ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರೆ ಚುನಾಯಿತ ಜನಪ್ರತಿನಿಧಿಗಳ ಹಸ್ತಕ್ಷೇಪ ಎಂದಿನಂತೆ ಮುಂದುವರೆದಿದೆ. ಪೊಲೀಸ್ ಅಧಿಕಾರಿಗಳು ಬಯಸಿರುವ ಜಾಗಕ್ಕೆ ವರ್ಗಾವಣೆ ಮಾಡಬೇಕು ಎಂಬ ಶಿಫಾರಸ್ಸು ಪತ್ರಗಳ ಮೂಲಕ ಮೇಲಾಧಿಕಾರಿಗಳಿಗೆ ಸೂಚಿಸಲಾಗುತ್ತಿದೆ.
ಪೊಲೀಸ್ ವರ್ಗಾವಣೆಗೆ ಬರುವ ಶಿಫಾರಸು ಪತ್ರಗಳನ್ನು ಪೊಲೀಸ್ ಸಿಬ್ಬಂದಿ ಮಂಡಳಿ ನಿರ್ಲಕ್ಷಿಸುತ್ತಿದೆ ಎಂದು ರಾಜ್ಯದ ಹಿಂದಿನ ಡಿಜಿ-ಐಜಿಪಿ ನೀಲಮಣಿ ಎನ್. ರಾಜು ಅವರು ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ ನಂತರವೂ ಶಿಫಾರಸ್ಸು ಪತ್ರಗಳ ಮಳೆಯೇ ಸುರಿದಿದೆ.
ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ ಅಶ್ವಥ್‌ನಾರಾಯಣ್, ಸಚಿವ ಆರ್ ಅಶೋಕ್ ಸೇರಿದಂತೆ ಹಲವು ಶಾಸಕರು ಕೂಡ ಡಿವೈಎಸ್ಪಿ ವೃಂದದ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸ್ಸು ಪತ್ರ ನೀಡಿದ್ದಾರೆ. ಈ ಕುರಿತು ‘ದಿ ಫೈಲ್’ ಗೆ ಕೆಲ ದಾಖಲೆಗಳು ಲಭ್ಯವಾಗಿವೆ.
ವರ್ಗಾವಣೆ ನಿಯಮ 12ರ ಪ್ರಕಾರ ಯಾವುದೇ ಸರಕಾರಿ ನೌಕರರು ವರ್ಗಾವಣೆಗೆ ರಾಜಕೀಯ ಪ್ರಭಾವ ಬಳಸುವಂತಿಲ್ಲ. ಒಂದು ವೇಳೆ ಬಳಸಿದರೆ ಅದು ದುರ್ನಡತೆ ಅಗುತ್ತದೆ ಮತ್ತು ರಾಜಕೀಯ ಪ್ರಭಾವ ಬಳಸಿ ಅಧಿಕಾರಿ ಯಾವ ಜಾಗ ಬಯಸುತ್ತಾರೆ, ಅ ಜಾಗಕ್ಕೆ ಸರ್ಕಾರ ವರ್ಗಾವಣೆ ಮಾಡಲೇಬಾರದು ಎಂಬ ನಿಯಮವಿದೆ. ಆದರೆ ಆ ನಿಯಮವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ಸಚಿವರು, ಶಾಸಕರು ಉಲ್ಲಂಘಿಸುವ ಮೂಲಕ ನಿಯಮವನ್ನೇ ಗಾಳಿಗೆ ತೂರಿದ್ದಾರೆ.
ಶಾಸಕರು, ಮುಖ್ಯಮಂತ್ರಿಗಳ ಸಚಿವಾಲಯದ ಉಪ ಕಾರ್ಯದರ್ಶಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮಾಜಿ ಸಚಿವರು, ಮಾಜಿ ಶಾಸಕರು ನೀಡುವ ಶಿಫಾರಸ್ಸು ಪತ್ರಗಳನ್ನಾಧರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಟಿಪ್ಪಣಿ ಮೂಲಕ ಸೂಚಿಸುತ್ತಿರುವುದು ದಾಖಲೆಯಿಂದ ತಿಳಿದು ಬಂದಿದೆ.
