ವಿಧಾನಸಭೆಯಲ್ಲಿ ಸದ್ದು ಮಾಡಿದವು ‘ದಿ ಫೈಲ್‌’ ಹೊರಗೆಡವಿದ ಪ್ರಕರಣಗಳು

ಬೆಂಗಳೂರು; ಕೋವಿಡ್‌-19 ನಿರ್ವಹಣೆಗಾಗಿ ಅನುಭವವೇ ಇಲ್ಲದ ಕಂಪನಿ, ಸರಬರಾಜುದಾರರಿಂದ ಪಿಪಿಇ ಕಿಟ್‌, ಸ್ಯಾನಿಟೈಸರ್‌, ಮಾಸ್ಕ್‌ ಖರೀದಿಸಿರುವ ಕುರಿತು ‘ದಿ ಫೈಲ್‌’ ಹೊರಗೆಡವಿದ್ದ ಪ್ರಕರಣಗಳು ವಿಧಾನಸಭೆ ಅಧಿವೇಶನದಲ್ಲಿ ಸದ್ದು ಮಾಡಿವೆ.

ಲತಾ ಸ್ಟೀಲ್‌ ಫರ್ನಿಚರ್‌ ಏಜೆನ್ಸಿಯಿಂದ ಖರೀದಿಸಿದ್ದ ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌, ಎಸ್‌ ಪಿ ವೈ ಆಗ್ರೋ ಇಂಡಸ್ಟ್ರೀಸ್‌ನಿಂದ ಖರೀದಿಸಿದ್ದ ಸ್ಯಾನಿಟೈಸರ್‌, ಹರ್ಷಿಕಾ ಟೆಕ್ನಾಲಜೀಸ್‌ನಿಂದ ಮಾಸ್ಕ್‌ ಖರೀದಿ, ಎಚ್‌ಎನ್‌ಎಫ್‌ಸಿ ಉಪಕರಣಗಳ ಖರೀದಿಯಲ್ಲಿನ ಅಕ್ರಮ ಪ್ರಕರಣಗಳ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸದನದಲ್ಲಿ ಪ್ರಸ್ತಾಪಿಸುವ ಮೂಲಕ ‘ದಿ ಫೈಲ್‌’ ಹೊರಗೆಡವಿದ್ದ ಪ್ರಕರಣಗಳನ್ನು ವಿಸ್ತರಿಸಿದ್ದಾರೆ.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಾಗಿರುವ ಅಕ್ರಮಗಳ ಕುರಿತು ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಕರಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರಲ್ಲದೆ, ‘ದಿ ಫೈಲ್‌’ ಪ್ರಕಟಿಸಿದ್ದ ದಾಖಲೆಗಳನ್ನು ಅಧಿವೇಶನದಲ್ಲಿ ಹಾಜರುಪಡಿಸಿದರು.

ಅನುಭವವಿಲ್ಲದ ಆಂಧ್ರ ಮೂಲದ ಕಂಪನಿ ಎಸ್‌ ಪಿ ವೈ ಆಗ್ರೋ ಇಂಡಸ್ಟ್ರೀಸ್‌ನಿಂದ 4.02 ಕೋಟಿ ರು.ನಲ್ಲಿ ಸ್ಯಾನಿಟೈಸರ್‌ ಖರೀದಿಸಿದ್ದ ಪ್ರಕರಣವನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು ತೆಲಂಗಾಣ ಸರ್ಕಾರ ತಿರಸ್ಕರಿಸಿದ್ದ ಕಂಪನಿಗೆ ಕೆಡಿಎಲ್‌ಡಬ್ಲ್ಯೂಎಸ್‌ ಹೇಗೆ ಮಣೆ ಹಾಕಿದೆ ಎಂಬುದನ್ನು ವಿವರಿಸಿದರು. ಸದನದಲ್ಲಿ ಪ್ರಸ್ತಾಪವಾದ ಪ್ರಕರಣಗಳ ಕುರಿತು ‘ದಿ ಫೈಲ್‌’ ಪ್ರಕಟಿಸಿದ್ದ ವರದಿಗಳ ಕಿರು ನೋಟ ಇಲ್ಲಿ ಕೊಡಲಾಗಿದೆ.

