ಅನುಭವವಿಲ್ಲದ ಆಂಧ್ರ ಕಂಪನಿಯಿಂದ 4.02 ಕೋಟಿಗೆ ಸ್ಯಾನಿಟೈಸರ್‌ ಖರೀದಿ; ಪ್ರಭಾವಿ ಸಚಿವರ ನಂಟು?

ಬೆಂಗಳೂರು; ಸ್ಯಾನಿಟೈಸರ್‌ ತಯಾರಿಕೆಯ ಎಳ್ಳಷ್ಟೂ ಅನುಭವ ಇಲ್ಲದ ಮತ್ತು ತೆಲಂಗಾಣ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ ಅನರ್ಹಗೊಳಿಸಿರುವ ಆಂಧ್ರ ಮೂಲದ ರಾಜಕೀಯ ಹಿನ್ನೆಲೆ ಹೊಂದಿರುವ ಎಸ್ ಪಿ ವೈ ಆಗ್ರೋ ಇಂಡಸ್ಟ್ರೀಸ್‌ನಿಂದ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿಯು 4.02 ಕೋಟಿ ರು. ಮೊತ್ತದಲ್ಲಿ ಸ್ಯಾನಿಟೈಸರ್‌ನ್ನು ಖರೀದಿಸಿರುವುದನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.


ಇದೇ ಕಂಪನಿಯೊಂದಿಗೆ ರಾಜ್ಯ ಬಿಜೆಪಿ ಸರ್ಕಾರದ ಪ್ರಭಾವಿ ಸಚಿವರೊಬ್ಬರು ನಂಟು ಹೊಂದಿದ್ದಾರೆ. ಸ್ಯಾನಿಟೈಸರ್‌ ತಯಾರಿಕೆಯ ಯಾವ ಅನುಭವವೂ ಇಲ್ಲದಿದ್ದರೂ ಈ ಕಂಪನಿಗೆ ಆದೇಶ ದೊರೆಯಲು ಸಚಿವರೊಬ್ಬರು ನಂಟು ಹೊಂದಿರುವುದೇ ಮೂಲ ಕಾರಣ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.


ಸ್ಯಾನಿಟೈಸರ್‌ ಸೇರಿದಂತೆ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳು ಆಡಳಿತ ಮತ್ತು ಪ್ರತಿಪಕ್ಷದ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿರುವ ಬೆನ್ನಲ್ಲೇ ಎಸ್‌ಪಿವೈ ಆಗ್ರೋ ಇಂಡಸ್ಟ್ರೀಸ್‌ನ ಸ್ಯಾನಿಟೈಸರ್‌ ಖರೀದಿ ಪ್ರಕರಣವು ಹೊರಬಿದ್ದಿದೆ.


ಅಲ್ಲದೆ ಸ್ಯಾನಿಟೈಸರ್‌ ಖರೀದಿಯಲ್ಲಿ ಎಳ್ಳಷ್ಟೂ ಅಕ್ರಮಗಳು ನಡೆದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಬಲವಾಗಿ ಸಮರ್ಥಿಸಿಕೊಂಡ ಬೆನ್ನಲ್ಲೇ ಆಂಧ್ರ ಮೂಲದ ಕಂಪನಿ ಪ್ರಕರಣ ಮುನ್ನೆಲೆಗೆ ಬಂದಿದೆ. ಅದೇ ರೀತಿ ವೈದ್ಯಕೀಯ ಪರಿಕರಗಳ ಖರೀದಿಗೆ ಸಂಬಂಧಿಸಿದಂತೆ ಈಗಾಗಲೇ ಬಹಿರಂಗಗೊಂಡಿರುವ ಅಕ್ರಮಗಳನ್ನು ಈ ಪ್ರಕರಣ ಮತ್ತೊಂದು ಮಗ್ಗುಲಿಗೆ ಹೊರಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಕೆಲ ಮಹತ್ವದ ದಾಖಲೆಗಳು ಲಭ್ಯವಾಗಿವೆ.


ಅಲ್ಲದೆ, ಇದೇ ಕಂಪನಿಯು ಕೋವಿಡ್‌-19ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆಂಧ್ರ ಪ್ರದೇಶಕ್ಕೆ ನೀಡಿರುವ ಸ್ಯಾನಿಟೈಸರ್‌ ಪ್ಯಾಕೇಜ್‌ ದರಕ್ಕೂ ಮತ್ತು ಕರ್ನಾಟಕಕ್ಕೆ ಮಾರಾಟ ಮಾಡಿರುವ ದರದಲ್ಲಿ ವ್ಯತ್ಯಾಸ ಇರುವುದು ಕಂಡು ಬಂದಿದೆ.


