ಸ್ಟೀಲ್ ಫರ್ನಿಚರ್ಸ್ ಕಂಪನಿಯಿಂದಲೂ ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್ ಖರೀದಿ; ಪೂರ್ವ ನಿರ್ಧರಿತ ಒಪ್ಪಂದವೇ?

ಬೆಂಗಳೂರು; ದುಪ್ಟಟ್ಟು ದರದಲ್ಲಿ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಿ ಅವ್ಯವಹಾರಗಳಿಗೆ ದಾರಿಮಾಡಿಕೊಟ್ಟಿದ್ದ ಕರ್ನಾಟಕ ಸ್ಟೇಟ್‌ ಡ್ರಗ್ಸ್‌ ಲಾಜಿಸ್ಟಿಕ್ಸ್‌ ವೇರ್‌ ಹೌಸಿಂಗ್‌ ಸೊಸೈಟಿಯು ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಸಾಧನಗಳ ಖರೀದಿಯಲ್ಲಿಯೂ ನಡೆದಿದೆ ಎನ್ನಲಾಗಿರುವ ಮತ್ತಷ್ಟು ಅಕ್ರಮಗಳು ಹೊರಬಿದ್ದಿವೆ. ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿಯಿಂದ ಪಿಪಿಇ ಕಿಟ್ ಖರೀದಿಸಿದ್ದ ಕೆಡಿಎಲ್‍ಡಬ್ಲ್ಯೂಎಸ್, ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್ ಉಪಕರಣಗಳನ್ನು ಸ್ಟೀಲ್ ಫರ್ನಿಚರ್ಸ್ ಕಂಪನಿಯಿಂದ ಖರೀದಿಸಿದೆ.

2020ರ ಮಾರ್ಚ್‌ ಮತ್ತು ಮೇ ತಿಂಗಳಲ್ಲಿ ಖರೀದಿಸಿರುವ ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಸಾಧನಗಳ ದರಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಮಾರ್ಚ್‌ ತಿಂಗಳಲ್ಲಿ ಉಪಕರಣವೊಂದಕ್ಕೆ 2,200 ರು. ದರದಲ್ಲಿ ಖರೀದಿಸಿದ್ದರೆ ಜುಲೈ ತಿಂಗಳಲ್ಲಿ 1,100 ರು ದರದಲ್ಲಿ ಖರೀದಿಸಿದೆ. ಆದರೆ ಮಾರುಕಟ್ಟೆಯಲ್ಲಿ ಉಪಕರಣವೊಂದಕ್ಕೆ 450 ರು. ದರವಿದ್ದರೂ ಹೆಚ್ಚಿನ ದರದಲ್ಲಿ ಖರೀದಿಸಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟವುಂಟಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

2.27 ಕೋಟಿ ನಷ್ಟ

ಉಪಕರಣವೊಂದಕ್ಕೆ ಅಮೆಜ್ಹಾನ್, ವಾಲ್‍ಡೆಂಟ್, ಶೇಕ್ ಡೀಲ್, ಫ್ಲಿಪ್ ಕಾರ್ಟ್ ಸೇರಿದಂತೆ ಮುಕ್ತ ಮತ್ತು ಆನ್‍ಲೈನ್‍ನಲ್ಲಿ ಉಪಕರಣವೊಂದಕ್ಕೆ ಗರಿಷ್ಠ 450 ರು.ದರವಿದೆ. ಆದರೆ ಕೆಡಿಎಲ್‍ಡಬ್ಲ್ಯೂಎಸ್ ಖರೀದಿಸಿರುವ ಉಪಕರಣ ದರದಲ್ಲಿ 650 ರು. ವ್ಯತ್ಯಾಸವಿದೆ. ಇದರ ಪ್ರಕಾರ 35,000 ಉಪಕರಣಗಳಿಗೆ 2.27 ಕೋಟಿ ರು. ವ್ಯತ್ಯಾಸವಿದೆ. ಇದು ಸರ್ಕಾರಕ್ಕೆ ಆಗಿರುವ ನಷ್ಟ ಎಂದು ಹೇಳಲಾಗಿದೆ.
ವಿವಿಧ ನಿರ್ದಿಷ್ಟತೆಗಳುಳ್ಳ ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ಗಳನ್ನು ಒಟ್ಟು 35 ಲಕ್ಷ ರು. ದರದಲ್ಲಿ (ತಲಾ ಸಾಧನಕ್ಕೆ 2,200) ಖರೀದಿಸಿದ್ದರೆ, ಮೇ ತಿಂಗಳಲ್ಲಿ 15,000 ಉಪಕರಣಗಳನ್ನು (ತಲಾ 1,100 ರು. ದರ) ದರದಲ್ಲಿ ಖರೀದಿಸಿರುವುದು ಗೊತ್ತಾಗಿದೆ.

