ನೋಟು ಅಮಾನ್ಯೀಕರಣಕ್ಕೆ ಸ್ವ ಸಹಾಯ ಗುಂಪುಗಳು ತತ್ತರ; ಸದಸ್ಯರ ನೆಮ್ಮದಿ ಹರಣ

ಬೆಂಗಳೂರು; ನಕಲಿ ಕರೆನ್ಸಿ ನೋಟು, ಕಪ್ಪು ಹಣದ ನಿರ್ಮೂಲನೆ ಮತ್ತು ವಿದ್ವಂಸಕ ಚಟುವಟಿಕೆಗಳ ನಿಯಂತ್ರಣದ ಹೆಸರಿನಲ್ಲಿ 4 ವರ್ಷಗಳ ಹಿಂದೆ ಜಾರಿಗೊಳಿಸಿದ್ದ ನೋಟು ಅಮಾನ್ಯೀಕರಣವು ರಾಜ್ಯದ ಸ್ವ ಸಹಾಯ ಗುಂಪುಗಳು ತತ್ತರಿಸುವಂತೆ ಮಾಡಿತ್ತು. ಅಲ್ಲದೆ ಸದಸ್ಯರ ನೆಮ್ಮದಿ ಹರಣವೂ ಆಗಿತ್ತು. ಒಟ್ಟಾರೆ ಸ್ವ ಸಹಾಯ ಗುಂಪುಗಳು ಮತ್ತು ಸದಸ್ಯರ ಮೇಲೆ ನೋಟು ಅಮಾನ್ಯೀಕರಣ ವ್ಯತಿರಿಕ್ತ ಪರಿಣಾಮ ಬೀರಿತ್ತು ಎಂಬುದನ್ನು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಬಾಹ್ಯ ಸಂಸ್ಥೆ ಮೂಲಕ ನಡೆಸಿದ್ದ ಅಧ್ಯಯನ ವರದಿ ಹೊರಗೆಡವಿದೆ.

ಕರ್ನಾಟಕದಲ್ಲಿ ಸ್ವ-ಸಹಾಯ ಗುಂಪುಗಳ ಮೇಲೆ ಅನಾಣ್ಯೀಕರಣದ ಪರಿಣಾಮಗಳ ಮೌಲ್ಯಮಾಪನ ಕುರಿತು ಅಧ್ಯಯನ ನಡೆಸಿರುವ ಕಲ್ಬುರ್ಗಿಯ ಹೈದರಾಬಾದ್‌ ಕರ್ನಾಟಕ ಸೆಂಟರ್‌ ಫಾರ್‌ ಅಡ್ವಾನ್ಸಡ್‌ ಲರ್ನಿಂಗ್ ಸಂಸ್ಥೆಯು ಪ್ರಧಾನ ಶೋಧಕ ಡಾ ಪುಟ್ಟಸ್ವಾಮಯ್ಯ ಅವರ ನೇತೃತ್ವದ ಅಧ್ಯಯನ ತಂಡವು ನಡೆಸಿದ ಅಧ್ಯಯನ ವರದಿಯು ವೈಫಲ್ಯಗಳನ್ನು ಪತ್ತೆ ಹಚ್ಚಿದೆ. ಈ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕು ಮತ್ತು ಕಲ್ಬುರ್ಗಿಯ ಚಿತ್ತಾಪುರ ತಾಲೂಕಿನಲ್ಲಿರುವ ಸ್ವ ಸಹಾಯ ಗುಂಪುಗಳ ಉಳಿತಾಯ, ಆದಾಯ ಮತ್ತು ಖರ್ಚಿನ ಕುರಿತು ಅಧ್ಯಯನ ನಡೆಸಿತ್ತು.

‘ನೋಟು ಅಮಾನ್ಯೀಕರಣಗೊಳ್ಳುವ ಮುನ್ನ ಸ್ವಸಹಾಯ ಗುಂಪುಗಳ ಸಂಖ್ಯೆ ಹೆಚ್ಚಾಗಿತ್ತು. ಆದರೆ 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದ ನಂತರ ಸ್ವ ಸಹಾಯ ಗುಂಪುಗಳ ಸಂಖ್ಯೆಯ ಹೆಚ್ಚಳದ ವೇಗ ಕಡಿಮೆಯಾಗಿತ್ತು. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌ (ನಬಾರ್ಡ್‌) ಪ್ರಕಾರ 2016-17ರಲ್ಲಿ ಬ್ಯಾಂಕ್‌ಗಳು ಸ್ವ ಸಹಾಯ ಗುಂಪುಗಳಿಗೆ ಸಾಲದ ವಿತರಣೆಯಲ್ಲಿಯೂ ಕಡಿಮೆಯಾಗಿತ್ತು. ಒಟ್ಟಾರೆ ಸ್ವಸಹಾಯ ಗುಂಪುಗಳ ಮೇಲೆ ನೋಟು ಅಮಾನ್ಯೀಕರಣದ ದುಷ್ಪರಿಣಾಮ ಬೀರಿತ್ತು ಎಂಬುದು ವರದಿಯಿಂದ ತಿಳಿದು ಬಂದಿದೆ.

ಕಲ್ಬುರ್ಗಿ ಜಿಲ್ಲೆಯಲ್ಲಿರುವ ಸ್ವಸಹಾಯ ಗುಂಪುಗಳ ಸದಸ್ಯರು ನೋಟು ಅಮಾನ್ಯೀಕರಣವು ಉತ್ತಮವವಲ್ಲ ಎಂದು ಆಧ್ಯಯನ ತಂಡಕ್ಕೆ ತಿಳಿಸಿದ್ದರು. ಉದ್ಯೋಗದಾತರು ನಗದು ಲಭ್ಯತೆ ಇಲ್ಲ ಎಂದು ವೇತವನ್ನು ಮುಂದೂಡಿದ್ದರು ಎಂಬುದು ಅಧ್ಯಯನ ವರದಿಯಿಂದ ಗೊತ್ತಾಗಿದೆ. ಸ್ವಸಹಾಯ ಗುಂಪುಗಳ ಪೈಕಿ ಸುಮಾರು ಶೇ.47ರಷ್ಟು ಪದಾಧಿಕಾರಿಗಳು ಹಳೆಯ ನೋಟುಗಳನ್ನು ಠೇವಣಿ ಇಡುವುದು ಪ್ರಮುಖ ಸಮಸ್ಯೆಯಾಗಿದೆ ಎಂದು ಹೇಳಿದರೆ ಶೇ.38ರಷ್ಟು ಪದಾಧಿಕಾರಿಗಳು ನಗದು ಲಭ್ಯವಿಲ್ಲ ಎಂದು ಅಧ್ಯಯನ ತಂಡಕ್ಕೆ ತಿಳಿಸಿದ್ದಾರೆ. ಕಲ್ಬುರ್ಗಿ ಜಿಲ್ಲೆಯಾದ್ಯಂತ ನಗದು ಲಭ್ಯತೆ ಇರಲಿಲ್ಲ ಎಂದು ಅಲ್ಲಿನ ಸ್ವ ಸಹಾಯ ಗುಂಪುಗಳ ಸದಸ್ಯರು ಹೇಳಿದ್ದಾರೆ.

ಒಟ್ಟಾರೆ ಶೇ.58ಕ್ಕೂ ಹೆಚ್ಚು ಜನರು ಬ್ಯಾಂಕ್‌ಗಳಿಂದ ಹಣವನ್ನು ತೆಗೆದುಕೊಳ್ಳುವಾಗ ತೊಂದರೆ ಎದುರಿಸಿದ್ದರು. ಕಲ್ಬುರ್ಗಿಯಲ್ಲಿ ಶೇ.68ರಷ್ಟುಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು ಶೇ.48ರಷ್ಟು ತೊಂದರೆ ಎದುರಿಸಿದ್ದರು. ಇಲ್ಲದೆ ಕಲ್ಬುರ್ಗಿಯಲ್ಲಿ ಸುಮಾರು ಶೇ.20ರಷ್ಟು ಜನರು ತಮಗೆ ಬ್ಯಾಂಕ್‌ಗಳು ನೀಡಿದ ಹಣವು ಸಾಕಷ್ಟಿರಲಿಲ್ಲ ಎಂದು ಅಧ್ಯಯನ ತಂಡಕ್ಕೆ ಮಾಹಿತಿ ಒದಗಿಸಿದ್ದಾರೆ.

