Tuesday | November 10, 2026 |

ಹಾಸನ ಡಿ ಸಿ ಲತಾಕುಮಾರಿ ವಿರುದ್ಧ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಅನುಮತಿ ಕೋರಿದ ಸಹಾಯಕ ಪ್ರಾಧ್ಯಾಪಕ; ಮೇಲ್ಮನವಿ ಸಲ್ಲಿಸಲು ಮುಂದಾದ ಸರ್ಕಾರ

ಬೆಂಗಳೂರು;  ಪ್ರಸ್ತುತ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಕೆ ಎಸ್ ಲತಾಕುಮಾರಿ ಅವರ ವಿರುದ್ಧ ಮೈಸೂರಿನ ಎಂಎಂಸಿಆರ್‍‌ಐನ ಸಹಾಯಕ ಪ್ರಾಧ್ಯಾಪಕ  ಡಾ ಕೆ ಎಸ್‌ ಯತೀಶ್‌ ಅವರು ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಅನುಮತಿ ಕೋರಿರುವುದು ಸಹ ಇದೀಗ ಬಹಿರಂಗವಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರ ವಿರುದ್ಧ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಅನುಮತಿ ಕೋರಿರುವ  ಡಾ ಕೆ ಎಸ್ ಯತೀಶ್‌ ಅವರ ಪ್ರಕರಣದಲ್ಲಿ  ವೈದ್ಯಕೀಯ ಶಿಕ್ಷಣ ಇಲಾಖೆಯು ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.

ಹಾಸನ ಜಿಲ್ಲಾಧಿಕಾರಿ ಕೆ ಎಸ್ ಲತಾಕುಮಾರಿ ಅವರು ಲಂಚ ಪಡೆದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಅವರು ಆರೋಪಿಸಿ ಮುಗಿಬಿದ್ದಿರುವುದು ಮತ್ತು ಕೆ ಎಸ್‌ ಲತಾಕುಮಾರಿ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿರುವ  ಬೆನ್ನಲ್ಲೇ ಅವರಿಗೆ ಸಂಬಂಧಿಸಿದ ಹಳೆಯ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ.

ಪ್ರಸ್ತುತ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಕೆ ಎಸ್ ಲತಾಕುಮಾರಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಅಂದಿನ ಉಪ ಕಾರ್ಯದರ್ಶಿ ಅವರ ಪ್ರಕರಣಕ್ಕೆ  ಸಂಬಂಧಿಸಿದಂತೆ ನಿರ್ವಹಿಸಿರುವ ಕಡತವನ್ನೂ ಸಹ ಕಂದಾಯ ಇಲಾಖೆಗೆ ಸಲ್ಲಿಸಿದೆ.  ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆಯು 2026ರ ಅಕ್ಟೋಬರ್‍‌ 16ರಂದು ಅನಧಿಕೃತ ಟಿಪ್ಪಣಿ ಹೊರಡಿಸಿದೆ.

ಇದರ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಮೈಸೂರು ವೈದ್ಯಕೀಯ ಕಾಲೇಜು, ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ ಕೆ ಎಸ್ ಯತೀಶ್‌ ಅವರ ಕುರಿತು ಮತ್ತು ಅವರ ವಿರುದ್ಧ ಪ್ರಸ್ತುತ ಹಾಸನ ಜಿಲ್ಲಾಧಿಕಾರಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಆಗಿನ ಸರ್ಕಾರದ ಉಪ ಕಾರ್ಯದರ್ಶಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು  ಕಂದಾಯ ಇಲಾಖೆಯು ವಾಸ್ತವಾಂಶಗಳನ್ನು ಸಲ್ಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ಕಂದಾಯ ಇಲಾಖೆಗೆ ಅನಧಿಕೃತ ಟಿಪ್ಪಣಿಯನ್ನು ಹೊರಡಿಸಿದೆ.

ಈ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ ಪಾಟೀಲ್ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಅನಧಿಕೃತ ಟಿಪ್ಪಣಿಯಲ್ಲೇನಿದೆ?

