ಬೆಂಗಳೂರು; ಋತುಚಕ್ರ ಸಮಯದಲ್ಲಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ನೀಡಿ ಹೆಮ್ಮೆಯಿಂದ ಬೀಗುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 6,000ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಗಳಿಗೆ ಮೆನ್ಚೂರಲ್ ಪ್ಯಾಡ್ ಮತ್ತು ಸ್ಯಾನಿಟರಿ ಪ್ಯಾಡ್‌ಗಳೇ ಲಭ್ಯವಿಲ್ಲ!
ಅಷ್ಟೇ ಅಲ್ಲ ಈ ಅವಧಿಯಲ್ಲಿ ತೀವ್ರ ರಕ್ತ ಸ್ರಾವದಿಂದ ಬಳಲುತ್ತಿರುವ ಮಹಿಳಾ ನೌಕರರು ಮುಜುಗರದಿಂದಲೇ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯ ಪರಿಸ್ಥಿತಿ ಬಂದೊಗಿದೆ.
ಈ ಸಂಬಂಧ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ಮತ್ತು ನೌಕರರಿಗೆ ಸ್ಯಾನಿಟರಿ ಪ್ಯಾಡ್ ಮತ್ತು ಸಾಮಾನ್ಯ ಔಷಧಗಳು ಲಭ್ಯವಾಗುವಂತೆ ಔಷಧ ಕೇಂದ್ರ ಒದಗಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕದ ತಟ್ಟಿದ್ದಾರೆ ಎಂದು ಗೊತ್ತಾಗಿದೆ.
ಹಿರಿಯ ಐಎಎಸ್ ಮಹಿಳಾ ಅಧಿಕಾರಿ ಡಾ ಶಾಲಿನಿ ರಜನೀಶ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ, ನೌಕರರಿಗೆ ಸ್ಯಾನಿಟರಿ ಪ್ಯಾಡ್‌ನಂತಹ ಸೌಲಭ್ಯವಿಲ್ಲ ಎಂಬ ಸಂಗತಿಯು ಮಹಿಳಾ ಅಧಿಕಾರಿ, ನೌಕರರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಮಹಿಳಾ ಅಧಿಕಾರಿಗಳು ಮತ್ತು ನೌಕರರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸೇವಾ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಪತ್ರದಲ್ಲೇನಿದೆ?
ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು ಅಧಿಕಾರಿ, ನೌಕರರಲ್ಲಿ ಶೇ.60ರಷ್ಟು ಮಹಿಳಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಮತ್ತು ಪೊಲೀಸ್ ಮಹಿಳಾ ಸಿಬ್ಬಂದಿ ಸೇರಿ ಅಂದಾಜು 6,000 ಮಹಿಳಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಮೂಲಭೂತವಾಗಿ ಅವಶ್ಯಕವಿರುವ ಮೆನ್ಚೂರಲ್ ಪ್ಯಾಡ್‌ಗಳ ಲಭ್ಯತೆ ಮತ್ತು ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ಲಭ್ಯವಿಲ್ಲ. ಕಚೇರಿಗೆ ಪ್ರತಿ ದಿನ ದೂರದ ಪ್ರದೇಶಗಳಿಂದ ಬಂದು ಕೆಲಸ ಮಾಡುವ ಮಹಿಳಾ ನೌಕರರಿಗೆ ತುರ್ತು ಸಂದರ್ಭದಲ್ಲಿ ಅಗತ್ಯವಾಗಿ ಬೇಕಾದ ಸ್ಯಾನಿಟರಿ ಪ್ಯಾಡ್‌ಗಳು ಸಚಿವಾಲಯದ ಆವರಣದಲ್ಲಿ ಸಿಗುವುದಿಲ್ಲ. ಇದಕ್ಕಾಗಿ ದೂರ ದೂರದ ಮೆಡಿಕಲ್ ಶಾಪ್‌ಗಳನ್ನು ಹುಡುಕುವ ಪ್ರಮೇಯ ಬರುತ್ತಿದೆ. ಇದರಿಂದ ಮಹಿಳಾ ಸಿಬ್ಬಂದಿಗಳಿಗೆ ತುಂಬ ತೊಂದರೆಯಾಗಿದೆ. ಇದರಿಂದ ಕೆಲಸದ ಸಮಯದಲ್ಲಿ ಕಿರಿಕಿರಿ ಉಂಟಾಗುತ್ತಿದೆ ಮತ್ತು ಮಾನಸಿಕ, ದೈಹಿಕವಾಗಿ ತೊಂದರೆಯಾಗುತ್ತಿದೆ ಎಂದು ಮಹಿಳಾ ಅಧಿಕಾರಿ, ನೌಕರರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ ಎಂದು ಗೊತ್ತಾಗಿದೆ.