ಸ್ಯಾನಿಟೈಸರ್‌ ತಯಾರಿಕೆಯ ಎಳ್ಳಷ್ಟೂ ಅನುಭವ ಇಲ್ಲದ ಮತ್ತು ತೆಲಂಗಾಣ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ ಅನರ್ಹಗೊಳಿಸಿದ್ದ ಆಂಧ್ರ ಮೂಲದ ಎಸ್ ಪಿ ವೈ ಆಗ್ರೋ ಇಂಡಸ್ಟ್ರೀಸ್‌ನಿಂದ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿಯು 4.02 ಕೋಟಿ ರು. ಮೊತ್ತದಲ್ಲಿ ಸ್ಯಾನಿಟೈಸರ್‌ ಖರೀದಿಗೆ 2020ರ ಮಾರ್ಚ್‌ 30 ರಂದು ಆದೇಶ ಹೊರಡಿಸಿತ್ತು.

ಎಳ್ಳಷ್ಟೂ ಅನುಭವವೇ ಇಲ್ಲ

ಸ್ಯಾನಿಟೈಸರ್‌ ತಯಾರಿಕೆಗೆ ಸಂಬಂಧಿಸಿದಂತೆ ಈ ಕಂಪನಿಯು ನಂದಿ ಬ್ರ್ಯಾಂಡ್‌ ಹೆಸರಿನಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ನ್ನು ತಯಾರಿಸಲು ಆಂಧ್ರ ಪ್ರದೇಶ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ 2020ರ ಮಾರ್ಚ್‌ 19ರಂದು ಪರವಾನಿಗೆಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಸಲ್ಲಿಸಿದ ಒಂದು ದಿನದ ನಂತರ ಅಂದರೆ 2020 ಮಾರ್ಚ್‌ 20ರಂದು ಅಲ್ಲಿನ ಔಷಧ ನಿಯಂತ್ರಣ ಪ್ರಾಧಿಕಾರ 2025ರವರೆಗೆ ಪರವಾನಿಗೆ ನೀಡಿ ಆದೇಶ ಹೊರಡಿಸಿದೆ.

ಹತ್ತೇ ದಿನದಲ್ಲಿ ಆದೇಶ

ಆಂಧ್ರ ಸರ್ಕಾರದಿಂದ ಪರವಾನಿಗೆ ದೊರೆತ 9 ದಿನದ ಅಂತರದೊಳಗೆ ಅಂದರೆ 2020ರ ಮಾರ್ಚ್‌ 29ರಂದು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ ಹೌಸಿಂಗ್‌ ಸೊಸೈಟಿಯು ಈ ಕಂಪನಿಯಿಂದ ಕೊಟೇಷನ್‌ ಪಡೆದಿತ್ತು. ಕೊಟೇಷನ್‌ ಪಡೆದ ಮರು ದಿವಸವೇ ಅಂದರೆ ಮಾರ್ಚ್‌ 30ರಂದು 4.02 ಕೋಟಿ ರು.ಮೊತ್ತಕ್ಕೆ 180 ಎಂ ಎಲ್‌ ಪ್ರಮಾಣದ 30,000 ಬಾಟಲ್‌ ಮತ್ತು 500 ಎಂ ಎಲ್‌ನ 15,000 ಬಾಟಲ್‌ಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸರಬರಾಜು ಮಾಡಲು ಈ ಕಂಪನಿಗೆ ಆದೇಶ ದೊರೆತಿತ್ತು.

ದರದಲ್ಲೂ ಹೆಚ್ಚಳವಿತ್ತು

ಅಲ್ಲದೆ, ಇದೇ ಕಂಪನಿಯು ಕೋವಿಡ್‌-19ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆಂಧ್ರ ಪ್ರದೇಶಕ್ಕೆ ನೀಡಿರುವ ಸ್ಯಾನಿಟೈಸರ್‌ ಪ್ಯಾಕೇಜ್‌ ದರಕ್ಕೂ ಮತ್ತು ಕರ್ನಾಟಕಕ್ಕೆ ಮಾರಾಟ ಮಾಡಿರುವ ದರದಲ್ಲಿ ವ್ಯತ್ಯಾಸ ಇರುವುದು ಕಂಡು ಬಂದಿತ್ತು.

