ಅನ್ನಭಾಗ್ಯ, ಅನಿಲಭಾಗ್ಯ, ಸಾಮಾಜಿಕ ಭದ್ರತೆ, ನಿರ್ಭಯಾ ನಿಧಿ ಯೋಜನೆಗಳಿಗೆ ಬಿಡಿಗಾಸಿಲ್ಲ!

ಬೆಂಗಳೂರು; ಅನ್ನಭಾಗ್ಯ ಯೋಜನೆಯ ಎನ್‌ಪಿಎಚ್‌ಎಚ್‌ ಫಲಾನುಭವಿಗಳಿಗೆ ಅಕ್ಕಿ ವಿತರಣೆ, ಮುಖ್ಯಮಂತ್ರಿಗಳ ಅನಿಲಭಾಗ್ಯ, ಆಶಾದೀಪ, ನಿರ್ಭಯ ನಿಧಿ ಅಡಿಯಲ್ಲಿ ಬಸ್‌ಗಳಲ್ಲಿ ಸಿಸಿಟಿವಿ ಅಳವಡಿಕೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆ ಸೇರಿದಂತೆ ಹಲವು ಮಹತ್ವಾಕಾಂಕ್ಷೆ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ರಾಜ್ಯ ಬಿಜೆಪಿ ಸರ್ಕಾರವು ಪ್ರಸಕ್ತ ಸಾಲಿನ ಆಗಸ್ಟ್‌ ಅಂತ್ಯದವರೆಗೂ ನಯಾಪೈಸೆಯನ್ನು ಬಿಡುಗಡೆ ಮಾಡಿರಲಿಲ್ಲ.

ಶಾಸಕ ಸುನೀಲ್‌ಗೌಡ ಬಸನಗೌಡ ಪಾಟೀಲ್‌ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) ಅವರು 2020ರ ಸೆ.24ರಂದು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿರುವ ಉತ್ತರವು ಮಹತ್ವಾಕಾಂಕ್ಷೆ ಯೋಜನೆಗಳ ಅನುಷ್ಠಾನಕ್ಕೆ ಕೈಗನ್ನಡಿ ಹಿಡಿದಂತಾಗಿದೆ.

ಆಹಾರ ನಾಗರಿಕ ಸರಬರಾಜು, ಸಾರಿಗೆ, ಉನ್ನತ ಶಿಕ್ಷಣ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌, ಆರೋಗ್ಯ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಸೇರಿದಂತೆ ಹಲವು ಇಲಾಖೆಗಳು ಕೈಗೆತ್ತಿಕೊಳ್ಳಬೇಕಿದ್ದ ಮಹತ್ವದ ಕಾರ್ಯಕ್ರಮಗಳಿಗೆ ಆಗಸ್ಟ್‌ ಅಂತ್ಯದವರೆಗೂ ಬಿಡುಗಡೆ ಮಾಡದ ಕಾರಣ ಈ ಯಾವ ಯೋಜನೆ ಮತ್ತು ಕಾರ್ಯಕ್ರಮಗಳು ಅನುಷ್ಠಾನಗೊಂಡಿಲ್ಲ ಎಂದು ತಿಳಿದು ಬಂದಿದೆ.

ಪ್ರಸಕ್ತ ಸಾಲಿನಲ್ಲಿ ಆಗಸ್ಟ್‌ ಅಂತ್ಯಕ್ಕೆ ವಿವಿಧ ಇಲಾಖೆಗಳಿಗೆ ಒಟ್ಟು 62,576.98 ಕೋಟಿ ರು. ಬಿಡುಗಡೆಯಾಗಿದೆ. ಈ ಪೈಕಿ 48,850 ಕೋಟಿ ರು. ಖರ್ಚಾಗಿದ್ದರೆ 13,726.11 ಕೋಟಿ ಆಗಸ್ಟ್‌ ಅಂತ್ಯದವರೆಗೂ ಖರ್ಚಾಗಿರಲಿಲ್ಲ ಎಂಬುದು ಯಡಿಯೂರಪ್ಪ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಅನ್ನಭಾಗ್ಯ ಯೋಜನೆಯ ವ್ಯಾಪ್ತಿಯಲ್ಲಿದ್ದ ಆದ್ಯತಾ ರಹಿತ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೂ ನಯಾ ಪೈಸೆ ಬಿಡುಗಡೆ ಆಗದಿರುವುದು ಸದನಕ್ಕೆ ನೀಡಿರುವ ಉತ್ತರದಿಂದ ಗೊತ್ತಾಗಿದೆ.

