ಬೆಂಗಳೂರು;ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಜಾರಿಯಲ್ಲಿರುವ ಹೊರಗುತ್ತಿಗೆ ಮತ್ತು ಗುತ್ತಿಗೆ ಪದ್ಧತಿಯಿಂದಾಗಿ ಖಾಯಂ ನೌಕರರು ಕೆಲಸವನ್ನೇ ಮಾಡುತ್ತಿಲ್ಲ. ಹೊರಗುತ್ತಿಗೆಯಿಂದಾಗಿ ಕೆಲಸವನ್ನು ಮಾಡದೇ ಇರುವ ಖಾಯಂ ನೌಕರರೇ ಬಾಸ್ ರೀತಿ ವರ್ತಿಸುತ್ತಿದ್ದಾರೆ. ಇಂತಹದೊಂದು ಸತ್ಯವನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯೇ ಹೊರಗೆಡವಿದ್ದಾರೆ.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಗುತ್ತಿಗೆ ನೌಕರರ ಸೇವಾ ಭದ್ರತೆ ಕುರಿತು ಕರ್ನಾಟಕ ವಿಧಾನಪರಿಷತ್ತಿನ ಅರ್ಜಿಗಳ ಸಮಿತಿ ಇತ್ತೀಚೆಗೆ ನಡೆಸಿರುವ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಕಾಲೇಜಿನ ಒಳಗುಟ್ಟನ್ನು ಬಯಲು ಮಾಡಿದ್ದಾರೆ. ಸಭೆಯ ನಡವಳಿ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಹೊರಗುತ್ತಿಗೆಯವರು ಬಂದ ಮೇಲೆ ಖಾಯಂ ನೌಕರರು ಕೆಲಸ ಮಾಡುವುದಿಲ್ಲ. ಹೊರಗುತ್ತಿಗೆ ನೌಕರರೇ ಹೆಚ್ಚಿನ ಕೆಲಸ ಮಾಡುತ್ತಾರೆ. ಆದರೆ ಅವರ ಮೇಲೆ ಯಾವುದೇ ಹೊಣೆಗಾರಿಕೆಗಳು ಇರುವುದಿಲ್ಲ. ತಪ್ಪುಗಳು ಕಂಡು ಬಂದಲ್ಲಿ ಮಾತ್ರ ಏಜೆನ್ಸಿಯವರಿಗೆ ಹೇಳಿ ಕೆಲಸದಿಂದ ತೆಗೆದುಹಾಕುತ್ತೇವೆ,’ ಎಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉತ್ತರಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.
ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸೇರಿದಂತೆ ವಿವಿ ವ್ಯಾಪ್ತಿಯಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿನ ಹೊರಗುತ್ತಿಗೆ ಮತ್ತು ಗುತ್ತಿಗೆ ಪದ್ಧತಿ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಅವರು ಈವರೆವಿಗೂ ಗಮನಹರಿಸಿಲ್ಲ ಎಂದು ತಿಳಿದು ಬಂದಿದೆ.
ಅದೇ ರೀತಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಬೋಧಕರ ವಿಭಾಗದಲ್ಲಷ್ಟೇ ಖಾಯಂ ನೌಕರರಿದ್ದಾರೆಯೇ ಹೊರತು ಬೋಧಕೇತರ ವಿಭಾಗದಲ್ಲಿ ಇಲ್ಲ. ಆಡಳಿತ, ವ್ಯವಸ್ಥಾಪನೆ, ಲೆಕ್ಕ ಶಾಖೆ, ಉಗ್ರಾಣ ಶಾಖೆಗಳಲ್ಲಿಯೂ ಖಾಯಂ ಸಿಬ್ಬಂದಿ ಇಲ್ಲ ಎಂಬ ಸಂಗತಿ ನಡವಳಿಯಿಂದ ತಿಳಿದು ಬಂದಿದೆ.
