Tuesday | October 20, 2026 |

ಆರ್‍‌ಎಸ್‌ಎಸ್‌ ಪಥಸಂಚಲನ; ‘ಅರ್ಜಿ ಸಲ್ಲಿಸಿ, ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಅನುಮತಿ ದೊರೆಯುವವರೆಗೆ ಕಾಯಿರಿ’ ಎಂದ ಗೃಹ ಸಚಿವ

ಬೆಂಗಳೂರು; ವಿಜಯದಶಮಿಯ ಅಂಗವಾಗಿ 2026ರ ಅಕ್ಟೋಬರ್‍‌ 25ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನಡೆಸಲು ಉದ್ದೇಶಿಸಿರುವ ಪಥ ಸಂಚಲನಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಅನುಮತಿ ದೊರೆಯುವರೆಗೂ ಕಾಯಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೂಚಿಸಿರುವುದು ಇದೀಗ ಬಹಿರಂಗವಾಗಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಇನ್ನಿತರೆ ಸಂಘ ಸಂಸ್ಥೆಗಳು  ನಡೆಸುವ ಪಥ ಸಂಚಲನಕ್ಕೆ ಸಂಬಂಧಿಸಿದಂತೆ ಕಡ್ಡಾಯವಾಗಿ  ಅಗತ್ಯ ಅನುಮತಿ ಪಡೆಯಬೇಕು ಎಂದು ಪ್ರಿಯಾಂಕ್ ಖರ್ಗೆ ಅವರು ಈ ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದರು. ಅಲ್ಲದೇ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕವೂ ಆರ್‍‌ಎಸ್‌ಎಸ್‌ ಸೇರಿದಂತೆ ಸಂಘ ಪರಿವಾರದ ಇನ್ನಿತರೆ ಸಂಘ ಸಂಸ್ಥೆಗಳ ಕಾರ್ಯವೈಖರಿ ಮತ್ತು ನೋಂದಣಿ ಕುರಿತು ಸದನದ ಒಳಗೆ ಮತ್ತು ಹೊರಗೆ ಮಾತನಾಡುತ್ತಲೇ ಬಂದಿದ್ದರು.

ಈ ಬೆಳವಣಿಗೆ ನಡುವೆಯೇ ಇದೇ 2026ರ ಅಕ್ಟೋಬರ್‍‌ 25ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಬೆಂಗಳೂರಿನ ಕಮಲಾನಗರ ಮತ್ತು ನಂದಿನಿ ಲೇ ಔಟ್‌ ವ್ಯಾಪ್ತಿಯಲ್ಲಿ  ನಡೆಸಲು ಉದ್ದೇಶಿಸಿರುವ ಪಥ ಸಂಚಲನಕ್ಕೂ ಎಲ್ಲಾ ಸಂಘಟನೆಗಳಿಗೂ ಅನ್ವಯಿಸುವ ನಿಗದಿತ ಪ್ರಕ್ರಿಯೆಯನ್ನು ನೆನಪಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಪ್ರಿಯಾಂಕ್‌ ಖರ್ಗೆ ಅವರು ತಮ್ಮ ಅಧಿಕೃತ ಎಕ್ಸ್‌ನಲ್ಲಿ ಈ ಕುರಿತು ಹಂಚಿಕೊಂಡಿದ್ದಾರೆ.

ನಂದಿನಿ ಲೇಔಟ್‌ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಯುವ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಪೊಲೀಸ್‌ ಠಾಣೆಯ ಗಮನ ಸೆಳೆದಿದ್ದರು.

