Friday | November 27, 2026 |

ಘನತ್ಯಾಜ್ಯ ನಿರ್ವಹಣೆಗೆ ಮರು ಟೆಂಡರ್‍‌ಗೆ ಪ್ರಸ್ತಾಪ; ವಿಜಿಎಫ್‌ ನೆರವಿಲ್ಲದೇ 5,467 ಕೋಟಿ ವೆಚ್ಚ, ಬಿಎಸ್‌ಡಬ್ಲ್ಯೂಎಂಲ್‌ನ ಸಮರ್ಥನೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆಯೇ?

ಬೆಂಗಳೂರು;  ಸಮಗ್ರ ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಟಿಪ್ಪಿಂಗ್‌ ಶುಲ್ಕ ನಿಗದಿಗೆ ಸಂಬಂಧಿಸಿದಂತೆ  ಕಾರ್ಯಸಾಧ್ಯತಾ ಅಂತರದ ಹಣಕಾಸು ನೆರವಿಲ್ಲದೇ ಒಟ್ಟು ₹5,467 ಕೋಟಿ ವೆಚ್ಚವಾಗಲಿದೆ.  ಇದರಲ್ಲಿ ಉತ್ತರ ವಲಯಕ್ಕೆ ಸಂಬಂಧಿಸಿದ ಮೊತ್ತವು ಉತ್ತರ ವಲಯಕ್ಕೆ ₹2,929 ಕೋಟಿ ಮತ್ತು ದಕ್ಷಿಣ ವಲಯಕ್ಕೆ ₹2,538 ಕೋಟಿ ವೆಚ್ಚವಾಗಲಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಮಂಡಳಿಯು ಸರ್ಕಾರಕ್ಕೆ ವಿವರಗಳನ್ನು ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

ಟಿಪ್ಪಿಂಗ್‌ ಶುಲ್ಕ ನಿಗದಿಯಲ್ಲಿಯೇ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಧೀರಜ್ ಮುನಿರಾಜು ಅವರು ದೂರು ಸಲ್ಲಿಸಿದ್ಸರು. ಈ ದೂರನ್ನಾಧರಿಸಿ ರಾಜ್ಯ ಸರ್ಕಾರವು ಹಿರಿಯ ಐಎಎಸ್‌ ಅಧಿಕಾರಿ ಅಂಜುಂ ಪರ್ವೇಜ್‌ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯೂ ಸಹ ಹಲವು ಪರಿಶೀಲನೆಗಳನ್ನು ಮಾಡಿತ್ತು. ಇದಾದ ನಂತರ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಮಂಡಳಿಯು ಮರು ಟೆಂಡರ್‍‌ ಕರೆಯಲು ಸರ್ಕಾರಕ್ಕೆ  ಪ್ರಸ್ತಾವನೆ ಸಲ್ಲಿಸಿದೆ.

ಈ ಪ್ರಸ್ತಾವನೆ ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇನ್ನಷ್ಟೇ ಪರಿಶೀಲಿಸಬೇಕಿದೆ. ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಮತ್ತು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್‌ ಅವರು ಇನ್ನಷ್ಟೇ  ಚರ್ಚಿಸಬೇಕಿದೆ.

ಈ ಪ್ರಸ್ತಾವನೆಯ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

2028 ಮತ್ತು 2029ರಲ್ಲಿ ಮಾಡಬೇಕಾದ ಆರಂಭಿಕ ಬಂಡವಾಳ ವೆಚ್ಚವು ಉತ್ತರ ವಲಯದಲ್ಲಿ ₹1,730 ಕೋಟಿ ಮತ್ತು ದಕ್ಷಿಣ ವಲಯದಲ್ಲಿ ₹1,414 ಕೋಟಿ ಆಗಿರುತ್ತದೆ. ಉಳಿದ ವೆಚ್ಚವನ್ನು ಉಪಕರಣಗಳ ಬದಲಿ ಮತ್ತು ಪ್ರಮುಖ ದುರಸ್ತಿ ಕಾರ್ಯಗಳಿಗಾಗಿ ಬಳಸಲಾಗುತ್ತದೆ. 2030ರ ವೇಳೆಗೆ ಒಟ್ಟು ದಿನಕ್ಕೆ 7,590 ಮೆಟ್ರಿಕ್ ಟನ್ (TPD). ಇದರಲ್ಲಿ ಉತ್ತರ ವಲಯದಲ್ಲಿ 3,764 ಮೆಟ್ರಿಕ್ ಟನ್ ಮತ್ತು ದಕ್ಷಿಣ ವಲಯದಲ್ಲಿ 3,825 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗಲಿದೆ.  ಇದು ದಿನಕ್ಕೆ 7,290 ಮೆಟ್ರಿಕ್ ಟನ್ ಪೌರ ಘನತ್ಯಾಜ್ಯವನ್ನು ಒಳಗೊಂಡಿದೆ.

ನಿವಾಸಿಗಳಿಂದ ಪ್ರತಿದಿನ ಪ್ರತಿ ವ್ಯಕ್ತಿಗೆ 400 ಗ್ರಾಂ, ತಾತ್ಕಾಲಿಕವಾಗಿ ನಗರಕ್ಕೆ ಬರುವ ಜನಸಂಖ್ಯೆಯಿಂದ ಪ್ರತಿ ವ್ಯಕ್ತಿಗೆ 100 ಗ್ರಾಂ ತ್ಯಾಜ್ಯ ಉತ್ಪತ್ತಿಯಾಗುವುದನ್ನು ಹಾಗೂ ವಾರ್ಷಿಕ ಶೇ.3.8ರ ಜನಸಂಖ್ಯೆ ಬೆಳವಣಿಗೆಯನ್ನು ಆಧರಿಸಿ ಈ ಅಂದಾಜು ಮಾಡಲಾಗಿದೆ. ಇದರ ಜೊತೆಗೆ ರಸ್ತೆ ಸ್ವಚ್ಛತಾ ಕಾರ್ಯದಿಂದ ದಿನಕ್ಕೆ 300 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗಲಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.

