ನೋಟು ಅಮಾನ್ಯೀಕರಣ ; ಗ್ರಾಮೀಣರಿಗೆ ನಷ್ಟ, ಸಾಲದ ವಿತರಣೆಯಲ್ಲಿ ಕುಸಿತ

ಬೆಂಗಳೂರು; ಲೆಕ್ಕವಿಲ್ಲದ ಹಣವನ್ನು ನಿಯಂತ್ರಿಸುವುದು, ನಕಲಿ ಹಣವನ್ನು ನಿಯಂತ್ರಿಸುವುದು ಮುಂತಾದ ಉದ್ದೇಶಗಳನ್ನು ಸಾಧಿಸುವಲ್ಲಿ ಅನಾಣ್ಯೀಕರಣವು ಯಶಸ್ವಿಯಾಗಲಿಲ್ಲ. ಆದರೆ ಡಿಜಿಟಲ್‌ ವಹಿವಾಟಿನ ಹೆಚ್ಚಳದೊಂದಿಗೆ ಹಣಕಾಸು ಸಂಬಂಧಿತ ಸೈಬರ್‌ ಅಪರಾಧ ಪ್ರಮಾಣವು ಹೆಚ್ಚಾಗಿರುತ್ತದೆ. ಸ್ಥಿರಾಸ್ತಿ ವಹಿವಾಟು ವಲಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಿದೆ ಎಂದು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

ಕರ್ನಾಟಕದಲ್ಲಿ ಸ್ವ-ಸಹಾಯ ಗುಂಪುಗಳ ಮೇಲೆ ಅನಾಣ್ಯೀಕರಣದ ಪರಿಣಾಮಗಳ ಮೌಲ್ಯಮಾಪನ ಕುರಿತು ಅಧ್ಯಯನ ನಡೆಸಿರುವ ಕಲ್ಬುರ್ಗಿಯ ಹೈದರಾಬಾದ್‌ ಕರ್ನಾಟಕ ಸೆಂಟರ್‌ ಫಾರ್‌ ಅಡ್ವಾನ್ಸಡ್‌ ಲರ್ನಿಂಗ್ ಸಂಸ್ಥೆಯು ಪ್ರಧಾನ ಶೋಧಕ ಡಾ ಪುಟ್ಟಸ್ವಾಮಯ್ಯ ಅವರ ನೇತೃತ್ವದ ಅಧ್ಯಯನ ತಂಡವು ನಡೆಸಿದ ಅಧ್ಯಯನ ವರದಿಯು ವೈಫಲ್ಯಗಳನ್ನು ಪತ್ತೆ ಹಚ್ಚಿದೆ. ಈ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಅಮಾನ್ಯೀಕರಣ ಅನುಷ್ಠಾನವು ಹಣಕಾಸಿನ ವ್ಯವಸ್ಥೆಯನ್ನು ಸುಧಾರಿಸುವುದರ ಜತೆಗೆ ಕಡಿಮೆ ಹಣವನ್ನು ಬಳಸುವುದರೆಡೆಗೆ ಮತ್ತು ಡಿಜಿಟಲ್‌ ವಹಿವಾಟಿನತ್ತ ಸಾಗಲು ಪ್ರೋತ್ಸಾಹಿಸುತ್ತದೆ ಎಂದು ನಂಬಲಾಗಿತ್ತು. ಅಲ್ಲದೆ ಹಣದುಬ್ಬರವನ್ನು ಕಡಿಮೆ ಮಾಡುವ ಮೂಲಕ ಆರ್ಥಿಕತೆಯಲ್ಲಿ ಚಲಾವಣೆಯಲ್ಲಿರುವ ಕಪ್ಪು ಹಣವನ್ನು ನಿಯಂತ್ರಿಸಲಾಗುತ್ತದೆ ಎಂದು ನಂಬಲಾಗಿತ್ತು. ಆದರೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ವಾರ್ಷಿಕ ವರದಿಗಳ ಪ್ರಕಾರ ಹೆಚ್ಚಿನ ಮುಖಬೆಲೆಯ ಕರೆನ್ಸಿ ನೋಟುಗಳ ಪಾಲು ಅಂಧರೆ ಮಾರ್ಚ್‌ 2016ರಲ್ಲಿ ಶೇ.86.4 ಮತ್ತು ಮಾರ್ಚ್‌ 2018ರಲ್ಲಿ ಶೇ.80.2ರಷ್ಟಿತ್ತು. ಇದು ಗಮನಾರ್ಹವಾಗಿ ಕುಸಿದಿರುವುದಿಲ್ಲ ಎಂದು ವರದಿ ಹೇಳಿದೆ.