ಮಹಿಳಾ ಹಿರಿಯ ಸಹಾಯಕಿಯು ಪಟ್ಟ ಬವಣೆಯೇನು?
ಹಾಗೆಯೇ ಒಳಾಡಳಿತ ಇಲಾಖೆ (ಕಾನೂನು ಸುವ್ಯವಸ್ಥೆ) ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಹಿರಿಯ ಸಹಾಯಕಿಯೊಬ್ಬರು (ಹೆಸರು ಗೌಪ್ಯವಾಗಿಡಲಾಗಿದೆ) ತಮಗೆ ನೀಡಿದ್ದ ನೋಟೀಸ್ (ಸೂಚನಾ ಪತ್ರ ಸಂಖ್ಯೆ; ಸಿಆಸುಇ 22 ಎಎಸ್‌ಎಲ್ 2026 ದಿನಾಂಕ 18.05.2026) ಗೆ ಮೂರು ಪುಟಗಳಲ್ಲಿ ನೀಡಿರುವ ಸಮಜಾಯಿಷಿಯಲ್ಲಿ ಸಚಿವಾಲಯದಲ್ಲಿ ಮಹಿಳಾ ನೌಕರರು ಅನಾರೋಗ್ಯದ ಸಂದರ್ಭದಲ್ಲಿ ರಜೆ ಪಡೆಯಲು ಪಡುತ್ತಿರುವ ಬವಣೆಯನ್ನು ವಿವರಿಸಿದ್ದಾರೆ.
ಸಮಜಾಯಿಷಿ ನೀಡಿರುವ ಮಹಿಳಾ ಹಿರಿಯ ಸಹಾಯಕಿಯು (Rheumatoid Arthiritis) ವಿಪರೀತ ಮಂಡಿ ನೋವು ಮತ್ತು ಸ್ನಾಯು ಸೆಳೆತದಿಂದ ಬಳಲುತ್ತಿದ್ದರು. ಅವರು ಕಚೇರಿಗೆ ಬಂದು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಈ ಸಂಬಂಧ ವೈದ್ಯರ ಸೂಚನೆ ಮೇರೆಗೆ ಚಿಕಿತ್ಸೆ ಪಡೆಯುವ ಸಲುವಾಗಿ 2025ರ ಡಿಸೆಂಬರ್ 3ರಂದ ಈ ಅವಧಿಯ ರಜಾ ಅರ್ಜಿ ಪ್ರಪತ್ರವನ್ನು ಶಾಖಾಧಿಕಾರಿಯವರಿಗೆ ಸಲ್ಲಿಸಿದ್ದರು. ಶಾಖಾಧಿಕಾರಿಯವರು ರಜಾ ಅರ್ಜಿ ಪ್ರಪತ್ರವನ್ನು ಪರಿಗಣಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಸರ್ಕಾರದ ಅಧೀನ ಕಾರ್ಯದರ್ಶಿಯವರಿಗೆ ಗುರುತಿಸಿ ನೀಡಿದ್ದರು. ಆಧರೆ ಸರ್ಕಾರದ ಅಧೀನ ಕಾರ್ಯದರ್ಶಿಯವರು ಸಭೆಗೆ ಹೋಗಿದ್ದರು. ಹೀಗಾಗಿ ಅವರ ಅನುಮತಿ ಪಡೆಯಲು ಸಂಜೆಯವರೆಗೆ ಅವರ ಬರುವಿಕೆಗಾಗಿ ಕಾದಿದ್ದರು.