 

 

ಈಗಾಗಲೇ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಹೊಂದಿರುವ ಸೌಲಭ್ಯಗಳ ಸಾಮರ್ಥ್ಯವನ್ನು ಹೊರತುಪಡಿಸಿ, ಗುತ್ತಿಗೆದಾರ ಸಂಸ್ಥೆಯು ದಿನಕ್ಕೆ 7,090 ಮೆಟ್ರಿಕ್ ಟನ್ ದ್ವಿತೀಯ ಹಂತದ ಸಂಗ್ರಹಣೆ ಮತ್ತು ಸಾಗಣೆ (Secondary C&T) ಸಾಮರ್ಥ್ಯವನ್ನು ಒದಗಿಸಬೇಕಾಗಿದೆ. ಇದರಲ್ಲಿ ಉತ್ತರ ವಲಯಕ್ಕೆ 3,514 ಮೆಟ್ರಿಕ್ ಟನ್ ಹಾಗೂ ದಕ್ಷಿಣ ವಲಯಕ್ಕೆ 3,576 ಮೆಟ್ರಿಕ್ ಟನ್ ಸಾಮರ್ಥ್ಯ ನಿಗದಿಪಡಿಸಲಾಗಿದೆ. ಅದೇ ರೀತಿ, ಸಂಸ್ಕರಣೆ ಮತ್ತು ವಿಲೇವಾರಿ (P&D) ಸಾಮರ್ಥ್ಯವು ದಿನಕ್ಕೆ 5,825 ಮೆಟ್ರಿಕ್ ಟನ್ ಆಗಿರಬೇಕು. ಇದರಲ್ಲಿ ಉತ್ತರ ವಲಯಕ್ಕೆ 3,072 ಮೆಟ್ರಿಕ್ ಟನ್ ಮತ್ತು ದಕ್ಷಿಣ ವಲಯಕ್ಕೆ 2,753 ಮೆಟ್ರಿಕ್ ಟನ್ ಸಾಮರ್ಥ್ಯ ನಿಗದಿಪಡಿಸಲಾಗಿದೆ ಎಂದು ವಿವರಿಸಿದೆ.

ಯೋಜಿತ ಘಟಕಗಳ ಸಾಮರ್ಥ್ಯ ಕುರಿತಾದ ಎರಡೂ ಪ್ಯಾಕೇಜ್‌ಗಳ ಕುರಿತು ಪ್ರಸ್ತಾವನೆಯಲ್ಲಿ ಮಾಹಿತಿ ಒದಗಿಸಿದೆ.  ಜೈವಿಕ ಮೀಥನೇಕರಣ ಘಟಕಗಳು (Bio-methanation) – ದಿನಕ್ಕೆ 1,508 ಮೆಟ್ರಿಕ್ ಟನ್, ಕಾಂಪೋಸ್ಟಿಂಗ್ ಘಟಕಗಳು (Composting) – ದಿನಕ್ಕೆ 1,810 ಮೆಟ್ರಿಕ್ ಟನ್‌, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ (Waste-to-Energy) – ದಿನಕ್ಕೆ 2,568 ಮೆಟ್ರಿಕ್ ಟನ್, ಭೂಭರ್ತಿ ಘಟಕಗಳು (Landfill) – ದಿನಕ್ಕೆ 1,134 ಮೆಟ್ರಿಕ್ ಟನ್ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಯಾಗಲಿದೆ.

ಗರಿಷ್ಠ ಪ್ರಮಾಣದ ತ್ಯಾಜ್ಯ ನಿರ್ವಹಣಾ ಸಾಮರ್ಥ್ಯ (Peak Flexibility)ವೇನು?

ಗರಿಷ್ಠ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗುವ ದಿನಗಳಲ್ಲಿ, ಯೋಜಿತ ಪ್ರಮಾಣಕ್ಕಿಂತ ಶೇ.120ರಷ್ಟು ಹೆಚ್ಚುವರಿ ತ್ಯಾಜ್ಯವನ್ನು ಸ್ವೀಕರಿಸಲು ಗುತ್ತಿಗೆದಾರ ಸಂಸ್ಥೆಯು ಒಪ್ಪಿಕೊಂಡಿದೆ. ಆದರೆ, ಶೇ.120ರಷ್ಟು ಪ್ರಮಾಣದ ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯಕ್ಕೆ ಅನುಗುಣವಾಗಿ ಘಟಕಗಳನ್ನು ನಿರ್ಮಿಸುವುದರಿಂದ ಪ್ರತಿ ಟನ್‌ಗೆ ವಿಧಿಸುವ ಸಂಸ್ಕರಣಾ ಶುಲ್ಕದಲ್ಲಿ ಸುಮಾರು ₹370ರಿಂದ ₹400ರವರೆಗೆ ಹೆಚ್ಚಳವಾಗಲಿದೆ. ಹೀಗಾಗಿ, ಘಟಕಗಳನ್ನು ಯೋಜಿತ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿಯೇ ವಿನ್ಯಾಸಗೊಳಿಸಲಾಗಿದೆ (ವಿಭಾಗ 10) ಎಂದು ವಿವರಿಸಿದೆ.

ಬಂಡವಾಳ ವೆಚ್ಚ ಮತ್ತು ಮೊದಲ ವರ್ಷದ ಕಾರ್ಯಾಚರಣೆ

ಸರ್ಕಾರದ ಬಂಡವಾಳ ವೆಚ್ಚ (Government Capex): ಒಟ್ಟು ₹394 ಕೋಟಿ. ಇದರಲ್ಲಿ ಉತ್ತರ ವಲಯಕ್ಕೆ ₹198 ಕೋಟಿ ಮತ್ತು ದಕ್ಷಿಣ ವಲಯಕ್ಕೆ ₹195 ಕೋಟಿ ಮೀಸಲಿಡಲಾಗಿದೆ. ಈ ಮೊತ್ತವನ್ನು 203 ಹುಕ್-ಲೋಡರ್ ವಾಹನಗಳು (Hook-loaders), 402 ತ್ಯಾಜ್ಯ ಸಂಗ್ರಹಣಾ ಕಂಟೇನರ್‌ಗಳು, 30 ದೊಡ್ಡ ಮತ್ತು 26 ಸಣ್ಣ ವರ್ಗಾವಣೆ ಕೇಂದ್ರಗಳು (Transfer Stations) ಹಾಗೂ ಅವುಗಳಿಗೆ ಅಗತ್ಯವಿರುವ ಕಾಂಪ್ಯಾಕ್ಟರ್‌ಗಳ ಖರೀದಿ ಮತ್ತು ವ್ಯವಸ್ಥೆಗಾಗಿ ಬಳಸಲಾಗುತ್ತದೆ. ಇದರ ಜೊತೆಗೆ, ಪ್ರತಿ ಪ್ಯಾಕೇಜ್‌ಗೆ ಸುಮಾರು 130 ಎಕರೆ ಭೂಮಿಯನ್ನೂ ಸರ್ಕಾರ ಒದಗಿಸಲಿದೆ ಎಂದು ಮಾಹಿತಿ ಒದಗಿಸಿದೆ.