 

ಬಿಡಿಗಾಸಿಲ್ಲದೆ ಅನುಷ್ಠಾನಗೊಳ್ಳದ ಯೋಜನೆಗಳ ಪಟ್ಟಿ

ಆಟೋ ರಿಕ್ಷಾಗಳಿಗೆ ಎಲ್‌ಪಿಜಿ ಕಿಟ್‌ ಜೋಡಣೆ, ಲಾರಿ ಚಾಲಕರಿಗೆ ಪರಿಹಾರ, ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹ ಧನ, ಇಂಜನಿಯರಿಂಗ್‌ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಆಮ್‌ ಆದ್ಮಿ ಭಿಮಾ ಯೋಜನೆ(ಜನಶ್ರೀ), ಕೋಮುಗಲಭೆಯಿಂದ ನಿರಾಶ್ರಿತರಾದವರಿಗೆ ಪಿಂಚಣಿ, ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರ ಮತ್ತು ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾ ಸಿರಿ ಯೋಜನೆ, ಬೆಂಗಳೂರು, ತುಮಕೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್‌ ಕೇಂದ್ರ, ಕಿಮ್ಸ್‌ ಹುಬ್ಬಳ್ಳಿ, ಮಂಡ್ಯ ಪ್ರಾದೇಶಿಕ ವಿಭಾಗದಲ್ಲಿ ಕ್ಯಾನ್ಸರ್‌ ಕೇಂದ್ರ, ಗುಲ್ಬರ್ಗ, ಬೆಂಗಳೂರು, ಹಾಸನದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಕೇಂದ್ರದಲ್ಲಿ 450 ಹಾಸಿಗೆ ಆಸ್ಪತ್ರೆ ನಿರ್ಮಾಣ, ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ, ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಮೂಲಸೌಕರ್ಯ, ಬಾಲಕಾರ್ಮಿಕರ ಪುನರ್ವಸತಿ ಯೋಜನೆ, ಜೈಲು ಮತ್ತು ಜಲಾಶಯಗಳ ಆಧುನೀಕರಣ, ರೈತ ಉತ್ಪಾದಕ ಸಂಸ್ಥೆಗಳು, ಬಾಲ ಸಂಜೀವಿನಿ ಅಡಿಯಲ್ಲಿ ವೈದ್ಯಕೀಯ ವೆಚ್ಚ, ಉಜ್ವಲ ಯೋಜನೆ, ಎಂಎಸ್‌ಇಗಳ ಅಭಿವೃದ್ಧಿ, ಜ್ಞಾನ ಸಂಗಮ (ಕಂಪ್ಯೂಟರ್‌ ಸಾಕ್ಷರತೆ), ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪಕರಣಗಳು, ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಉಪ ಯೋಜನೆಗಳಿಗೆ ಬಿಡಿಗಾಸು ನೀಡದಿರುವುದು ಯಡಿಯೂರಪ್ಪ ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.

ಪ್ರಾಧಿಕಾರ, ಆಯೋಗಗಳಿಗೂ ಇಲ್ಲ ನಯಾ ಪೈಸೆ

ಗಡಿ ಅಭಿವೃದ್ಧಿ ಪ್ರಾಧಿಕಾರ, ಉಪ್ಪಾರ ಅಭಿವೃದ್ಧಿ ನಿಗಮ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ, ಬಾಲ ವಿಕಾಸ ಅಕಾಡೆಮಿ, ಕೂಡಲ ಸಂಗಮ, ಬಸವ ಕಲ್ಯಾಣ, ಕಿತ್ತೂರು ಅಭಿವೃದ್ಧಿ, ಸರ್ವಜ್ಞ ಅಭಿವೃದ್ಧಿ ಅಭಿವೃದ್ಧಿ ಪ್ರಾಧಿಕಾರ, ಅನುಭವ ಮಂಟಪ ನಿರ್ಮಾಣಕ್ಕೂ ಪ್ರಸಕ್ತ ಸಾಲಿನಲ್ಲಿ ಆಗಸ್ಟ್‌ ಅಂತ್ಯದವರೆಗೂ ನಯಾ ಪೈಸೆಯನ್ನು ಬಿಡುಗಡೆ ಮಾಡಿರಲಿಲ್ಲ.

ಹಲವು ಮಹತ್ವಾಕಾಂಕ್ಷೆ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಬಿಡಿಗಾಸನ್ನೂ ಬಿಡುಗಡೆ ಮಾಡದಿರುವುದು ಫಲಾನುಭವಿಗಳನ್ನು ವಂಚಿಸಿದಂತಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

Your generous support will help us remain independent and work without fear.

Latest News

Related Posts