ಈ ವೇಳೆ ತೀವ್ರ ಅನಾರೋಗ್ಯದಿಂದ ರಕ್ತಸ್ರಾವದಿಂದ ಬಳಲುತ್ತಿದ್ದರೂ ಸಹ ಮೇಲಾಧಿಕಾರಿಗೆ ರಜಾ ಅರ್ಜಿಯನ್ನು ನೀಡಲು ಗಂಟೆಗಟ್ಟಲೇ ಕಾದಿದ್ದರು. ಆ ವೇಳೆ ಸರ್ಕಾರದ ಅಧೀನ ಕಾರ್ಯದರ್ಶಿಯವರು ಸಭೆಗೆ ಹೋಗಿದ್ದರಿಂದ ಸಂಜೆಯವರಿಗೆ ಕಾದಿದ್ದರು. ಈ ವೇಳೆ ಹೆಚ್ಚು ರಕ್ತ ಸ್ರಾವದಿಂದ ಬಳಲಿ ಹೋಗಿದ್ದರು. ಹೆಚ್ಚು ರಕ್ತ ಸ್ರಾವದಿಂದಾಗಿ ಅವರ ಉಡುಪು ಸಹ ಅತಿಯಾಗಿ ಒದ್ದೆಯಾಗಿತ್ತು. ಹೀಗಾಗಿ ಕಚೇರಿಯಲ್ಲಿ ಕುಳಿತುಕೊಳ್ಳಲು ಆಗಿರಲಿಲ್ಲ. ಏಕೆಂದರೇ ಶಾಖಾಧಿಕಾರಿಯವರು ಪುರುಷ ಅಧಿಕಾರಿಯಾಗಿದ್ದರಿಂದಾಗಿ ಅವರಿಗೆ ಸಮಸ್ಯೆಯನ್ನು ಮುಕ್ತವಾಗಿ ಹೇಳಿಕೊಳ್ಳಲು ಮುಜುಗರವಾಗಿತ್ತು ಎಂದು ಸಮಜಾಯಿಷಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ನಾನು ಅಂದು ಸಂಜೆ ಸರ್ಕಾರದ ಅಧೀನ ಕಾರ್ಯದರ್ಶಿಯವರು ಸಭೆಯಿಂದ ಬರುವವರೆಗೂ ನನಗೆ ರಕ್ತಸ್ರಾವದಿದಾಗಿ ಕುಳಿತುಕೊಳ್ಳಲು ಆಗಿರಲಿಲ್ಲ. ಹಾಗೂ ಅದರಿಂದ ನನ್ನ ಉಡುಪು ಒದ್ದೆಯಾಗಿ ವಾಸನೆ ಬರಲಾರಂಭಿಸಿತ್ತು. ನಾನು ಶಾಖಾಧಿಕಾರಿಯವರನ್ನೇ ಮತ್ತೊಮ್ಮೆ ಮನವಿ ಮಾಡಿಕೊಂಡು ಅವರು ಅನುಮತಿ ಕೊಟ್ಟ ನಂತರವೇ ನಾನು ಅವರಿಗೆ ನನ್ನ ರಜಾ ಅರ್ಜಿ ಪ್ರಪತ್ರವನ್ನು ಸಲ್ಲಿಸಿ ತೆರಳಿರುತ್ತೇನೆ,’ಎಂದು ಸಮಜಾಯಿಷಿಯಲ್ಲಿ ಹೇಳಿರುವುದು ತಿಳಿದು ಬಂದಿದೆ.
ಈ ಮಹಿಳಾ ಹಿರಿಯ ಸಹಾಯಕಿಯು ವಿಪರೀತ ನೋವಿನಿಂದ ಬಳಲುತ್ತಿದ್ದ ಕಾರಣ ಅಧೀನ ಕಾರ್ಯದರ್ಶಿಯವರು ಸಭೆಯಿಂದ ಬರುವವರೆಗೂ ಹಾಗೂ ಅವರ ಅನುಮತಿಗಾಗಿ ಸಂಜೆ 5.45 ವರೆಗೂ ಕಾದಿದ್ದರು. ಆ ನಂತರ ತೆರಳಿದ್ದರು. ಇದನ್ನು ವಾಟ್ಸಾಪ್ ಮೂಲಕವೂ ತಿಳಿಸಿದ್ದರು. ಸದರಿ ಅವಧಿಗೆ ದಯವಿಟ್ಟು ರಜೆ ಮಂಜೂರು ಮಾಡಿ ಸೂಕ್ತ ಶಿಫಾರಸ್ಸಿನೊಂದಿಗೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಕಳಿಸಬೇಕು ಎಂದು ಸರ್ಕಾರದ ಅಧೀನ ಕಾರ್ಯದರ್ಶಿಯವರನ್ನು ಕೋರಿದ್ದರು ಎಂಬುದು ಅವರ ಸಮಜಾಯಿಷಿಯಿಂದ ಗೊತ್ತಾಗಿದೆ.