25 ವರ್ಷಗಳ ಅವಧಿಯಲ್ಲಿ ಗುತ್ತಿಗೆದಾರ ಸಂಸ್ಥೆಯ ಬಂಡವಾಳ ವೆಚ್ಚ (Concessionaire Capex)

ಕಾರ್ಯಸಾಧ್ಯತಾ ಅಂತರದ ಹಣಕಾಸು ನೆರವಿಲ್ಲದೇ (VGF) ಒಟ್ಟು ₹5,467 ಕೋಟಿ. ಇದರಲ್ಲಿ ಉತ್ತರ ವಲಯಕ್ಕೆ ಸಂಬಂಧಿಸಿದ ಮೊತ್ತವು ಉತ್ತರ ವಲಯಕ್ಕೆ ₹2,929 ಕೋಟಿ ಮತ್ತು ದಕ್ಷಿಣ ವಲಯಕ್ಕೆ ₹2,538 ಕೋಟಿ ವೆಚ್ಚವಾಗಲಿದೆ. 2028 ಮತ್ತು 2029ರಲ್ಲಿ ಮಾಡಬೇಕಾದ ಆರಂಭಿಕ ಬಂಡವಾಳ ವೆಚ್ಚವು ಉತ್ತರ ವಲಯದಲ್ಲಿ ₹1,730 ಕೋಟಿ ಮತ್ತು ದಕ್ಷಿಣ ವಲಯದಲ್ಲಿ ₹1,414 ಕೋಟಿ ಆಗಿರುತ್ತದೆ. ಉಳಿದ ವೆಚ್ಚವನ್ನು ಉಪಕರಣಗಳ ಬದಲಿ ಮತ್ತು ಪ್ರಮುಖ ದುರಸ್ತಿ ಕಾರ್ಯಗಳಿಗಾಗಿ ಬಳಸಲಾಗುತ್ತದೆ ಎಂದು ವಿವರಿಸಿದೆ.

ಮೊದಲ ವರ್ಷ (2030), ಎರಡೂ ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ  ತ್ಯಾಜ್ಯ ಸಂಸ್ಕರಣಾ ಶುಲ್ಕದ (Tipping Fee) ಮೂಲಕ ₹584 ಕೋಟಿ ಆದಾಯ, ಇತರ ಮೂಲಗಳಿಂದ ₹547 ಕೋಟಿ ಆದಾಯ ಹಾಗೂ ಕಾರ್ಯಾಚರಣಾ ವೆಚ್ಚ ₹528 ಕೋಟಿ ಆಗಿರುತ್ತದೆ.

ಸರ್ಕಾರದ ವೆಚ್ಚ – ವಿಜಿಎಫ್‌ನ ಪರಿಣಾಮವೇನು? 

25 ವರ್ಷಗಳ ಗುತ್ತಿಗೆ ಅವಧಿ-ವಿಜಿಎಫ್‌  ಇಲ್ಲದೆ ಪಾವತಿಸಬೇಕಾದ ಒಟ್ಟು ತ್ಯಾಜ್ಯ ಸಂಸ್ಕರಣಾ ಶುಲ್ಕದ ಬಗ್ಗೆಯೂ ಮಾಹಿತಿ ಒದಗಿಸಿದೆ.

                                          ವಿವರ ಉತ್ತರ ವಲಯ ದಕ್ಷಿಣ ವಲಯ ಒಟ್ಟು
ಸರ್ಕಾರದ ಮೂಲ ಅಂದಾಜು (₹2,151 ಕೋಟಿ ಮತ್ತು ₹1,801 ಕೋಟಿ; ಶೇ.5ರಷ್ಟು ವಾರ್ಷಿಕ ಹೆಚ್ಚಳ) 12,918 10,823 23,741
ಮಾತುಕತೆಯ ಮೂಲಕ ಅಂತಿಮಗೊಳಿಸಿದ ಬಿಡ್‌ದಾರರ ದರಗಳು (₹2,565 ಕೋಟಿ ಮತ್ತು ₹2,151 ಕೋಟಿ; ಶೇ.5ರಷ್ಟು ವಾರ್ಷಿಕ ಹೆಚ್ಚಳ) 15,405 12,926 28,330
ಮರುಟೆಂಡರ್‌ಗಾಗಿ ಪರಿಷ್ಕೃತ ಸರ್ಕಾರದ ದರಗಳು (₹2,745 ಕೋಟಿ ಮತ್ತು ₹2,329 ಕೋಟಿ; ಶೇ.3.8ರಷ್ಟು ವಾರ್ಷಿಕ ಹೆಚ್ಚಳ) 13,200 10,482 23,682

 

ವಿಜಿಎಫ್‌ನಿಂದ ಪ್ರಾಧಿಕಾರಕ್ಕೆ ದೊರೆಯುವ ನಿವ್ವಳ ಲಾಭವೆಷ್ಟು? (₹ ಕೋಟಿಗಳಲ್ಲಿ, ಎರಡೂ ಪ್ಯಾಕೇಜ್‌ಗಳು)

                           ವಿವರ ಶೇ.20 VGF ಶೇ.30 VGF ಶೇ.40 VGF
2 ವರ್ಷಗಳಲ್ಲಿ ಪಾವತಿಸಬೇಕಾದ VGF ಮೊತ್ತ 629 943 1,258
ಶೇ.0 VGFಗೆ ಹೋಲಿಸಿದರೆ ತ್ಯಾಜ್ಯ ಸಂಸ್ಕರಣಾ ಶುಲ್ಕದಲ್ಲಿನ ಉಳಿತಾಯ 3,643 5,323 6,929
25 ವರ್ಷಗಳ ಅವಧಿಯಲ್ಲಿನ ನಿವ್ವಳ ಉಳಿತಾಯ 3,014 4,380 5,671
ಶೇ.10ರ ರಿಯಾಯಿತಿ ದರದಲ್ಲಿ (NPV) ನಿವ್ವಳ ಉಳಿತಾಯ 371 522 653

 

ನಿವ್ವಳ ಪ್ರಸ್ತುತ ಮೌಲ್ಯದ (NPV) ಆಧಾರದ ಮೇಲೆ ಲೆಕ್ಕ ಹಾಕಿದಾಗ, ಶೇ.20ರಷ್ಟು ವಿಜಿಎಫ್ ನೀಡುವುದರಿಂದ ದೊರೆಯುವ ನಿವ್ವಳ ಲಾಭವು ಉತ್ತರ ವಲಯದಲ್ಲಿ ₹210 ಕೋಟಿ ಮತ್ತು ದಕ್ಷಿಣ ವಲಯದಲ್ಲಿ ₹161 ಕೋಟಿ ಆಗಿರುತ್ತದೆ. ಅದೇ ರೀತಿ, ಶೇ.40ರಷ್ಟು ವಿಜಿಎಫ್‌ ನೀಡಿದಾಗ ಉತ್ತರ ವಲಯದಲ್ಲಿ ₹363 ಕೋಟಿ ಮತ್ತು ದಕ್ಷಿಣ ವಲಯದಲ್ಲಿ ₹290 ಕೋಟಿ ನಿವ್ವಳ ಲಾಭ ದೊರೆಯುತ್ತದೆ.