ಚಿಕ್ಕಪೇಟೆ ಶಾಸಕ ಉದಯ ಬಿ ಗರುಡಾಚಾರ್ ಅವರು ಕೇಂದ್ರ ವಲಯದ ಐಜಿಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಉಪ ಅಧೀಕ್ಷಕ ಡಾ ಎಸ್ ಪ್ರಕಾಶ್ ಅವರನ್ನು ಚಿಕ್ಕಪೇಟೆಗೆ ವರ್ಗಾಯಿಸಬೇಕು ಎಂದು ನೀಡಿದ್ದ ಶಿಫಾರಸ್ಸು(ಇ-1100002) ಪತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವರ್ಗಾವಣೆಗೆ ಶಿಫಾರಸ್ಸು ಮಾಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಅದೇ ರೀತಿ ಹೊಸಕೋಟೆ ವಿಧಾನಸಭೆ ಮಾಜಿ ಶಾಸಕ ಎಂಟಿಬಿ ನಾಗರಾಜ್ ಅವರು ನೀಡಿರುವ ಶಿಫಾರಸ್ಸು ಪತ್ರ (ಇ 1135470) ಆಧರಿಸಿ ಹುಬ್ಬಳ್ಳಿ ಧಾರವಾಡದಲ್ಲಿ ವೈರ್‌ಲೆಸ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿವೈಎಸ್ಪಿ ಎಂ ಶಾಂತರಾಜು ಅವರನ್ನು ವರ್ಗಾಯಿಸಬೇಕು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸೂಚಿಸಿ ಪತ್ರ ಬರೆದಿದ್ದಾರೆ.
ಅಲ್ಲದೆ ಬೆಂಗಳೂರಿನ ಕೂಡ್ಲುವಿನಲ್ಲಿರುವ ಭಯೋತ್ಪಾದನ ನಿಗ್ರಹದಲ್ಲಿ ಸಹಾಯಕ ಕಮಾಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಧಾಕೃಷ್ಣ ಹರಾವತ್ ಅವರನ್ನು ಬೆಂಗಳೂರಿನ ಕೆಎಸ್‌ಆರ್‌ಪಿ ಘಟಕದ 1ನೇ ಪಡೆಗೆ ವರ್ಗಾವಣೆಗೆ ಶಿಫಾರಸ್ಸು( ಇ-1104901) ಪತ್ರ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಯಲಹಂಕದಲ್ಲಿರುವ ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯಲ್ಲಿ ಎಸ್ ಪಿ ಇಂದುಶೇಖರ್ ಎಂ ಎಸ್ ಅವರನ್ನು ಅದೇ ಜಾಗದಲ್ಲೇ ಮುಂದುವರೆಸಬೇಕು ಎಂದೂ ಶಿಫಾರಸ್ಸು ಪತ್ರ (ಇ-1104914) ನೀಡಿರುವುದು ತಿಳಿದು ಬಂದಿದೆ.
ಇನ್ನು, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಪಿ ಐ ಶ್ರೀಪಾದ ಡಿ ಜಲ್ದೆ ಅವರನ್ನು ಡಿವೈಎಸ್ಪಿ ಪದನ್ನೋತಿ ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಡಿವೈಎಸ್ಪಿ, ಬೆಸ್ಕಾಂ(ವಿಜಿಲೆನ್ಸ್)ಡಿವೈಎಸ್ಪಿ, ಡಿಸಿಆರ್‌ಬಿಯ ಡಿವೈಎಸ್ಪಿ ಈ ಯಾವುದಾದರೂ ಒಂದು ಹುದ್ದೆಗೆ ವರ್ಗಾವಣೆ ಮಾಡಿ ಎಂದು ಶಿಫಾರಸ್ಸು(ಇ-1104958) ಮಾಡಿದ್ದಾರೆ.
ಅದೇ ರೀತಿ ಉಪ ಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ್ ಅವರು ರಾಜ್ಯ ಗುಪ್ತವಾರ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿವೈಎಸ್ಪಿ ಚಂದನ್‌ಕುಮಾರ್ ಎಂಬುವರನ್ನು ರಾಮನಗರ ಜಿಲ್ಲೆಯ ಉಪ ವಿಭಾಗಕ್ಕೆ ವರ್ಗಾಯಿಸಬೇಕು ಎಂದು ಶಿಫಾರಸ್ಸು(ಇ-1023848) ಮಾಡಿರುವುದು ಗೊತ್ತಾಗಿದೆ.
ಅದೇ ರೀತಿ ಅಶ್ವಥ್‌ನಾರಾಯಣ್ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೆಎಸ್‌ಆರ್‌ಪಿಯ ಹಾಸನದ 11ನೇ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ಎಂ ಜಿ ಅವರನ್ನು ಬೆಂಗಳೂರಿನ ಕೆಎಸ್‌ಆರ್‌ಪಿ 1ನೇ ಪಡೆಗೆ, ಮೈಸೂರಿನ ಸಂಚಾರ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿ ಎನ್ ಮೋಹನ್ ಅವರನ್ನು ಮಲ್ಲೇಶ್ವರಂ ಉಪ ವಿಭಾಗಕ್ಕೆ ವರ್ಗಾಯಿಸಬೇಕು ಎಂದು ಶಿಫಾರಸ್ಸು ಪತ್ರ (ಇ-1073989-ಇ- 1057835) ನೀಡಿದ್ದಾರೆ.
