ಪ್ರಯಾಣ ದಿನಚರಿಯೂ ಇಲ್ಲ, ಹಾಜರಾತಿ ಪತ್ರವೂ ಇಲ್ಲ; ಪ್ರೌಢಶಿಕ್ಷಣ ಮಂಡಳಿಯ ‘ಬಿಲ್ವಿದ್ಯೆ’ ಬಹಿರಂಗ

ಬೆಂಗಳೂರು; ಎಸ್‌ಎಸ್‌ಎಲ್‌ಸಿ ಪರೀಕ್ಷೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಮುಖವಾಡವನ್ನು ಕಳಚಿರುವ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನ ಇಲಾಖೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮತ್ತು ಗೌಪ್ಯತಾ ವೆಚ್ಚದಲ್ಲಿ ಆಗಿರುವ ಲೋಪ ಹಾಗೂ  ಮೌಲ್ಯಮಾಪಕರ ಬಿಲ್ವಿದ್ಯೆಯನ್ನು ಬಹಿರಂಗಗೊಳಿಸಿದೆ. 

2017-18 ಮತ್ತು 2018-19 ನೇ ಸಾಲಿನ ಪರೀಕ್ಷೆಗಳ ಮೌಲ್ಯಮಾಪನ ಕ್ಯಾಂಪ್‌ಗಳ ಬಿಲ್‌ಗಳು ನಿಯಮಬಾಹಿರವಾಗಿ ಮೌಲ್ಯಮಾಪಕರಿಗೆ ಪಾವತಿಯಾಗಿದೆ ಎಂಬ ಅಂಶವನ್ನು ಲೆಕ್ಕಪರಿಶೋಧನೆ ವರದಿ ಹೊರಗೆಡವಿದೆ. ನಿಗದಿಯಂತೆ ಪ್ರತಿ ಶಿಕ್ಷಕರಿಗೆ ಪ್ರತಿ  ದಿನ 20 ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಿರ್ವಹಿಸಬೇಕು. ಆದರೆ ಉತ್ತರ ಪತ್ರಿಕೆಗಳು ಮತ್ತು ಶಿಕ್ಷಕರ ಅನುಪಾತದಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ. 

ಉದಾಹರಣೆಗೆ 1;20 ಇರಬೇಕಾಗಿದ್ದ ಕಡೆ ಕೆಲವೊಂದು ಬಿಲ್‌ಗಳಲ್ಲಿ 1;13 ಮತ್ತು 1;15 ಅನುಪಾತದಲ್ಲಿ ಬಿಲ್‌ಗಳನ್ನು ಕ್ಲೈಮ್‌ ಮಾಡಲಾಗಿದೆ. ಕೆಲವು ಬಿಲ್‌ಗಳ ಪಾವತಿಯಲ್ಲಿ ಮೂಲ ಬಿಲ್‌ಗಳು ಇಲ್ಲದೆ ಜೆರಾಕ್ಸ್‌ ಬಿಲ್‌ಗಳ ಮೇಲೆ ಪಾವತಿಸಿರುವುದು ಲೆಕ್ಕ ತನಿಖೆಯಲ್ಲಿ ಕಂಡು ಬಂದಿದೆ. 

ಇದಕ್ಕೆ ಆಕ್ಷೇಪ ಎತ್ತಿರುವ ಲೆಕ್ಕ ಪರಿಶೋಧಕರು ‘ ಬಿಲ್‌ಗಳನ್ನು ಪಾವತಿಸುವಾಗ ನಿಯಮಗಳು, ದರಗಳು ಮತ್ತು ಕಾಯ್ದೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದರೆ ಪಾವತಿದಾರರನ್ನೇ ಹೊಣೆಗಾರರನ್ನಾಗಿಸಿ  ವಸೂಲು ಮಾಡಬೇಕು,’ ಎಂದು ಲೆಕ್ಕ ಪರಿಶೋಧಕರು ಸೂಚಿಸಿದ್ದಾರೆ. 

ಈ ಅವಧಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಪಿ ಸಿ ಜಾಫರ್‌, ಡಾ ಎಂ ಒ ರೇಜು, ಡಾ ಕೆ ಜಿ ಜಗದೀಶ್ ಅವರು ಮಂಡಳಿಯ ಅಧ್ಯಕ್ಷರಾಗಿದ್ದರೆ, ವಿ ಸುಮಂಗಲ ಅವರು ಮಂಡಳಿಯ ನಿರ್ದೇಶಕರಾಗಿದ್ದರು. 