 

 

ಪ್ರತಿಯೊಂದು ಸನ್ನಿವೇಶದಲ್ಲಿಯೂ ವಿಜಿಎಫ್‌ ನೀಡುವುದರಿಂದ ನಿವ್ವಳ ಉಳಿತಾಯವಾಗುತ್ತದೆ. ಅಲ್ಲದೆ, ತ್ಯಾಜ್ಯ ಸಂಸ್ಕರಣಾ ಶುಲ್ಕದಲ್ಲಿನ ಉಳಿತಾಯದ ಎನ್‌ಪಿವಿಯು ಪಾವತಿಸಿದ ವಿಜಿಎಫ್‌ ಮೊತ್ತದ ಎನ್‌ಪಿವಿಗಿಂತ ಸುಮಾರು 1.6ರಿಂದ 1.7 ಪಟ್ಟು ಹೆಚ್ಚಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಹಣಕಾಸು ಮಾನದಂಡಗಳೇನು?

 

               ಮಾನದಂಡ ಉತ್ತರ ವಲಯ ದಕ್ಷಿಣ ವಲಯ
ಯೋಜನೆಯ ಆಂತರಿಕ ಲಾಭದ ದರ (Project IRR) / ಈಕ್ವಿಟಿ ಮೇಲಿನ ಆಂತರಿಕ ಲಾಭದ ದರ (Equity IRR) 14.0% / 15.9% 14.0% / 15.9%
ಸಾಲ-ಈಕ್ವಿಟಿ ಅನುಪಾತ / ಸಾಲದ ಮೇಲಿನ ಬಡ್ಡಿದರ 70:30 / 12.0% 70:30 / 12.0%
ಸಾಲ ಮರುಪಾವತಿ ಅವಧಿ P&D – 12 ವರ್ಷಗಳು; ದ್ವಿತೀಯ ಹಂತದ ಸಂಗ್ರಹಣೆ ಮತ್ತು ಸಾಗಣೆ (Secondary C&T) – 8 ವರ್ಷಗಳು P&D – 12 ವರ್ಷಗಳು; ದ್ವಿತೀಯ ಹಂತದ ಸಂಗ್ರಹಣೆ ಮತ್ತು ಸಾಗಣೆ (Secondary C&T) – 8 ವರ್ಷಗಳು
ಸಾಲದ ಅವಧಿಯಲ್ಲಿನ DSCR (1ರಿಂದ 12ನೇ ವರ್ಷದವರೆಗೆ): ಸರಾಸರಿ / ಕನಿಷ್ಠ 2.14 / 1.34 (ಮೊದಲ ವರ್ಷ) 2.20 / 1.35 (ಮೊದಲ ವರ್ಷ)
25 ವರ್ಷಗಳ ಅವಧಿಯ ಒಟ್ಟು ಆದಾಯ, ಕಾರ್ಯಾಚರಣಾ ವೆಚ್ಚ (OPEX) ಮತ್ತು ಬಂಡವಾಳ ವೆಚ್ಚ (CAPEX) (₹ ಕೋಟಿಗಳಲ್ಲಿ), ಕೋಷ್ಟಕ 30 ಮತ್ತು 31 ಆದಾಯ: 22,435; OPEX: 11,799; CAPEX: 2,929 ಆದಾಯ: 18,445; OPEX: 9,541; CAPEX: 2,538

 

ಆದಾಯದ ವಿವರ

ತ್ಯಾಜ್ಯ ಸಂಸ್ಕರಣಾ ಶುಲ್ಕದ ಜೊತೆಗೆ ಇತರ ಆದಾಯ ಮೂಲಗಳಾದ ಜೈವಿಕ ಸಿಎನ್‌ಜಿ (Bio-CNG), ಕಾಂಪೋಸ್ಟ್, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳ ಮಾರಾಟದಿಂದ ಬರುವ ಆದಾಯವನ್ನು ಒಳಗೊಂಡಿದೆ.  ಉತ್ತರ ವಲಯಕ್ಕೆ  ₹13,200 ಕೋಟಿ (ತ್ಯಾಜ್ಯ ಸಂಸ್ಕರಣಾ ಶುಲ್ಕ) ಜೊತೆಗೆ ₹9,236 ಕೋಟಿ (ಇತರ ಆದಾಯ), ದಕ್ಷಿಣ ವಲಯ: ₹10,482 ಕೋಟಿ (ತ್ಯಾಜ್ಯ ಸಂಸ್ಕರಣಾ ಶುಲ್ಕ) ಜೊತೆಗೆ ₹7,963 ಕೋಟಿ (ಇತರ ಆದಾಯ) ಸಿಗಲಿದೆ ಎಂದು ಹೇಳಿದೆ.

ಹಣಕಾಸು ಇಲಾಖೆಯ ಅವಲೋಕನಗಳಲ್ಲೇನಿದೆ?

ದರ ಹೆಚ್ಚಳ (Escalation): ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (MoHUA) ಬಿಡ್ ದಾಖಲೆಯ ಪ್ರಕಾರ, ದರ ಹೆಚ್ಚಳಕ್ಕೆ ಶೇ.5ರ ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು. ಇದು ಪ್ರತಿ ವರ್ಷ ನಿಗದಿತ ಶೇ.5ರಷ್ಟು ಹೆಚ್ಚಳವಾಗಿರಬಾರದು (ವಿಭಾಗ 10, ಅಂಶ 1). ಟೆಂಡರ್ ಪ್ರೀಮಿಯಂಗೆ ಸಂಬಂಧಿಸಿದಂತೆ  ಈ ಹಿಂದೆ ಮಾತುಕತೆಯ ಮೂಲಕ ನಿಗದಿಪಡಿಸಿದ್ದ ದರಗಳು ಮತ್ತು ಪ್ರೀಮಿಯಂ ಅನ್ನು ಮುಂದಿನ ಟೆಂಡರ್‌ಗೆ ಅನ್ವಯಿಸುವುದಿಲ್ಲ. ಏಕೆಂದರೆ ಪರಿಷ್ಕೃತ ವ್ಯಾಪ್ತಿ ಮತ್ತು ಮಾನದಂಡಗಳ ಆಧಾರದ ಮೇಲೆ ಹೊಸ ಅಂದಾಜು ಸಿದ್ಧಪಡಿಸಲಾಗಿದೆ ಎಂದು ವಿವರಿಸಿದೆ.