2026ರ ಅಕ್ಟೋಬರ್ 25ರ ಭಾನುವಾರದಂದು ವಿಜಯದಶಮಿ ಪಥಸಂಚಲನವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಲಗ್ಗೆರೆಯಲ್ಲಿ ನಡೆಸಲಿದೆ. ಬೆಳಿಗ್ಗೆ 9ರಿಂದ 12-30ರವರೆಗೆ ಪಥ ಸಂಚಲನ ನಡೆಯಲಿದೆ. ಬೆಳಿಗ್ಗೆ 9-30ಕ್ಕೆ ಅಪೊಲೋ ನ್ಯಾಷನಲ್‌ ಸ್ಕೂಲ್‌ ಮೈದಾನದಲ್ಲಿ ಚೌಡೇಶ್ವರಿ ನಗದ ಗೇಟ್‌ 01ರಿಂದ ಶುರುವಾಗಿ ಲಗ್ಗೆರೆ ನಗರದ ಚೌಡೇಶ್ವರಿ ವಸತಿಯ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಯಲಿದೆ. ಅಲ್ಲದೇ ಪಥ ಸಂಚಲನವು ಸಾಗುವ ಮಾರ್ಗದ ಕುರಿತು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನಂದಿನಿ ಲೇ ಔಟ್‌ ಪೊಲೀಸ್‌ ಠಾಣೆಯ ಗಮನಕ್ಕೆ ಲಿಖಿತವಾಗಿ ತಂದಿತ್ತು.

 

 

ಅದೇ ರೀತಿ ಮಹಾಕ್ಷ್ಮಿ ಲೇ ಔಟ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯ ಕಮಲಾನಗರದಿಂದ ಪಥಸಂಚಲನ ನಡೆಸಲು ಉದ್ದೇಶಿಸಿದೆ. ಪಥಸಂಚಲನವು ಪೈಪ್‌ ಲೈನ್‌ ರಸ್ತೆಯ ಶಿವನ ದೇವಸ್ಥಾನದ ಪಕ್ಕದಲ್ಲಿರುವ ಮೈದಾನದಲ್ಲಿ ಪಥಸಂಚಲನವನ್ನು ಆಯೋಜಿಸಿದೆ. ಶಿವನ ದೇವಸ್ಥಾನದಿಂದ ಪ್ರಾರಂಭವಾಗಿ ಕೆಂಪೇಗೌಡ ಲೇಔಟ್‌, ಕಸ್ತೂರಿ ಬಡಾವಣೆಯ ರಸ್ತೆಗಳ ಮೂಲಕ ಸಾಗಲಿದೆ. ಪುನಃ ಶಿವನ ದೇವಸ್ಥಾನದ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಸಂಚಲನದ ಮಾರ್ಗ ನಕ್ಷೆಯನ್ನೂ ಸಹ ವಿವರಿಸಿತ್ತು. ಈ ಪಥಸಂಚಲನವನ್ನು ಯಶಸ್ವಿಗೊಳಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಪೊಲೀಸರನ್ನು ಕೋರಿತ್ತು.

 

 

ಇದಕ್ಕೆ ಸಂಬಂಧಿಸಿದಂತೆ ಖುದ್ದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪಥಸಂಚಲನದ ಕುರಿತು ತಮ್ಮ ನಿಲುವನ್ನು ತಿಳಿಸಿದ್ದಾರೆ.

ಎಕ್ಸ್‌ ನಲ್ಲಿ ಹೇಳಿರುವುದೇನು?

ನನ್ನ ಪ್ರೀತಿಯ ಆರ್‌ಎಸ್‌ಎಸ್‌ನ ಸ್ವಯಂಸೇವಕರೇ, ದಸರಾ ಹಬ್ಬದ ಸಂಭ್ರಮ ಭರದಿಂದ ಸಾಗುತ್ತಿದೆ ಎಂದು ಆಶಿಸುತ್ತೇನೆ ಎಂದು ಶುರು ಮಾಡಿರುವ ಪ್ರಿಯಾಂಕ್‌ ಖರ್ಗೆ ಅವರು  ‘ನಿಮ್ಮ ಸಂಭ್ರಮಕ್ಕೆ ಅಡ್ಡಿಪಡಿಸುವ ಉದ್ದೇಶವಿಲ್ಲ. ಆದರೆ, ಒಂದು ಸೌಮ್ಯವಾದ ನೆನಪಿಸುವಿಕೆ: ಕೇವಲ ಮಾಹಿತಿ ನೀಡುವುದು ಅಥವಾ ಗೃಹ ಇಲಾಖೆಗೆ “ಸಹಕರಿಸಿ” ಅಥವಾ “ಅಗತ್ಯ ವ್ಯವಸ್ಥೆಗಳನ್ನು ಮಾಡಿ” ಎಂದು ತಿಳಿಸುವುದು ಅನುಮತಿ ಪಡೆದುಕೊಂಡಂತಾಗುವುದಿಲ್ಲ,’ ಎಂದು ಹೇಳಿದ್ದಾರೆ.