ಮೌಲ್ಯಮಾಪಕರಿಗೆ 2017-18ನೇ ಸಾಲಿನಲ್ಲಿ ಪಾವತಿಯಾಗಿರುವ ಪ್ರಯಾಣ ಭತ್ಯೆ, ದಿನಭತ್ಯೆ ಮತ್ತು  ಸಂಭಾವನೆ ಪಾವತಿಗಳ ಬಿಲ್‌ಗಳಲ್ಲಿ ಹಲವು ನ್ಯೂನತೆಗಳನ್ನು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ. ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ಅಧಿಕಾರಿಗಳು, ನೌಕರರುಗಳಿಗೆ ಪ್ರಯಾಣ ಭತ್ಯೆ, ದಿನಭತ್ಯೆ ಮತ್ತು ಸಂಭಾವನೆ ಪಾವತಿಯ ಕ್ಲೈಮ್‌ ಮಾಡಿರುವ ಕಿ.ಮೀ.ದೂರಕ್ಕೆ ಸಂಬಂಧಿಸಿದಂತೆ ನಿಗದಿತ ದೂರ,  ವಾಸ್ತವಾಂಶದ ಬಗ್ಗೆ ತಿಳಿಯುವಲ್ಲಿ ಲೆಕ್ಕ ಪರಿಶೋಧಕರಿಗೆ  ಸಾಧ್ಯವಾಗದಿರುವುದು ವರದಿಯಿಂದ ತಿಳಿದು ಬಂದಿದೆ. 

ಕೆಸಿಎಸ್‌ಆರ್‌ ನಿಯಮಗಳ ಪ್ರಕಾರ ದಿನಭತ್ಯೆ ನೀಡದ ಮಂಡಳಿ ಒಂದು ಪೂರ್ತಿ ದಿನಕ್ಕೆ ದಿನಭತ್ಯೆ ಲೆಕ್ಕಚಾರವನ್ನು ಮಾಡಿಲ್ಲ. ಒಂದು  ದಿನಭತ್ಯೆಗೆ 24 ಗಂಟೆಗಳು ಮತ್ತು ಅರ್ಧ ದಿನ ಭತ್ಯೆಗೆ 12 ಗಂಟೆಗಳು ಕಳೆದಿರಬೇಕು. ಆದರೆ ಪರೀಕ್ಷಾ ಮಂಡಳಿಯ ಆದೇಶದ ಪ್ರಕಾರ ಕ್ಲೈಮ್‌ ಮಾಡುತ್ತಿದ್ದು ಆ ಆದೇಶಗಳಲ್ಲಿ ದಿನಭತ್ಯೆ  ಲೆಕ್ಕಚಾರದ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ. 

ಕೆಲ ಬಿಲ್‌ಗಳಲ್ಲಿ ನಿರ್ಗಮನ, ಆಗಮನ ಬಗ್ಗೆ ನಿಗದಿತ ದಿನಾಂಕ  ಸಮಯವೂ ನಮೂದಾಗಿಲ್ಲ. ಅಲ್ಲದೆ  ಹಲವು  ಬಿಲ್‌ಗಳಲ್ಲಿ ಕಾಲಂವಾರು ಭರ್ತಿ ಮಾಡದೇ ಚೆಕ್‌ ಸಂಖ್ಯೆಗಳು, ದಿನಾಂಕ ಹಾಗೂ ಪುಸ್ತಕಗಳನ್ನು ನಮೂದಿಸದಿರುವುದು ವರದಿಯಿಂದ ಗೊತ್ತಾಗಿದೆ. 

ಒಂದು  ಜಿಲ್ಲಾ ಕೇಂದ್ರದಿಂದ  ಮತ್ತೊಂದು ಜಿಲ್ಲಾ ಕೇಂದ್ರದ  ಮೌಲ್ಯಮಾಪನದ (ದೂರದ) ಕಿ.ಮೀ.ಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನದ ಒಂದು ವಿಷಯದ ಬಂಡಲ್‌ನಲ್ಲಿ ಒಂದು ದೂರದ ಕಿ.ಮೀ.ಸಂಖ್ಯೆ ಇನ್ನೊಂದು ವಿಷಯದ ಜಿಲ್ಲಾ ಕೇಂದ್ರದ ದೂರಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ದೂರದ ಕಿ.ಮೀ.ಗಳನ್ನು ನಮೂದಿಸುತ್ತಿರುವುದು ವರದಿಯಿಂದ  ತಿಳಿದು ಬಂದಿದೆ. 