 

 

ಗುತ್ತಿಗೆದಾರರ ಕೇಂದ್ರೀಕರಣ ಮತ್ತು ಗುತ್ತಿಗೆ ವಿಸ್ತರಣೆ (Vendor concentration and extension)

ಒಟ್ಟುಗೂಡಿದ ಅರ್ಹತೆ ಮತ್ತು ಸಾಮರ್ಥ್ಯದ ಮಾನದಂಡಗಳನ್ನು ಪೂರೈಸಿದರೆ, ಒಬ್ಬನೇ ಬಿಡ್‌ದಾರನಿಗೆ ಎರಡೂ ಪ್ಯಾಕೇಜ್‌ಗಳನ್ನು ನೀಡಬಹುದು. ಹೆಚ್ಚುವರಿಯಾಗಿ 30 ವರ್ಷಗಳವರೆಗೆ ಗುತ್ತಿಗೆ ವಿಸ್ತರಿಸುವ ಅವಕಾಶವನ್ನು ತೆಗೆದುಹಾಕಲಾಗಿದೆ. ಅಲ್ಲದೇ  ಖಾತರಿಪಡಿಸಿದ ತ್ಯಾಜ್ಯದ ಪ್ರಮಾಣ (Assured Quantity) ಕ್ಕೆ ಸಂಬಂಧಿಸಿದಂತೆ ಮೊದಲ ಎರಡು ವರ್ಷಗಳಲ್ಲಿ ಯೋಜಿತ ತ್ಯಾಜ್ಯದ ಶೇ.70ರಷ್ಟು ಪ್ರಮಾಣವನ್ನು ಮತ್ತು ನಂತರದ ವರ್ಷಗಳಲ್ಲಿ ಶೇ.80ರಷ್ಟು ಪ್ರಮಾಣವನ್ನು ಖಾತರಿಪಡಿಸಲಾಗುತ್ತದೆ. ಆದರೆ ನಿಯಮಾವಳಿಯಲ್ಲಿ ಮೊದಲ ವರ್ಷದಿಂದಲೇ ಶೇ.80ರಷ್ಟು ಪ್ರಮಾಣವನ್ನು ಖಾತರಿಪಡಿಸುವ ಅವಕಾಶವಿತ್ತು . ಸೇವಾ ಮಟ್ಟದ ಉಲ್ಲಂಘನೆಗಳಿಗೆ ವಿಧಿಸುವ ದಂಡವನ್ನು ಗುತ್ತಿಗೆದಾರ ಸಂಸ್ಥೆಯ ಮಾಸಿಕ ಪಾವತಿಸಬೇಕಾದ ಮೊತ್ತದ ಶೇ.20ಕ್ಕೆ ಮಿತಿಗೊಳಿಸಲಾಗಿದೆ.

ಕಾಮಗಾರಿ ವಿಳಂಬವಾದಲ್ಲಿ, ನಿರ್ಮಾಣ ಕಾರ್ಯಕ್ಷಮತೆಯ ಭದ್ರತಾ ಠೇವಣಿಯ (Construction Performance Security) ಮೇಲೆ ದಿನವೊಂದಕ್ಕೆ ಶೇ.0.5, ಶೇ.1 ಮತ್ತು ಶೇ.2ರಂತೆ ವಿಳಂಬ ದಂಡವನ್ನು ವಿಧಿಸಲಾಗುತ್ತದೆ. ಈ ದಂಡದ ಅವಧಿ 100 ದಿನಗಳನ್ನು ಮೀರಿರುತ್ತದೆ ಎಂದು ಹೇಳಿದೆ.

ರಿಯಾಯಿತಿ ಒಪ್ಪಂದದ ದಾಖಲೆ (Development Concession Agreement)

ಕಾರ್ಯಕ್ಷಮತೆಯ ಭದ್ರತಾ ಠೇವಣಿ (Performance Security) ಗೆ ಸಂಬಂಧಿಸಿದಂತೆ ವಾಣಿಜ್ಯ ಕಾರ್ಯಾಚರಣೆಗಳು ಆರಂಭವಾಗುವ ಮೊದಲು ಅಂದಾಜು ಯೋಜನಾ ವೆಚ್ಚದ ಶೇ.10ರಷ್ಟು ಮತ್ತು ಕಾರ್ಯಾಚರಣೆ ಆರಂಭವಾದ ನಂತರ ಶೇ.5ರಷ್ಟು ಕಾರ್ಯಕ್ಷಮತೆಯ ಭದ್ರತಾ ಠೇವಣಿ ಇರಿಸಬೇಕು.  ಅಲ್ಲದೇ  ಕರ್ನಾಟಕ ಸರ್ಕಾರದ 2024ರ ನವೆಂಬರ್ 16ರ (LAW-LAC/198/2024) ಸುತ್ತೋಲೆಯ ಅನುಸಾರ, ಮಧ್ಯಸ್ಥಿಕೆ (Arbitration) ವಿಧಾನವನ್ನು ಕೈಬಿಡಲಾಗಿದೆ. ಸಂಧಾನ ಪ್ರಕ್ರಿಯೆ (Conciliation) ಪೂರ್ಣಗೊಂಡ ನಂತರವೂ ವಿವಾದ ಬಗೆಹರಿಯದಿದ್ದರೆ, ಪ್ರಕರಣಗಳನ್ನು ಕಾಮಗಾರಿ ನಡೆಯುವ ನಗರದ ನ್ಯಾಯಾಲಯಗಳಿಗೆ ಕೊಂಡೊಯ್ಯಲಾಗುತ್ತದೆ ಎಂದು ವಿವರಿಸಿದೆ.

 

ಗುತ್ತಿಗೆ ಅವಧಿ (Concession Period): ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯು  ಶಿಫಾರಸು ಮಾಡಿರುವ 25 ವರ್ಷಗಳ ಅವಧಿಗೆ ಹೋಲಿಸಿದರೆ, 20, 25 ಮತ್ತು 30 ವರ್ಷಗಳ ಗುತ್ತಿಗೆ ಅವಧಿಗಳನ್ನು ಮೌಲ್ಯಮಾಪನ ಮಾಡಲಾಗಿದೆ. ವಿಜಿಎಫ್ ನೆರವಿನ ಶೇ.0, ಶೇ.20, ಶೇ.30 ಮತ್ತು ಶೇ.40ರಷ್ಟು ಆಯ್ಕೆಗಳನ್ನು ಪರಿಶೀಲಿಸಲಾಗಿದೆ. ಈ ಪ್ರತಿಯೊಂದು ವಿಷಯದ ಬಗ್ಗೆಯೂ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ. ಅದೇ ರೀತಿ ತ್ಯಾಜ್ಯ ವಿಂಗಡಣೆ (Segregation – ವಿಭಾಗ 3) ಗೆ ಸಂಬಂಧಿಸಿದಂತೆ  ಮೂಲದಲ್ಲಿಯೇ ಶೇ.70ರಷ್ಟು ತ್ಯಾಜ್ಯ ವಿಂಗಡಣೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಪ್ರಮಾಣವನ್ನು ಸರ್ಕಾರ ಮತ್ತು ಹಣಕಾಸು ಇಲಾಖೆ ಖಾತರಿಪಡಿಸಬೇಕೇ ಅಥವಾ ಇದು ಗುತ್ತಿಗೆದಾರ ಸಂಸ್ಥೆಗೆ ಎದುರಾಗುವ ಅಪಾಯವೇ ಎಂಬುದನ್ನು ನಿರ್ಧರಿಸಬೇಕಾಗಿದೆ ಎಂದು ಪ್ರಸ್ತಾವದಲ್ಲಿ ವಿವರಿಸಿದೆ.

