ಅನುಮತಿ ಇಲ್ಲದೆಯೇ ಗಣಿಗಾರಿಕೆ; 15.21 ಕೋಟಿ ಮೊತ್ತದ ಖನಿಜ ಮುಟ್ಟುಗೋಲು

ಕೇಂದ್ರ ಸರ್ಕಾರ ಹಾಗೂ ಹೈದರಾಬಾದ್‌ನ ಪರಮಾಣು ಖನಿಜಗಳ ನಿರ್ದೇಶನಾಲಯದ ಅನುಮತಿ ಪಡೆಯದೆಯೇ ಕರ್ನಾಟಕ ರಾಜ್ಯ ಖನಿಜಗಳ ನಿಗಮವು ₹15.21 ಕೋಟಿ ಮೊತ್ತದ ಪರಮಾಣು ಖನಿಜಗಳ ಗಣಿಗಾರಿಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಖನಿಜಗಳ ರಿಯಾಯಿತಿ ನಿಯಮಗಳ ಪ್ರಕಾರ ಪೂರ್ವಾನುಮತಿ ಪಡೆಯಬೇಕಿತ್ತು. ನಿರ್ದೇಶನಾಲಯಕ್ಕೆ ಮಾಹಿತಿ ನೀಡದ ಕಾರಣಕ್ಕೆ ₹15.21 ಕೋಟಿ ಮೊತ್ತದ ಖನಿಜವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು ಎಂದು ಭಾರತೀಯ ಲೆಕ್ಕ ನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಂಪನಿಯು ಹಾಸನ ಜಿಲ್ಲೆಯ ತಗಡೂರು ಹಾಗೂ ಚಿಕ್ಕನಹಳ್ಳಿ ಗ್ರಾಮಗಳಲ್ಲಿ 1,200 ಎಕರೆಯಲ್ಲಿ 1976ರಿಂದಲೂ ಕ್ರೋಮೈಟ್‌ ಅದಿರಿನ ಗಣಿಗಾರಿಕೆ ನಡೆಸುತ್ತಿದೆ. ಈ ವೇಳೆಯಲ್ಲಿ ಕಂಪನಿಯು ಟೆಟಾನಿಫರಸ್‌ ಮ್ಯಾಗ್ನಟೈಟ್‌, ಡ್ಯುನೈಟ್‌, ಸರ್ಪೆನ್ಟಿನೈಟ್‌, ಟ್ಯಾಲ್ಕ್‌ ಹಾಗೂ ಕ್ವಾರ್ಟ್ಸ್ ಖನಿಜಗಳನ್ನು ಕಂಡುಹಿಡಿಯಿತು. ಟೆಟಾನಿಫರಸ್‌ ಮ್ಯಾಗ್ನಟೈಟ್‌ ಪರಮಾಣು ಖನಿಜ ಗುಂಪಿಗೆ ಸೇರಿದೆ.
ಈ ಖನಿಜಗಳ ಗಣಿಗಾರಿಕೆ ಗುತ್ತಿಗೆಯನ್ನು 20 ವರ್ಷಗಳ ಅವಧಿಗೆ ನೀಡುವ ಸಲುವಾಗಿ ಕಂಪನಿಯು ಗಣಿ ಹಾಗೂ ಭೂವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿತು. ಈ ಖನಿಜಗಳನ್ನು ಹೊರತೆಗೆಯಲು ಇಲಾಖೆ 2005ರಲ್ಲಿ ಅನುಮತಿ ನೀಡಿತು. ಈ ನಡುವೆ, ಕಂಪನಿಯು ಕ್ರೋಮೈಟ್‌ ಹಾಗೂ ಟೆಟಾನಿಫರಸ್‌ ಮ್ಯಾಗ್ನಟೈಟ್‌ನ ಮಾರಾಟಕ್ಕಾಗಿ ಕಂಪನಿಯು 2016ರಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿತು. ಎರಡು ಕಂಪನಿಗಳಿಗೆ 34,521 ಟನ್‌ ಅದಿರು ಮಾರಾಟಕ್ಕೆ ಪತ್ರಗಳನ್ನು ನೀಡಿತು.
ಗಣಿಗಳಿಂದ ಖನಿಜಗಳ ಸಾಗಣೆಗೆ ಅನುಕೂಲ ಕಲ್ಪಿಸಲು ಖರೀದಿದಾರರಿಗೆ ಖನಿಜ ರವಾನೆ ಪರವಾನಗಿ ನೀಡುವಂತೆ ಗಣಿ ಹಾಗೂ ಭೂವಿಜ್ಞಾನ ಇಲಾಖೆಗೆ ಕಂಪನಿ 2016ರಲ್ಲಿ ಕೋರಿತು. ಗಣಿಗಾರಿಕೆ ಗುತ್ತಿಗೆ ನೀಡುವ ಮೊದಲು ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ಇಲಾಖೆಯು ಖನಿಜ ಸಾಗಣೆಗೆ ಅನುಮತಿ ನಿರಾಕರಿಸಿತು. ಜತೆಗೆ, ಗಣಿಗಾರಿಕೆ ಗುತ್ತಿಗೆಯನ್ನು ರದ್ದುಪಡಿಸಿತು.
ಖನಿಜಗಳ ಹರಾಜಿನಿಂದ ಇಲ್ಲಿಯವರೆಗೆ ಸ್ವೀಕರಿಸಿದ ಮೊತ್ತವನ್ನು ಸರ್ಕಾರದ ಬಳಿ ಠೇವಣಿ ಇಡಬೇಕು ಎಂದು ತಾಕೀತು ಮಾಡಿತು. ಗಣಿಯಿಂದ ಹೊರತೆಗೆದ 19,649 ಟನ್‌ಗಳಷ್ಟು ಕ್ರೋಮೈಟ್‌ ಹಾಗೂ 53,337 ಟನ್‌ಗಳಷ್ಟು ಟಿಟಿನಿಫೆರಸ್‌ ಮ್ಯಾಗ್ನಟೈಟ್ ಖನಿಜವನ್ನು ಮುಟ್ಟುಗೋಲು ಹಾಕಿಕೊಂಡಿತು.

the fil favicon

SUPPORT THE FILE

Latest News

Related Posts