180 ಎಂ ಎಲ್‌ಗೆ 90 ರು. ಲೆಕ್ಕದಲ್ಲಿ 30,000 ಬಾಟಲ್‌ಗಳಿಗೆ ಒಟ್ಟು 27.00 ಲಕ್ಷ ರು., 500 ಎಂ ಎಲ್‌ ಯುನಿಟ್‌ಗೆ 2,500 ರು. ದರದಲ್ಲಿ ಒಟ್ಟು 15,000 ಯೂನಿಟ್‌ಗಳಿಗೆ 3.75 ಕೋಟಿ ರು. ದರ ನಿಗದಿಪಡಿಸಿತ್ತು.

ಆಂಧ್ರದ ಪ್ಯಾಕೇಜ್‌ ಕರ್ನಾಟಕಕ್ಕಿಲ್ಲ

ಕೋವಿಡ್‌-19ರ ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ಆಂಧ್ರ ಪ್ರದೇಶಕ್ಕೆ ಎಸ್‌ಪಿವೈ ಆಗ್ರೋ ಕಂಪನಿ 3,000 ರು. ಮೊತ್ತದಲ್ಲಿ 5 ಲೀಟರ್‌ನ 2 ಕ್ಯಾನ್‌, 500 ಎಂ ಎಲ್‌ನ 1 ಬಾಟಲ್‌ ಮತ್ತು ಅದರ ಜತೆಗೆ ಸ್ಟ್ಯಾಂಡ್‌ನ ಕಿಟ್‌ ಸರಬರಾಜು ಮಾಡಿದೆ ಎಂದು ಗೊತ್ತಾಗಿದೆ. ಆದರೆ ಕರ್ನಾಟಕಕ್ಕೆ ಇದೇ ಕಂಪನಿ 2,500 ರು. ಯುನಿಟ್‌ ದರದಲ್ಲಿ 5 ಲೀಟರ್‌ನ ಒಂದೇ ಒಂದು ಕ್ಯಾನ್‌ನ್ನು ನೀಡಿದೆ. ಅಸಲಿಗೆ 5 ಲೀಟರ್‌ ಒಂದು ಕ್ಯಾನ್‌ನ್ನು 1,125 ರು. ದರದಲ್ಲಿ ಸರಬರಾಜು ಮಾಡಲು ಹಲವು ಕಂಪನಿಗಳು ಮುಂದೆ ಬಂದಿದ್ದವು. ಆದರೆ ತಲಾ 5 ಲೀಟರ್‌ ಪ್ರಮಾಣದ 15,000 ಕ್ಯಾನ್‌ಗಳಿಗೆ 3.25 ಕೋಟಿ ನೀಡಿತ್ತು.

ತೆಲಂಗಾಣದಲ್ಲಿ ಅನರ್ಹ

ಕೋವಿಡ್‌-19ರ ನಿರ್ವಹಣೆಗಾಗಿ ಸ್ಯಾನಿಟೈಸರ್‌ ಖರೀದಿಗೆ ತೆಲಂಗಾಣ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ 2020ರ ಏಪ್ರಿಲ್‌ 30ರಂದು ಕರೆದಿದ್ದ ಟೆಂಡರ್‌ನಲ್ಲಿ ಎಸ್‌ ಪಿ ವೈ ಆಗ್ರೋ ಇಂಡಸ್ಟ್ರೀಸ್‌ ಭಾಗವಹಿಸಿತ್ತಾದರೂ ಈ ಕಂಪನಿ ಉತ್ಪನ್ನವಾದ ಹ್ಯಾಂಡ್‌ ರಬ್‌ ಸ್ಯಾನಿಟೈಸರ್‌ನ್ನು ಶಿಫಾರಸ್ಸು ಮಾಡಿರಲಿಲ್ಲ. ಅಲ್ಲದೆ ಈ ಕಂಪನಿಯನ್ನು ಟೆಂಡರ್‌ನಿಂದ ಅನರ್ಹಗೊಳಿಸಿತ್ತು.

ಅನುಭವವಿಲ್ಲದ ಆಂಧ್ರ ಕಂಪನಿಯಿಂದ 4.02 ಕೋಟಿಗೆ ಸ್ಯಾನಿಟೈಸರ್‌ ಖರೀದಿ; ಪ್ರಭಾವಿ ಸಚಿವರ ನಂಟು?

ಇದಷ್ಟೇ ಅಲ್ಲ, ಮಾಸ್ಕ್‌ ತಯಾರಿಕೆಯ ಅನುಭವವಿಲ್ಲದ ಸಾಫ್ಟ್‌ವೇರ್‌ ಕಂಪನಿಗಳಿಂದಲೂ ಮಾಸ್ಕ್‌ಗಳನ್ನು 2020ರ ಮಾರ್ಚ್‌ 30ರಂದು ಖರೀದಿಸಿತ್ತು. ಹರ್ಷಿಕಾ ಟೆಕ್ನಾಲಜೀಸ್‌ನಿಂದ 64 ಲಕ್ಷ ರು.ಮೌಲ್ಯದ 5 ಲಕ್ಷ ಮಾಸ್ಕ್‌ಗಳನ್ನು ಖರೀದಿಸಿತ್ತು.

ಸಾಫ್ಟ್‌ವೇರ್‌ ಕಂಪನಿಗಳಿಂದಲೂ ಮಾಸ್ಕ್‌ ಖರೀದಿ; ಹಲವು ಕಂಪನಿಗಳ ವಿವರ ಮುಚ್ಚಿಟ್ಟ ಸರ್ಕಾರ?

 

ಹಾಗೆಯೇ ಲತಾ ಸ್ಟೀಲ್‌ ಫರ್ನಿಚರ್ಸ್‌ನಿಂದ 61.60 ಲಕ್ಷ ರು. ಮೌಲ್ಯದ 2,500 ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಉಪಕರಣಗಳನ್ನು 2020ರ ಮಾರ್ಚ್‌ 26ರಂದು ಖರೀದಿಸಿದೆ.

 

ಸ್ಟೀಲ್ ಫರ್ನಿಚರ್ಸ್ ಕಂಪನಿಯಿಂದಲೂ ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್ ಖರೀದಿ; ಪೂರ್ವ ನಿರ್ಧರಿತ ಒಪ್ಪಂದವೇ?

 

ಅದೇ ರೀತಿ ವೆಬ್‌ಸೈಟ್‌ ಅಭಿವೃದ್ಧಿ ಪಡಿಸುವ ಎ ಟೆಕ್‌ ಟ್ರಾನ್‌ ಮತ್ತು ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿಯ ರುದ್ರಾಂಶ್‌ ವಿಗ್‌ ಆಗ್ರೋ ಇಂಡಿಯಾ ಲಿಮಿಟೆಡ್‌ನಿಂದ ಪಿಪಿಇ ಕಿಟ್‌ ಮತ್ತು ಮಾಸ್ಕ್‌ ಖರೀದಿಗೆ ಆದೇಶ ನೀಡಿದ್ದ ಕೆಡಿಎಲ್‌ಡಬ್ಲ್ಯೂಎಸ್‌, ನಿಗದಿತ ಅವಧಿಯಲ್ಲಿ ಸಾಮಗ್ರಿಗಳನ್ನು ಸರಬರಾಜು ಮಾಡಿಲ್ಲ ಎಂಬ ಕಾರಣಕ್ಕಾಗಿ ಈ ಕಂಪನಿಗಳಿಗೆ ನೀಡಿದ್ದ ಖರೀದಿ ಆದೇಶಗಳನ್ನು ರದ್ದುಗೊಳಿಸಿತ್ತು.

ಕೊರೊನಾದಂತಹ ಸಂಕಟದ ಕಾಲವನ್ನು ಭ್ರಷ್ಟಾಚಾರ ಎಸಗಲು ದುರ್ಬಳಕೆ ಮಾಡಿಕೊಂಡಿರಿ. ಕೃಷಿ ಉತ್ಪನ್ನಗಳ  ತಯಾರಿಕೆ ಕಂಪೆನಿಯಿಂದ  ಪಿಪಿಇ ಕಿಟ್, ಸ್ಟೀಲ್ ಫರ್ನಿಚರ್ಸ್ ಕಂಪೆನಿಯಿಂದ ಪಲ್ಸ್ ಆಕ್ಸಿಮೀಟರ್, ಸಾಫ್ಟ್‌ವೇರ್ ಕಂಪೆನಿಯಿಂದ ವೈದ್ಯಕೀಯ ಉಪಕರಣಗಳ ಖರೀದಿ. ಏನಿದು ಮುಖ್ಯಮಂತ್ರಿ ಅವರೇ ಎಂದು ಪ್ರಶ್ನಿಸಿದರು.

ಎಲ್ 1 ಕಂಪೆನಿ ಬಿಟ್ಟು ಗುಜರಾತಿನ ಕಂಪೆನಿಗಳಿಗೆ ಗ್ಲುಕೋಸ್ ಸರಬರಾಜು ಮಾಡುವ ಆದೇಶ ನೀಡಿದ್ದೀರಿ. 2200 ರೂ ನೀಡಿ ಪಲ್ಸ್ ಆಕ್ಸಿಮೀಟರ್ ಅನ್ನು ಮಾರ್ಚ್‌ನಲ್ಲಿ ಖರೀದಿಸಿದ್ದೀರಿ. ಜುಲೈನಲ್ಲಿ 1100 ರೂ ನೀಡಿದ್ದೀರಿ. ಪ್ರತಿಯೊಂದರಲ್ಲೂ ನಿರ್ಲಜ್ಜ ಭ್ರಷ್ಟಾಚಾರ ಎಸಗಿದ್ದೀರಿ ಎಂದು ತರಾಟೆ ತೆಗೆದುಕೊಂಡರು.

ಕಳಪೆ ಸ್ಯಾನಿಟೈಸರ್, ಕಳಪೆ ಪಿಪಿಈ ಕಿಟ್ ಸರಬರಾಜು ಮಾಡಿದ್ದೀರಿ. ವೈದ್ಯರು ಪ್ರತಿಭಟನೆ ಮಾಡಿದ ಮೇಲೆ ವಾಪಸ್ ಪಡೆದಿರಿ. ಕೊರೋನ ವಾರಿಯರ್ಸ್ ಎಂದು ಹೂ ಮಳೆಗರೆದು ಅವರಿಗೆ ಕಳಪೆ ಆರೋಗ್ಯ ರಕ್ಷಕ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದೀರಿ ಎಂದರೆ ನಿಮ್ಮನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.

ಬೇರೆ ಬೇರೆ ಇಲಾಖೆಗಳು ಎಷ್ಟು ಖರ್ಚು ಮಾಡಿವೆ? ಎಷ್ಟು ಸಾಮಗ್ರಿಗಳಿಗೆ ಹಣ ಬಿಡುಗಡೆಯಾಗಿದೆ,  ಎಷ್ಟು ಬಾಕಿ ಇದೆ, ಎಷ್ಟು ಮೊತ್ತದ ಸಾಮಗ್ರಿಗಳ ಸರಬರಾಜಿಗೆ ಒಪ್ಪಂದ ಮಾಡಿಕೊಂಡಿದ್ದೀರಿ, ಯಾವಾಗ ಸರಬರಾಜು ಮಾಡಿದರು, ಹಣವನ್ನು ಯಾವಾಗ ಬಿಡುಗಡೆ ಮಾಡಿದ್ದೀರಿ, ಯಾವ ಪ್ರಶ್ನೆಗಳಿಗೂ ಉತ್ತರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Your generous support will help us remain independent and work without fear.

Latest News

Related Posts