ಈ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಸಿರುವ ಅರ್ಜಿಗಳ ಸಮಿತಿ ಸದಸ್ಯರು ವೈದ್ಯಕೀಯ ಶಿಕ್ಷಣ ಮತ್ತು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡಿರುವುದು ಗೊತ್ತಾಗಿದೆ.
ಬೋಧಕ ಸಿಬ್ಬಂದಿಯನ್ನು ಮಾತ್ರ ಖಾಯಂ ಅಗಿ ತೆಗೆದುಕೊಳ್ಳುತ್ತಿರುವ ವೈದ್ಯಕೀಯ ಕಾಲೇಜುಗಳು ಉಳಿದ ಹುದ್ದೆಗಳನ್ನು ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುತ್ತಿವೆ. ಆದರೆ ಈ ನೌಕರರಿಗೆ ಯಾವುದೇ ಹೊಣೆಗಾರಿಕೆಯಾಗಲೀ, ಜವಾಬ್ದಾರಿಯಾಗಲಿ ನಿಗದಿಪಡಿಸಿಲ್ಲ.
ಹೊರಗುತ್ತಿಗೆ ಪದ್ಧತಿಯಿಂದಾಗಿ ಸರ್ಕಾರಕ್ಕೆ ಹಣದ ಉಳಿತಾಯವಾಗುತ್ತಿದೆ ಎನ್ನಬಹುದಾಗಿದ್ದರೂ ಯಾವೊಬ್ಬ ಗುತ್ತಿಗೆ ನೌಕರನ ಮೇಲೆ ಹೊಣೆಗಾರಿಕೆ ನಿಗದಿಪಡಿಸಿಲ್ಲ. ಒಂದು ವೇಳೆ ಕರ್ತವ್ಯಲೋಪವೆಸಗುವ ಗುತ್ತಿಗೆ ನೌಕರರ ಮೇಲೆ ಸಿಸಿಎ ನಿಯಮಾವಳಿಗಳ ಪ್ರಕಾರ ಯಾವುದೇ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂಬುದನ್ನು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಒಪ್ಪಿಕೊಂಡಿರುವುದು ತಿಳಿದು ಬಂದಿದೆ.
ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ನೇಮಕದಲ್ಲೂ ಗುತ್ತಿಗೆ ನೇಮಕಾತಿ ಎಗ್ಗಿಲ್ಲದೆ ಮುಂದುವರೆದಿದೆ ಎಂದು ಗಮನ ಸೆಳೆದಿರುವ ಸಮಿತಿಯ ಸದಸ್ಯ ಪಿ ಆರ್ ರಮೇಶ್, ಮಂಜೂರಾದ ಹುದ್ದೆಯನ್ನು ಖಾಯಂ ಹುದ್ದೆಗೆ ಪರಿವರ್ತಿಸಲು ಇಲಾಖೆಗಳಲ್ಲಿ ಸರಿಯಾದ ಕ್ರಮಗಳೇ ಇಲ್ಲ ಎಂಬುದನ್ನು ಸಭೆಯಲ್ಲಿ ಹೊರಗೆಡವಿದ್ದಾರೆ.
ಸರಿಯಾದ ಕ್ರಮಗಳಿಲ್ಲದ ಕಾರಣ ಬಹಳ ಕಡಿಮೆ ಅವಧಿಗೆ ಗುತ್ತಿಗೆ ಪದ್ಧತಿಗೆ ಮೊರೆ ಹೋಗುತ್ತಿರುವ ವಿಶ್ವವಿದ್ಯಾಲಯಗಳು ಹಣ ಉಳಿಸುವುದಕ್ಕೆ ಹೊರಟಿದ್ದಾರೆ ಎಂಬ ಆಕ್ಷೇಪಗಳು ಸಭೆಯಲ್ಲಿ ಕೇಳಿ ಬಂದಿರುವುದು ನಡವಳಿಯಿಂದ ತಿಳಿದು ಬಂದಿದೆ. ಹುದ್ದೆಗಳನ್ನು ಖಾಯಂಗೊಳಿಸಿದರೆ 50,000 ರು.ಗಳಾಗುತ್ತದೆ. ಅದೇ ಹುದ್ದೆಯನ್ನು ಹೊರಗುತ್ತಿಗೆ ಮಾಡಿದರೆ 25,000 ರು.ಗಳಾಗುತ್ತದೆ.
