ಪರೀಕ್ಷೆ ಹಣದ ಲೆಕ್ಕಾಚಾರದಲ್ಲಿ ಅಪರಾತಪರಾ; ಪ್ರೌಢಶಿಕ್ಷಣ ಮಂಡಳಿಯ ಮುಖವಾಡ ಕಳಚಿಸಿತು ಲೆಕ್ಕ ಪರಿಶೋಧನೆ

ಬೆಂಗಳೂರು; ಎಸ್‌ಎಸ್‌ಎಲ್‌ಸಿ  ವಾರ್ಷಿಕ ಪರೀಕ್ಷೆ ಚಟುವಟಿಕೆಗಳಿಗೆ ಬಿಡುಗಡೆಯಾಗಿರುವ 4 ಕೋಟಿ ರು.ಗೂ ಅಧಿಕ ಮೊತ್ತದ ಅನುದಾನ ಬಳಕೆ ಪ್ರಮಾಣ ಪತ್ರ ಸಲ್ಲಿಸದಿರುವುದು, ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಹರಾಜು ಪ್ರಕ್ರಿಯೆ, ಮೌಲ್ಯಮಾಪಕರಿಗೆ ನೀಡಿರುವ ಹೆಚ್ಚುವರಿ ಸಂಭಾವನೆ ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳು ಹೊರಬಿದ್ದಿವೆ. 

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ನಿಯಮಬಾಹಿರ ಚಟುವಟಿಕೆಗಳು ಹೇಗೆ ನಡೆಯುತ್ತಿವೆ ಎಂಬುದು  ಇದೀಗ ಒಂದೊಂದಾಗಿ ಹೊರಬೀಳುತ್ತಿವೆ. ಮಂಡಳಿಯಲ್ಲಿನ ಆರ್ಥಿಕ ಅಶಿಸ್ತು ಮತ್ತು ಆಡಳಿತ ನಿರ್ಲಕ್ಷ್ಯಗಳನ್ನು ಲೆಕ್ಕ ಪರಿಶೋಧನೆ ವರದಿ ಇದೀಗ ಬಹಿರಂಗಗೊಳಿಸಿದೆ. ಆದರೆ ಈವರೆವಿಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಕ್ರಮಕ್ಕೆ ಮುಂದಾಗಿಲ್ಲ ಎಂದು ತಿಳಿದು ಬಂದಿದೆ. 

2017-18 ಮತ್ತು 2018-19ನೇ ಸಾಲಿಗೆ ಸಂಬಂಧಿಸಿದ ಲೆಕ್ಕ ಪರಿಶೋಧನೆ ವರದಿಗಳು ಮಂಡಳಿ ಚಟುವಟಿಕೆಗಳನ್ನು ಒರೆಗೆ ಹಚ್ಚುವ ಮೂಲಕ ತೆರೆಮರೆಯಲ್ಲಿ ನಡೆಯುತ್ತಿರುವ  ಅಕ್ರಮಗಳು ಮತ್ತು ಆಡಳಿತ ನಿರ್ಲಕ್ಷ್ಯವನ್ನು ಹೊರಗೆಳೆದಿದೆ.  ಈ ಎರಡೂ ಸಾಲಿನ ವರದಿಗಳ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.  

ವೆಚ್ಚದ ವಿವರವೇ ಇಲ್ಲ

2018 ಮತ್ತು 2019ರ ಮಾರ್ಚ್  ಮತ್ತು ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ದಿನಗಳಂದು ಪರಿಶೀಲಿಸುವ ಉದ್ದೇಶಕ್ಕೆ 34  ಜಿಲ್ಲಾ ಉಪ ನಿರ್ದೇಶಕರುಗಳಿಗೆ ಇಂಧನ ಸೇರಿದಂತೆ ಇನ್ನಿತರೆ ವೆಚ್ಚವೆಂದು ಒಟ್ಟು 1.36 ಕೋಟಿ ರು.  ಬಿಡುಗಡೆಯಾಗಿತ್ತು. ಈ ಪೈಕಿ ಬಳಕೆ ಮಾಡಿ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಬಹುತೇಕ ಜಿಲ್ಲಾ ಉಪನಿರ್ದೇಶಕರುಗಳು ಮಂಡಳಿಗೆ ಹಿಂತಿರುಗಿಸಿಲ್ಲ.  ಅಲ್ಲದೆ ಇಲಾಖೆ ಅಧಿಕಾರಿಗಳಿಗೆ ಬಿಡುಗಡೆಯಾಗಿರುವ ಹಣಕ್ಕೆ ವೆಚ್ಚದ  ವಿವರಗಳೇ ಇಲ್ಲ  ಎಂಬ ಅಂಶ ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.

2019ರ ಮಾರ್ಚ್ ಮತ್ತು ಏಪ್ರಿಲ್‌ ನಲ್ಲಿ 34 ಜಿಲ್ಲಾ ಉಪನಿರ್ದೇಶಕರುಗಳಿಗೆ ತಲಾ 2 ಲಕ್ಷ  ರು.ನಂತೆ ಒಟ್ಟು 68 ಲಕ್ಷ  ರು.ಬಿಡುಗಡೆಯಾಗಿತ್ತು. 34 ಶೈಕ್ಷಣಿಕ ಜಿಲ್ಲೆಗಳ ಪೈಕಿ 7 ಜಿಲ್ಲೆಗಳಲ್ಲಿ  ಖರ್ಚಾಗದೇ ಬಾಕಿ ಉಳಿದಿದ್ದ 4,07,975 ರು.ಗಳನ್ನು ಮಂಡಳಿಗೆ ಮರಳಿಸಿಲ್ಲ. ಹೀಗಾಗಿ ಲೆಕ್ಕ ಪರಿಶೋಧಕರು ಒಟ್ಟು 9,14,584 ರು.ಗಳನ್ನು ಆಕ್ಷೇಪಣೆಯಲ್ಲಿರಿಸಿದ್ದಾರೆ. 

ಅದೇ ರೀತಿ 2018ರ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿಯೂ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ  ಖರ್ಚಾಗದೇ ಬಾಕಿ ಉಳಿದಿದ್ದ  ಒಟ್ಟು 7 ಲಕ್ಷ ರು.ಗಳನ್ನು ಮಂಡಳಿಗೆ ಮರಳಿಸಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.  ‘ನಿಗದಿತ ಸಮಯದಲ್ಲಿ ಮಂಡಳಿಗೆ ಬರಬೇಕಾದ ಹಣವು ಇದುವರೆಗೂ  ಮಂಡಳಿಗೆ  ಸಲ್ಲಿಕೆಯಾಗದಿರುವುದು ಆಡಳಿತದಲ್ಲಿನ ನಿರ್ಲಕ್ಷ್ಯತೆ ತೋರುತ್ತದೆ,’ ಎಂದು ವರದಿಯಲ್ಲಿ ಲೆಕ್ಕ ಪರಿಶೋಧಕರು ಅಭಿಪ್ರಾಯಿಸಿದ್ದಾರೆ. 

2017-18ನೇ ಸಾಲಿನ ಪ್ರಶ್ನೆಪತ್ರಿಕೆ ಮುದ್ರಣ, ಸರಬರಾಜು (ಗೌಪ್ಯ) ಬಾಬ್ತಿಗೆ  ಸಂಬಂಧಿಸಿದಂತೆ ಮಂಡಳಿ  ಒಟ್ಟು 3.11  ಕೋಟಿ  ರು.ಪಾವತಿಸಿತ್ತು. ಇದಕ್ಕೆ ಸಂಬಂಧಿಸಿದ ಪಾವತಿ ವೋಚರ್ಸ್‌ ಹಾಗೂ ಪೂರಕ ದಾಖಲೆಗಳನ್ನು ಲೆಕ್ಕ ಪರಿಶೋಧನೆಯ ಪರಿಶೀಲನೆಗೆ ಮಂಡಳಿ ಹಾಜರುಪಡಿಸಿಲ್ಲ ಎಂಬ ಅಂಶ ವರದಿಯಿಂದ ಗೊತ್ತಾಗಿದೆ. 

ಅದೇ ರೀತಿ ಎಸ್‌ಎಸ್‌ಎಲ್‌ಸಿ  ಪರೀಕ್ಷೆಗೆ ಹಾಗೂ ಪೂರಕ ಪರೀಕ್ಷೆ  ಕಾರ್ಯಗಳಿಗೆ ರಾಜ್ಯದ 34 ಜಿಲ್ಲೆಗಳ 204 ತಾಲೂಕು  ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮುಂಗಡ ರೂಪದಲ್ಲಿ  ಒಟ್ಟು 73,42,953 ರು.ಬಿಡುಗಡೆಯಾಗಿತ್ತು. ಆದರೆ ಈ ಹಣವನ್ನು ಎಷ್ಟು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಳಸಿಕೊಂಡಿದ್ದಾರೆ ಎಷ್ಟು ಬಾಕಿ ಇದೆ ಎಂಬ ಬಗ್ಗೆ ವಿವರಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. 

ಹಣ ಬಳಕೆ ಪ್ರಮಾಣ ಪತ್ರಗಳನ್ನಷ್ಟೇ ಸಲ್ಲಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖರ್ಚಿಗೆ ಸಂಬಂಧಿಸಿದ  ವೋಚರ್‌ಗಳನ್ನು ಹಾಜರುಪಡಿಸಿಲ್ಲ. ನಿಯಮಗಳ ಪ್ರಕಾರ ಪರೀಕ್ಷೆ ಮುಗಿದ 15  ದಿನಗಳ ಒಳಗಾಗಿ  ಅಂತಿಮ  ಬಿಲ್‌ಗಳನ್ನು ಸಲ್ಲಿಸಿ ನಂತರ ಕ್ಲೈಮ್‌ ಮಾಡಿರುವ ಮೊತ್ತವನ್ನು ನಿಯಮಾನುಸಾರ ಪರಿಶೀಲಿಸಿ ಅಂತಿಮ ಪಾವತಿ ಮಾಡಬೇಕು. ಆದರಿಲ್ಲಿ ಬಹುತೇಕ ಬಿಲ್‌ಗಳು ನಿಗದಿಪಡಿಸಿದ ಸಮಯದಲ್ಲಿ ಬಿಲ್‌ಗಳು ಸಲ್ಲಿಕೆಯಾಗದೆ ವ್ಯತ್ಯಾಸದ ಮೊತ್ತವನ್ನು ಕ್ಲೈಮ್‌ ಮಾಡಿರುವುದು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬಂದಿದೆ. 

ಹಾಗೆಯೇ ಸರ್ಕಾರಿ  ವಾಹನ ಉಪಯೋಗಿಸಿದ  ಕ್ಷೇತ್ರ ಶಿಕ್ಷಣಾಧಿಕಾರಿಗಳು ವಾಹನದ ಲಾಗ್‌ ಪುಸ್ತಕ ಮತ್ತು ಭರಿಸಿರುವ ವೆಚ್ಚಕ್ಕೆ ಸಂಬಂಧಿಸಿದಂತೆ ಬಿಲ್‌ಗಳನ್ನು ನಮೂದಿಸಿಲ್ಲ.  ಕೆಲವು ಬಿಲ್‌ಗಳಲ್ಲಿ ರೂಟ್‌ ಮ್ಯಾಪ್‌ಗಳನ್ನು ಲಗತ್ತಿಸದಿರುವ ಅಂಶ ವರದಿಯಿಂದ  ತಿಳಿದು ಬಂದಿದೆ. 

ಸ್ವಂತ ಚೆಕ್‌ನಲ್ಲಿ ವ್ಯವಹರಿಸಿದ ಅಧಿಕಾರಿಗಳು

2017-18ನೇ ಸಾಲಿಗೆ ಸಂಬಂಧಿಸಿದ ಕೈ ನಗದು ಪುಸ್ತಕ ಮಂಡಳಿಯ ಮತ್ತೊಂದು ನಿಯಮಬಾಹಿರ ಕ್ರಮವನ್ನು ಹೊರಗೆಡವಿದೆ. ನಿಯಮಾನುಸಾರ 500 ರು.ಗಳನ್ನು ಮೀರಿದ ವೆಚ್ಚವನ್ನು ಚೆಕ್‌ ಮೂಲಕವೇ ಪಾವತಿಸಬೇಕು. ಆದರೆ ಮಂಡಳಿ ಅಧಿಕಾರಿಗಳು 20 ಲಕ್ಷ ರು.ಗಳನ್ನು ಸ್ವಂತ ಚೆಕ್‌ ಮೂಲಕ ಹಣ ಸೆಳೆದಿದ್ದಾರೆ. ಸ್ವಂತ ಚೆಕ್‌ ವ್ಯವಹಾರಗಳನ್ನು ರದ್ದುಗೊಳಿಸಿದ್ದರೂ 20 ಲಕ್ಷ ರು.ಗಳನ್ನು ಸೆಳೆದಿರುವುದು ನಿಯಮಬಾಹಿರ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಉಲ್ಲೇಖವಾಗಿದೆ. 

ಶಿಕ್ಷಕರಿಂದ ಆಗದ ದಂಡ ವಸೂಲಿ

ಎಸ್‌ಎಸ್‌ಎಲ್‌ಸಿ ಉತ್ತರಪತ್ರಿಕೆಗಳನ್ನು ಅಸಮಪರ್ಕವಾಗಿ ಮೌಲ್ಯಮಾಪನ ಮಾಡಿದ ಶಿಕ್ಷಕರಿಂದ ದಂಡವನ್ನು ಮಂಡಳಿ ವಸೂಲಿ ಮಾಡಿಲ್ಲ. 2017ರ ಏಪ್ರಿಲ್‌ ಮತ್ತು ಜೂನ್‌ನಲ್ಲಿ ಪರೀಕ್ಷೆ ದಂಡ ಸೇರಿದಂತೆ ಒಟ್ಟು 12,92,200 ರು.ಗಳನ್ನು ಶಿಕ್ಷಕರಿಂದ ವಸೂಲಿ ಮಾಡದಿರುವುದು ಮಂಡಳಿಯ ನಿರ್ಲಕ್ಷ್ಯಕ್ಕೆ ನಿದರ್ಶನವಾಗಿದೆ.

ರದ್ದಿ ಕಾಗದದಲ್ಲೂ ಕೈ ಬೆಚ್ಚಗೆ ಮಾಡಿಕೊಂಡ ಅಧಿಕಾರಿಗಳು

ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆ ಮತ್ತು  ರದ್ದಿ ಕಾಗದವನ್ನು ಇ-ಹರಾಜು ಮೂಲಕ ಮಾಡಿರುವ ಮಾರಾಟದಲ್ಲಿಯೂ ಕೈ ಬೆಚ್ಚಗೆ ಮಾಡಿಕೊಂಡಿರುವ ಅಧಿಕಾರಿಗಳು ಮಂಡಳಿಗೆ ನಷ್ಟ ಮಾಡಿದ್ದಾರೆ. ಅಂದಾಜು ಬಿಡ್‌  ಮೌಲ್ಯ 4,40,000 ರು.ಗಳು ಎಂದು ನಿಗದಿಪಡಿಸಲಾಗಿತ್ತು. ಆದರೆ ಏಕಾಏಕಿ ಶೇ.10ರಷ್ಟು ದರ ಕಡಿಮೆ  ಮಾಡಿದ ಮಂಡಳಿ ಅಧಿಕಾರಿಗಳು, ಅಂದಾಜು ಬಿಡ್‌ ಮೊತ್ತವನ್ನು 3,96,000 ನಿಗದಿಪಡಿಸಿರುವುದು ಸಂಸ್ಥೆಯ ನಷ್ಟಕ್ಕೆ  ಕಾರಣವಾಯಿತು ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ  ವಿವರಿಸಿದ್ದಾರೆ. 

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2017-18ನೇ ಸಾಲಿನಲ್ಲಿ ವಿವಿಧ  ವಿಭಾಗಗಳಲ್ಲಿ ನಡೆಸಿದ್ದ ಒಟ್ಟು 14 ಕೋರ್ಸ್‌ಗಳ ಪರೀಕ್ಷೆಗಳ ವಿವರವನ್ನೇ ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ.  ಪರೀಕ್ಷೆಗೆ ನೋಂದಣಿ ಮಾಡಿದ  ವಿದ್ಯಾರ್ಥಿಗಳ ಸಂಖ್ಯೆ, ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳ ಸಂಖ್ಯೆ, ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ, ಉತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಮುದ್ರಿಸಿ ಮತ್ತು ವಿತರಿಸಿದ ಪ್ರಮಾಣ ಪತ್ರಗಳ ಸಂಖ್ಯೆಯನ್ನು ಒದಗಿಸದಿರುವುದು ಹಲವು ಅನುಮಾನಗಳಿಗೆ  ದಾರಿಮಾಡಿಕೊಟ್ಟಿದೆ. 

the fil favicon

SUPPORT THE FILE

Latest News

Related Posts