ಅದಷ್ಟೇ ಅಲ್ಲ, ಕೆಲವು ಮೌಲ್ಯಮಾಪಕರ  ಪ್ರಯಾಣ ಭತ್ಯೆ,  ದಿನಭತ್ಯೆ ಮತ್ತು ಸಂಭಾವನೆ ಬಿಲ್‌ಗಳಲ್ಲಿ ಮೊತ್ತಗಳನ್ನು ಹಾಗೂ ವಿಷಯ ಪತ್ರಿಕೆಗಳನ್ನು ತಿದ್ದಿದ್ದಾರೆ. ಹಾಗೆಯೇ ಅದನ್ನು ಬಿಳಿ ಶಾಯಿಯಿಂದ ಹಚ್ಚಿರುವುದು  ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಮೌಲ್ಯಮಾಪಕರ ಪ್ರಯಾಣಕ್ಕೆ ಸಂಬಂಧಿಸಿದ ದಿನಚರಿಯೇ ಇಲ್ಲ. ಆದೇಶದ ಪ್ರತಿ ಹಾಗೂ ಹಾಜರಾತಿ ಪತ್ರವೂ ಇಲ್ಲ ಎಂಬ ಸಂಗತಿಯನ್ನು ಹೊರಗೆಡವಿರುವ ಲೆಕ್ಕ ಪರಿಶೋಧಕರು ಮೌಲ್ಯಮಾಪಕರು ಯಾವ ದಿನಾಂಕ, ಯಾವ ಸ್ಥಳಕ್ಕೆ ಹಾಜರಾಗಿದ್ದರು  ಎಂಬ ಬಗ್ಗೆ ತಿಳಿಯಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಹೇಳಿದ್ದಾರೆ. 

ಪ್ರಶ್ನೆ ಪತ್ರಿಕೆ ತಯಾರಿಕೆಯಲ್ಲಿ ಪಾವತಿಸಿದ ಪ್ರವಾಸ ಭತ್ಯೆ ಬಿಲ್‌ನಲ್ಲಿ ಪ್ರಶ್ನೆ ಪತ್ರಿಕೆ ತಯಾರಿಕೆ ಶಾಖೆಯಿಂದ ಅವರು ಕೆಲಸ ನಿರ್ವಹಿಸಿರುವ ಬಗ್ಗೆಯೂ ದೃಢೀಕರಣ ಇಲ್ಲ. ಕೆಲವೊಂದು  ಬಿಲ್‌ಗಳಲ್ಲಿ ಮೌಲ್ಯಮಾಪಕರ ಹೆಸರು, ಯಾವ ಪರೀಕ್ಷೆ, ಯಾವ ವಿಷಯ, ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಹಾಜರಾಗಿದ್ದಾರೆ, ಎಷ್ಟು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ್ದಾರೆ ಎಂಬ ಬಗ್ಗೆ ಹಾಜರಾತಿ ದೃಢೀಕರಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹಾಗೆಯೇ 2018-19ನೇ ಸಾಲಿನ ಗೌಪ್ಯತಾ ವೆಚ್ಚಗಳಿಗೆ ಸಂಬಂಧಿಸಿದ ಕಡತಗಳು ಮತ್ತು ವೋಚರ್‌ಗಳನ್ನು ಲೆಕ್ಕ ಪರಿಶೋಧನೆ ತನಿಖೆಗೆ ಮಂಡಳಿ ಅಧಿಕಾರಿಗಳು ಹಾಜರುಪಡಿಸಿಲ್ಲ. ಗೌಪ್ಯತಾ ವೆಚ್ಚಕ್ಕೆಂದು ಒಟ್ಟು 60,12,667 ರು.ಪಾವತಿಯಾಗಿದೆಯಾದರೂ ಈ ವೆಚ್ಚಗಳಿಗೆ ಸಂಬಂಧಿಸಿದಂತೆ ದರ ನಿಗದಿ, ಪರಿಮಾಣ, ಗುಣಮಟ್ಟ,  ಕಾಲಮಿತಿಯಲ್ಲಿ ಕಾರ್ಯನಿರ್ವಹಣೆ ಮಾಹಿತಿಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸದ ಕಾರಣ ಈ ಮೊತ್ತವನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿರುವುದು ವರದಿಯಿಂದ ಗೊತ್ತಾಗಿದೆ. 

the fil favicon

SUPPORT THE FILE

Latest News

Related Posts