ಎಳ್ಳಷ್ಟೂ ಅನುಭವವೇ ಇಲ್ಲ


ಸ್ಯಾನಿಟೈಸರ್‌ ತಯಾರಿಕೆಗೆ ಸಂಬಂಧಿಸಿದಂತೆ ಈ ಕಂಪನಿಯು ನಂದಿ ಬ್ರ್ಯಾಂಡ್‌ ಹೆಸರಿನಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ನ್ನು ತಯಾರಿಸಲು ಆಂಧ್ರ ಪ್ರದೇಶ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ 2020ರ ಮಾರ್ಚ್‌ 19ರಂದು ಪರವಾನಿಗೆಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ಸಲ್ಲಿಸಿದ ಒಂದು ದಿನದ ನಂತರ ಅಂದರೆ 2020 ಮಾರ್ಚ್‌ 20ರಂದು ಅಲ್ಲಿನ ಔಷಧ ನಿಯಂತ್ರಣ ಪ್ರಾಧಿಕಾರ 2025ರವರೆಗೆ ಪರವಾನಿಗೆ ನೀಡಿ ಆದೇಶ ಹೊರಡಿಸಿದೆ.

ಹತ್ತೇ ದಿನದಲ್ಲಿ ಆದೇಶ ನೀಡಿದ ಕರ್ನಾಟಕ


ವಿಶೇಷವೆಂದರೆ ಆಂಧ್ರ ಸರ್ಕಾರದಿಂದ ಪರವಾನಿಗೆ ದೊರೆತ 9 ದಿನದ ಅಂತರದೊಳಗೆ ಅಂದರೆ 2020ರ ಮಾರ್ಚ್‌ 29ರಂದು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ ಹೌಸಿಂಗ್‌ ಸೊಸೈಟಿಯು ಈ ಕಂಪನಿಯಿಂದ ಕೊಟೇಷನ್‌ ಪಡೆದಿದೆ. ಕೊಟೇಷನ್‌ ಪಡೆದ ಮರು ದಿವಸವೇ ಅಂದರೆ ಮಾರ್ಚ್‌ 30ರಂದು 4.02 ಕೋಟಿ ರು.ಮೊತ್ತಕ್ಕೆ 180 ಎಂ ಎಲ್‌ ಪ್ರಮಾಣದ 30,000 ಬಾಟಲ್‌ ಮತ್ತು 500 ಎಂ ಎಲ್‌ನ 15,000 ಬಾಟಲ್‌ಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸರಬರಾಜು ಮಾಡಲು ಈ ಕಂಪನಿಗೆ ಆದೇಶ ದೊರೆತಿರುವುದು ದಾಖಲೆಯಿಂದ ತಿಳಿದು ಬಂದಿದೆ.


180 ಎಂ ಎಲ್‌ಗೆ 90 ರು. ಲೆಕ್ಕದಲ್ಲಿ 30,000 ಬಾಟಲ್‌ಗಳಿಗೆ ಒಟ್ಟು 27.00 ಲಕ್ಷ ರು., 500 ಎಂ ಎಲ್‌ ಯುನಿಟ್‌ಗೆ 2,500 ರು. ದರದಲ್ಲಿ ಒಟ್ಟು 15,000 ಯೂನಿಟ್‌ಗಳಿಗೆ 3.75 ಕೋಟಿ ರು. ದರ ನಿಗದಿಪಡಿಸಿರುವುದು ಆದೇಶದಿಂದ ಗೊತ್ತಾಗಿದೆ.

ಆಂಧ್ರದ ಪ್ಯಾಕೇಜ್‌ ಕರ್ನಾಟಕಕ್ಕಿಲ್ಲ


ಕೋವಿಡ್‌-19ರ ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ಆಂಧ್ರ ಪ್ರದೇಶಕ್ಕೆ ಎಸ್‌ಪಿವೈ ಆಗ್ರೋ ಕಂಪನಿ 3,000 ರು. ಮೊತ್ತದಲ್ಲಿ 5 ಲೀಟರ್‌ನ 2 ಕ್ಯಾನ್‌, 500 ಎಂ ಎಲ್‌ನ 1 ಬಾಟಲ್‌ ಮತ್ತು ಅದರ ಜತೆಗೆ ಸ್ಟ್ಯಾಂಡ್‌ನ ಕಿಟ್‌ ಸರಬರಾಜು ಮಾಡಿದೆ ಎಂದು ಗೊತ್ತಾಗಿದೆ. ಆದರೆ ಕರ್ನಾಟಕಕ್ಕೆ ಇದೇ ಕಂಪನಿ 2,500 ರು. ಯುನಿಟ್‌ ದರದಲ್ಲಿ 5 ಲೀಟರ್‌ನ ಒಂದೇ ಒಂದು ಕ್ಯಾನ್‌ನ್ನು ನೀಡಿದೆ. ಅಸಲಿಗೆ 5 ಲೀಟರ್‌ ಒಂದು ಕ್ಯಾನ್‌ನ್ನು 1,125 ರು. ದರದಲ್ಲಿ ಸರಬರಾಜು ಮಾಡಲು ಹಲವು ಕಂಪನಿಗಳು ಮುಂದೆ ಬಂದಿದ್ದವು. ಆದರೆ ತಲಾ 5 ಲೀಟರ್‌ ಪ್ರಮಾಣದ 15,000 ಕ್ಯಾನ್‌ಗಳಿಗೆ 3.25 ಕೋಟಿ ನೀಡಿರುವುದು ಸಂಶಯಗಳಿಗೆ ಕಾರಣವಾಗಿದೆ.