ಸ್ವಸಹಾಯ ಸಂಘದ ಸದಸ್ಯರ ಪೈಕಿ ಟೈಲರಿಂಗ್‌, ಬ್ಯೂಟಿ ಪಾರ್ಲರ್‌, ಸಣ್ಣ ವ್ಯಾಪಾರ (ಕಿರಾಣಿ ಅಂಗಡಿಗಳು) ಹೈನುಗಾರಿಕೆ ಮುಂತಾದ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ, ಇನ್ನಿತರರು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು ಅಥವಾ ಕೂಲಿ ಕಾರ್ಮಿಕರಾಗಿದ್ದರು. ಬೆಂಗಳೂರು ನಗರ ಮತ್ತು ಕಲ್ಬುರ್ಗಿ ಜಿಲ್ಲೆಗಳನ್ನು ಒಟ್ಟಿಗೆ ಪರಿಗಣಿಸಿದ್ದ ಅಧ್ಯಯನ ತಂಡ, ಈ ಜಿಲ್ಲೆಗಳ ಸ್ವ ಸಹಾಯ ಗುಂಪುಗಳ ಸದಸ್ಯರ ಪೈಕಿ ಶೇ.68ರಷ್ಟು ಮಂದಿ ಸದಸ್ಯರಿಗೆ ಹಣ ಪಾವತಿಯಲ್ಲಿ ವಿಳಂಬವಾಗಿತ್ತು ಅಥವಾ ಮುಂದೂಡಲಾಗಿತ್ತು ಎಂದು ವಿವರಿಸಿದೆ.

ಈ ಪ್ರಮಾಣವು ಬೆಂಗಳೂರು ನಗರ ಜಿಲ್ಲೆಗಿಂತ ಕಲ್ಬುರ್ಗಿ ಜಿಲ್ಲೆಯಲ್ಲಿ ಶೇ.84ಕ್ಕಿಂತ ಹೆಚ್ಚಾಗಿದೆ. ಆದರೂ ಸದಸ್ಯರು ತಮ್ಮ ಆರ್ಥಿಕ ಚಟುವಟಿಕೆಗಳನ್ನು ನಿಲ್ಲಿಸಿರಲಿಲ್ಲ. ಆದರೆ ನಗದು ಹಣ ಲಭ್ಯವಿಲ್ಲದ ಕಾರಣ ಪಾವತಿಗಾಗಿ ಕಾಯಬೇಕಾಗಿತ್ತು. ಅಲ್ಲದೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆದಾಯವನ್ನು ಪಡೆಯುವವರೆಗೂ ಒಂದು ರೀತಿಯಲ್ಲಿ ನೆಮ್ಮದಿ ಕಳೆದುಕೊಂಡಿದ್ದರು ಎಂದು ವರದಿ ಹೇಳಿದೆ.

ಅಮಾನ್ಯೀಕರಣದ ಸಮಯದಲ್ಲಿ ಆದಾಯದಲ್ಲಿನ ಬದಲಾವಣೆಗಳನ್ನು ನಿವಾರಿಸಲು ಸ್ವ ಸಹಾಯ ಗುಂಪಿನ ಸದಸ್ಯರು ಸಾಲವನ್ನು ಎರವಲು ಪಡೆದಿದ್ದರು. ಖರ್ಚನ್ನು ಮುಂದೂಡುವುದು ಸೇರಿದಂತೆ ಇನ್ನಿತರೆ ವಿಭಿನ್ನ ಕ್ರಮಗಳನ್ನು ಅಳವಡಿಸಿಕೊಂಡಿದ್ದರು. ಎರಡೂ ಜಿಲ್ಲೆಗಳನ್ನು ಒಟ್ಟಿಗೆ ತೆಗೆದುಕೊಂಡರೆ ಶೇ.44ಕ್ಕಿಂತ ಹೆಚ್ಚು ಸದಸ್ಯರು ಅನಾಣ್ಯೀಕರಣದ ಸಮಯದಲ್ಲಿ ಖರ್ಚುಗಳನ್ನು ಮುಂದೂಡಿದ್ದರು. ಅವರಲ್ಲಿ ಶೇ. 18ರಷ್ಟು ಮಂದೆ ಜನರು ಹಳೆಯ ಉಳಿತಾಯವನ್ನೇ ನಿರ್ವಹಿಸಿದ್ದರು. ಶೆ. 28ರಷ್ಟು ಮಂದಿ ಸದಸ್ಯರು ಯಾವುದೇ ಕ್ರಮವನ್ನು ಆಶ್ರಯಿಸಿರಲಿಲ್ಲ ಬದಲಾಗಿ ಅವರು ಹೊಸ ಪರಿಸ್ಥಿತಿಯೊಂದಿಗೆ ಮುಂದುವರೆದಿದ್ದರು.

ಕಲ್ಬುರ್ಗಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ವೆಚ್ಚವನ್ನು ಮುಂದೂಡಿದ್ದರು. ಜನರ ಈ ನಡವಳಿಕೆಯು ಅವರ ಮೇಲೆ ಸ್ವಲ್ಪ ನೆಮ್ಮದಿಯಲ್ಲಿನ ನಷ್ಟವನ್ನು ಅನುಭವಿಸಿದ್ದರು. ಇದು ಕೂಡ ಅನಾಣ್ಯೀಕರಣದ ಪರಿಣಾಮ ಎಂದು ಅಧ್ಯಯನ ವರದಿ ಹೇಳಿದೆ.

ಎರಡೂ ಜಿಲ್ಲೆಗಳ ಶೇ.81ರಷ್ಟು ಸ್ವ ಸಹಾಯ ಗುಂಪುಗಳು ಒಟ್ಟಾಗಿ ನಗದು ಕೊರತೆ ಸಮಸ್ಯೆ ಎದುರಿಸಿದ್ದವು. ಇದು ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.71ರಷ್ಟಿದ್ದರೆ ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ನಗದು ಕೊರತೆ ಸಮಸ್ಯೆಯು ಹೆಚ್ಚಾಗಿತ್ತು. ಎರಡೂ ಜಿಲ್ಲೆಗಳ ಶೇ.64ರಷ್ಟು ಸದಸ್ಯರು ತಮ್ಮ ಕುಟುಂಬ ವೆಚ್ಚವನ್ನು ಕಡಿತಗೊಳಿಸಿದ್ದರು. ಕಲ್ಬುರ್ಗಿ ಜಿಲ್ಲೆಯಲ್ಲಿ ಖರ್ಚನ್ನು ಕಡಿಮೆ ಮಾಡಬೇಕಾದ ಸದಸ್ಯರ ಸಂಖ್ಯೆ (ಶೇ.99) ಹೆಚ್ಚಿನ ಸಂಖ್ಯೆಯಲ್ಲಿತ್ತು.

ಬೆಂಗಳೂರು ನಗರ ಜಿಲ್ಲೆಯಲ್ಲಿಯೂ ಇದು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿತ್ತು. ಅನಾಣ್ಯೀಕರಣದ ಸಮಯದಲ್ಲಿ ಜನರು ತಮ್ಮ ಕುಟುಂಬದ ಖರ್ಚುಗಳನ್ನು ಕಡಿತಗೊಳಿಸಿದ್ದರಲ್ಲದೆ ಆಹಾರ, ಬಾಡಿಗೆ, ಸಾಲ ಮರುಪಾವತಿ, ಪ್ರಯಾಣ ಇತ್ಯಾದಿಗಳ ವೆಚ್ಚವನ್ನು ಕಡಿಮೆ ಮಾಡಲಾಗಿರುತ್ತದೆ. ಅಲ್ಲದೆ ಕೆಲವು ಸದಸ್ಯರು ಮದುವೆಗಳಂತಹ ಕಾರ್ಯಗಳನ್ನು ಕೆಲವು ತಿಂಗಳುವರೆಗೆ ಮುಂದೂಡಿದ್ದರು. ಒಟ್ಟಾರೆಯಾಗಿ ಅನಾಣ್ಯೀಕರಣದ ಅವಧಿಯಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರು ಹಲವು ಸಮಸ್ಯೆಗಳನ್ನು ಎದುರಿಸಿದ್ದರು ಎಂದು ಅಧ್ಯಯನ ತಂಡ ವರದಿಯಲ್ಲಿ ನಿದರ್ಶನಗಳ ಸಮೇತ ಉಲ್ಲೇಖಿಸಿದೆ.

the fil favicon

SUPPORT THE FILE

Latest News

Related Posts