ಕೇಂದ್ರ ಪುರಸ್ಕೃತ ಯೋಜನೆ; 8 ಇಲಾಖೆಗಳಿಗಿಲ್ಲ ಬಿಡಿಗಾಸು, ಕೇಂದ್ರದಿಂದಲೇ 16,534 ಕೋಟಿ ಬಾಕಿ

ಬೆಂಗಳೂರು; ವಸತಿ ಸೇರಿದಂತೆ ಒಟ್ಟು 8 ಇಲಾಖೆಗಳಲ್ಲಿ ಜಾರಿಗೊಂಡಿರುವ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು 2021ರ ಮೇ ಅಂತ್ಯಕ್ಕೆ ಬಿಡಿಗಾಸನ್ನೂ ನೀಡಿಲ್ಲ. ಉಳಿದ ಇಲಾಖೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ನಿಗದಿಪಡಿಸಿರುವ ಒಟ್ಟು ಅನುದಾನದಲ್ಲಿ 29,739 ಕೋಟಿ ರು. ಬಿಡುಗಡೆಗೆ ಬಾಕಿ ಇದೆ. ಇದರಲ್ಲಿ ಕೇಂದ್ರ ಸರ್ಕಾರದಿಂದಲೇ 16,534 ಕೋಟಿ ರು. ಬಾಕಿ ಉಳಿದಿದೆ.

ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ 2021ರ ಜುಲೈ 20ರಂದು ವಿಧಾನಸೌಧದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ 8 ಇಲಾಖೆಗಳಿಗೆ ಬಿಡಿಗಾಸೂ ನೀಡಿಲ್ಲದಿರುವುದು ಮುನ್ನೆಲೆಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನೊಳಗೊಂಡ ಪ್ರಗತಿ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸಕಾಲದಲ್ಲಿ ಅನುದಾನ ಬಿಡುಗಡೆ ಆಗದ ಕಾರಣ ಕೇಂದ್ರ ಪುರಸ್ಕೃತ ಯೋಜನೆಗಳು ರಾಜ್ಯದಲ್ಲಿ ತೆವಳುತ್ತಿವೆ. ಅನುದಾನ ಬಿಡುಗಡೆಯಲ್ಲಿನ ವಿಳಂಬದ ಕುರಿತು ಸಚಿವ ವಿ ಸೋಮಣ್ಣ, ಬಿ ಸಿ ಪಾಟೀಲ್‌, ಡಾ ಸಿ ಎನ್‌ ಅಶ್ವಥ್‌ನಾರಾಯಣ್‌, ಕೋಟ ಶ್ರೀನಿವಾಸ ಪೂಜಾರಿ, ಪ್ರಭು ಚವ್ಹಾಣ್‌, ಆರ್‌ ಶಂಕರ್‌ ಅವರು ಈವರೆವಿಗೂ ತುಟಿ ಬಿಚ್ಚಿಲ್ಲ.

ಕೃಷಿ, ಪರಿಶಿಷ್ಟ ವರ್ಗ, ಜಲ ಸಂಪನ್ಮೂಲ, ಹಿಂದುಳಿದ ವರ್ಗ, ಉನ್ನತ ಶಿಕ್ಷಣ, ಪಶು ಸಂಗೋಪನೆ, ರೇಷ್ಮೆ ಇಲಾಖೆಗಳಿಗೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಮೇ 2021ರವರೆಗೆ 2,059.94 ಕೋಟಿ ರು. ಅನುದಾನವನ್ನು ನಿಗದಿಪಡಿಸಿತ್ತು. ಆದರೆ ಈ ಪೈಕಿ ಬಿಡಿಗಾಸೂ ನೀಡಿಲ್ಲದಿರುವುದು ದಾಖಲೆಯಿಂದ ತಿಳಿದು ಬಂದಿದೆ.