ಸಚಿವ ಆರ್ ಅಶೋಕ್ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ ಜೆ ಸಜೀತ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಮುಂದುವರೆಸಿ ಎಂದು ಶಾಸಕ ಎಂ ಕೃಷ್ಣಪ್ಪ ಅವರ ಪತ್ರವನ್ನಾಧರಿಸಿ ಶಿಫಾರಸ್ಸು(ಇ-1048209) ಮಾಡಿದ್ದಾರೆ.
ಪ್ರಕಾಶ್ ರಾಥೋಡ್ ಎಂಬುವರನ್ನು ಸಿಐಡಿ ಘಟಕಕ್ಕೆ ವರ್ಗಾಯಿಸಿ ಎಂದು ಶಾಸಕ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ ರಾಜೀವ್ ಶಿಫಾರಸ್ಸು ಪತ್ರ ನೀಡಿದ್ದರೆ, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡ ಅವರು ಡಿವೈಎಸ್ಪಿ ರಮೇಶ್ ಎನ್ ಅವರನ್ನು ಹೊಳೆನರಸೀಪುರ ಉಪ ವಿಭಾಗಕ್ಕೆ ವರ್ಗಾಯಿಸಿ ಎಂದು ಪತ್ರ ಕೊಟ್ಟಿರುವುದು ಗೊತ್ತಾಗಿದೆ.
ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರು ಎಂ ಎಚ್ ನಾಗ್ತೆ ಅವರನ್ನು ಸಿಸಿಬಿಗೆ, ಸಾಗರ ಶಾಸಕ ಹೆಚ್ ಹಾಲಪ್ಪ ಅವರು ರಘು ಕೆ ಅವರನ್ನು ಸಾಗರಕ್ಕೆ, ಬಿ ಕೆ ಉಮೇಶ್ ಎಂಬುವರನ್ನು ಕೆ ಜಿ ಎಫ್ ಉಪ ವಿಭಾಗಕ್ಕೆ ವರ್ಗಾಯಿಸಿ ಎಂದು ಸಂಸದ ಎಸ್ ಮುನಿಯಪ್ಪ, ಮಾಜಿ ಶಾಸಕ ಬಿ ಪಿ ವೆಂಕಟಮುನಿಯಪ್ಪ ಅವರು ಶಿಫಾರಸ್ಸು ಪತ್ರ ನೀಡಿದ್ದಾರೆ.
ಮೈಸೂರಿನ ನರಸಿಂಹರಾಜ ಉಪ ವಿಭಾಗದಲ್ಲಿ ಡಿವೈಎಸ್ಪಿ ಹುದ್ದೆಯಲ್ಲಿರುವ ಸಿ ಗೋಪಾಲ್ ಎಂಬುವರನ್ನು ಮೈಸೂರು ಜಿಲ್ಲೆಯ ದಕ್ಷಿಣ ಉಪ ವಿಭಾಗಕ್ಕೆ ವರ್ಗಾಯಿಸಿ ಎಂದು ಶಾಸಕ ಎಸ್ ಎ ರಾಮದಾಸ್, ಸಂಸದ ವಿ ಶ್ರೀನಿವಾಸ್ ಪ್ರಸಾದ್, ಮಾಜಿ ಸಚಿವ ಎಚ್ ವಿಶ್ವನಾಥ್ ಮತ್ತು ಮುಖ್ಯಮಂತ್ರಿಯವರ ಕಾರ್ಯದರ್ಶಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಡಿವೈಎಸ್ಪಿ ಆಗಿರುವ ಎಸ್ ಮಂಜುನಾಥ್ ಅವರನ್ನು ಸಿಸಿಬಿಗೆ ವರ್ಗಾಯಿಸಿ ಎಂದು ಬಸನಗೌಡ ರಾ ಪಾಟೀಲ್ ಯತ್ನಾಳ ಅವರು ಶಿಫಾರಸ್ಸು ಮಾಡಿದ್ದರೆ, ಯಶೋಧ ವಂಗೋಡಿ ಅವರನ್ನು ಬೆಳಗಾವಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹುದ್ದೆಗೆ ವರ್ಗಾಯಿಸಿ ಎಂದು ಶಾಸಕ ಉಮೇಶ್ ವಿ ಕತ್ತಿ ಅವರು ಶಿಫಾರಸ್ಸು ಪತ್ರ ಕೊಟ್ಟಿದ್ದಾರೆ.