ಮಾರ್ಚ್ ತಿಂಗಳಲ್ಲಿ ಹೋಂ ಮೆಡಿಕ್ಸ್, ತ್ರಿಲೋಕ್ ಲ್ಯಾಬ್ಸ್, ಲತಾ ಸ್ಟೀಲ್ ಫರ್ನಿಚರ್ಸ್, ಆನಂದ್ ಏಜೆನ್ಸಿ, ಜುಲೈ ತಿಂಗಳಲ್ಲಿ ವರುಣ್‌ ಸರ್ಜಿಕಲ್ಸ್‌ನಿಂದ ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಸಾಧನಗಳನ್ನು ಖರೀದಿಸಿತ್ತು ಎಂದು ಗೊತ್ತಾಗಿದೆ. ಲತಾ ಸ್ಟೀಲ್ ಫರ್ನಿಚರ್ಸ್‍ನಿಂದ 61.60 ಲಕ್ಷ ರು.ಮೌಲ್ಯದ 2,500 ಉಪಕರಣಗಳನ್ನು ಖರೀದಿಸಿದೆ.

ದರಪಟ್ಟಿ ಆಹ್ವಾನ, ಉಪಕರಣದ ವಿಶಿಷ್ಟತೆ ನಿಗದಿಯಲ್ಲೂ ನಡೆದಿತ್ತೇ ಅಕ್ರಮ?

ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಸಾಧನಗಳ ಖರೀದಿ ಸಂಬಂಧ ಕೆಡಿಎಲ್‌ಡಬ್ಲ್ಯೂಎಸ್‌ 2020ರ ಮೇ 11ರಂದು ಸೊಸೈಟಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ದರ ಪಟ್ಟಿ ಆಹ್ವಾನಿಸಲಾಗಿತ್ತು. ಕೇವಲ 3 ದಿನಗಳ ಅಂತರದಲ್ಲೇ ಅಂದರೆ ಮೇ 14ರಂದು ತಿದ್ದುಪಡಿಗೊಳಿಸಿರುವ ಅಧಿಕಾರಿಗಳು ದರ ಪಟ್ಟಿ ಸಲ್ಲಿಸಲು ಮೇ 22ರಂದು ಕಡೆ ದಿನಾಂಕ ಎಂದು ಗೊತ್ತುಪಡಿಸಿದ್ದರು.

ಅಲ್ಲದೆ ಉಪಕರಣದ ನಿರ್ದಿಷ್ಟತೆಯಲ್ಲಿಯೂ ಬದಲಾವಣೆ ತಂದಿದ್ದ ಅಧಿಕಾರಿಗಳು ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ನಲ್ಲಿ ಪಲ್ಸ್‌ ರೇಟ್‌ ಆಕ್ಸಿಜನ್‌ ರೆಸ್ಪರೇಟರಿ ರೇಟ್‌(Breaths per Minute) ಮಾನಿಟರ್‌ ಮಾಡುವ ವಿಶಿಷ್ಟತೆಯನ್ನೂ ಸೇರ್ಪಡೆಗೊಳಿಸಿ ತಿದ್ದುಪಡಿಗೊಳಿಸಿದ್ದರು ಎಂದು ತಿಳಿದು ಬಂದಿದೆ. ವಿಶೇಷವೆಂದರೆ ಕಡೆ ದಿನಾಂಕವನ್ನು ಮೇ 26ಕ್ಕೆ ವಿಸ್ತರಿಸಿ ದರಪಟ್ಟಿಯನ್ನು ತಿದ್ದುಪಡಿಗೊಳಿಸಿದ್ದ ಅಧಿಕಾರಿಗಳು, ತಿದ್ದುಪಡಿ ಅಧಿಸೂಚನೆಯನ್ನು ಸಂಜೆ 5 ಗಂಟೆ ನಂತರ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ಸರಬರಾಜಾಗಿದ್ದ ಸಾಧನಗಳಲ್ಲಿ ವಿಶಿಷ್ಟತೆಗಳಿರಲಿಲ್ಲ?

ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಸಾಧನ ಕೇವಲ ಪಲ್ಸ್‌ ರೇಟ್‌, ರಕ್ತದಲ್ಲಿ ಆಮ್ಲಜನಕ ಎಷ್ಟಿದೆ ಎಂಬುದನ್ನು ಶೇಕಡವಾರು ಪ್ರಮಾಣವನ್ನು ತೋರಿಸುತ್ತದೆ. ಆದರೆ ಸರಬರಾಜಾಗಿದ್ದ ಉಪಕರಣಗಳು ರೆಸ್ಪರೇಟರಿ ರೇಟ್ ಮಾನಿಟರ್‍ನ ವಿಶಿಷ್ಟತೆಯನ್ನು ಒಳಗೊಂಡಿರಲಿಲ್ಲ. ಆದರೂ ಅಧಿಕಾರಿಗಳೂ ಇಲ್ಲಿ ಉದ್ದೇಶಪೂರ್ವಕವಾಗಿ ನಿರ್ದಿಷ್ಟ ಕಂಪನಿ, ಏಜೆನ್ಸಿಗೆ ನೀಡುವ ಸಲುವಾಗಿ ಉಪಕರಣದ ವಿಶಿಷ್ಟತೆಯನ್ನು ಬದಲಾವಣೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ವಿಶಿಷ್ಟತೆಯಲ್ಲಿ ನಿರ್ದಿಷ್ಟತೆ ನಿಗದಿಗೊಳಿಸಿದ್ದರೂ ಸರಬರಾಜಾಗಿದ್ದ ಉಪಕರಣಗಳಲ್ಲಿ ವಿಶಿಷ್ಟತೆಗಳು ಇರಲಿಲ್ಲ ಎಂದು ಗೊತ್ತಾಗಿದೆ.

ಜುಲೈನಲ್ಲೂ ನಡೆದಿದೆ ಅಕ್ರಮ?

ಮಾರ್ಚ್‌, ಮೇ ತಿಂಗಳಲ್ಲಿ ನಡೆದಿದ್ದ ಅಕ್ರಮಗಳು ಜುಲೈನಲ್ಲೂ ಮುಂದುವರೆದಿದೆ. ಜುಲೈನಲ್ಲಿಯೂ 35,000 ಪ್ರಮಾಣದ ಫಿಂಗರ್‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‌ ಖರೀದಿಸಲು ದರಪಟ್ಟಿ ಆಹ್ವಾನಿಸಿದ್ದ ಕೆಡಿಎಲ್‌ಡಬ್ಲ್ಯೂಎಸ್‌ ಅಧಿಕಾರಿಗಳು ಮೇ ತಿಂಗಳಲ್ಲಿ ನಿಗದಿಪಡಿಸಿದ್ದ ವಿಶಿಷ್ಟತೆಗಳನ್ನೇ ಜುಲೈನಲ್ಲಿಯೂ ನಿಗದಿಪಡಿಸಿದ್ದರು. ಆದರೆ ರೆಸ್ಪರೇಟರಿ ರೇಟ್‌ ಮಾನಿಟರ್‌ಗೆ ನಿಗದಿಪಡಿಸಿದ್ದ ವಿಶಿಷ್ಟತೆಯಲ್ಲಿ ದೋಷವಿದೆ ಎಂದು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಆದರೆ ಅಧಿಕಾರಿಗಳು ಆಕ್ಷೇಪಣೆಗಳಿಗೆ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

‘35,000 ಉಪಕರಣಗಳನ್ನು ಕೇವಲ 5 ದಿನದಲ್ಲಿ ತಯಾರಿಸಿ ಸರಬರಾಜು ಮಾಡಲು ಸಾಧ್ಯವಿಲ್ಲ. ಏಜೆನ್ಸಿಯೊಂದಿಗೆ ಮೊದಲೇ ಒಪ್ಪಂದ ಮಾಡಿಕೊಂಡಂತಿದೆ. ಫಿಂಗರ್‌ಟಿಪ್‌ ಪಲ್ಸ್‌ ಆಕ್ಸಿಮೀಟರ್‌ಗಳನ್ನು ದಾಸ್ತಾನು ಹೊಂದಿರುವ ಏಜೆನ್ಸಿಯೊಂದಿಗೆ ಪೂರ್ವ ನಿಯೋಜಿತವಾಗಿಯೇ ಒಪ್ಪಂದ ಮಾಡಿಕೊಂಡು ಅವ್ಯವಹಾರ ನಡೆಸಿರುವುದು ಕಂಡು ಬಂದಿದೆ,’ ಎನ್ನುತ್ತಾರೆ ಅಧಿಕಾರಿಯೊಬ್ಬರು.

ದರಪಟ್ಟಿ ಕರೆದಾಗ ಭದ್ರತಾ ಠೇವಣಿ ಮತ್ತು ಇಎಂಡಿಯನ್ನು ಕೇಳಲಾಗುತ್ತದೆ. ಆದರೆ ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್ ಖರೀದಿ ಸಂಬಂಧ ಭದ್ರತಾ ಠೇವಣಿಯನ್ನಾಗಲೀ, ಇಎಂಡಿಯನ್ನಾಗಲಿ ಕೇಳಿಲ್ಲ. ಒಂದು ವೇಳೆ ಉಪಕರಣಗಳಲ್ಲಿ ದೋಷ ಕಂಡು ಬಂದರೆ ಸರಬರಾಜುದಾರರಿಂದ ಮೊತ್ತವನ್ನು ವಸೂಲಿ ಮಾಡಲು ಕಷ್ಟಸಾಧ್ಯ ಎಂದು ಹೇಳಲಾಗಿದೆ.

the fil favicon

SUPPORT THE FILE

Latest News

Related Posts