8 ಇಲಾಖೆಗಳನ್ನು ಹೊರತುಪಡಿಸಿ ಉಳಿದ ಇಲಾಖೆಗಳಿಗೆ ನಿಗದಿಪಡಿಸಿದ್ದ 37,110.71 (ಕೇಂದ್ರ ಮತ್ತು ರಾಜ್ಯ ಅನುದಾನ ಮತ್ತು ಪ್ರಾಥಮಿಕ ಶಿಲ್ಕ ಸೇರಿ) ಕೋಟಿ ರು. ಪೈಕಿ 7,371.31 ಕೋಟಿ ರು. ಮಾತ್ರ ಬಿಡುಗಡೆಯಾಗಿದೆ. ಇನ್ನೂ 29,739.4 ಕೋಟಿ ರು. ಬಿಡುಗಡೆಗೆ ಬಾಕಿ ಇದೆ. ಬಿಡುಗಡೆಯಾಗಿರುವ 7,371.31 ಕೋಟಿ ರು.ನಲ್ಲಿ 3,653.32 ಕೋಟಿ ರು. ವೆಚ್ಚ ಮಾಡಿ ಇನ್ನೂ 3,717.99 ಕೋಟಿ ಉಳಿಕೆ ಮಾಡಿದೆ. ಒಟ್ಟು ಅನುದಾನದಕ್ಕೆ ಎದುರಾಗಿ ಕೇಂದ್ರದಿಂದ ಬಿಡುಗಡೆಯಾಗಿರುವ ಅನುದಾನದ ಶೇಕಡವಾರು ಪ್ರಮಾಣ ಕೇವಲ 12.06ರಷ್ಟಿದ್ದರೆ ಶೇಕಡವಾರು ವೆಚ್ಚದ ಪ್ರಮಾಣವು 28.54ರಷ್ಟಿದೆ.

ಅದೇ ರೀತಿ ಕಳೆದ 7 ವರ್ಷಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರವು 92,405 ಕೋಟಿ ರು. ನಿಗದಿಪಡಿಸಿತ್ತು. ಈ ಪೈಕಿ 88,075.28 ಕೋಟಿ ರು.ಬಿಡುಗಡೆಯಾಗಿದೆ. 2019-20, 2020-21ರಲ್ಲಿ ಕೇಂದ್ರದಿಂದ ಒಟ್ಟು 38,030.22 ಕೋಟಿ ರು. ಅನುದಾನದ ಪೈಕಿ 36,229 ಕೋಟಿ ರು.ಬಿಡುಗಡೆಯಾಗಿದ್ದು, ಈ ಪೈಕಿ ಇನ್ನೂ 1,801.22 ಕೋಟಿ ರು. ಬಿಡುಗಡೆ ಮಾಡದೇ ಬಾಕಿ ಉಳಿಸಿಕೊಂಡಿರುವುದು ದಾಖಲೆಯಿಂದ ಗೊತ್ತಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಳೆದ 7 ವರ್ಷಗಳಲ್ಲಿ (ಪ್ರಾಥಮಿಕ ಶಿಲ್ಕು ಸೇರಿ) ಒಟ್ಟು 1,73,873.36 ಕೋಟಿ ರು. ಬಿಡುಗಡೆಯಾಗಿದ್ದರೆ ಇದರಲ್ಲಿ 1,69,010.81 ಕೋಟಿ ರು. ವೆಚ್ಚವಾಗಿದೆ. ಇನ್ನೂ 4,862.55 ಕೋಟಿ ರು. ಉಳಿಕೆಯಾಗಿತ್ತು.

ಕಳೆದ ವರ್ಷವೂ ಇದೇ ಕಥೆ

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ 2021ರ ಜನವರಿ 21 ಅಂತ್ಯಕ್ಕೆ ಶೇ. 50ಕ್ಕಿಂತಲೂ ಕಡಿಮೆ ಅನುದಾನ ಬಿಡುಗಡೆಯಾಗಿತ್ತು. 100 ಕೋಟಿ ರು.ಗಿಂತ ಹೆಚ್ಚಿನ ಅನುದಾನವಿರುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ 2020-21ನೇ ಸಾಲಿಗೆ ಒಟ್ಟು 2,948.94 ಕೋಟಿ ರು. ಅನುದಾನವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿತ್ತು. ಆದರೆ ಈ ಪೈಕಿ 2020ರ ಡಿಸೆಂಬರ್‌ ಅಂತ್ಯಕ್ಕೆ ಕೇವಲ 529.93 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ. ಇನ್ನೂ 2,419.01 ಕೋಟಿ ರು.ಗಳನ್ನು ಬಿಡುಗಡೆ ಮಾಡಿರಲಿಲ್ಲ.

ಅದೇ ರೀತಿ 10 ಕೋಟಿ ರು.ಗಳಿಗಿಂತ ಹೆಚ್ಚಿನ ಅನುದಾನವಿರುವ ಕಾರ್ಯಕ್ರಮಗಳಲ್ಲೂ ಶೇ.50ಕ್ಕಿಂತ ಕಡಿಮೆ ಬಿಡುಗಡೆಯಾಗಿದೆ. ತುಂಗಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ 242.29 ಕೋಟಿ ರು.ಗಳನ್ನು ಕೇಂದ್ರ ಸರ್ಕಾರವು ಅನುದಾನ ಒದಗಿಸಬೇಕಿತ್ತು. ಆದರೆ ಡಿಸೆಂಬರ್‌ 2020ರ ಅಂತ್ಯಕ್ಕೆ ಕೇವಲ 23.72 ಕೋಟಿ ರು. ಮಾತ್ರ ಬಿಡುಗಡೆ ಮಾಡಿ ಇನ್ನೂ 218.57 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು.

ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಸ್ವಚ್ಛ ಭಾರತ (ನಗರ) ಯೋಜನೆಗೆ ಒಟ್ಟು 120 ಕೋಟಿ ರು.ಅನುದಾನ ಘೋಷಿಸಿದ್ದ ಕೇಂದ್ರ ಸರ್ಕಾರವು ಡಿಸೆಂಬರ್‌ 2020ರ ಅಂತ್ಯದವರೆಗೂ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಅದೇ ರೀತಿ ವಸತಿ ಇಲಾಖೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಪ್ರಧಾನ ಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ)ಗೆ 300 ಕೋಟಿ ರು. ಅನುದಾನ ಘೋಷಣೆಯಾಗಿದೆಯಾದರೂ ಡಿಸೆಂಬರ್‌ 2020ರ ಅಂತ್ಯಕ್ಕೆ ಬಿಡಿಗಾಸನ್ನೂ ನೀಡಿರಲಿಲ್ಲ.

ಪೂರಕ ಪೌಷ್ಠಿಕ ಆಹಾರ ಯೋಜನೆಗೆ ಕೇಂದ್ರ ಸರ್ಕಾರವು ಘೋಷಿಸಿದ್ದ 599.44 ಕೋಟಿ ರು. ಅನುದಾನದ ಪೈಕಿ ಡಿಸೆಂಬರ್‌ 2020ರ ಅಂತ್ಯಕ್ಕೆ 156.60 ಕೋಟಿ ರು.ಮಾತ್ರ ಬಿಡುಗಡೆ ಮಾಡಿದೆ. ಪ್ರಧಾನಮಂತ್ರಿ ಆವಾಜ್‌ ಯೋಜನೆ (ನಗರ)ಗೆ 515.00 ಕೋಟಿ ರು ಪೈಕಿ ಕೇವಲ 9.19 ಕೋಟಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌)ಗೆ 402.05 ಕೋಟಿ ರು. ಪೈಕಿ 117.29 ಕೋಟಿ, ಅಮೃತ್‌ ಮಿಷನ್‌ ಯೋಜನೆಗೆ 290.57 ಕೋಟಿ ರು. ಪೈಕಿ ಕೇವಲ 0.51 ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ 237.50 ಕೋಟಿ ರು.ನಲ್ಲಿ 79.13 ಕೋಟಿ, ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಗೆ 218.97 ಕೋಟಿ ರು.ನಲ್ಲಿ 109.48 ಕೋಟಿ ರು., ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ 145.50 ಕೋಟಿ ರು. ಪೈಕಿ 11.22 ಕೋಟಿ, ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಯೋಜನೆಗೆ 119.91 ಕೋಟಿ ರು.ನಲ್ಲಿ 46.51 ಕೋಟಿ ರು.ಮಾತ್ರ ಬಿಡುಗಡೆ ಮಾಡಿತ್ತು.

ಅದೇ ರೀತಿ 10 ಕೋಟಿಗಿಂತ ಹೆಚ್ಚಿನ ಅನುದಾನವಿರುವ ಕಾರ್ಯಕ್ರಮಗಳಾದ ತುಂಗಾ ಮೇಲ್ದಂಡೆ ಯೋಜನೆಗೆ 66.89 ಕೋಟಿ ರು.ಪೈಕಿ ಬಿಡುಗಡೆ ಮಾಡಿದ್ದು ಕೇವಲ 4.45 ಕೋಟಿ ಮಾತ್ರ. ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆಗೆ 55.08 ಕೋಟಿ ರು.ನಲ್ಲಿ 14.63 ಕೋಟಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರವು ರಾಷ್ಟ್ರೀಯ ಉಚ್ಚತರ ಶಿಕ್ಷಣ ಅಭಿಯಾನಕ್ಕೆ ಘೋಷಿಸಿದ್ದ 50.40 ಕೋಟಿ ರು.ನಲ್ಲಿ, ರಾಷ್ಟ್ರೀಯ ಆಯುಷ್‌ ಅಭಿಯಾನಕ್ಕೆ 19.63 ಕೋಟಿ, ಮೀನುಗಾರಿಕೆ ಬಂದರುಗಳ ನಿರ್ಮಾಣಕ್ಕೆ 18.75 ಕೋಟಿ, ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನಕ್ಕೆ 18.15 ಕೋಟಿ ರು.ನಲ್ಲಿ ಬಿಡಿಗಾಸನ್ನೂ ನೀಡಿರಲಿಲ್ಲ.

the fil favicon

SUPPORT THE FILE

Latest News

Related Posts