 

 

 

ಕಾರ್ಬನ್ ಕ್ರೆಡಿಟ್‌ಗಳು ಮತ್ತು ಬೃಹತ್ ಪ್ರಮಾಣದ ತ್ಯಾಜ್ಯ (Credits and Bulk Waste)

ಕಾರ್ಬನ್ ಕ್ರೆಡಿಟ್‌ಗಳು, ವಿಸ್ತೃತ ಉತ್ಪಾದಕ ಹೊಣೆಗಾರಿಕೆ (EPR) ಮತ್ತು ಇತರ ಕ್ರೆಡಿಟ್‌ಗಳಿಂದ ದೊರೆಯುವ ಆದಾಯವನ್ನು ಸರ್ಕಾರ ಮತ್ತು ಗುತ್ತಿಗೆದಾರ ಸಂಸ್ಥೆಯ ನಡುವೆ 50:50ರ ಅನುಪಾತದಲ್ಲಿ ಹಂಚಿಕೆ ಮಾಡಲಾಗುತ್ತದೆ. ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರು ತಮ್ಮ ತ್ಯಾಜ್ಯವನ್ನು ಗುತ್ತಿಗೆದಾರ ಸಂಸ್ಥೆಗೆ ನೀಡಿದರೆ, ಪ್ರತಿ ಟನ್‌ಗೆ ₹800ರಂತೆ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.  ಇದಲ್ಲದೇ ಈ ಹಿಂದಿನ ಅಂದಾಜು ಟಿಪ್ಪಿಂಗ್ ಫೀ ಮೊತ್ತ ಪರಿಷ್ಕರಣೆಗಾಗಿ ಹಾಗೂ ಪ್ರಸ್ತಾಪಿಸಿರುವ ಅಂದಾಜು ಟಿಪ್ಪಿಂಗ್ ಫೀ ಮೊತ್ತ ಹೆಚ್ಚಾಗಿರುವುದಕ್ಕೆ ವಿವರಗಳನ್ನು ಒದಗಿಸಿದೆ.

ಹಳೆಯ ಐಎಸ್‌ಡಬ್ಲ್ಯುಎಂ ಮಾದರಿಯಿಂದ ಪರಿಷ್ಕೃತ ಮಾದರಿಯಲ್ಲಿನ ಬದಲಾವಣೆ

ವಿಜಿಎಫ್‌ ನೆರವಿಲ್ಲದೆ (ಶೇ.0 VGF), ಯೋಜನೆಯ ಆಂತರಿಕ ಲಾಭದ ದರ (Project IRR) ಶೇ.14ರಷ್ಟಿರುವ 25 ವರ್ಷಗಳ ಗುತ್ತಿಗೆ ಅವಧಿಗೆ ಸಂಬಂಧಿಸಿದಂತೆ, ಹಳೆಯ ISWM ಮಾದರಿಯ ತ್ಯಾಜ್ಯ ಸಂಸ್ಕರಣಾ ಶುಲ್ಕ ಮತ್ತು ಪರಿಷ್ಕೃತ ಮಾದರಿಯ ಶುಲ್ಕದ ನಡುವಿನ ವ್ಯತ್ಯಾಸವನ್ನು ವಿವರಿಸಿದೆ.

ಕ್ರ.ಸಂ. ಬದಲಾವಣೆಗೆ ಕಾರಣ (ಒಳಗೊಂಡಿರುವ ಅಂಶಗಳು) ಉತ್ತರ ವಲಯ (ಪ್ರತಿ ಟನ್‌ಗೆ ₹) ದಕ್ಷಿಣ ವಲಯ (ಪ್ರತಿ ಟನ್‌ಗೆ ₹)
— ಆರಂಭಿಕ ಅಂದಾಜು (ಪ್ರಕಟಿಸಲಾದ ಹಳೆಯ ISWM ಮಾದರಿ: 30 ವರ್ಷಗಳ ಗುತ್ತಿಗೆ ಅವಧಿ, ಶೇ.0 VGF) 2,151 1,801
1 ಗುತ್ತಿಗೆ ಅವಧಿಯ ಕಡಿತ (30 ವರ್ಷಗಳಿಂದ 25 ವರ್ಷಗಳಿಗೆ ಇಳಿಕೆ)

 

ಹಳೆಯ ISWM ಮಾದರಿಯಿಂದ ಪರಿಷ್ಕೃತ ಮಾದರಿಗೆ ತ್ಯಾಜ್ಯ ಸಂಸ್ಕರಣಾ ಶುಲ್ಕದಲ್ಲಿನ ಬದಲಾವಣೆಗಳು (ಮುಂದುವರಿಕೆ)

