ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಅವ್ಯವಹಾರ; ‘ದಿ ಫೈಲ್‌’ ವರದಿಗೆ ಸ್ಪಂದಿಸಿದ ಸಚಿವ ಸುರೇಶ್‌ಕುಮಾರ್‌

ಬೆಂಗಳೂರು; ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಪರೀಕ್ಷೆ ಮತ್ತು ಮೌಲ್ಯಮಾಪನ ಚಟುವಟಿಕೆ  ಸೇರಿದಂತೆ ಇನ್ನಿತರೆ  ಚಟುವಟಿಕೆಗಳಲ್ಲಿ ನಡೆದಿರುವ ಅಕ್ರಮಗಳನ್ನು ಹೊರಗೆಡವಿದ್ದ ‘ದಿ ಫೈಲ್‌’ ವರದಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ಸ್ಪಂದಿಸಿದ್ದಾರೆ. 

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಇಲಾಖೆಯ ಅಧಿಕಾರಿಗಳು 2017-18 ಮತ್ತು 2018-19ನೇ ಸಾಲಿಗೆ ಸಂಬಂಧಿಸಿದಂತೆ ಪ್ರೌಢಶಿಕ್ಷಣ ಮಂಡಳಿಯ ಚಟುವಟಿಕೆಗಳನ್ನು ಲೆಕ್ಕ ಪರಿಶೋಧನೆಗೆ ಒಳಪಡಿಸಿದ್ದರು.  ಇದನ್ನಾಧರಿಸಿ ‘ದಿ ಫೈಲ್‌’ 2 ವರದಿಗಳನ್ನು ಪ್ರಕಟಿಸಿತ್ತು. 

ವರದಿ ಪ್ರಕಟವಾದ 24 ಗಂಟೆಯೊಳಗೆ ಸಚಿವ ಎಸ್‌  ಸುರೇಶ್‌ಕುಮಾರ್‌ ಅವರು ಸ್ಪಂದಿಸಿದ್ದಾರಲ್ಲದೆ, ‘ವರದಿಯನ್ನು ಅಧ್ಯಯನ ಮಾಡಿ ಅಗತ್ಯ ಕ್ರಮ ವಹಿಸುತ್ತೇನೆ,’ ಎಂದು ಪ್ರತಿಕ್ರಿಯಿಸಿದ್ದಾರೆ. ಮಂಡಳಿಯ ಆಡಳಿತಾತ್ಮಕ  ನಿರ್ಧಾರಗಳಲ್ಲಿನ ಹಲವು ಲೋಪಗಳ ಕುರಿತು ಗಮನ ಹರಿಸಲು ಮುಂದಾಗಿರುವ ಸಚಿವ ಸುರೇಶ್‌ಕುಮಾರ್‌  ಅವರಿಗೆ ‘ದಿ ಫೈಲ್‌’ ಧನ್ಯವಾದಗಳನ್ನು ತಿಳಿಸುತ್ತದೆ. 

ಎಸ್‌ಎಸ್‌ಎಲ್‌ಸಿ  ವಾರ್ಷಿಕ ಪರೀಕ್ಷೆ ಚಟುವಟಿಕೆಗಳಿಗೆ ಬಿಡುಗಡೆಯಾಗಿರುವ 4 ಕೋಟಿ ರು.ಗೂ ಅಧಿಕ ಮೊತ್ತದ ಅನುದಾನ ಬಳಕೆ ಪ್ರಮಾಣ ಪತ್ರ ಸಲ್ಲಿಸದಿರುವುದು, ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಹರಾಜು ಪ್ರಕ್ರಿಯೆ, ಮೌಲ್ಯಮಾಪಕರಿಗೆ ನೀಡಿರುವ ಹೆಚ್ಚುವರಿ ಸಂಭಾವನೆ ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳು  ಹೊರಬಿದ್ದಿದ್ದವು. 

2017-18 ಮತ್ತು 2018-19ನೇ ಸಾಲಿಗೆ ಸಂಬಂಧಿಸಿದ ಲೆಕ್ಕ ಪರಿಶೋಧನೆ ವರದಿಗಳು ಮಂಡಳಿ ಚಟುವಟಿಕೆಗಳನ್ನು ಒರೆಗೆ ಹಚ್ಚುವ ಮೂಲಕ ತೆರೆಮರೆಯಲ್ಲಿ ನಡೆಯುತ್ತಿರುವ  ಅಕ್ರಮಗಳು ಮತ್ತು ಆಡಳಿತ ನಿರ್ಲಕ್ಷ್ಯವನ್ನು ಹೊರಗೆಳೆದಿತ್ತು. 

