ಚಾಮರಾಜನಗರ ಹತ್ಯಾಕಾಂಡ; ಆಕ್ಸಿಜನ್‌ ಕೊರತೆಯಿಂದಾದ ಸಾವಿನ ವರದಿಯೇಕೆ ನೀಡಲಿಲ್ಲ?

ಬೆಂಗಳೂರು; ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಸಿಐಎಂಎಸ್‌) ಆಮ್ಲಜನಕ ಕೊರತೆಯಿಂದ 24 ಜನರು ಸಾವನ್ನಪ್ಪಿದ್ದರೂ ರಾಜ್ಯ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸದೇ ತನ್ನ ಭಂಡ ನಿರ್ಲಕ್ಷ್ಯತನವನ್ನು ಮೆರೆಯುವ ಮೂಲಕ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದೆ!

ಕೋವಿಡ್‌ –19ರ ಎರಡನೇ ಅಲೆಯ ಸಂದರ್ಭದಲ್ಲಿ, ಆಮ್ಲಜನಕದ ಕೊರತೆಯಿಂದ ಕೋವಿಡ್‌ ರೋಗಿಗಳು ಮೃತಪಟ್ಟ ಬಗ್ಗೆ ರಾಜ್ಯಗಳಿಂದ ವರದಿಯಾಗಿಲ್ಲ ಎಂದು ಕಾಂಗ್ರೆಸ್‌ ಸದಸ್ಯ ಕೆ.ಸಿ. ವೇಣುಗೋಪಾಲ್‌ ಅವರ ಪ್ರಶ್ನೆಗೆ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪವಾರ್‌ ಅವರು ಉತ್ತರಿಸಿರುವುದು ರಾಜ್ಯ ಬಿಜೆಪಿ ಸರ್ಕಾರದ ಹೊಣೆಗೇಡಿತನಕ್ಕೆ ತಾಜಾ ನಿದರ್ಶನವಾಗಿದೆ. ಅಲ್ಲದೆ ಆಕ್ಸಿಜನ್‌ ಕೊರತೆಯಿಂದ ಸಾವು ಸಂಭವಿಸಿಯೇ ಇಲ್ಲ ಎಂದು ಪ್ರತಿಪಾದಿಸುತ್ತಿದ್ದ ಬಿಜೆಪಿ ಸರ್ಕಾರವು ಈಗಲೂ ಅದನ್ನೇ ಮುಂದುವರೆಸಿದೆ!

‘ಮೇ 2 ಮಧ್ಯರಾತ್ರಿಯಿಂದ ಮೇ 3ರ ಮುಂಜಾವಿನವರೆಗೆ ಚಾಮರಾಜನಗರ ಆಸ್ಪತ್ರೆಯಲ್ಲಿ ಆಮ್ಲಜನಕವೇ ಲಭ್ಯವಿರಲಿಲ್ಲ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ಅಭಿಪ್ರಾಯಪಟ್ಟಿತ್ತು. ಅಲ್ಲದೆ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಆದರೆ ಈ ಪ್ರಕರಣ ಕುರಿತು ರಾಜ್ಯ ಸರ್ಕಾರವು ಕೇಂದ್ರಕ್ಕೆ ವರದಿ ಮಾಡಿಲ್ಲವೇ ಅಥವಾ ಒಕ್ಕೂಟ ಸರ್ಕಾರವು ರಾಜ್ಯದಿಂದ ಪ್ರಕರಣದ ಕುರಿತು ವರದಿಯನ್ನು ತರಿಸಿಕೊಂಡಿಲ್ಲವೇಕೆ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