ಎಲ್ಲಾ ಸಂಘಟನೆಗಳಿಗೂ ಅನ್ವಯಿಸುವ ನಿಗದಿತ ಪ್ರಕ್ರಿಯೆಯಂತೆ ದಯವಿಟ್ಟು ಅರ್ಜಿ ಸಲ್ಲಿಸಿ ಮತ್ತು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಅನುಮತಿ ದೊರೆಯುವವರೆಗೆ ಕಾಯಿರಿ. ನಿಮ್ಮದೇ ಆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ 2025–26ನೇ ಸಾಲಿನ ವಾರ್ಷಿಕ ವರದಿಯನ್ನು ನೀವು ಓದಿದ್ದೀರಿ ಎಂದು ನನಗೆ ಖಚಿತವಿದೆ. ಆ ವರದಿಯ ಪ್ರಕಾರ, ಕರ್ನಾಟಕದಾದ್ಯಂತ ಆರ್‌ಎಸ್‌ಎಸ್‌ 2,21,963 ಸಮವಸ್ತ್ರಧಾರಿ ಸ್ವಯಂಸೇವಕರನ್ನು ಒಳಗೊಂಡಂತೆ 562 ಪಥಸಂಚಲನಗಳನ್ನು ನಡೆಸಿದೆ ಎಂದು ಗಮನಸೆಳೆದಿದ್ದಾರೆ.

 

 

ಈಗ, ಒಂದೇ ದಿನ, ಒಂದೇ ಸಮಯದಲ್ಲಿ ಕರ್ನಾಟಕದ ಬೀದಿಗಳಲ್ಲಿ ಲಕ್ಷಾಂತರ ಮಂದಿ ಪಥಸಂಚಲನ ನಡೆಸಲು ಉದ್ದೇಶಿಸಿರುವಾಗ, ಪೊಲೀಸ್ ಇಲಾಖೆಯು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದರಲ್ಲಿ ಪೊಲೀಸ್ ಸಿಬ್ಬಂದಿಯ ನಿಯೋಜನೆ, ಸಾರಿಗೆ, ಆಹಾರ, ಸಂಚಾರ ನಿರ್ವಹಣೆ, ಭದ್ರತಾ ವ್ಯವಸ್ಥೆಗಳು ಹಾಗೂ ಇತರ ಅಗತ್ಯ ಸೌಲಭ್ಯಗಳ ವ್ಯವಸ್ಥೆಯೂ ಸೇರಿವೆ ಎಂದು ವಿವರಿಸಿದ್ದಾರೆ.

‘ಇವೆಲ್ಲಕ್ಕೂ ಸೂಕ್ತ ಯೋಜನೆ, ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಅಗತ್ಯವಿದೆ. ಆದ್ದರಿಂದ, ದಯವಿಟ್ಟು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ವಿವರಗಳನ್ನು ಒದಗಿಸಿ ಮತ್ತು ಅಧಿಕೃತ ಅನುಮತಿ ದೊರೆಯುವವರೆಗೆ ಕಾಯಿರಿ,’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಕ್ಸ್‌ನಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.

 

 

ಆರ್‌ಎಸ್‌ಎಸ್ ತನ್ನ ಶತಮಾನೋತ್ಸವದ ಅಂಗವಾಗಿ ಕರ್ನಾಟಕದಲ್ಲಿ ಹಮ್ಮಿಕೊಂಡಿದ್ದ ಪಥಸಂಚಲನಗಳು ಮತ್ತು ಸಾರ್ವಜನಿಕ ಸ್ಥಳಗಳ ಬಳಕೆ ಕುರಿತಾಗಿ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಘಟನೆಗಳು ಸರ್ಕಾರಿ ಜಮೀನು ಅಥವಾ ಸಾರ್ವಜನಿಕ ಸ್ಥಳಗಳನ್ನು ಬಳಸುವಾಗ ಕಡ್ಡಾಯವಾಗಿ ಕಾನೂನು ಅನುಮತಿ ಪಡೆಯಬೇಕು ಮತ್ತು ಸಂವಿಧಾನದ ಮೌಲ್ಯಗಳಿಗೆ ಬದ್ಧವಾಗಿರಬೇಕು ಎಂದು ಖರ್ಗೆ ಆಗ್ರಹಿಸಿದ್ದರು.