ಡಾ ಕೆ ಎಸ್ ಯತೀಶ್‌ ಅವರು ಕೆಪಿಎಸ್‌ಸಿ ಮೂಲಕ ಆಯ್ಕೆಯಾಗಿದ್ದಾರೆ. ಮೈಸೂರಿನ ಎಂಎಂಸಿಆರ್‍ಐನಲ್ಲಿ 2006ರ ಜೂನ್‌ 9ರಿಂದ ಫಿಜಿಯಾಲಾಜಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2009ರ ಸೆ.7ರಂದು ಖಾಯಂ ಪೂರ್ವ ಸೇವಾವಧಿ ಪೂರ್ಣಗೊಳಿಸಿದ್ದಾರೆ. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಗೆ ಸೇವಾ ನಿರತ ಕೋಟಾದದಲ್ಲಿ 2011ರಂದು ಬಿಡುಗಡೆ ಹೊಂದಿದ್ದಾರೆ. ಅಲ್ಲದೇ 2011ರ ಎನ್‌ಪಿಎ ನೀಡಲು ಮನವಿ ಸಲ್ಲಿಸಿದ್ದರು. 2012ರ ಜನವರಿ 3ರಂದು ನಡೆದಿದ್ದ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಎನ್‌ಪಿಎ ನೀಡಬಾರದು ಎಂದು ಅರ್ಧ ನಿಯೋಜನೆ ಭತ್ಯೆ ನೀಡಬಹುದು ಎಂದು ಆದೇಶಿಸಿದೆ ಎಂದು ಅನಧಿಕೃತ ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

2012ರ ನವೆಂಬರ್‍‌ 29ರಂದು ಮಧ್ಯಾಹ್ನ ವೈದ್ಯಕೀಯ ಶಿಕ್ಷಣ ಸಚಿವರ ಆಂಟಿ ಛೇಂಬರ್‍‌ನಲ್ಲಿ ಡಾ ಯತೀಶ್‌ ಅವರು ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿಗಳಿಗೆ ಹೊಡೆದು ಗಾಯಗೊಳಿಸಿದ್ದರು. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದರಿಂದ ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿಗಳು ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‍‌ ದಾಖಲಾಗಿದೆ. ಇವರನ್ನು 8ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. 2012ರ ಡಿಸೆಂಬರ್‍‌ 5ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿರುತ್ತದೆ ಎಂದು ಅನಧಿಕೃತ ಟಿಪ್ಪಣಿಯಲ್ಲಿ ಗಮನಸೆಳೆದಿರುವುದು ತಿಳಿದು ಬಂದಿದೆ.

ಅಲ್ಲದೇ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿರುವ ಕಾರಣ ಕೆಸಿಎಸ್‌ಆರ್‍‌ ನಡತೆ ನಿಯಮ 66 ನಿಯಮ 11ರ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. 2012ರ ನವೆಂಬರ್‍‌ 23ರಿಂದ ಅಮಾನತಿನಲ್ಲಿರಿಸಲಾಗಿತ್ತು. ಇದನ್ನು ಡಾ ಕೆ ಎಸ್ ಯತೀಶ್‌ ಅವರು ಪ್ರಶ್ನಿಸಿದ್ದರು. ಹಾಗೆಯೇ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ (192/2013)  ಸಲ್ಲಿಸಿದ್ದರು. ಅಮಾನತಿನ ಅವಧಿ 6 ತಿಂಗಳಿಗೆ ಮೀರಿದ್ದರಿಂದ ವಿಚಾರಣಾ ತೀರ್ಪನ್ನು ಕಾಯ್ದರಿಸಿತ್ತು.

2013ರ ಮೇ 31ರಂದು ಅಮಾನತು ಹಿಂಪಡೆದು, ಕರ್ತವ್ಯಕ್ಕೆ ಪುನರ್‍‌ ಸ್ಥಾಪಿಸಲಾಗಿತ್ತು. ಅಲ್ಲದೇ ಇದೇ ಪ್ರಕರಣದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ ರಾಘವೇಂದ್ರರಾವ್ ಅವರ ನೇತೃತ್ವದಲ್ಲಿ ನಡೆದಿದ್ದ  ಇಲಾಖೆ ವಿಚಾರಣೆಯಲ್ಲಿ ಅವರನ್ನು ದೋಷಮುಕ್ತರನ್ನಾಗಿಸಿತ್ತು. ಸರಿಯಾದ ಸಾಕ್ಷ್ಯಗಳನ್ನು ಹಾಜರುಪಡಿಸುವಲ್ಲಿ ವಿಫಲರಾಗಿದ್ದೇ ಇದಕ್ಕೆ ಕಾರಣ ಎಂದು ಅನಧಿಕೃತ ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಹೀಗಾಗಿ ಡಾ ಕೆ ಎಸ್ ಯತೀಶ್ ಅವರು ಸ್ನಾತಕೋತ್ತರ ಪದವಿ ತರಬೇತಿ ಮುಗಿಸಿ 2014ರ ನವೆಂಬರ್‍‌ 17ರಂದು ಸಂಸ್ಥೆಯ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು. ದೋಷಮುಕ್ತರಾಗಿರುವ ಕಾಋಣ ವಿಚಾರಣಾ ತೀರ್ಪಿಗಾಗಿ ತಡೆಹಿಡಿಯಲಾಗಿದ್ದ ಶೇ.50ರಷ್ಟು ವೇತನವನ್ನು ಮಂಜೂರು ಮಾಡುವ  ಬಗ್ಗೆ ವಿಚಾರಣೆ ವರದಿ ಪ್ರತಿಯೊಂದಿಗೆ ಸರ್ಕಾರಕ್ಕೆ ಕಡತ ಸಲ್ಲಿಸಲು ನಿರ್ದೇಶಿಸಿತ್ತು. 2014ರ ಡಿಸೆಂಬರ್‍‌ 9ರಂದು ವಿಚಾರಣೆ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಈ ವಿಚಾರಣೆ ವರದಿಯನ್ನು ಸರ್ಕಾರವು ಪರಿಶೀಲಿಸಿತ್ತು.