ಉಳಿತಾಯದ ಹೆಸರಿನಲ್ಲಿ ಗುತ್ತಿಗೆ ಪದ್ಧತಿಯನ್ನು ಮುಂದುವರೆಸಿಕೊಂಡು ಬರುತ್ತಿರುವ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವೂ ಸೇರಿದಂತೆ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಜವಾಬ್ದಾರಿ ಮತ್ತು ಹೊಣೆಗಾರಿಕೆ ಇಲ್ಲದೆಯೇ ವರ್ತಿಸುತ್ತಿವೆ ಎಂಬ ಅಂಶ ನಡವಳಿಯಿಂದ ಗೊತ್ತಾಗಿದೆ.
ಗುತ್ತಿಗೆ ಪದ್ಧತಿ ಕುರಿತು ಆರ್ಥಿಕ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಆಡಳಿತದಲ್ಲಿ ದಕ್ಷತೆ ಕುರಿತು ಸೊಲ್ಲೆತ್ತಿಲ್ಲ. ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ‘ಡಿ’ಗ್ರೂಪ್ ನೌಕರರ ದಕ್ಷತೆ ಬಗ್ಗೆ ಮಾತನಾಡಿದ್ದಾರೆಯೇ ಹೊರತು ಗ್ರೂಪ್ ಸಿ ಸೇರಿದಂತೆ ಇನ್ನಿತರೆ ಸ್ತರದ ಅಧಿಕಾರಿ, ನೌಕರರ ದಕ್ಷತೆಯನ್ನು ಒರೆಗೆ ಹಚ್ಚಿಲ್ಲ.
ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪ್ರಕಾರ ಹೊರಗುತ್ತಿಗೆ ಆಧಾರದ ಮೇಲೆ ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ ಎಂಬುದರ ಮೇಲೆ ಪ್ರತಿ ವರ್ಷ 2.6 ಕೋಟಿ ರು.ಖರ್ಚಾಗುತ್ತಿದೆ. ಒಂದು ವೇಳೆ ಅವರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡರೆ 4.31 ಕೋಟಿ ರು.ಖರ್ಚಾಗುತ್ತದೆ. ಸುಮಾರು 1.7 ಕೋಟಿ ರು.ವಾರ್ಷಿಕವಾಗಿ ಹೆಚ್ಚುವರಿಯಾಗಿ ಖರ್ಚಾಗುತ್ತಿದೆ ಎಂಬ ಮಾಹಿತಿ ನಡವಳಿಯಿಂದ ಗೊತ್ತಾಗಿದೆ.
ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಗುತ್ತಿಗೆ ಆಧಾರದ ನೇಮಕದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆಯಾದರೂ ಇದಕ್ಕೊಂದು ತಾರ್ಕಿಕ ಅಂತ್ಯ ಈವರೆವಿಗೂ ದೊರೆತಿಲ್ಲ. ಕುಲಪತಿ, ಕುಲಸಚಿವರು ಸೇರಿದಂತೆ ವಿಶ್ವವಿದ್ಯಾಲಯದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸಂಬಂಧಿಕರೇ ಗುತ್ತಿಗೆ ಆಧಾರದ ಮೇಲೆ ನೇಮಕವಾಗುತ್ತಿದ್ದಾರೆ ಎಂಬ ಆರೋಪಗಳಿದ್ದರೂ ಈವರೆವಿಗೂ ಸರ್ಕಾರ ತನಿಖೆಗೆ ಕ್ರಮಕೈಗೊಂಡಿಲ್ಲ.