ಕರ್ನಾಟಕ ಲೋಕಾಯುಕ್ತದಲ್ಲಿರುವ ಎನ್ ನಿರಂಜನ್‌ರಾಜ್ ಅರಸ್ ಎಂಬುವರನ್ನು ಬಿಬಿಎಂಪಿಯ ಬಿಎಂಟಿಎಫ್ ವಿಭಾಗಕ್ಕೆ ವರ್ಗಾಯಿಸಿ ಎಂದು ಮೇಯರ್ ಎಂ ಗೌತಮ್‌ಕುಮಾರ್ ಮತ್ತು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರು ಶಿಫಾರಸ್ಸು ಪತ್ರ ನೀಡಿದ್ದರೆ ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಅವರು ಮುನಿರಾಬಾದ್‌ನ ಐಬಿಆರ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕಮಲ್ಲ ಜೆ ಅವರನ್ನು ಬೆಂಗಳೂರಿನಲ್ಲಿರುವ ಕೆಎಸ್‌ಆರ್‌ಪಿ 3 ಅಥವಾ 9ನೇ ಪಡೆಗೆ ವರ್ಗಾಯಿಸಿ ಎಂದು ಶಿಫಾರಸ್ಸು ಮಾಡಿದ್ದಾರೆ.
ಬೊಮ್ಮನಹಳ್ಳಿಯ ಶಾಸಕ ಎಂ ಸತೀಶ್ ರೆಡ್ಡಿ ಅವರು ಮುನಿರಾಬಾದ್‌ನಲ್ಲಿನ ಐಆರ್‌ಬಿ ಘಟಕದಲ್ಲಿರುವ ಸಮಂತು ಇ ಎಸ್ ಅವರನ್ನು ಬೆಂಗಳೂರಿನಲ್ಲಿರುವ ಕೆಎಸ್‌ಆರ್‌ಪಿ 4ನೇ ಪಡೆಗೆ ವರ್ಗಾವಣೆ ಮಾಡಿ ಎಂದು ಶಿಫಾರಸ್ಸು ಪತ್ರ ನೀಡಿರುವುದು ತಿಳಿದು ಬಂದಿದೆ.
ಪೊಲೀಸರ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳಿಂದ ಶಿಫಾರಸು ಆಗುತ್ತಿರುವುದನ್ನು ಯಾಕೆ ಉಲ್ಲೇಖಿಸುವುದಿಲ್ಲ ಎಂದು ರಾಜ್ಯ ಉಚ್ಚ ನ್ಯಾಯಾಲಯವು ಸರ್ಕಾರವನ್ನು ಪ್ರಶ್ನಿಸಿತ್ತು.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾ| ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಶಿಫಾರಸು ಎಂದು ಬರೆದಿದ್ದೀರಿ. ಆದರೆ, ಜನಪ್ರತಿನಿಧಿಗಳ ಶಿಫಾರಸು ಎಂದು ಯಾಕೆ ಉಲ್ಲೇಖಿಸಿಲ್ಲ ಎಂದು ನ್ಯಾಯಪೀಠವು ಪ್ರಶ್ನೆ ಮಾಡಿದ್ದನ್ನು ಸ್ಮರಿಸಬಹುದು.
‘ಸರಕಾರಗಳು ಜನಪ್ರತಿನಿಧಿಗಳ ಶಿಫಾರಸು ಪತ್ರಗಳನ್ನು ಆಧರಿಸಿ ಪೊಲೀಸ್ ವರ್ಗಾವಣೆ ಮಾಡುತ್ತಿವೆ. ಆ ಮೂಲಕ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲಂಘಿಸಲಾಗುತ್ತಿದೆ. ಈ ಬಗ್ಗೆ ನ್ಯಾಯಾಲಯದ ಆದೇಶವಿದ್ದರೂ ಶಿಫಾರಸು ಪತ್ರಗಳನ್ನು ನೀಡುವುದು ನಿಂತಿಲ್ಲ’ ಎಂದು ಅರ್ಜಿದಾರರ ಪರ ವಕೀಲ ಜಿಆರ್ ಮೋಹನ್, ನ್ಯಾಯಾಲಯದ ಗಮನ ಸೆಳೆದಿದ್ದರು.
ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಅಧಿಕಾರ ದುರ್ಬಳಕೆ ಆರೋಪ ಸಂಬಂಧ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 27 ಮಾಜಿ ಹಾಗೂ ಸಚಿವರ ವಿರುದ್ಧ ಸಲ್ಲಿಕೆಯಾಗಿರುವ ದೂರನ್ನು ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿದೆ.