ಅಸಮ್ಮತಿ ನಡುವೆಯೂ ನೇಮಕಾತಿ; ಮುಖ್ಯಮಂತ್ರಿಗಳ ಸಚಿವಾಲಯದಿಂದಲೇ ಸಚಿವ ಸಂಪುಟದ ದುರ್ಬಳಕೆ ?

ಸರ್ಕಾರದ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ  ಮೇಲೆ ನಡೆಸುವ ನೇಮಕಾತಿಗೆ ಸಂಬಂಧಿಸಿದಂತೆ ಆರ್ಥಿಕ ಮತ್ತು ಕಾನೂನು ಇಲಾಖೆ ನೀಡುವ ಅಭಿಪ್ರಾಯಗಳನ್ನು ಬದಿಗಿರಿಸುವ ಪರಿಪಾಠ ಬಿಜೆಪಿ ಸರ್ಕಾರದಲ್ಲೂ ಮುಂದುವರೆದಿದೆ. 

ಆರ್ಥಿಕ ಮತ್ತು ಕಾನೂನು ಇಲಾಖೆ ಅಭಿಪ್ರಾಯವನ್ನು ಗಾಳಿಗೆ ತೂರುತ್ತಿರುವ ಮುಖ್ಯಮಂತ್ರಿ ಸಚಿವಾಲಯ, ಸಚಿವ ಸಂಪುಟದ ಪರಮಾಧಿಕಾರದ ನೆರಳಲ್ಲಿ ಕಾನೂನು ಉಲ್ಲಂಘಿಸಿ ನೇಮಕಾತಿ ಮುಂದುವರೆಸಿದೆ. 

ಮುಖ್ಯಮಂತ್ರಿಗಳ ಸಚಿವಾಲಯದ ಈ ನಡೆಯನ್ನೇ ಉಳಿದ ಇಲಾಖೆಗಳು ಅನುಸರಿಸುವ ಸಾಧ್ಯತೆಗಳು ಹೆಚ್ಚಿವೆ. ಸರ್ಕಾರ ಹೊರಡಿಸಿರುವ ಆದೇಶ, ಸುತ್ತೋಲೆಗಳನ್ನು ಪಾಲಿಸಬೇಕಿದ್ದ ಅಧಿಕಾರಿಗಳು ತಮಗೆ ಬೇಕಾದವರನ್ನೇ ನೇಮಕ  ಮಾಡಿಕೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಗುತ್ತಿಗೆ ಆಧಾರದ ಮೇಲೆ ನಿವೃತ್ತ ಸಿಬ್ಬಂದಿಯನ್ನು ನೇಮಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ  ಸಹಮತಿ ವ್ಯಕ್ತಪಡಿಸದಿದ್ದರೂ ಸಚಿವ ಸಂಪುಟದ ಅನುಮೋದನೆ ಪಡೆಯಲು ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ ಮಂಡಿಸಿರುವ  ಕಡತವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನುಮೋದಿಸಿದ್ದಾರೆ. ಈಗಾಗಲೇ ಸರ್ಕಾರಿ ಆದೇಶವೂ ಹೊರಬಿದ್ದಿದೆ. ಈ ನೇಮಕಾತಿ ಪ್ರಕ್ರಿಯೆಗೆ  ಸಂಬಂಧಿಸಿದಂತೆ ಕರಡು ಸಚಿವ ಸಂಪುಟದ ಟಿಪ್ಪಣಿ ಪ್ರತಿ ‘ದಿ ಫೈಲ್‌’ ಗೆ ಲಭ್ಯವಾಗಿದೆ. 

ನಿವೃತ್ತ ತಹಶೀಲ್ದಾರ್‌ ಆರ್‌ ಎಸ್‌ ಚಂದ್ರಶೇಖರ, ಕೃಷಿ ಇಲಾಖೆಯ ನಿವೃತ್ತ ಅಧೀಕ್ಷಕ ಹೆಚ್‌ ವಿ ರಾಜೇಂದ್ರ, ಸಚಿವಾಲಯದ  ನಿವೃತ್ತ ಸಹಾಯಕ ಕೆ  ಎಂ ಹನುಮಂತಯ್ಯ, ಬಿ ಎಸ್‌  ಶಿವಮೂರ್ತಿ ಸೇರಿದಂತೆ  ಒಟ್ಟು 7 ಮಂದಿ ನಿವೃತ್ತ ಅಧಿಕಾರಿಗಳನ್ನು ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಗುತ್ತಿಗೆ ಆಧಾರದ ಮೇಲೆ ನೇಮಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ 2019ರ ಸೆಪ್ಟಂಬರ್‌ 12  ಮತ್ತು ಅಕ್ಟೋಬರ್‌ 9ರಂದು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ  ಇಲಾಖೆಗೆ ಟಿಪ್ಪಣಿ ಕಳಿಸಿದ್ದ ವಿಚಾರ ಕರಡು ಸಚಿವ ಸಂಪುಟ ಟಿಪ್ಪಣಿಯಿಂದ ತಿಳಿದು  ಬಂದಿದೆ. 

ಈ ಪೈಕಿ ಬಿ ಎಸ್‌ ಶಿವಮೂರ್ತಿ ಎಂಬುವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿಕಟವರ್ತಿ ಎಂದು  ಹೇಳಲಾಗಿರುವ ಕರ್ನಾಟಕ ವೀರಶೈವ ವಿದ್ಯಾವರ್ಧಕ ಸಂಘದ  ಅಧ್ಯಕ್ಷರಾಗಿದ್ದ  ಬಿ ಎಸ್‌ ಪರಮಶಿವಯ್ಯ ಅವರ ಸೋದರ ಎಂಬುದು ಗೊತ್ತಾಗಿದೆ. 

ಮುಖ್ಯಮಂತ್ರಿಗಳ  ಆಪ್ತ ಕಾರ್ಯದರ್ಶಿ ಕಳಿಸಿದ್ದ ಟಿಪ್ಪಣಿ ಮೇಲೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆರ್ಥಿಕ ಇಲಾಖೆಯ  ಅಭಿಪ್ರಾಯ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಆರ್ಥಿಕ ಇಲಾಖೆ ಇದಕ್ಕೆ ಸಹಮತಿ ವ್ಯಕ್ತಪಡಿಸಿರಲಿಲ್ಲ.

‘ನಿವೃತ್ತಿ  ಅಧಿಕಾರಿ, ನೌಕರರನ್ನು ಗುತ್ತಿಗೆ ಆಧಾರದ ಮೇಲೆ  ಮರು ನೇಮಕಾತಿ ಮಾಡಬಾರದೆಂಬುದು ಸರ್ಕಾರದ ನೀತಿಯಾಗಿರುತ್ತದೆ. ಈ ನೀತಿಯ ಹಿನ್ನೆಲೆಯಲ್ಲಿ ಆರ್‌ ಎಸ್‌ ಚಂದ್ರಶೇಖರ್‌ ಸೇರಿದಂತೆ ಒಟ್ಟು 7 ಮಂದಿ ಅಧಿಕಾರಿ, ನೌಕರರನ್ನು ನಿವೃತ್ತಿ ನಂತರ ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಮರುನೇಮಕಾತಿ ಮಾಡುವಂತೆ ಕೋರಿರುವ ಪ್ರಸ್ತಾವನೆಯನ್ನು ಒಪ್ಪಲಾಗುವುದಿಲ್ಲ,’ ಎಂದು ಡಿಪಿಎಆರ್‌ಗೆ ಸ್ಪಷ್ಟಪಡಿಸಿದೆ. 

ಆದರೆ ಆರ್ಥಿಕ ಇಲಾಖೆ ಅಭಿಪ್ರಾಯವನ್ನು ಬದಿಗಿರಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ‘ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಬಹುದು. ಈ ಪ್ರಸ್ತಾವನೆಗೆ ಕರ್ನಾಟಕ  ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು 1977ರ ಷೆಡ್ಯೂಲ್‌ 1 ರ ಕ್ರಮದ ಸಂಖ್ಯೆ 18ರನ್ವಯ ಸಚಿವ ಸಂಪುಟದ ಅನುಮೋದನೆ ಅಗತ್ಯ,’ ಎಂದು ಸಮರ್ಥನೆ ಮಾಡಿಕೊಂಡಿದೆ. 

ಅಷ್ಟೇ ಅಲ್ಲ 2016ರ ಫೆ.29ರಂದು ಹೊರಡಿಸಿದ್ದ ಸುತ್ತೋಲೆ  ಪ್ರಕಾರ ನಿವೃತ್ತಿ ಹೊಂದಿದ  ನೌಕರರನ್ನು ಪುನರ್‌ ನೇಮಕ ಮಾಡುವಂತಿಲ್ಲ ಎಂದು ಹೇಳುವ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ, ಸಚಿವ ಸಂಪುಟದ  ಅನುಮೋದನೆ ಪಡೆದು ಪುನರ್‌ ನೇಮಕಗೊಂಡ ನೌಕರರ ಮತ್ತು ಅಧಿಕಾರಿಗಳ ಪ್ರಕರಣಗಳಿಗೆ ಅನ್ವಯಿಸುವುದಿಲ್ಲವೆಂದೂ ಸಮರ್ಥಿಸಿಕೊಂಡಿದೆ.  

ಆರ್ಥಿಕ ಇಲಾಖೆಯ ಅಸಮ್ಮತಿ ನಡುವೆಯೂ ನೇಮಕಕ್ಕೆ ಮುಂದಾಗಿರುವ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ, ಸಚಿವ ಸಂಪುಟ ಅನುಮೋದನೆ ಪಡೆದು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ  ನಿಯಮ 313 (ಬಿ)ಅನ್ವಯ ಸಂಚಿತ ವೇತನ ನಿಗದಿಪಡಿಸಲು ಅತ್ಯಾಸಕ್ತಿ ವಹಿಸಿರುವುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ. 

ಮುಖ್ಯಮಂತ್ರಿ ಸೇರಿದಂತೆ ಇತರೆ ಸಚಿವಾಲಯಗಳಲ್ಲಿಯೂ ನಿವೃತ್ತ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇಂತಹ ಪ್ರಸ್ತಾವನೆಗಳಿಗೆ ಆರ್ಥಿಕ ಇಲಾಖೆ ಸಹಮತಿ ವ್ಯಕ್ತಪಡಿಸದಿದ್ದರೂ ಪ್ರತಿ ಸಂಪುಟ ಸಭೆಯಲ್ಲೂ ನಿವೃತ್ತ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ಮುಂದುವರಿಸುವ ಮತ್ತು ಪುನರ್‌ ನೇಮಕಗೊಳಿಸಲು ಸಾಮಾನ್ಯವೆಂಬಂತೆ ಅನುಮೋದನೆ  ಪಡೆಯಲಾಗುತ್ತಿದೆ. 

ಆಡಳಿತ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ನೆಪವೊನ್ನೊಡ್ಡಿ  ನಿವೃತ್ತಿಗೊಂಡವರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗುತ್ತಿದೆ.ಆಯಕಟ್ಟಿನ ಜಾಗಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅದರಲ್ಲೂ ಪ್ರಮುಖ ಹುದ್ದೆಗಳಲ್ಲಿ ನಿವೃತ್ತ ನೌಕರರ ಸಂಖ್ಯೆ ಮಿತಿ ಮೀರುತ್ತಿದೆ.

ಕಳೆದ ಹಲವು  ವರ್ಷಗಳಿಂದ ನಿವೃತ್ತ ನೌಕರರನ್ನು ಸೇವೆಯಲ್ಲಿ ಮುಂದುವರಿಸುವ ಪ್ರಕ್ರಿಯೆ ಹೆಚ್ಚಾಗಿದೆ. ಆದರೆ ಸೇವೆಯಲ್ಲಿರುವ ನೌಕರರ ಮತ್ತು ಅಧಿಕಾರಿಗಳಿಗಿರುವ ಹೊಣೆಗಾರಿಕೆ  ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನಿವೃತ್ತ ಅಧಿಕಾರಿ, ನೌಕರರಿಗಿರುವುದಿಲ್ಲ. 

ವಿಪರ್ಯಾಸವೆಂದರೆ ನಿವೃತ್ತ ಅಧಿಕಾರಿ,ನೌಕರರನ್ನು ನೇಮಿಸದಂತೆ 2016ರ ಫೆಬ್ರವರಿಯಲ್ಲಿ ಸುತ್ತೋಲೆ ಹೊರಡಿಸಿದ ನಂತರವೇ ನಿವೃತ್ತ ನೌಕರರ ನೇಮಕಾತಿ ಹೆಚ್ಚಾಗಿದೆ.

 

SUPPORT THE FILE

Latest News

Related Posts