ಇದಷ್ಟೇ ಅಲ್ಲ, ಮಹಿಳಾ ಹಿರಿಯ ಸಹಾಯಕಿಯು ವಾಟ್ಸಾಪ್ ಮೂಲಕ ಮನವಿ ಸಲ್ಲಿಸಿದ್ದಲ್ಲದೇ ಹಲವಾರು ಬಾರಿ ಅಧೀನ ಕಾರ್ಯದರ್ಶಿಯವರಿಗೆ ಕರೆ ಮಾಡಿದ್ದರು. ಆದರ ಅವರು ಯಾವುದೇ ರೀತಿ ಸ್ಪಂದನೆ ನೀಡಿರಲಿಲ್ಲ. ಬದಲಾಗಿ 2025ರ ಡಿಸೆಂಬರ್ 12ರಂದು ಕರ್ತವ್ಯಕ್ಕೆ ಹಾಜರಾಗಿ ಎಂದು ನೋಟೀಸ್ ನೀಡಿದ್ದರು. ಈ ನೋಟೀಸ್‌ನ್ನು ಶಾಖಾಧಿಕಾರಿಯವರು ಬಾಧಿತ ಮಹಿಳಾ ಹಿರಿಯ ಸಹಾಯಕಿಗೆ ವಾಟ್ಸಾಪ್ ಮೂಲಕ 2025ರ ಡಿಸೆಂಬರ್ 15ರಂದು ಕಳಿಸಿದ್ದರು. ಮಹಿಳಾ ಹಿರಿಯ ಸಹಾಯಕಿಯು ತಮ್ಮ ಪತಿ ಮೂಲಕ ಅಂದೇ ಲಿಖಿತ ಸಮಜಾಯಿಷಿ ನೀಡಿದ್ದರು. ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಆಪ್ತ ಕಾರ್ಯದರ್ಶಿ ಮತ್ತು ಶಾಖಾಧಿಕಾರಿಯವರನ್ನು ಭೇಟಿ ಮಾಡಿ ಅವರ ಅನಾರೋಗ್ಯ ಪರಿಸ್ಥಿತಿಯನ್ನು ವಿವರಿಸಿದ್ದರು ಎಂದು ಸಮಜಾಯಿಷಿಯಿಂದ ತಿಳಿದು ಬಂದಿದೆ.
ಇದಾದ ನಂತರ 2026ರ ಜನವರಿ 5ರಂದು ಮಹಿಳಾ ಹಿರಿಯ ಸಹಾಯಕಿಯು ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ಆಗ ಸರ್ಕಾರದ ಅಧೀನ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಅನಾರೋಗ್ಯ ಸಮಸ್ಯೆಗಳನ್ನು ಹಾಗೂ 2025ರ ಡಿಸೆಂಬರ್ 3ರಂದು ಅತಿ ಹೆಚ್ಚು ರಕ್ತ ಸ್ರಾವವಾಗುತ್ತಿದ್ದ ಕಾರಣ ಅನುಮತಿ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಅಧೀನ ಕಾರ್ಯದರ್ಶಿ ಬಳಿ ಕ್ಷಮೆಯನ್ನೂ ಯಾಚಿಸಿದ್ದರು.
ಈ ಮಹಿಳಾ ಹಿರಿಯ ಸಹಾಯಕಿಯು 21 ವರ್ಷಗಳ ದೀರ್ಘ ಸೇವಾವಧಿಯಲ್ಲಿ ಯಾವುದೇ ಸಂದರ್ಭದಲ್ಲಿಯೂ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಯಾವುದೇ ರಜೆಯನ್ನು ಹಾಕಿಲ್ಲ ಎಂಬುದು ಅವರ ಸಮಜಾಯಿಷಿಯಿಂದ ಗೊತ್ತಾಗಿದೆ. ಹೀಗಾಗಿ ಪುನಃ ರಜಾ ಅರ್ಜಿಯನ್ನು ವೈದ್ಯರು ನೀಡಿರುವ ಪ್ರಮಾಣ ಪತ್ರದೊಂದಿಗೆ ಸಲ್ಲಿಸಿದ್ದರು.
‘ನನ್ನ ಹಕ್ಕಿನಲ್ಲಿರುವಂತೆ 2025ರ ಡಿಸೆಂಬರ್ 4ರಿಂದ 2026ರ ಜನವರಿ 3ರವರೆಗೆ ಪರಿವರ್ತಿತ ರಜೆಯನ್ನು, 2026ರ ಜನವರಿ 5ರಿಂದ 2026ರ ಜನವರಿ 19ರವರೆಗೆ ಗಳಿಕೆ ರಜೆಯನ್ನು ಹಾಘೂ 2026ರ ಜನವರಿ 21ರಿಂದ 2026ರ ಫೆ.7ರವರೆಗೆ ಪರಿವರ್ತಿತ ರಜೆಯನ್ನು ಮಂಜೂರು ಮಾಡಿ ಸೂಕ್ತ ಶಿಫಾರಸ್ಸಿನೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ (ಆಡಳಿತ-1) ಕಳಿಸಿಕೊಡಬೇಕು,’ ಎಂದು ಒಳಾಡಳಿತ ಇಲಾಖೆಯ (ಕಾನೂನು ಸುವ್ಯವಸ್ಥೆ) ಸರ್ಕಾರದ ಉಪ ಕಾರ್ಯದರ್ಶಿಗಳಿಗೆ ಕೋರಿರುವುದು ಗೊತ್ತಾಗಿದೆ.




