ಬೆಂಗಳೂರು; ಪೌರತ್ವ ಸಾಬೀತುಪಡಿಸಲು ಕೇಂದ್ರ ಸರ್ಕಾರ ದೇಶದ ನಾಗರಿಕರಿಂದ ದಾಖಲೆಗಳನ್ನು ಕೇಳಲಾರಂಭಿಸಿದ್ದರೆ ಕರ್ನಾಟಕದ ಸಣ್ಣ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಇತರರಿಂದ ರಾಜ್ಯ ಬಿಜೆಪಿ ಸರ್ಕಾರ 80 ವರ್ಷಗಳ ದಾಖಲೆಗಳನ್ನು ಕೇಳುತ್ತಿದೆ.
80 ವರ್ಷಗಳ ದಾಖಲೆಗಳನ್ನು ಕೇಳುತ್ತಿರುವ ವಿಚಾರ ಸರ್ಕಾರದ ಗಮನದಲ್ಲಿಯೂ ಇದೆ. ಈ ವಿಚಾರ ‘ಸರ್ಕಾರದ ಗಮನಕ್ಕೆ ಬಂದಿದೆ,’ ಎಂದು ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ಉತ್ತರಿಸಿದ್ದಾರೆ.
2020ರ ಮಾರ್ಚ್ 9ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕಾರಜೋಳ ಅವರು ಉತ್ತರಿಸಿದ್ದಾರೆ.
ಪೌರತ್ವ ಸಾಬೀತುಪಡಿಸಲು ದೇಶದ ಜನತೆ ಹೈರಾಣಾಗಿದ್ದಾರೆ. 1966ರ ದಾಖಲೆ ನೀಡಿದ ಮಹಿಳೆಗೆ ‘ಪೌರತ್ವ ಸಾಬೀತುಪಡಿಸಲು ಇದು ಸಾಕಾಗಲ್ಲ’ ಎಂದು ಗುಹಾವಟಿ ಹೈಕೋರ್ಟ್ ಹೇಳುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಕರ್ನಾಟಕದ ಸಣ್ಣ ಅರಣ್ಯ ಪ್ರದೇಶದಲ್ಲಿ ಪರಿಶಿಷ್ಟ ಬುಡಕಟ್ಟು ಮತ್ತು ಪರಿಶಿಷ್ಟ ಜಾತಿಯ ಜನರು ಹಾಗೂ ಇತರರಿಂದ 80 ವರ್ಷಗಳ ದಾಖಲೆಗಳನ್ನು ಸರ್ಕಾರ ಕೇಳುತ್ತಿರುವುದು ಅಸಮಂಜಸ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಪರಿಶಿಷ್ಟ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ, ಅತಿಸೂಕ್ಷ್ಮ ಅಭಿವೃದ್ಧಿ ಕೋಶದಿಂದ ನೀಡುವ ಉಚಿತ ಮನೆ, ಗಂಗಾ ಕಲ್ಯಾಣ ಯೋಜನೆಗೆ ಅರ್ಜಿದಾರರಿಂದ ನಿವೇಶನ ಹಕ್ಕುಪತ್ರ ಮತ್ತು ಸಾಗುವಳಿ ಚೀಟಿಯನ್ನು ದಾಖಲೆ ರೂಪದಲ್ಲಿ ಕೇಳುತ್ತಿರುವ ಬೆನ್ನಲ್ಲೇ ಪರಿಶಿಷ್ಟ ಬುಡಕಟ್ಟು ಜನಾಂಗ ಮತ್ತು ಪರಿಶಿಷ್ಟ ಜಾತಿಯವರಿಂದ 80 ವರ್ಷದ ದಾಖಲೆಗಳನ್ನು ಕೇಳಲಾರಂಭಿಸಿರುವುದು ಚರ್ಚೆಯ ಮುನ್ನೆಲೆಗೆ ಬಂದಿದೆ.
ಸಣ್ಣ ಅರಣ್ಯ ಪ್ರದೇಶದ ಮೇಲಿನ ಹಕ್ಕು ಪತ್ರ ಬೇಕೆಂದರೆ ಸ್ವಾತಂತ್ರ್ಯಪೂರ್ವ ಅಂದರೆ 1936ರಿಂದಲೂ ದಾಖಲೆಗಳನ್ನು ಒದಗಿಸಲೇಬೇಕು. ಇಲ್ಲವಾದಲ್ಲಿ ಅರಣ್ಯ ಪ್ರದೇಶದ ಮೇಲೆ ಹಕ್ಕು ಸ್ಥಾಪನೆ ಮಾಡಲಾಗದು ಎಂಬ ಸಂದೇಶವನ್ನು ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟ ಬುಡಕಟ್ಟು ಮತ್ತು ಪರಿಶಿಷ್ಟ ಜಾತಿಯವರಿಗೆ ರವಾನಿಸಿದೆ.