ಯಾಂಕ್ ಖರ್ಗೆ ಅವರ ಸ್ವಕ್ಷೇತ್ರವಾದ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಮತ್ತು ಸ್ಥಳೀಯ ಬೆಳವಣಿಗೆಗಳು ರಾಜಕೀಯವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದವು. ಆರ್‌ಎಸ್‌ಎಸ್ ಕಾರ್ಯಕರ್ತರು ಕಾನೂನು ಚೌಕಟ್ಟಿನಲ್ಲಿ ಹಾಗೂ ಹೈಕೋರ್ಟ್ ನಿರ್ದೇಶನಗಳ ಪ್ರಕಾರವೇ ಷರತ್ತುಬದ್ಧವಾಗಿ ಪಥಸಂಚಲನ ನಡೆಸುವಂತಾಯಿತು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ, ಶತಮಾನದ ಇತಿಹಾಸದಲ್ಲಿ ಆರ್‌ಎಸ್‌ಎಸ್ ಮೊದಲ ಬಾರಿಗೆ ಸರ್ಕಾರದ ಅನುಮತಿ ಪಡೆದು ಮತ್ತು ಕಾನೂನಿನ ಪ್ರಕಾರ ನಡೆದುಕೊಳ್ಳುವಂತಾಗಿದೆ ಎಂದು ಟೀಕಿಸಿದ್ದರು.

ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಯಂತ್ರಿಸುವ ಸರ್ಕಾರದ ಕ್ರಮಗಳು ರಾಜಕೀಯ ಪ್ರೇರಿತ ಎಂದು ಬಿಜೆಪಿ ಟೀಕಿಸಿದರೆ, ಖರ್ಗೆ ಅವರು ಸಂಘಟನೆಯ ಕಾರ್ಯವೈಖರಿ ಮತ್ತು ನೋಂದಣಿ ವಿಚಾರಗಳನ್ನು ಪ್ರಶ್ನಿಸುತ್ತಾ ಬಂದಿದ್ದಾರೆ.

 

ಆರ್‍‌ಎಸ್‌ಎಸ್‌ ಪಥ ಸಂಚಲನ; 2.22 ಲಕ್ಷ ಮಂದಿ ಭಾಗಿ, ಗಲಾಟೆ, ದೊಂಬಿ, ಕೋಮು ಗಲಭೆ ನಡೆದಿಲ್ಲವೆಂದ ಸರ್ಕಾರ

 

ಆರ್‍‌ಎಸ್‌ಎಸ್‌ ಪಥಸಂಚಲನದಲ್ಲಿ 2.22 ಲಕ್ಷ ಮಂದಿ ಭಾಗಿಯಾಗಿದ್ದರು. ಈ ಪಥಸಂಚಲನದಿಂದ ಯಾವುದೇ ಗಲಾಟೆ, ದೊಂಬಿ ಮತ್ತು ಕೋಮುಗಲಭೆ  ನಡೆದಿಲ್ಲ ಎಂದು ಹಿಂದಿನ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ವಿಧಾನಸಭೆಗೆ ತಿಳಿಸಿದ್ದರು. ಈ ಕುರಿತು ದಿ ಫೈಲ್‌ ವರದಿ ಪ್ರಕಟಿಸಿತ್ತು.

Hot this week

ಕಾರ್ಯಾದೇಶ ಪಡೆದರೂ ಕಾಮಗಾರಿ ನಡೆಸದ ಗುತ್ತಿಗೆದಾರರು; ಅಂದಾಜು ವೆಚ್ಚದಲ್ಲಿ ಏರಿಕೆ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ

ಬೆಂಗಳೂರು;  ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ...

ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ ಟೆಂಡರ್‍‌ನಲ್ಲಿ ಅಕ್ರಮ ಆರೋಪ; 9 ಕೋಟಿ ಮೊತ್ತದ ಟೆಂಡರ್ ಸಲ್ಲಿಕೆಗೆ 9 ದಿನವಷ್ಟೇ ಕಾಲಾವಕಾಶ ನೀಡಿದ್ದೇಕೆ?