ಆಕ್ಸಿಜನ್‌ ಕೊರತೆಯಿಂದ 24 ಮಂದಿ ಸಾವನ್ನಪ್ಪಿಲ್ಲ ಎಂದು ಆರಂಭದಲ್ಲಿ ಸಚಿವ ಡಾ ಕೆ ಸುಧಾಕರ್‌ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ಪ್ರತಿಪಾದಿಸಿದ್ದಾರಾದರೂ ಆ ನಂತರ ಆಕ್ಸಿಜನ್‌ ಕೊರತೆಯಿಂದ ಸಾವು ಸಂಭವಿಸಿದೆ ಎಂದು ಒಪ್ಪಿಕೊಂಡಿದ್ದರು. ಸಾವಿನ ಸಂಖ್ಯೆ 24 ಅಲ್ಲ ಕೇವಲ 2 ಎಂದು ಹೇಳಿಕೆ ನೀಡಿ ನೈಜ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಹವಣಿಸಿದ್ದರು. ಇದೀಗ ಒಕ್ಕೂಟ ಸರ್ಕಾರಕ್ಕೆ ಈ ಕುರಿತು ವರದಿಯನ್ನೇ ಸಲ್ಲಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಒಕ್ಕೂಟ ಸರ್ಕಾರ ಹೇಳಿರುವುದೇನು?

‘ಆರೋಗ್ಯ ವಿಷಯವು ಆಯಾ ರಾಜ್ಯಗಳಿಗೇ ಸಂಬಂಧಿಸಿದ್ದಾಗಿದ್ದು, ಕೋವಿಡ್‌ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯ ವರದಿಯನ್ನು ನಿಯಮಿತವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿವೆ. ಆದರೆ, ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದ ಬಗ್ಗೆ ರಾಜ್ಯಗಳಿಂದಾಗಲೀ, ಕೇಂದ್ರಾಡಳಿತ ಪ್ರದೇಶಗಳಿಂದಾಗಲೀ ವರದಿ ಬಂದಿಲ್ಲ’ ಎಂದು ಸಚಿವೆ ಹೇಳಿದ್ದಾರೆ.

ಹೈಕೋರ್ಟ್‌ ಸಮಿತಿ ನೀಡಿದ್ದ ವರದಿಯಲ್ಲಿ ಸತ್ಯಾಂಶಗಳಿಲ್ಲವೇ?

24 ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಶಸ್ತ್ರಚಿಕಿತ್ಸಕ ಮತ್ತು ಇತರ ನಾಲ್ವರನ್ನು ಒಳಗೊಂಡ ಸಮಿತಿ ನಡೆಸಿದ ವರದಿಯನ್ನೂ ಸಮಿತಿ ವಿಶ್ಲೇಷಿಸಿತ್ತು. ಆಮ್ಲಜನಕದ ಕೊರತೆಯಿಂದ ಮೂವರು, ಮೆದುಳಿಗೆ ಆದ ಗಾಯದಿಂದ 7 ಮಂದಿ ಮತ್ತು ಕೋವಿಡ್ ಕಾರಣದಿಂದ 14 ಮಂದಿ ಮೃತಪಟ್ಟಿದ್ದಾರೆ ಎಂದು ಆ ಸಮಿತಿಯ ವರದಿ ಹೇಳಿತ್ತು.

‘ನಿರ್ಣಾಯಕ ಸಮಯದಲ್ಲಿ ಅವರಿಗೆ ಆಮ್ಲಜನಕದ ಅಗತ್ಯವಿತ್ತು. ಆದರೆ, ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯೇ ಇರಲಿಲ್ಲ. ಮೃತಪಟ್ಟವರ ಕೇಸ್ ಶೀಟ್‌ಗಳನ್ನು ಗಮನಿಸಿದರೆ ಅವರಿಗೆ ಆಮ್ಲಜನಕದ ಅಭಾವ ಇತ್ತು ಎಂಬುದನ್ನು ಸೂಚಿಸುತ್ತದೆ. ಆಮ್ಲಜನಕ ಕೊರತೆ ಕಾರಣಕ್ಕೆ ಮೆದುಳಿನ ಕೋಶಗಳಿಗೆ ಹಾನಿಯಾಗಿದೆ’ ಎಂದು ಹೈಕೋರ್ಟ್‌ ನೇಮಿಸಿದ್ದ ಸಮಿತಿ ಅಭಿಪ್ರಾಯಪಟ್ಟಿತ್ತು.