ಸಣ್ಣ ಅರಣ್ಯ ಪ್ರದೇಶದಲ್ಲಿ ಪರಿಶಿಷ್ಟ ಬುಡಕಟ್ಟು ಜನಾಂಗದವರಿಗೆ ಹಕ್ಕು ಪತ್ರ ಕೊಡಲು ಅವಕಾಶವಿದೆ. ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ 2006ರಂತೆ 2005ರ ಡಿಸೆಂಬರ್ 13ಕ್ಕೆ ಮುಂಚೆ ಅನುಸೂಚಿತ ಬುಡಕಟ್ಟುಗಳು ಅರಣ್ಯ ಭೂಮಿಯ ಮೇಲೆ ಅವಲಂಬಿತವಾಗಿದ್ದಲ್ಲಿ ಕಾಯ್ದೆಯನ್ವಯ ಪರಿಶೀಲಿಸಿ ಹಕ್ಕುಪತ್ರ ನೀಡಲು ಅವಕಾಶವಿದೆ.
ಆದರೆ ಇತರ ಪಾರಂಪರಿಕ ಅರಣ್ಯವಾಸಿಗಳು, ಪರಿಶಿಷ್ಟ ಜಾತಿಯವರು ಸೇರಿದಂತೆ 3 ತಲೆಮಾರಿನವರೆಗೆ ಅಂದರೆ 75 ವರ್ಷ ಪ್ರಧಾನವಾಗಿ ಅರಣ್ಯಗಳಲ್ಲಿ ವಾಸಿಸಿದ ಮತ್ತು ವಾಸ್ತವಿಕ ಜೀವನೋಪಾಯದ ಅವಶ್ಯಕತೆಗಳಿಗಾಗಿ ಅರಣ್ಯದ ಅಥವಾ ಅರಣ್ಯಗಳ ಜಮೀನಿನ ಮೇಲೆ ಅವಲಂಬಿತವಾಗಿದ್ದಲ್ಲಿ ಕಾಯ್ದೆ ಪ್ರಕಾರ ಪರಿಶೀಲಿಸಿ ಹಕ್ಕುಪತ್ರ ನೀಡಲು ಅವಕಾಶವೂ ಇದೆ. 2006ರಲ್ಲಿ ಈ ಕಾಯ್ದೆ ಬಂದಿದ್ದರೂ 2010ರಿಂದ ಇದು ಅನುಷ್ಠಾನಗೊಂಡಿದೆ.
ಕಾಯ್ದೆ ಪ್ರಕಾರ 75 ವರ್ಷದ ದಾಖಲೆಗಳನ್ನು ಕೇಳಬೇಕಿದ್ದ ಅಧಿಕಾರಿಗಳು, ಅದಕ್ಕೂ ಹಿಂದಿನ 5 ವರ್ಷಗಳ ದಾಖಲೆಗಳನ್ನು ಕೇಳಲಾರಂಭಿಸಿದ್ದಾರೆ. ಅಧಿಕಾರಿಗಳ ಈ ನಡೆಯನ್ನು ರಾಜ್ಯ ಮೂಲನಿವಾಸಿ ಮತ್ತು ಅರಣ್ಯವಾಸಿಗಳ ಬುಡಕಟ್ಟು ವೇದಿಕೆ ವಿರೋಧಿಸಿದೆ.
‘ಸಣ್ಣ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಬುಡಕಟ್ಟು, ಪರಿಶಿಷ್ಟ ಜಾತಿ ಮತ್ತು ಇತರೆಯವರಿಂದ 80 ವರ್ಷದ ದಾಖಲಾತಿಗಳನ್ನು ಕೇಳುವುದೇ ಅವೈಜ್ಞಾನಿಕ. ಅಧಿಕಾರಿಗಳು ಕಾನೂನು ಮೀರಿ ವರ್ತಿಸುತ್ತಿದ್ದಾರೆ. ಇದು ಬೇಜವಾಬ್ದಾರಿ ಮಾತ್ರವಲ್ಲ ಅವೈಜ್ಞಾನಿಕ,’ ಎಂದು ವೇದಿಕೆಯ ಡಾ ಶ್ರೀಕಾಂತ್ ಅವರು ‘ದಿ ಫೈಲ್’ಗೆ ಪ್ರತಿಕ್ರಿಯಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ. ಆದಿವಾಸಿಗಳು ಸಾಮೂಹಿಕ ಅರಣ್ಯ ಹಕ್ಕುಗಳಿಗೆ, ವೈಯಕ್ತಿಕ ಅರಣ್ಯ ಭೂಮಿ ಹಕ್ಕುಗಳಿಗೆ ಹಕ್ಕುಪತ್ರಗಳಿಗಾಗಿ ಕಳೆದ ಹಲವು ವರ್ಷಗಳಿಂದಲೂ 9 ಜಿಲ್ಲೆಗಳ ಸುಮಾರು 70,000 ಆದಿವಾಸಿಗಳು ಅಲೆದಾಡುತ್ತಲೇ ಇದ್ದಾರೆ. ಕಾನೂನಿನ್ವಯ ಅರ್ಜಿ ಸಲ್ಲಿಸಿದ 2-3 ತಿಂಗಳಲ್ಲಿ ಇತ್ಯರ್ಥವಾಗಬೇಕಿದ್ದ ಅರ್ಜಿಗಳು 5 ವರ್ಷಗಳಿಗೂ ಹೆಚ್ಚಿನ ವರ್ಷಗಳಿಂದಲೂ ಇತ್ಯರ್ಥವಾಗಿಲ್ಲ ಎಂದು ತಿಳಿದು ಬಂದಿದೆ.