ಕ್ರ.ಸಂ. ಬದಲಾವಣೆಗೆ ಕಾರಣ (ಒಳಗೊಂಡಿರುವ ಅಂಶಗಳು) ಉತ್ತರ ವಲಯ (ಪ್ರತಿ ಟನ್‌ಗೆ ₹) ದಕ್ಷಿಣ ವಲಯ (ಪ್ರತಿ ಟನ್‌ಗೆ ₹)
2 ತ್ಯಾಜ್ಯ ಸಂಸ್ಕರಣಾ ಶುಲ್ಕದಲ್ಲಿನ ವಾರ್ಷಿಕ ಹೆಚ್ಚಳದ ಪ್ರಮಾಣವನ್ನು ಶೇ.5ರಿಂದ ಶೇ.3.8ಕ್ಕೆ ಇಳಿಸಿರುವುದು +250 ರಿಂದ +270 +210 ರಿಂದ +230
3 ಕಾರ್ಯಾಚರಣಾ ವೆಚ್ಚ (OPEX) ಮತ್ತು ಬಂಡವಾಳ ವೆಚ್ಚ (CAPEX)ದಲ್ಲಿನ ವಾರ್ಷಿಕ ಹೆಚ್ಚಳವನ್ನು ಸುಮಾರು ಶೇ.5ರಿಂದ ಶೇ.3.8ಕ್ಕೆ ಇಳಿಸಿರುವುದು -530 ರಿಂದ -510 -470 ರಿಂದ -450
4 ಇತರ ಆದಾಯ ಮೂಲಗಳಲ್ಲಿನ ವಾರ್ಷಿಕ ಹೆಚ್ಚಳವನ್ನು ಶೇ.3ರಿಂದ ಶೇ.3.8ಕ್ಕೆ ಏರಿಸಿರುವುದು -60 ರಿಂದ -40 -50 ರಿಂದ -30
5 ತ್ಯಾಜ್ಯದ ಪ್ರಮಾಣ ಮತ್ತು ಅದರ ಮಿಶ್ರಣದಲ್ಲಿನ ಬದಲಾವಣೆಗಳು (ರಸ್ತೆ ಗುಡಿಸುವಿಕೆಯಿಂದ ಸಂಗ್ರಹವಾಗುವ ತ್ಯಾಜ್ಯದ ಪ್ರಮಾಣವನ್ನು ದಿನಕ್ಕೆ 670 ಮೆಟ್ರಿಕ್ ಟನ್‌ನಿಂದ 231 ಮೆಟ್ರಿಕ್ ಟನ್‌ಗೆ ಇಳಿಸಿರುವುದು; ಪ್ರಾಣಿಗಳ ತ್ಯಾಜ್ಯ, ಹಸಿ ತ್ಯಾಜ್ಯ ಹಾಗೂ ರಸ್ತೆ ಸ್ವಚ್ಛತೆಯಿಂದ ಸಂಗ್ರಹವಾಗುವ ಒಣ ಮತ್ತು ಹಸಿ ತ್ಯಾಜ್ಯದ ಪ್ರಮಾಣದ ಪಾಲನ್ನು ಪರಿಷ್ಕರಿಸಿರುವುದು) +100 ರಿಂದ +120 +90 ರಿಂದ +110
6 ಜೈವಿಕ ಮೀಥನೇಕರಣ ಮತ್ತು ಕಾಂಪೋಸ್ಟಿಂಗ್ ಘಟಕಗಳಿಗೆ ಕಳುಹಿಸುವ ಹಸಿ ತ್ಯಾಜ್ಯದ ಅನುಪಾತದಲ್ಲಿ ಬದಲಾವಣೆ (90:10ರಿಂದ 50:50ಕ್ಕೆ) +220 ರಿಂದ +240 +300 ರಿಂದ +320
7 BSWML ಒದಗಿಸುವ ಹುಕ್-ಲೋಡರ್ ವಾಹನಗಳು ಮತ್ತು ಕಂಟೇನರ್‌ಗಳ ಸಂಖ್ಯೆಯಲ್ಲಿನ ಬದಲಾವಣೆ (BSWML ಈಗ ಕಡಿಮೆ ಸಂಖ್ಯೆಯ ವಾಹನ ಮತ್ತು ಕಂಟೇನರ್‌ಗಳನ್ನು ಒದಗಿಸುವುದರಿಂದ ಉಳಿದವುಗಳನ್ನು ಗುತ್ತಿಗೆದಾರ ಸಂಸ್ಥೆಯೇ ಖರೀದಿಸಬೇಕಾಗಿದೆ) +70 ರಿಂದ +90 +80 ರಿಂದ +100
8 ತಾಂತ್ರಿಕ ಸಮಿತಿ, BSWML ಮತ್ತು ತಜ್ಞರು ನೀಡಿದ ಸಲಹೆಗಳ ಆಧಾರದ ಮೇಲೆ ಬಂಡವಾಳ ವೆಚ್ಚ, ಕಾರ್ಯಾಚರಣಾ ವೆಚ್ಚ ಮತ್ತು ಆದಾಯದ ಅಂದಾಜುಗಳಲ್ಲಿ ಬದಲಾವಣೆಗಳು (ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ, ಕಾಂಪೋಸ್ಟಿಂಗ್, ಜೈವಿಕ ಮೀಥನೇಕರಣ, ವಿಂಗಡಣೆ, MRF, ನೈರ್ಮಲ್ಯ ಮತ್ತು ದಹನ ಘಟಕಗಳು; ಜೈವಿಕ ಸಿಎನ್‌ಜಿ, ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮತ್ತು ಕಾಂಪೋಸ್ಟ್‌ನಿಂದ ಬರುವ ಆದಾಯ) +180 ರಿಂದ +200 -60 ರಿಂದ -40
9 ಮರುಬಳಕೆ ಮಾಡಬಹುದಾದ ವಸ್ತುಗಳ ಪ್ರಮಾಣದಲ್ಲಿನ ಬದಲಾವಣೆ (ಒಣ ತ್ಯಾಜ್ಯದಲ್ಲಿನ ಪಾಲನ್ನು ಶೇ.15ರಿಂದ ಶೇ.7.5ಕ್ಕೆ ಇಳಿಸಿರುವುದು; ಮಾರಾಟದ ಬೆಲೆ ಮತ್ತು ಮಾರಾಟವಾಗುವ ಪ್ರಮಾಣದ ಪಾಲನ್ನು ಪರಿಷ್ಕರಿಸಿರುವುದು) -160 ರಿಂದ -140 -90 ರಿಂದ -70
10 ಕಾರ್ಯಾಚರಣೆ ಆರಂಭಿಸುವ ಅವಧಿಯನ್ನು 2028ರಿಂದ 2030ಕ್ಕೆ ಮುಂದೂಡಿರುವುದು (ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ಎರಡು ವರ್ಷಗಳು) +300 ರಿಂದ +320 +270 ರಿಂದ +290
11 ಈಗಾಗಲೇ ಅಸ್ತಿತ್ವದಲ್ಲಿರುವ ಸೌಲಭ್ಯಗಳು ಮತ್ತು ಗುತ್ತಿಗೆ ವ್ಯಾಪ್ತಿಯ ಹೊರಗೆ ನಿರ್ವಹಿಸಲಾಗುವ ತ್ಯಾಜ್ಯ -50 ರಿಂದ -30 +80 ರಿಂದ +100
12 ಉಳಿದ ಬದಲಾವಣೆಗಳ ಒಟ್ಟು ಪರಿಣಾಮ (ವಿವಿಧ ಸಣ್ಣ ಹೊಂದಾಣಿಕೆ ಬದಲಾವಣೆಗಳು ಮತ್ತು ಅಂಕಿಗಳ ಪೂರ್ಣಾಂಕಗೊಳಿಸುವಿಕೆ ಸೇರಿದಂತೆ) +100 ರಿಂದ +120 +10 ರಿಂದ +30
— ಪರಿಷ್ಕೃತ ಮಾದರಿ (25 ವರ್ಷಗಳ ಗುತ್ತಿಗೆ ಅವಧಿ, ಶೇ.0 VGF) 2,745 2,329

 

ಪ್ರತಿ ಪ್ಯಾಕೇಜ್‌ನ 12 ಸನ್ನಿವೇಶಗಳಿಗೆ ಸಂಬಂಧಿಸಿದಂತೆ, ಯೋಜನೆಯ ಆಂತರಿಕ ಲಾಭದ ದರ (IRR) ಶೇ.14ರಷ್ಟಿರುವಾಗ ವಿಧಿಸಬೇಕಾದ ತ್ಯಾಜ್ಯ ಸಂಸ್ಕರಣಾ ಶುಲ್ಕದ ಬಗ್ಗೆಯೂ ವಿವರಿಸಿದೆ.