ತೆಲಂಗಾಣದಲ್ಲಿ ಅನರ್ಹ


ಕೋವಿಡ್‌-19ರ ನಿರ್ವಹಣೆಗಾಗಿ ಸ್ಯಾನಿಟೈಸರ್‌ ಖರೀದಿಗೆ ತೆಲಂಗಾಣ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ 2020ರ ಏಪ್ರಿಲ್‌ 30ರಂದು ಕರೆದಿದ್ದ ಟೆಂಡರ್‌ನಲ್ಲಿ ಎಸ್‌ ಪಿ ವೈ ಆಗ್ರೋ ಇಂಡಸ್ಟ್ರೀಸ್‌ ಭಾಗವಹಿಸಿತ್ತಾದರೂ ಈ ಕಂಪನಿ ಉತ್ಪನ್ನವಾದ ಹ್ಯಾಂಡ್‌ ರಬ್‌ ಸ್ಯಾನಿಟೈಸರ್‌ನ್ನು ಶಿಫಾರಸ್ಸು ಮಾಡಿರಲಿಲ್ಲ. ಅಲ್ಲದೆ ಈ ಕಂಪನಿಯನ್ನು ಟೆಂಡರ್‌ನಿಂದ ಅನರ್ಹಗೊಳಿಸಿತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

ಕಂಪನಿಗಿದೆ ರಾಜಕೀಯ ಹಿನ್ನೆಲೆ


ಎಸ್‌ ಪಿ ವೈ ಆಗ್ರೋ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಸಂಸ್ಥಾಪಕ ಎಸ್‌ ಪಿ ವೈ ರೆಡ್ಡಿ ಮೂಲತಃ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದವರು. ಎಸ್‌ ಪಿ ವೈ ಅವರು ನಂದ್ಯಾಲ ಕ್ಷೇತ್ರದಿಂದ ಒಟ್ಟು 3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಆರಂಭದಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಇವರು ಆ ನಂತರ ಕಾಂಗ್ರೆಸ್‌ನ್ನೂ ಪ್ರತಿನಿಧಿಸಿದ್ದರು. ಇದಾದ ನಂತರ 2014ರಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿದ್ದರಲ್ಲದೆ ಆ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ತೆಲುಗು ದೇಶಂ ಪಕ್ಷಕ್ಕೆ ಜಿಗಿದಿದ್ದರು. ಆದರೆ ನಂದ್ಯಾಲ ಕ್ಷೇತ್ರದಿಂದ ಟಿಕೆಟ್‌ ನಿರಾಕರಿಸಿದ ನಂತರ ಜನಸೇನಾ ಪಾರ್ಟಿಗೆ ಸೇರ್ಪಡೆಯಾಗಿದ್ದರು ಎಂದು ತಿಳಿದು ಬಂದಿದೆ.


‘ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಗುಂಪಿಗೆ ಆಂಧ್ರದ ಮುಖ್ಯಮಂತ್ರಿ ಜಗನ್‌ ಮೋಹನ್ ರೆಡ್ಡಿಯೊಂದಿಗೆ ನಿಕಟ ಸಂಪರ್ಕ ಮತ್ತು ವ್ಯವಹಾರಿಕ ಸಂಬಂಧ ಇರುವುದು ಗೊತ್ತಿರುವ ವಿಚಾರ. ಆಂಧ್ರಪ್ರದೇಶ ಸರ್ಕಾರದಿಂದ ಕ್ಷಿಪ್ರಗತಿಯಲ್ಲಿ ಅನುಮತಿ ಪಡೆದಿರುವ ಕಂಪನಿಯು ಉತ್ಪಾದಿಸಿದ ಉತ್ಪನ್ನಗಳು ಬಳಕೆಗೆ ಯೋಗ್ಯವಲ್ಲವೆಂದು ತೆಲಂಗಾಣ ಸರ್ಕಾರ ತಿರಸ್ಕರಿಸಿದ್ದರೂ ಕರ್ನಾಟಕ ಸರ್ಕಾರ ಅದೇ ಕಂಪನಿಯಿಂದ ಕೊಂಡುಕೊಳ್ಳವುದು ಹಲವು ಸಂಶಯಗಳಿಗೆ ಇಂಬು ಕೊಡುತ್ತದೆ. ಹಾಗೆಯೇ ರಾಜಕೀಯ ಮತ್ತು ವ್ಯವಹಾರಿಕ ಸಂಬಂಧಗಳ ಕಾರಣಕ್ಕಾಗಿ ಅಕ್ರಮಗಳು ನಡೆದಿರುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ.

the fil favicon

SUPPORT THE FILE

Latest News

Related Posts