ಕರ್ನಾಟಕದಲ್ಲಿ ವಿವಿಧೆಡೆ ವಾಸವಿರುವ 1,300ಕ್ಕೂ ಹೆಚ್ಚು ಆದಿವಾಸಿ ಹಾಡಿ,ಪೋಡು ಮತ್ತು ದೊಡ್ಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿಗಣಿಸಿ ಮಾನ್ಯತೆ ನೀಡುವ ಕಾರ್ಯವೂ ಪರಿಣಾಮಕಾರಿಯಾಗಿ ನಡೆದಿಲ್ಲ. ಅಲ್ಲದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಪುನರ್ ವಸತಿ ನೀಡದ ಕಾರಣ ಆದಿವಾಸಿಗಳು ನಿರ್ಗತಿಕ ಸ್ಥಿತಿಯಲ್ಲಿದ್ದಾರೆ.
ಅದೇ ರೀತಿ ಆದಿವಾಸಿಗಳು ವಾಸವಿರುವ ಗ್ರಾಮಗಳಿಗೆ ಸಮುದಾಯ ಹಕ್ಕು ಅನುಷ್ಠಾನಗೊಂಡಿಲ್ಲ. ಆದಿವಾಸಿಗಳ ಕಿರು ಅರಣ್ಯ ಉತ್ಪನ್ನ, ಸ್ಮಶಾನ, ದೈವ ದೇವರ ಬನಗಳು, ನೀರಾವರಿ ಪ್ರದೇಶ ಸೇರಿದಂತೆ ಇತರೆ ಅರಣ್ಯ ಸಂಪನ್ಮೂಲದ ಹಕ್ಕು ಕೂಡ ಒದಗಿಸಿಲ್ಲ.
ಪರಿಶಿಷ್ಟ ಪಂಗಡದ ಎಲ್ಲಾ ಕುಟುಂಬಗಳಿಗೆ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ಅನುಕೂಲವಾಗುವಂತೆ ಗುರುತಿನ ಚೀಟಿಯನ್ನೂ ನೀಡಿಲ್ಲ. 2006ರ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆದಿರುವ ಹಕ್ಕುದಾರರಿಗೆ ಪಹಣಿ ಕಾಲಂ 11ರ ಪ್ರಕಾರ ದಾಖಲು ಮಾಡಿ ಆರ್‌ಟಿಸಿಯನ್ನೂ ಕೊಟ್ಟಿಲ್ಲ ಎಂದು ಗೊತ್ತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರದಲ್ಲಿ ಅರಣ್ಯ ಹಕ್ಕು ಅಧಿನಿಯಮದಡಿ ಹಕ್ಕುಪತ್ರಗಳಿಗಾಗಿ ಪರಿಶಿಷ್ಟ ಪಂಗಡ , ಸಮುದಾಯ ಇತರೆ ವರ್ಗದಿಂದ ಈವರೆವಿಗೆ ಒಟ್ಟು 54,071 ಅರ್ಜಿಗಳನ್ನು ಸಲ್ಲಿಕೆಯಾಗಿವೆ. ಈ ಪೈಕಿ 1,039 ಮಂದಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ.
ತಿರಸ್ಕರಿಸಲ್ಪಟ್ಟು ಪುನರ್ ಪರಿಶೀಲನೆ ಹಂತದಲ್ಲಿ ಒಟ್ಟು ಅರ್ಜಿಗಳ ಪೈಕಿ 46,962 ಅರ್ಜಿಗಳು ತಿರಸ್ಕೃತಗೊಂಡಿವೆ. ಅತಿ ಹೆಚ್ಚು ಎಂದರೆ 15,323 ಅರ್ಜಿಗಳು ಸಲ್ಲಿಕೆಯಾಗಿರುವ ಶಿರಸಿ ವೃತ್ತದಲ್ಲಿ 13,647 ಅರ್ಜಿಗಳು ತಿರಸ್ಕೃತಗೊಂಡಿರುವುದು ಗೊತ್ತಾಗಿದೆ.