 

 

ಗುತ್ತಿಗೆ ಅವಧಿ ಮತ್ತು ವಿಜಿಎಫ್‌ ನೆರವಿನ ಕುರಿತು ಸರ್ಕಾರವು ಇನ್ನಷ್ಟೇ  ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ತಿಳಿದು ಬಂದಿದೆ.

Hot this week

ಟಿಪ್ಪಿಂಗ್ ಶುಲ್ಕ ಹಗರಣಕ್ಕೆ ತೇಪೆ; 4 ಪ್ಯಾಕೇಜ್‌ ಬದಲಿಗೆ 2 ಪ್ಯಾಕೇಜ್‌, 30 ವರ್ಷದ ಬದಲಿಗೆ 25 ವರ್ಷಗಳ ರಿಯಾಯಿತಿ, 26,682 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಕೆ

ಬೆಂಗಳೂರು; ಘನ ತ್ಯಾಜ್ಯವನ್ನು ಸಾಗಾಣಿಕೆ ಕೇಂದ್ರಗಳಿಂದ ನಿಗದಿತ ಸಂಸ್ಕರಣೆ ಕೇಂದ್ರಗಳಿಗೆ ಎಂಎಸ್‌ಡಬ್ಲ್ಯೂ...

ಮೂರನೇ ವ್ಯಕ್ತಿ ಮುಂದಿರಿಸಿ 35 ಕೋಟಿ ಮೊತ್ತದ ಹೂಡಿಕೆ ಯೋಜನೆಗೆ ಸಿದ್ಧತೆ; ಅಕ್ರಮ ಆಸ್ತಿಯನ್ನೂ ಕಾನೂನುಬದ್ಧಗೊಳಿಸಲು ಮುಂದಾಗಿದ್ದ ಸಾಹುಕಾರ್

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರು ಮೂರನೇ...

ಕೆಪಿಎಸ್‌ಸಿ ಸದಸ್ಯರ ಮಕ್ಕಳ ಮಧ್ಯೆ 1 ಕೋಟಿ ರು ವಹಿವಾಟು; ಒಂದೇ ದಿನಾಂಕಗಳಲ್ಲಿ ನಗದು ಠೇವಣಿ, ಸಾಲದ ಹೆಸರಿನಲ್ಲಿ ಅಕ್ರಮ ಹಣದ ಲಾಭ ಹಂಚಿಕೊಳ್ಳಲಾಗಿತ್ತೇ?

ಬೆಂಗಳೂರು; ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ನೇಮಕಾತಿಗಾಗಿ ನಡೆಸಿದ್ದ...

ಕೆಎಎಸ್‌ ಹುದ್ದೆಗಳ ಸಂದರ್ಶನದಲ್ಲಿ ಅತ್ಯಧಿಕ ಅಂಕ ನೀಡಲು 3 ಕೋಟಿ ನಿಗದಿ!; ಸಾಹುಕಾರ್‍‌ಗಿತ್ತೇ ರಿಯಲ್‌ ಎಸ್ಟೇಟ್‌ ನಂಟು?

ಬೆಂಗಳೂರು; ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ...
Please Scan to make Your Contribution

Topics

ಟಿಪ್ಪಿಂಗ್ ಶುಲ್ಕ ಹಗರಣಕ್ಕೆ ತೇಪೆ; 4 ಪ್ಯಾಕೇಜ್‌ ಬದಲಿಗೆ 2 ಪ್ಯಾಕೇಜ್‌, 30 ವರ್ಷದ ಬದಲಿಗೆ 25 ವರ್ಷಗಳ ರಿಯಾಯಿತಿ, 26,682 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಕೆ

ಬೆಂಗಳೂರು; ಘನ ತ್ಯಾಜ್ಯವನ್ನು ಸಾಗಾಣಿಕೆ ಕೇಂದ್ರಗಳಿಂದ ನಿಗದಿತ ಸಂಸ್ಕರಣೆ ಕೇಂದ್ರಗಳಿಗೆ ಎಂಎಸ್‌ಡಬ್ಲ್ಯೂ...

ಮೂರನೇ ವ್ಯಕ್ತಿ ಮುಂದಿರಿಸಿ 35 ಕೋಟಿ ಮೊತ್ತದ ಹೂಡಿಕೆ ಯೋಜನೆಗೆ ಸಿದ್ಧತೆ; ಅಕ್ರಮ ಆಸ್ತಿಯನ್ನೂ ಕಾನೂನುಬದ್ಧಗೊಳಿಸಲು ಮುಂದಾಗಿದ್ದ ಸಾಹುಕಾರ್

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರು ಮೂರನೇ...

ಕೆಎಎಸ್‌ ಹುದ್ದೆಗಳ ಸಂದರ್ಶನದಲ್ಲಿ ಅತ್ಯಧಿಕ ಅಂಕ ನೀಡಲು 3 ಕೋಟಿ ನಿಗದಿ!; ಸಾಹುಕಾರ್‍‌ಗಿತ್ತೇ ರಿಯಲ್‌ ಎಸ್ಟೇಟ್‌ ನಂಟು?

ಬೆಂಗಳೂರು; ಗ್ರೂಪ್‌ ಎ ಮತ್ತು ಬಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ...

ಗಂಗ್ವಾರ್ ಕುಟುಂಬ ಸದಸ್ಯರ ವೈಮಾನಿಕ ಪ್ರಯಾಣ ವೆಚ್ಚ ಭರಿಸಿದ್ದ ಮೂರನೇ ವ್ಯಕ್ತಿಗಳು; ಕನ್ನಾಳೆ ಆಪ್ತ ಸಹಾಯಕನೊಬ್ಬನಿಂದಲೇ 1.22 ಕೋಟಿ ವಸೂಲಿಯಾಗಿತ್ತೇ?

ಬೆಂಗಳೂರು;  ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ...

Related Articles

Popular Categories

error: Content is protected !!