2018 ಮತ್ತು 2019ರ ಮಾರ್ಚ್  ಮತ್ತು ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ದಿನಗಳಂದು ಪರಿಶೀಲಿಸುವ ಉದ್ದೇಶಕ್ಕೆ 34  ಜಿಲ್ಲಾ ಉಪ ನಿರ್ದೇಶಕರುಗಳಿಗೆ ಇಂಧನ ಸೇರಿದಂತೆ ಇನ್ನಿತರೆ ವೆಚ್ಚವೆಂದು ಒಟ್ಟು 1.36 ಕೋಟಿ ರು.  ಬಿಡುಗಡೆಯಾಗಿತ್ತು. ಈ ಪೈಕಿ ಬಳಕೆ ಮಾಡಿ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಬಹುತೇಕ ಜಿಲ್ಲಾ ಉಪನಿರ್ದೇಶಕರುಗಳು ಮಂಡಳಿಗೆ ಹಿಂತಿರುಗಿಸಿಲ್ಲ.  ಅಲ್ಲದೆ ಇಲಾಖೆ ಅಧಿಕಾರಿಗಳಿಗೆ ಬಿಡುಗಡೆಯಾಗಿರುವ ಹಣಕ್ಕೆ ವೆಚ್ಚದ  ವಿವರಗಳೇ ಇಲ್ಲ  ಎಂಬ ಅಂಶವನ್ನು  ಲೆಕ್ಕ ಪರಿಶೋಧನೆ ಹೊರಗೆಡವಿತ್ತು. 

ಅದೇ ರೀತಿ 2018ರ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿಯೂ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ  ಖರ್ಚಾಗದೇ ಬಾಕಿ ಉಳಿದಿದ್ದ  ಒಟ್ಟು 7 ಲಕ್ಷ ರು.ಗಳನ್ನು ಮಂಡಳಿಗೆ ಮರಳಿಸಿಲ್ಲ ಎಂಬುದನ್ನು ಹೊರಗೆಡವಿದ್ದ ಲೆಕ್ಕಪರಿಶೋಧಕರು, ‘ನಿಗದಿತ ಸಮಯದಲ್ಲಿ ಮಂಡಳಿಗೆ ಬರಬೇಕಾದ ಹಣವು ಇದುವರೆಗೂ  ಮಂಡಳಿಗೆ  ಸಲ್ಲಿಕೆಯಾಗದಿರುವುದು ಆಡಳಿತದಲ್ಲಿನ ನಿರ್ಲಕ್ಷ್ಯತೆ ತೋರುತ್ತದೆ,’ ಎಂದು ವರದಿಯಲ್ಲಿ ಅಭಿಪ್ರಾಯಿಸಿದ್ದರು. 

2017-18ನೇ ಸಾಲಿನ ಪ್ರಶ್ನೆಪತ್ರಿಕೆ ಮುದ್ರಣ, ಸರಬರಾಜು (ಗೌಪ್ಯ) ಬಾಬ್ತಿಗೆ  ಸಂಬಂಧಿಸಿದಂತೆ ಮಂಡಳಿ  ಒಟ್ಟು 3.11  ಕೋಟಿ  ರು.ಪಾವತಿಸಿತ್ತು. ಇದಕ್ಕೆ ಸಂಬಂಧಿಸಿದ ಪಾವತಿ ವೋಚರ್ಸ್‌ ಹಾಗೂ ಪೂರಕ ದಾಖಲೆಗಳನ್ನು ಲೆಕ್ಕ ಪರಿಶೋಧನೆಯ ಪರಿಶೀಲನೆಗೆ ಮಂಡಳಿ ಹಾಜರುಪಡಿಸಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದರು. 

ಮೌಲ್ಯಮಾಪಕರ ಪ್ರಯಾಣ ದಿನಚರಿಯೂ ಇಲ್ಲ, ಹಾಜರಾತಿ ಪತ್ರವೂ ಇಲ್ಲ; ಪ್ರೌಢಶಿಕ್ಷಣ ಮಂಡಳಿಯ ‘ಬಿಲ್ವಿದ್ಯೆ’ ಹೊರಗೆಡವಿದ್ದ ಲೆಕ್ಕಪರಿಶೋಧಕರು ಮೌಲ್ಯಮಾಪಕರಿಗೆ 2017-18ನೇ ಸಾಲಿನಲ್ಲಿ ಪಾವತಿಯಾಗಿರುವ ಪ್ರಯಾಣ ಭತ್ಯೆ, ದಿನಭತ್ಯೆ ಮತ್ತು  ಸಂಭಾವನೆ ಪಾವತಿಗಳ ಬಿಲ್‌ಗಳಲ್ಲಿ ಹಲವು ನ್ಯೂನತೆಗಳನ್ನು ಪತ್ತೆ ಹಚ್ಚಿದ್ದರು. 

the fil favicon

SUPPORT THE FILE

Latest News

Related Posts