ಬೆಂಗಳೂರು; ಉನ್ನತ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆಯಾದ ವಿದ್ಯಾರ್ಥಿ ಸಹಾಯ ಹಸ್ತ...

ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಿಂದ ನಿಯಮ, ಕಾಯ್ದೆ ಉಲ್ಲಂಘನೆ ಆರೋಪ; ಆಡಳಿತಾಧಿಕಾರಿ ನೇಮಕಕ್ಕೆ ಮುಂದಾದ ಸರ್ಕಾರ, ಇದು ಖಾಸಗಿ ಸಂಸ್ಥೆಯೋ ಸಾರ್ವಜನಿಕ ಸಂಸ್ಥೆಯೋ?

ಬೆಂಗಳೂರು; ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮರಿಮಲ್ಲಪ್ಪ ವಿದ್ಯಾ ಸಂಸ್ಥೆಯು ಕಾಲೇಜು, ...
Please Scan to make Your Contribution

Topics

ಕಾರ್ಯಾದೇಶ ಪಡೆದರೂ ಕಾಮಗಾರಿ ನಡೆಸದ ಗುತ್ತಿಗೆದಾರರು; ಅಂದಾಜು ವೆಚ್ಚದಲ್ಲಿ ಏರಿಕೆ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ

ಬೆಂಗಳೂರು;  ಸರ್ಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಹಾಗೂ ಇತರೆ...

ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯಿಂದ ನಿಯಮ, ಕಾಯ್ದೆ ಉಲ್ಲಂಘನೆ ಆರೋಪ; ಆಡಳಿತಾಧಿಕಾರಿ ನೇಮಕಕ್ಕೆ ಮುಂದಾದ ಸರ್ಕಾರ, ಇದು ಖಾಸಗಿ ಸಂಸ್ಥೆಯೋ ಸಾರ್ವಜನಿಕ ಸಂಸ್ಥೆಯೋ?

ಬೆಂಗಳೂರು; ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮರಿಮಲ್ಲಪ್ಪ ವಿದ್ಯಾ ಸಂಸ್ಥೆಯು ಕಾಲೇಜು, ...

ಅಪೆಕ್ಸ್ ಬ್ಯಾಂಕ್‌ನಲ್ಲಿ 1,000 ಕೋಟಿ ಹಗರಣ; ಹೈಕೋರ್ಟ್‌ನಲ್ಲಿ ಪಿಐಎಲ್‌, ಸರ್ಕಾರಕ್ಕೆ ಎದುರಾಗಲಿದೆಯೇ ಸಂಕಷ್ಟ?

ಬೆಂಗಳೂರು; ಕೃಷಿಗೆ ಸಂಬಂಧಿಸದ ಉದ್ದೇಶಗಳಿಗಾಗಿ ಸಾಲ ಮಂಜೂರಾತಿ,  ಈಗಾಗಲೇ ಅನುತ್ಪಾದಕ ಆಸ್ತಿಗಳೆಂದು (Non-Performing...

ರೈಲ್ವೇ- ವಿಮಾನ ಭತ್ಯೆ; 15ನೇ ವಿಧಾನಸಭೆಯ ಶಾಸಕರಿಗೆ 16.32 ಕೋಟಿ ಮರು ಪಾವತಿ

ಬೆಂಗಳೂರು; ಹದಿನೈದನೇ ವಿಧಾಸಭೆ ಅವಧಿಯಲ್ಲಿ ರಾಜ್ಯದ 224 ಶಾಸಕರು  16.32 ಕೋಟಿಯಷ್ಟು...

ಆರ್ಥಿಕ ಸ್ಥಿತಿ ಬಹಿರಂಗಪಡಿಸಿ ಕೋಲಾಹಲ ಎಬ್ಬಿಸಿದ್ದ ಅನಧಿಕೃತ ಟಿಪ್ಪಣಿಯ ಕಡತ ಒದಗಿಸಲು ನಿರಾಕರಿಸಿದ ಸರ್ಕಾರ

ಬೆಂಗಳೂರು; ರಾಜ್ಯ ಸರ್ಕಾರವು ₹2 ಲಕ್ಷ ಕೋಟಿಗೂ ಹೆಚ್ಚಿನ ಕಾಮಗಾರಿಗಳ ಬಾಕಿ...

Related Articles

Popular Categories

error: Content is protected !!