‘ಮೈಸೂರಿನಲ್ಲಿನ ಆಮ್ಲಜನಕ ಸಿಲಿಂಡರ್ ಮರುಪೂರಣ ಘಟಕದಿಂದ ಆಸ್ಪತ್ರೆಗೆ ಆಮ್ಲಜನಕ ಸರಬರಾಜು ಮಾಡಿಕೊಳ್ಳುವುದು ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳ ಜವಾಬ್ದಾರಿ. ಆಸ್ಪತ್ರೆಯ ಆಡಳಿತ ಜಾಗರೂಕರಾಗಿದ್ದರೆ, ಪೂರೈಕೆದಾರರು ಸಮಯೋಚಿತವಾಗಿ ಮರುಪೂರಣಗೊಳಿಸಿದ್ದರೆ ಸಾಕಷ್ಟು ಆಮ್ಲಜನಕ ಸಂಗ್ರಹಿಸಬಹುದಿತ್ತು. ಅದನ್ನು ಮಾಡದೆ ಇರುವುದು ಅಮೂಲ್ಯ ಜೀವಗಳ ಹಾನಿಗೆ ಕಾರಣ,’ ಎಂದು ವರದಿ ಹೇಳಿತ್ತು.

ಚಾಮರಾಜನಗರದಲ್ಲಿ ಆಕ್ಸಿಜನ್‌ ಕೊರತೆಯಿಂದ 24 ಜನ ಸಾವನ್ನಪ್ಪಿದ್ದಾರೆ ಎಂದು ಹೈಕೋರ್ಟ್‌ ನೇಮಿಸಿದ್ದ ಸಮಿತಿಯೇ ವರದಿ ಸಲ್ಲಿಸಿದೆ. ಇದೇ ಪ್ರಕರಣದಲ್ಲಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲಾಧಿಕಾರಿಗಳು ಬಹಿರಂಗವಾಗಿ ಕಿತ್ತಾಡಿಕೊಂಡಿದ್ದು ಸಾರ್ವಜನಿಕರಲ್ಲಿ ಇನ್ನೂ ಹಸಿರಾಗಿದೆ. ಹೀಗಿದ್ದರೂ ರಾಜ್ಯ ಬಿಜೆಪಿ ಸರ್ಕಾರವು ನಿರ್ದಿಷ್ಟವಾಗಿ ಚಾಮರಾಜನಗರ ಪ್ರಕರಣದ ಕುರಿತು ಕೇಂದ್ರಕ್ಕೆ ವರದಿ ಮಾಡದೇ ಇರುವುದು ಅಕ್ಷ್ಯಮ್ಯ

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು ಕರ್ನಾಟಕ ರಾಷ್ಟ್ರಸಮಿತಿ

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಜೀವ ಕಳೆದುಕೊಳ್ಳಬೇಕಾದ ದುರಂತ ಘಟನೆ ಇಡೀ ರಾಜ್ಯದ ಮನಕಲಕಿತ್ತು. ರಾಜ್ಯದ ವೈದ್ಯಕೀಯ ಕ್ಷೇತ್ರದ ದುಸ್ಥಿತಿಗೆ ಕನ್ನಡ ಹಿಡಿದಿತ್ತಲ್ಲದೆ ಈ ಪ್ರಕರಣ ಪರಸ್ಪರ ದೋಷಾರೋಪಣೆಗೂ ಕಾರಣವಾಗಿತ್ತು. ರಾಜ್ಯ ಸರ್ಕಾರ, ಜಿಲ್ಲಾಡಳಿತ, ಆಸ್ಪತ್ರೆ ಸಿಬ್ಬಂದಿ ಎಲ್ಲರೂ ಈ ದುರ್ಘಟನೆಯ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸಿದ್ದು ಬಹಿರಂಗವಾಗಿತ್ತು.