ಹಾಗೆಯೇ ಡಿಜಿಟಲ್‌ ವಹಿವಾಟುಗಳನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಲಾಗಿತ್ತಾದರೂ ಆರ್‌ಟಿಜಿಎಸ್‌, ಎನ್‌ಇಎಫ್‌ಟಿ, ಮೊಬೈಲ್‌ ವ್ಯಾಲೆಟ್‌( ಪೇಟಿಎಂ, ಮೊಬಿಕ್ವಿಕ್‌) ಪ್ರಿಪೇಯ್ಡ್‌, ನಗದು ಕಾರ್ಡ್‌( ಇಟ್ಜ್‌ ಕ್ಯಾಶ್‌, ಓಲಾ ಹಣ, ಪ್ಲಿಪ್‌ಕಾರ್ಟ್‌ ವ್ಯಾಲೆಟ್‌ಗಳ ) ಅಭಿವೃದ್ಧಿಗೆ ದಾರಿಮಾಡಿಕೊಟ್ಟಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ವಿವಿಧ ವಿದ್ಯುನ್ಮಾನ ವ್ಯವಸ್ಥೆಗಳ ಮೂಲಕ ಹಣ ಪಾವತಿಯು ನವೆಂಬರ್‌ 2016ರಲ್ಲಿ 94004 ಬಿಲಿಯನ್‌ ಮತ್ತು 2018ರ ಜನವರಿಯಲ್ಲಿ 131980 ಬಿಲಿಯನ್‌ ಆಗಿತ್ತು. ಇದು ವಿದ್ಯುನ್ಮಾನ ಪಾವತಿ ವಿಧಾನಗಳ ಬಳಕೆ ಹೆಚ್ಚಳವನ್ನು ಸೂಚಿಸುತ್ತದೆ. ವಿವಿಧ ವಿಧಾನಗಳಲ್ಲಿ ಆರ್‌ಟಿಜಿಎಸ್‌ ಮೂಲಕ ಮತ್ತು ನಂತರದಲ್ಲಿ ಎನ್‌ಇಎಫ್‌ಟಿ ಮೂಲಕವಾಗಿ ಹೆಚ್ಚಿನ ಪಾವತಿ ಆಗಿದೆ. ಮೊಬೈಲ್‌ ಬ್ಯಾಂಕಿಂಗ್‌ ಮೂಲಕ ಮಾಡಿದ ಪಾವತಿಯು ನವೆಂಬರ್‌ 2017ರಿಂದ ಕಡಿಮೆಯಾಗಿದೆ.

ಅಮಾನ್ಯೀಕರಣವು ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ವಿಶೇಷವಾಗಿ ಭೂಹೀನ ಮತ್ತು ವಲಸೆ ಬಂದ ಕೂಲಿ ಪಡೆಯುವರ ಅಲ್ಪಾವಧಿ ಖರ್ಚಿನ ಮೇಲೆ ಪರಿಣಾಮ ಬೀರಿದೆ. ಆಕಸ್ಮಿಕ ಸಂದರ್ಭಗಳಿಗೆಂದು ಕೆಲವು ಉಳಿತಾಯವನ್ನು ನಿರ್ವಹಿಸುವ ಗ್ರಾಮೀಣ ಮಹಿಳೆಯರು ಹಳೆಯ ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುವುದಕ್ಕಾಗಿ ಕಳೆದ ದಿನಗಳಲ್ಲಿ ತಮ್ಮ ವೇತನವನ್ನು ಕಳೆದುಕೊಂಡಿದ್ದರು. ಅಲ್ಲದೆ, ಹಳೆಯ ನೋಟುಗಳನ್ನು ಠೇವಣಿ ಇರಿಸಲು ಅಥವಾ ವಿನಿಮಯ ಮಾಡಿಕೊಳ್ಳಲು ಸಹಾಯ ಮಾಡಿದ ವ್ಯಕ್ತಿಗಳಿಗೆ ತಮ್ಮ ಕೂಲಿಯ ಒಂದು ಭಾಗವನ್ನು ಪಾವತಿಸುವ ಮೂಲಕ ಗ್ರಾಮೀಣ ಮಹಿಳೆಯರಿಗೆ ನಷ್ಟವಾಗಿದೆ ಎಂದು ಅಧ್ಯಯನ ವರದಿ ಹೇಳಿದೆ.

ಅಪೂರ್ಣ ಬಂಡವಾಳ ಆಸ್ತಿ ವಹಿವಾಟಿನ ಮೇಲೆ ಅಮಾನ್ಯೀಕರಣವು ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅಧ್ಯಯನ ವರದಿ ವಿವರಿಸಿದೆಯಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿರುವ ಸ್ವ ಸಹಾಯ ಗುಂಪುಗಳ ಸದಸ್ಯರನ್ನು ಹಳೆಯ ಕರೆನ್ಸಿ ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಲು ಬಳಸಲಾಗಿದೆ. ಇದರಿಂದಾಗಿ ಗ್ರಾಮೀಣ ಬಡವರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದೆ.

2014-15ರಲ್ಲಿ 16.26 ಲಕ್ಷದಷ್ಟಿದ್ದ ಸ್ವ ಸಹಾಯ ಗುಂಪುಗಳ ಸಂಖ್ಯೆಯು 2017-18ರಲ್ಲಿ 22.61 ಲಕ್ಷಕ್ಕೇರಿತ್ತು. 2015-16ಕ್ಕೆ ಹೋಲಿಸಿದರೆ 2016-17ರ ಅವಧಿಯಲ್ಲಿ ಸ್ವಸಹಾಯ ಗುಂಪುಗಳ ಸಂಖ್ಯೆಯಲ್ಲಿನ ಶೇಕಡವಾರು ಬದಲಾವಣೆ ಕಡಿಮೆಯಾಗಿದೆ. ನೋಟು ಅಮಾನ್ಯೀಕರಣದಿಂದಾಗಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಹೊಸ ಸ್ವ ಸಹಾಯ ಗುಂಪುಗಳನ್ನು ರಚಿಸಲು ಮುಂದಾಗಿಲ್ಲದಿರಬಹುದು ಎಂದು ಇದು ಸೂಚಿಸುತ್ತದೆ ಎಂದು ಅಧ್ಯಯನ ತಂಡ ವಿವರಿಸಿದೆ.

2017-18ರಲ್ಲಿ ಸ್ವ ಸಹಾಯ ಗುಂಪುಗಳಿಗೆ ಬ್ಯಾಂಕ್‌ಗಳು ಒfಟ್ಟು 47.18 ಕೋಟಿ ರು. ಸಾಲವನ್ನು ವಿತರಿಸಿದ್ದವು. 2014-15ರ ಅವಧಿಯಲ್ಲಿ ಇದು 27.58 ಕೋಟಿಯಷ್ಟಿತ್ತು. ಶೇಕಡಾ 35ರಷ್ಟು ಹೆಚ್ಚಾಗಿತ್ತಲ್ಲದೆ 2015-16 ಮತ್ತು 2016-17ರ ನಡುವೆ ಶೇ. 4ರಷ್ಟು ಹೆಚ್ಚಾಗಿದೆ. ಅಮಾನ್ಯೀಕರಣದ ಅವಧಿಯಲ್ಲಿ ಸ್ವಸಹಾಯ ಗುಂಪುಗಳಿಗೆ ಸಾಲವನ್ನು ವಿತರಿಸುವಲ್ಲಿ ಬ್ಯಾಂಕ್‌ಗಳಿಗೆ ಸಾಧ್ಯವಾಗಲಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಇದೇ ಅಂಶವನ್ನು ನಬಾರ್ಡ್‌ ಕೂಡ ತನ್ನ ವರದಿಯಲ್ಲಿ ದಾಖಲಿಸಿದೆ ಎಂದು ಅಧ್ಯಯನ ತಂಡ ಹೇಳಿದೆ.

ಸ್ವ ಸಹಾಯ ಗುಂಪುಗಳಿಗೆ ಸಾಂಸ್ಥಿಕ ಸಾಲದ ಹರಿವು 2016ರ ನವೆಂಬರ್‌ 8ರಂದು ಘೋಷಿಸಲಾದ ನಿರ್ದಿಷ್ಟ ಬ್ಯಾಂಕ್‌ಗಳ ನೋಟು ಅಮಾನ್ಯೀಕರಣವು ಪ್ರತಿಕೂಲ ಪರಿಣಾಮ ಬೀರಿತ್ತು. ಇದರ ಪರಿಣಾಮ ಹಣಕಾಸು ಸಂಸ್ಥೆಗಳಿಗೆ ಸಾಲ ನೀಡುವ ಕಾರ್ಯಾಚರಣೆಗೆ ಇದು ಅಡ್ಡಿಯಾಗಿತ್ತು ಎಂದು ತಿಳಿಸಿದೆ.

the fil favicon

SUPPORT THE FILE

Latest News

Related Posts