಾವಿದ್ಯಾಲಯಕ್ಕೆ ವಿತರಿಸಲಾಗಿದೆ ಎಂಬ ಬಗ್ಗೆ  ರಿಜಿಸ್ಟರ್‌ನಲ್ಲಿ  ದಾಖಲಿಸಿಲ್ಲ ಎಂಬ ಅಂಶ  ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ. 

ಅಲ್ಲದೆ, ಚಿಕ್ಕಬಳ್ಳಾಪುರದ ಕೆಂಪೇಗೌಡ ಲಾ ಕಾಲೇಜಿಗೆ 1,400) ಖಾಲಿ ಉತ್ತರ ಪತ್ರಿಕೆಗಳನ್ನು(ಕ್ರ  ಸಂ 987801ರಿಂದ 988200)ವರೆಗೆ ಸರಬರಾಜು ಮಾಡಲಾಗಿತ್ತು. ಇದೇ ಸ್ಟಾಕ್‌ ರಿಜಿಸ್ಟರ್‌ ಕ್ರಮ ಸಂಖ್ಯೆ 37  ಕೆಜಿಎಫ್‌  ಕಾಲೇಜಿಗೆ ಸರಬರಾಜು ಮಾಡಿದ್ದ ಉತ್ತರ ಪತ್ರಿಕೆಯ ಅಂತಿಮ ಸಂಖ್ಯೆ 992000 ನಂತರ ಆರಂಭಿಕ ಕ್ರಮ  ಸಂಖ್ಯೆ 992001ನ್ನು  ತುಮಕೂರಿನ ಶ್ರೀ  ಕೃಷ್ಣ ಇನ್ಸಿಟಿಟ್ಯೂಟ್‌  ಆಫ್‌ ಲಾ ಕಾಲೇಜಿಗೆ  ಪೂರೈಸಿದ ದಾಖಲೆ  ಎಂದು ನಮೂದಿಸಿದೆ. ಚಿಕ್ಕಬಳ್ಳಾಪುರದ ಕೆಂಪೇಗೌಡ ಲಾ ಕಾಲೇಜಿಗೆ  ಸರಬರಾಜಾಗಿದ್ದ  ಉತ್ತರ ಪತ್ರಿಕೆಯ ಕ್ರಮ ಸಂಖ್ಯೆ ಅನುಕ್ರಮವಾಗಿರದ ಕುರಿತು  ಲೆಕ್ಕ ಪರಿಶೋಧಕರು ಆಕ್ಷೇಪ ಎತ್ತಿರುವುದು ವರದಿಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts