ಲೋಕಾಯುಕ್ತರ ಆಸ್ತಿ ವಿವರ; ಕಾಯ್ದೆ ತಿದ್ದುಪಡಿಗೆ ಧೈರ್ಯ ತೋರದ ಶಾಸಕರು

ಮುಖ್ಯಮಂತ್ರಿಯೂ ಸೇರಿದಂತೆ ವಿಧಾನಸಭೆ, ವಿಧಾನಪರಿಷತ್, ಮಹಾನಗರಪಾಲಿಕೆ, ಜಿಲ್ಲಾ ಪಂಚಾಯ್ತಿ ಸದಸ್ಯರು, ರಾಜ್ಯ ಸರ್ಕಾರದ ಸೇವೆಯಲ್ಲಿರುವ ಡಿ ಗ್ರೂಪ್ ನೌಕರರೂ ಆಯಾ ವರ್ಷದ ಆಸ್ತಿ ಮತ್ತು ದಾಯಿತ್ವ (ಸಾಲಸೋಲ ಕೊಡಬೇಕಾದ ಬಾಧ್ಯತೆ) ಪಟ್ಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಆಜ್ಞೆ ಹೊರಡಿಸುವ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರು ತಮ್ಮ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು 3 ವರ್ಷಗಳಿಂದಲೂ ಸಲ್ಲಿಸಿಲ್ಲ.
ಆಸ್ತಿ ವಿವರ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ನೋಟಿಸ್ ಪಡೆಯುವ ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಆಸ್ತಿ ವಿವರವನ್ನು ಸಲ್ಲಿಸದ ಲೋಕಾಯುಕ್ತರನ್ನು ಪ್ರಶ್ನಿಸುವ ಎದೆಗಾರಿಕೆಯನ್ನು ಪ್ರದರ್ಶಿಸಿಲ್ಲ. ಕರ್ನಾಟಕ ಲೋಕಾಯುಕ್ತ ಕಾಯ್ದೆ ಹಲವು ಬಾರಿ ತಿದ್ದುಪಡಿಗೆ ಒಳಗಾಗುತ್ತಿದೆಯಾದರೂ ಲೋಕಾಯುಕ್ತರು, ಉಪ ಲೋಕಾಯುಕ್ತರು ಕೂಡ ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸುವ ಸಂಬಂಧ ಕಾಯ್ದೆಗೆ ತಿದ್ದುಪಡಿ ತರುವ ಧೈರ್ಯವನ್ನು ಯಾವೊಬ್ಬ ಶಾಸಕರೂ ತೋರುತ್ತಿಲ್ಲ.
ಕಾನೂನಿನಲ್ಲಿ ಹೇಳಿಲ್ಲ ಎಂಬ ತಾಂತ್ರಿಕ ಆಂಶವನ್ನೇ ಮುಂದಿರಿಸಿಕೊಂಡಿರುವ ವಿಶ್ವನಾಥ ಶೆಟ್ಟಿ ಅವರು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡು 3 ವರ್ಷಗಳಾಗಿದ್ದರೂ ಆಸ್ತಿ ವಿವರ ಸಲ್ಲಿಸುವುದರಿಂದ ತಪ್ಪಿಸಿಕೊಳ್ಳುತ್ತಲೇ ಇದ್ದಾರೆ. ಆಸ್ತಿ ವಿವರಗಳನ್ನು ಬಹಿರಂಗಪಡಿಸುವ ಧೈರ್ಯ ಮತ್ತು ಬದ್ಧತೆಯನ್ನೂ ಪ್ರದರ್ಶಿಸಿಲ್ಲ. ಸ್ವಾಯತ್ತ ಸಂಸ್ಥೆಯಾಗಿರುವ ಲೋಕಾಯುಕ್ತದ ಘನತೆ ಕಾಪಾಡಬೇಕಿದ್ದವರೇ ಆಸ್ತಿ ವಿವರ ಸಲ್ಲಿಸುವುದರಿಂದ ನುಣುಚಿಕೊಳ್ಳುತ್ತಿರುವುದೇಕೆ ಎಂಬ ಪ್ರಶ್ನೆಗಳು ಎದ್ದಿವೆ.
ಲೋಕಾಯುಕ್ತರು ಆಸ್ತಿ ವಿವರ ಕೋರಿ ಮಾಹಿತಿ ಹಕ್ಕು ಅಡಿ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರಿಸಿರುವ ಲೋಕಾಯುಕ್ತ ಸಂಸ್ಥೆಯ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಯೂ ಆಗಿರುವ ಉಪ ನಿಬಂಧಕರು ‘ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 22ರಲ್ಲಿ ಸಾರ್ವಜನಿಕರು/ಚುನಾಯಿತ ಜನಪ್ರತಿನಿಧಿಗಳು ಮಾತ್ರ ಲೋಕಾಯುಕ್ತ ಸಂಸ್ಥೆಗೆ ಪ್ರತಿ ವರ್ಷ ಆಸ್ತಿ ಮತ್ತು ದಾಯಿತ್ವ ಪಟ್ಟಿಯನ್ನು ಸಲ್ಲಿಸಬೇಕಾಗಿರುತ್ತದೆ ಎಂದು ತಿಳಿಸುತ್ತದೆ. ಸದರಿ ಕಾಯ್ದೆ ಅಥವಾ ಕಾಯ್ದೆಯ ಅಡಿಯಲ್ಲಿ ಗೌರವಾನ್ವಿತ ಲೋಕಾಯುಕ್ತರು/ಉಪ ಲೋಕಾಯುಕ್ತರು ಆಸ್ತಿ ವಿವರಗಳನ್ನು ಸಲ್ಲಿಸಬೇಕೆಂದು ಹೇಳಿರುವುದಿಲ್ಲ,’ ಎಂದು ಸಮಜಾಯಿಷಿ ನೀಡಿದ್ದಾರೆ.
ಆದರೆ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮತ್ತು ಉಪ ಲೋಕಾಯುಕ್ತರಾಗಿದ್ದ ಸುಭಾಷ್ ಬಿ ಆಡಿ ಅವರು ಆಸ್ತಿ ವಿವರ ಸಲ್ಲಿಸಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು.
ಕಾಯ್ದೆಯಲ್ಲೇನಿದೆ?
ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ರ ಕಲಂ 22ರಲ್ಲಿ ‘ಸಾರ್ವಜನಿಕ ನೌಕರರು ಸ್ವತ್ತಿನ ಹೇಳಿಕೆಯನ್ನು ಒಪ್ಪಿಸುವ ಸಂಬಂಧ ಸ್ಪಷ್ಟಪಡಿಸಿದೆ. ಸರ್ಕಾರಿ ನೌಕರರನ್ನುಳಿದು 7ನೇ ಪ್ರಕರಣದ(1)ನೇ ಉಪ ಪ್ರಕರಣದಲ್ಲಿ ಉಲ್ಲೇಖಿಸಿದ ಪ್ರತಿಯೊಬ್ಬ ಸಾರ್ವಜನಿಕ ನೌಕರನು ಈ ಅಧಿನಿಯಮ ಪ್ರಾರಂಭವಾದ ತರುವಾಯ 3 ತಿಂಗಳೊಳಗೆ ಮತ್ತು ಆ ತರುವಾಯ ಪ್ರತಿ ವರ್ಷ ಜೂನ್ 30ರೊಳಗೆ (ತನ್ನ ಆಸ್ತಿಗಳ ಮತ್ತು ಹೊಣೆಗಾರಿಕೆ) ತನ್ನ ಕುಟುಂಬದ ಸದಸ್ಯರುಗಳ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ಹೇಳಿಕೆಯನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸತಕ್ಕದ್ದು,’ ಎಂದು ಹೇಳಿದೆ.