ಸೂಕ್ತ ಸಮಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಪೂರೈಕೆ ಮಾಡುವಲ್ಲಿ ಮೈಸೂರು ಜಿಲ್ಲಾಡಳಿತ ವಿಫಲವಾಗಿದೆ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಚಾಮರಾಜನಗರ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಆರೋಪಿಸಿದ್ದರು. ಈ ಘಟನೆಗೆ ಜವಾಬ್ದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದನ್ನು ಸ್ಮರಿಸಬಹುದು.

ಆಸ್ಪತ್ರೆಯಲ್ಲಿದ್ದ ಆಕ್ಸಿಜನ್ ಪೂರೈಕೆ ರಾತ್ರಿ 8 ಗಂಟೆ ಬಳಿಕ ಕಡಿಮೆಯಾಗತೊಡಗಿತ್ತು. ಆಕ್ಸಿಜನ್ ಲಭ್ಯವೇ ಇಲ್ಲವೆಂದಾದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಆಸ್ಪತ್ರೆಯಲ್ಲಿ ಹೊಸ ಆಕ್ಸಿಜನ್ ಘಟಕ ಸ್ಥಾಪಿಸಿದ್ದರೂ ಅದು ಕಾರ್ಯಾಚರಣೆ ನಡೆಸುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಆಸ್ಪತ್ರೆಯು ಆಕ್ಸಿಜನ್‌ಗಾಗಿ ಮೈಸೂರಿನ ಕಂಪೆನಿಗಳು ಅವಲಂಬಿಸಿದ್ದವು.

ಯೂನಿಯನ್ ಸರ್ಕಾರದ ಆರೋಗ್ಯ ಸಚಿವಾಲಯವು ಆಮ್ಲಜನಕದ ಕೊರತೆಯಿಂದ ಕೋವಿಡ್ ಸಾವುಗಳು ಸಂಭವಿಸಿದೆ ಎಂದು ರಾಜ್ಯಗಳು ವರದಿ ಮಾಡಿಲ್ಲ ಎಂದರೆ ನಂಬಲು ಅಸಾಧ್ಯ. ಈ ವಿಷಯದಲ್ಲಿ ಯೂನಿಯನ್ ಅಥವಾ ರಾಜ್ಯ ಸರ್ಕಾರ, ಇವೆರಡರಲ್ಲಿ ಒಂದು ಸರ್ಕಾರ ಸ್ಪಷ್ಟವಾಗಿ ಸುಳ್ಳು ಹೇಳುತ್ತಿವೆ ಎಂದು ಹೇಳಬಹುದು. ಏಕೆಂದರೆ ಚಾಮರಾಜನಗರದ ಮನಸ್ಸಿನಿಂದ ಮಾಸದ ಈ ಕುರಿತ ಸಾವುನೋವುಗಳು ನಮ್ಮ ಕಣ್ಣ ಮುಂದೆಯೇ ಇರುವಾಗ ಕರ್ನಾಟಕದ ಜನತೆಗೆ ಈ ಹೇಳಿಕೆ ಕೇವಲ ಬೇಜವಾಬ್ದಾರಿತನವಲ್ಲ, ಇದು ಆ ಬರ್ಬರ ಸಾವುಗಳ ಅಪಮಾನ. ಈ ಬೇಜವಾಬ್ದಾರಿತನದ ಮತ್ತು ಸಂವೇದನಾಶೀಲತೆ ರಹಿತ ಹೇಳಿಕೆಯನ್ನು ಕೊಡಲು ಕಾರಣಕರ್ತರಾದ ಯೂನಿಯನ್ ಹಾಗೂ ರಾಜ್ಯ ಸರ್ಕಾರವು ಮುಂದಿನ ಚುನಾವಣೆಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ.

ಆದರ್ಶ ಐಯ್ಯರ್‌, ಜನಾಧಿಕಾರ ಸಂಘರ್ಷ ಪರಿಷತ್‌

ಚಾಮರಾಜನಗರಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಸ್ಪತ್ರೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದಿದ್ದಾರೆ. ಆಕ್ಸಿಜನ್ ಪೂರೈಕೆ ಮಾಡಬೇಕಾದ ಸರ್ಕಾರ, ತನ್ನ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾಗಿದೆ. ಇದಕ್ಕೆ ಸಿಎಂ ಮತ್ತು ಆರೋಗ್ಯ ಸಚಿವರೇ ನೇರ ಹೊಣೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದರು.

ಆಕ್ಸಿಜನ್ ಅಭಾವದ ಬಗ್ಗೆ ನಾವು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡುತ್ತಲೇ ಇದ್ದೆವು. ಆದರೆ ಅವರು ನಮ್ಮ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ’ ಎಂದು ಚಾಮರಾಜನಗರದ ಮಾಜಿ ಸಂಸದ ಆರ್. ಧ್ರುವನಾರಾಯಣ್ ಆರೋಪಿಸಿದ್ದರು.

ಇದು ಒಂದು ಕೊಲೆ. ಸರ್ಕಾರವೇ 28 ಜನರನ್ನು ಕೊಂದಿದೆ. ಇದರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದ್ದನ್ನು ಸ್ಮರಿಸಬಹುದು.

‘ಇಡೀ ದೇಶದಲ್ಲಿಯೇ ಕೋವಿಡ್‌ನಿಂದಾದ ಸಾವುಗಳಿಗೆ ಸರಿಯಾಗಿ ಲೆಕ್ಕವನ್ನೇ ಇಟ್ಟಿಲ್ಲ. ಅಂತಾರಾಷ್ಟ್ರೀಯ ಸಂಸ್ಥೆಗಳು ಹೇಳುತ್ತಿರುವ ಪ್ರಕಾರ ಮೊದಲ ಎರಡೂ ಅಲೆಯಲ್ಲಿ ದೇಶಾದ್ಯಂತ 40 ಲಕ್ಷಕ್ಕಿಂತಲೂ ಹೆಚ್ಚು ಜನ ಸತ್ತಿದ್ದಾರೆ. ಅದರೆ ಲೆಕ್ಕ ಸಿಕ್ಕಿರುವುದು ಮಾತ್ರ 4 ಲಕ್ಷ ಮಾತ್ರ. ಕೇವಲ ಕರ್ನಾಟಕ ಮಾತ್ರವಲ್ಲ ಗೋವಾ, ಉತ್ತರಪ್ರದೇಶದಲ್ಲೂ ಆಕ್ಸಿಜನ್‌ ಕೊರತೆಯಿಂದ ದೊಡ್ಡಮಟ್ಟದಲ್ಲಿ ಸಾವುಗಳು ಸಂಭವಿಸಿದ್ದವು. ಆದರೆ ಅದರ ಮಾಹಿತಿಯೇ ಇಲ್ಲ ಎಂದು ಕೇಂಧ್ರ ಸರ್ಕಾರ ಹೇಳೂತ್ತಿರುವುದು ಇವರು ಇಡೀ ಕೋವಿಡ್‌ ನಿರ್ವಹಣೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದು ಇದರಿಂದ ಸಾಬೀತಾಗುತ್ತಿದೆ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಯಾಗದ ಕಾರಣದಿಂದಲೇ ಕೋವಿಡ್ 19 ರೋಗಿಗಳು ಸಾಯುತ್ತಿರುವ ಘಟನೆಗಳು ಅಪರಾಧ ಕೃತ್ಯ ಎಂದು ಪರಿಗಣಿಸಿದ್ದ  ಅಲಹಾಬಾದ್ ಹೈಕೋರ್ಟ್‌ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಚಾಟಿ ಬೀಸಿತ್ತು. ಇದು ಆಕ್ಸಿಜನ್ ಪೂರೈಕೆ ಸರಪಣಿಯನ್ನು ಸಮರ್ಪಕವಾಗಿ ನಿಭಾಯಿಸುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ನಡೆಸುವ ಹತ್ಯಾಕಾಂಡ ಎಂದು ಹೈಕೋರ್ಟ್ ವ್ಯಾಖ್ಯಾನಿಸಿತ್ತು.

the fil favicon

SUPPORT THE FILE

Latest News

Related Posts