‘ಸರ್ಕಾರದ ಉಪ ಕಾರ್ಯದರ್ಶಿಯವರ ಕಚೇರಿಗೆ ನುಗ್ಗಿ ನಿಂದಿಸಿರುವುದಲ್ಲದೇ ಆಪ್ತ ಶಾಖೆಯ ಸಿಬ್ಬಂದಿಯನ್ನು ಸಹ ನಿಂದಿಸಿರುತ್ತಾರೆ. ಈ ಸಂಬಂಧ ಉಪ ಕಾರ್ಯದರ್ಶಿ ಅವರ ಆಪ್ತ ಸಹಾಯಕಿ ಆರ್ ಪಂಕಜ ಅವರು ನೀಡಿದ್ದ ದೂರನ್ನಾಧರಿಸಿ  ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ (ಎಫ್‌ಐಆರ್‍‌ ; 0502/2015) ಎಫ್‌ ಐಆರ್‍‌ ದಾಖಲಿಸಲಾಗಿದೆ. ಅಲ್ಲದೇ ಮತ್ತೊಮ್ಮೆ ಸರ್ಕಾರದ ಉಪ ಕಾರ್ಯದರ್ಶಿಯವರ ಕಚೇರಿಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆಗೆ ಮುಂದಾಗಿರುತ್ತಾರೆ. ಹಾಗೂ ಅಲ್ಲಿಯೇ ಕೂತಿದ್ದ ಎಂಎಂಸಿಆರ್‍‌ಐ ನಿರ್ದೇಶಕರು, ಉಪ ಕಾರ್ಯದರ್ಶಿಯವರ ಸಿಬ್ಬಂದಿಯು ಡಾ ಯತೀಶ್‌ ಅವರನ್ನು ಹೊರಗೆ ತಳ್ಳಿದ್ದರು,’ ಎಂದು ಘಟನೆಯನ್ನು ವಿವರವಾಗಿ ದಾಖಲಿಸಿರುವುದು ತಿಳಿದು ಬಂದಿದೆ.

ಈ ಎಫ್‌ ಐ ಆರ್ ಸಂಬಂಧ ಬೆಂಗಳೂರಿನ 39ನೇ ಹೆಚ್ಚುವರಿ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣ (ಸಂಖ್ಯೆ 24515/2015) ವು 2024ರ ನವೆಂಬರ್‍‌ 28ರಂದು ತೀರ್ಮಾನಗೊಂಡಿದೆ. ದಾಖಲಿಸಿರುವ ಪ್ರಕರಣಕ್ಕೆ ಸರಿಯಾದ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸುವಲ್ಲಿ ವಿಫಲವಾದ ಕಾರಣಕ್ಕೆ ಅವರನ್ನು ದೋಷಮುಕ್ತರು ಎಂದು ವರದಿ ನೀಡಿದ್ದಾರೆ ಎಂದು ವಿವರಿಸಿದೆ.

ಹೀಗಾಗಿ ಈ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರಿದೆ. ಈ ಎಲ್ಲಾ ವಿವರಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಯು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗೆ ಮಾಹಿತಿ ಒದಗಿಸಿರುವುದು ಅನಧಿಕೃತ ಟಿಪ್ಪಣಿಯಿಂದ ಗೊತ್ತಾಗಿದೆ.

Hot this week

Please Scan to make Your Contribution

Topics

ಗೆಜೆಟೆಡ್ ಪ್ರೊಬೇಷನರ್ಸ್‌ಗಳಿಗೆ ಅದೇಶ ಪತ್ರ ನೀಡಲು ಮುರುಘಾ, ಸಿದ್ದಗಂಗಾ ಮಠ ಶ್ರೀಗಳ ಮಧ್ಯ ಪ್ರವೇಶ; ಪತ್ರಗಳು ಬಹಿರಂಗ

ಬೆಂಗಳೂರು; ಗೆಜೆಟೆಡ್ ಪ್ರೊಬೇಷನರ್ಸ್‌ 2011ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ವಿಶೇಷ ಮಸೂದೆ...

Related Articles

Popular Categories

error: Content is protected !!