2 ವರ್ಷ ಕಳೆದರೂ ಲೋಕಾಯುಕ್ತರೇ ಆಸ್ತಿ ವಿವರ ಘೋಷಣೆ ಮಾಡದಿರುವುದು ಬೇಸರದ ಸಂಗತಿ. ಇದರಿಂದ ಲೋಕಾಯುಕ್ತ ಸಂಸ್ಥೆ ಮೇಲಿನ ನಂಬಿಕೆ ಕಳೆದು ಹೋಗುತ್ತದೆ. ಲೋಕಾಯುಕ್ತರಾಗಿ ಸಂಸ್ಥೆಯ ಅಧಿಕಾರ ವಹಿಸಿಕೊಂಡ ನಂತರ ಅದರ ಘನತೆಯನ್ನು ಅವರೇ ಕಾಪಾಡಬೇಕು ಎನ್ನುತ್ತಾರೆ ಜನಾಧಿಕಾರ ಸಂಘರ್ಷ ಪರಿಷತ್ ನ ಆದರ್ಶ ಐಯ್ಯರ್.
ಸ್ವಾಯತ್ತ ಸಂಸ್ಥೆಯ ಅಧಿಕಾರ ಸ್ವೀಕರಿಸಿರುವ ಲೋಕಾಯುಕ್ತರು, ಉಪ ಲೋಕಾಯುಕ್ತರು ಆಸ್ತಿ ವಿವರಗಳನ್ನು ಜಾಲತಾಣದಲ್ಲಿ ಪ್ರಕಟಿಸಿ ಪ್ರಾಮಾಣಿಕತೆಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಅವರು ತಮ್ಮ ಜವಾಬ್ದಾರಿಯನ್ನು ತೋರಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರು ಪತ್ರಿಕೆಯಲ್ಲಿ ಪ್ರಕಟಿಸಿ ಶಿಸ್ತು ಕ್ರಮಕ್ಕಾಗಿ ರಾಜ್ಯಪಾಲರಿಗೆ ಶಿಫಾರಸು ಮಾಡುವ ಘನತೆಯ ಹುದ್ದೆಯಲ್ಲಿದ್ದಾರೆ. ಇಂತಹ ಅಧಿಕಾರ ಹೊಂದಿರುವ ಲೋಕಾಯುಕ್ತರು ತಮ್ಮ ಆಸ್ತಿ ವಿವರ ಸಲ್ಲಿಸುವ ಮೂಲಕ ಪಾರದರ್ಶಕವಾಗಿರಬೇಕಿದ್ದವರೇ ಹಿಂಜರಿಯುತ್ತಿರುವುದಾದರೂ ಏಕೆ ಎಂದು ಜನಾಧಿಕಾರ ಸಂಘರ್ಷ ಪರಿಷತ್ನ ಕಾರ್ಯದರ್ಶಿ ಪ್ರಕಾಶ್ ಪ್ರಶ್ನಿಸಿದ್ದಾರೆ.
ಲೋಕಾಯುಕ್ತ ಘನತೆಯುಳ್ಳ ಹುದ್ದೆ. ಅಂತಹ ಹುದ್ದೆ ಅಲಂಕರಿಸಿದವರು ತಮ್ಮ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಿತ್ತು. ಜನರ ಅವಹಾಲುಗಳನ್ನು ಆಲಿಸುವ ಲೋಕಾಯುಕ್ತರು ತಮ್ಮ ಆಸ್ತಿ ವಿವರ ಪ್ರಕಟಿಸಿದರೆ ತಪ್ಪೇನಿಲ್ಲ ಎಂಬ ವಾದಗಳು ಕೇಳಿ ಬಂದಿವೆ.
‘ಆಸ್ತಿ ವಿವರ ಸಲ್ಲಿಕೆ ಸಂಬಂಧ ವಿಶ್ವನಾಥ ಶೆಟ್ಟಿ ಅವರು ಹೇಳಿರುವುದು ಕಾನೂನು ಚೌಕಟ್ಟಿನಲ್ಲಿ ಸರಿ ಇದೆ. ಆದರೆ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಗಷ್ಟೇ ತಮ್ಮ ಆಸ್ತಿಯನ್ನು ಬಹಿರಂಗಗೊಳಿಸುವ ಧೈರ್ಯ ಮತ್ತು ಬದ್ಧತೆ ಇರಲಿಕ್ಕೆ ಸಾಧ್ಯ,’ ಎನ್ನುತ್ತಾರೆ ದಕ್ಷ ಲೀಗಲ್ ನ ಬಸವರಾಜ್.
ಆಸ್ತಿ ವಿವರ ಸಲ್ಲಿಸದೇ ಚುನಾಯಿತ ಜನಪ್ರತಿನಿಧಿಗಳು ತಪ್ಪಿಸಿಕೊಳ್ಳಲು ಹವಣಿಸಿದಾಗ ಕಾನೂನಿನ ಸೂಕ್ಷ್ಮಗಳನ್ನು ಹುಡುಕಿದ್ದ ಹಿಂದಿನ ಲೋಕಾಯುಕ್ತರು ನಡುಕ ಹುಟ್ಟಿಸಿದ್ದನ್ನು ಸ್ಮರಿಸಬಹುದು.
ಅಲ್ಲದೆ, ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಗಳಾಗಿದ್ದ ಡಿ.ವಿ.ಶೈಲೇಂದ್ರಕುಮಾರ್ ಅವರು 2009ರಲ್ಲಿ ಇಡೀ ದೇಶದಲ್ಲೇ ಮೊದಲ ಬಾರಿಗೆ ತಮ್ಮ ಹಾಗೂ ತಮ್ಮ ಕುಟುಂಬದವರ ಆಸ್ತಿ ವಿವರ ಪ್ರಕಟಿಸುವ ಮೂಲಕ ನ್ಯಾಯಾಂಗ ಕ್ಷೇತ್ರದಲ್ಲಿ ಪಾರದರ್ಶಕತೆಗೆ ನಾಂದಿ ಹಾಡಿದ್ದರು. ಆದಾದ ನಂತರ ಸುಪ್ರೀಂಕೋರ್ಟ್ ಸೇರಿದಂತೆ ಎಲ್ಲ ಹೈಕೋರ್ಟ್ ಗಳ ನ್ಯಾಯಮೂರ್ತಿಗಳೂ ಆಸ್ತಿ ವಿವರ ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿದ್ದಾರೆ.
ನ್ಯಾಯಾಧೀಶರಷ್ಟೇ ಅಲ್ಲ ಅವರ ಕುಟುಂಬದವರ ವಿವರವನ್ನೂ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ಅಲ್ಲದೆ ಹೈಕೋರ್ಟ್ ನಲ್ಲಿ ಕೆಲಸ ಮಾಡುವ ಎಲ್ಲ ಅಧಿಕಾರಿಗಳು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮ್ಯಾಜಿಸ್ಟ್ರೇಟ್ ಕೋರ್ಟ್, ಸಣ್ಣ ವ್ಯಾಜ್ಯಗಳ ನ್ಯಾಯಾಲಯ, ತ್ವರಿತ ಗತಿ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ, ನ್ಯಾಯಮಂಡಳಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸುವ ಸಂಬಂಧ ಮಾದರಿಯನ್ನೂ ಬಿಡುಗಡೆಗೊಳಿಸಿತ್ತು.
ಜೀವ ವಿಮಾ ಪಾಲಿಸಿ, ಭವಿಷ್ಯ ನಿಧಿ, ಠೇವಣಿ ವಿವರ ಹಾಗೂ ಇತರ ಆದಾಯದ ಮೂಲಗಳಿದ್ದರೆ ಅವುಗಳ ವಿವರಗಳನ್ನೂ ಆಸ್ತಿ ವಿವರಗಳಲ್ಲಿ ನಮೂದಿಸಿರುವ ಸ್ಪಷ್ಟವಾಗಿ ಸಲ್ಲಿಸಲು ಸೂಚಿಸಿತ್ತಲ್ಲದೆ, ಒಂದು ವೇಳೆ ನಮೂದಿಸದೇ ಇದ್ದರೆ ಅದನ್ನು ದುರ್ನಡತೆ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಿತ್ತು.

the fil favicon

SUPPORT THE FILE

Latest News

Related Posts